ದಾವಣಗೆರೆಯಲ್ಲಿ ನಡೆದ ‘ಪ್ರಜಾವಾಣಿ ಸಾಧಕಿಯರು’ ಕಾರ್ಯಕ್ರಮದಲ್ಲಿ ಡಾ. ಜಿ.ಕಾವ್ಯಾಶ್ರಿ, ಲೇಖಕಿ ಗೀತಾ ವಸಂತ್, ಸಬಿತಾ ಬನ್ನಾಡಿ, ನೇತ್ರ ತಜ್ಞರಾದ ಡಾ. ಪೂರ್ಣಿಮಾ ಪಾಟೀಲ್, ಜಿ.ಎಂ ವಿಶ್ವವಿದ್ಯಾಲಯದ ಡೀನ್ ಶ್ವೇತಾ ಮರಿಗೌಡರ್ ಸಂವಾದ ನಡೆಸಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ: ‘ಹುಟ್ಟಿದ್ದೆಲ್ಲವೂ ವಿಕಾಸವಾಗುವ ಅಸೀಮ ಸಾಧ್ಯತೆಯೇ ಸ್ವಾತಂತ್ರ್ಯ. ಆ ಹಾದಿಯಲ್ಲಿ ವ್ಯವಸ್ಥೆ ನಿರ್ಮಿಸಿದ ಎಲ್ಲಾ ಸಂಕೋಲೆ, ಪ್ರತಿಕೂಲ ಪರಿಸ್ಥಿತಿಯನ್ನು ತನ್ನ ಆತ್ಮಶಕ್ತಿಯಿಂದ ದಾಟುತ್ತಾ ಬೆಳೆಯುವ ಅಸೀಮತೆಯೇ ಹೆಣ್ಣಿನ ನೈಜ ಸ್ವಾತಂತ್ರ್ಯ’ ಎಂದು ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ‘ಪ್ರಜಾವಾಣಿ’ ಸಾಧಕಿಯರಿಗಾಗಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹೊಸ ಕಾಲದ ಸ್ವತಂತ್ರ ಮಹಿಳೆ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಹೆಣ್ಣು ತಾನು ಬೆಳೆಯುವ ಸಾಧ್ಯತೆಯನ್ನು ಕಳೆದುಕೊಳ್ಳದಿರುವುದು, ಅದನ್ನು ದಕ್ಕಿಸಿಕೊಳ್ಳುವುದೇ ವಾಸ್ತವವಾಗಿ ಆಕೆಯ ಧೀಶಕ್ತಿ. ತನ್ನ ದೇಹ, ಮನಸ್ಸು ಹೇಗಿರಬೇಕು ಎಂದು ನಿರ್ಣಯಿಸುವುದು ಹೆಣ್ಣಿನ ಅರಿವು. ಅದನ್ನು ಕಂಡುಕೊಳ್ಳುವ ಹಾದಿ ಮುಕ್ತವಾಗಿ ತೆರೆದುಕೊಳ್ಳುವುದೇ ವಿಕಾಸದ ಮಾದರಿ’ ಎಂದರು.
‘ಶೌಚಾಲಯ, ಅಡುಗೆ ಮನೆಯೂ ಇಲ್ಲದ, ಕನಸು ಕಾಣಲು ಆಗದ ಸ್ಥಿತಿಯಿಂದ ಬಂದ ಮಹಿಳೆಯರು ಸಾಧನೆಯ ಹಾದಿಯಲ್ಲಿ ಸಾಗುವಾಗ ತಮ್ಮ ಮುಂದೆ ಏನೇನು ಸವಾಲುಗಳಿವೆ ಎಂಬುದನ್ನು ತಳಮೂಲದಿಂದ ಅರ್ಥಮಾಡಿಕೊಳ್ಳಬೇಕು. ಆ ಮೂಲಕ ತಾನೊಂದು ಸಮುದಾಯವಾಗಿ ಹೊರಹೊಮ್ಮಬೇಕು’ ಎಂದು ಹೇಳಿದರು.
‘ಮೊದಲಿನ ಪೀಳಿಗೆಯೊಂದಿಗೆ ತೌಲನಿಕವಾಗಿ ನೋಡಿದಾಗ, ಹೊಸ ತಲೆಮಾರಿನ ಹೆಣ್ಣು ಅಸ್ತಿತ್ವ, ಅಸ್ಮಿತೆ ಕಂಡುಕೊಳ್ಳುವಲ್ಲಿ ತನ್ನ ಮೇಲೆ ಹೇರಲ್ಪಟ್ಟ ಎಲ್ಲಾ ಪ್ರತಿಮಾದರ್ಶವನ್ನು ಮುರಿಯುತ್ತಾ ಹೋಗುತ್ತಿದ್ದಾಳೆ. ತನ್ನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಪ್ರಯತ್ನಶಾಲಿಯಾಗಿ ಹೊರಹೊಮ್ಮುತ್ತಿದ್ದಾಳೆ’ ಎಂಬುದು ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಜಿ.ಕಾವ್ಯಶ್ರೀ ಅವರ ಅಭಿಮತ.
‘ನಾನು ಮಧ್ಯದ ತಲೆಮಾರಿನವಳು’ ಎಂದು ಮಾತು ಆರಂಭಿಸಿದ ವೈದ್ಯೆ ಪೂರ್ಣಿಮಾ ಪಾಟೀಲ್, ‘ಹೆಣ್ಣಿಗೆ ಸ್ವಾತಂತ್ರ್ಯ ಹುಟ್ಟಿನಿಂದಲೇ ಇದ್ದೇ ಇದೆ. ಅದನ್ನು ಬಳಸಿಕೊಳ್ಳುವುದು ಬಿಡುವುದು ಆಕೆಯ ಕೈಯಲ್ಲಿಯೇ ಇದೆ. ತ್ಯಾಗ ಹಾಗೂ ಹೊಂದಾಣಿಕೆ ಎಂಬ ಹೆಸರು ಕೊಟ್ಟುಕೊಂಡು ಸ್ವಯಂಕೃತ ತಪ್ಪಿನಿಂದಲೇ ಆಕೆ ತನ್ನನ್ನು ಚೌಕಟ್ಟಿನಲ್ಲಿಯೇ ರೂಪಿಸಿಕೊಳ್ಳುತ್ತಾಳೆ. ನನ್ನ ಕಾಯಿಲೆಗೆ ಚಿಕಿತ್ಸೆಯನ್ನು ಪತಿಯೇ ನಿರ್ಧರಿಸಲಿ ಎಂದು ಬಯಸುವ ಹಿಂದಿನ ಪೀಳಿಗೆಯ ಹೆಣ್ಣುಮಕ್ಕಳ ಜೊತೆಗೆ ತನಗೆ ಅಗತ್ಯವಿರುವ ಚಿಕಿತ್ಸೆಯ ಬಗ್ಗೆ ತಾನೇ ನಿರ್ಧಾರ ಕೈಗೊಳ್ಳುವ ಹೊಸ ಪೀಳಿಗೆಯನ್ನು ವೈದ್ಯೆಯಾಗಿ ಇಂದು ಕಾಣುತ್ತಿದ್ದೇನೆ’ ಎಂದರು.
‘ಆಡಳಿತ ಇಲ್ಲವೇ ಅಧಿಕಾರವನ್ನು ಬರೀ ಚಲಾಯಿಸುವುದೇ ಅಲ್ಲ. ಎಲ್ಲರನ್ನೂ ಒಳಗೊಳ್ಳುತ್ತಾ ಹೋಗುವುದೇ ಆಗಿದೆ. ಆದರೆ ಈ ಹಾದಿಯಲ್ಲಿ ತಾನು ಸಮರ್ಥಳು ಎಂಬುದನ್ನು ಹೆಣ್ಣು ಆಗಾಗ ನಿರೂಪಿಸುತ್ತಾ ಸಾಗಬೇಕಿದೆ. ಅದರಿಂದ ಹೊರಬರಲು ಹೆಣ್ಣು ಅದೇ ಹಳೆಯ ಮಾದರಿ ಅನುಸರಿಸುತ್ತಾ ವಿಫಲವಾಗುವ ಬದಲು ಆಡಳಿತದಲ್ಲಿ ಹೊಸ ಮಾದರಿ ಸೃಷ್ಟಿಸುವ ದೊಡ್ಡ ಸವಾಲನ್ನು ನಿಭಾಯಿಸಬೇಕಿದೆ. ಆದರೆ ಇಂದು ದೊಡ್ಡ ಆತ್ಮವಿಶ್ವಾಸದಿಂದ ಮಹಿಳೆ ಮುನ್ನುಗ್ಗುತ್ತಿದ್ದಾಳೆ. ಇದು ಸಕಾರಾತ್ಮಕ ಸಂಗತಿ’ ಎಂದು ದಾವಣಗೆರೆಯ ಜಿ.ಎಂ.ವಿಶ್ವವಿದ್ಯಾಲಯದ ಡೀನ್ ಪ್ರೊ.ಶ್ವೇತಾ ಮರಿಗೌಡರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.