ದಾವಣಗೆರೆಯಲ್ಲಿ ಪ್ರಜಾವಾಣಿ ಆಯೋಜಿಸಿದ್ದ ಸಾಧಕಿಯರು 2025 ಕಾರ್ಯಕ್ರಮದಲ್ಲಿ ಲೇಖಕಿ ಬಾನು ಮುಷ್ತಾಕ್
–ಪ್ರಜಾವಾಣಿ ಚಿತ್ರ
ದಾವಣಗೆರೆ: ‘ನಿತ್ಯ ಸಂಕಟ, ಸಂಕಷ್ಟ ಎದುರಿಸುತ್ತ, ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಮಹಿಳೆ ಕೂಡ ಒಂದರ್ಥದಲ್ಲಿ ಯೋಧೆ. ಅವಳ ದೈಹಿಕ ಮತ್ತು ಮಾನಸಿಕ ಹೋರಾಟದ ಪ್ರತೀಕವೇ ಸಾಧನೆ’ ಎಂದು ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
‘ಹೆಣ್ಣಿನ ಸಾಧನೆಯನ್ನು ಸಮಾಜ ಗೌಣ ಮಾಡುತ್ತಾ ಬಂದಿದೆ. ಮಾನಸಿಕ ದಿಗ್ಬಂಧನೆ ವಿಧಿಸಿ ಮಹಿಳೆ ಹೊಸ್ತಿಲು ದಾಟದಂತೆ ಮಾಡಲಾಗಿತ್ತು. ಇದಕ್ಕೆ ಪೂರಕವಾದ ನಾಣ್ಣುಡಿ ಕೂಡ ಹಾಸುಹೊಕ್ಕಾಗಿವೆ. ಮಹಿಳೆಯನ್ನು ನಗಣ್ಯ ಮಾಡುವ ತಂತ್ರಗಾರಿಕೆಯೂ ಸಮಾಜದಲ್ಲಿದೆ. ಇದನ್ನು ಮೀರಿ ಸಾಧನೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದರು.
‘ಮಲ್ಟಿ ಟಾಸ್ಕಿಂಗ್ ಮಾಡುವ ಶಕ್ತಿ, ಸಾಮರ್ಥ್ಯ ಇರುವುದು ಮಹಿಳೆಗೆ ಮಾತ್ರ. ಪಾರಿತೋಷಕ ಪಡೆಯುವ ಅದಮ್ಯ ಶಕ್ತಿಯೂ ಅವಳಲ್ಲಿದೆ. ಇವರನ್ನು ಗುರುತಿಸುವ ಕೆಲಸ ಮಾಡಿರುವ ‘ಪ್ರಜಾವಾಣಿ’ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಮಹಿಳೆಯ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲಿ. ಮಹಿಳೆಯ ಸಾಧನೆಯನ್ನು ಕುಟುಂಬ, ಸಮುದಾಯ, ಸಮಾಜ ಸಂಭ್ರಮಿಸುತ್ತಿದೆ. ಮಹಿಳೆಯರ ಪರಿಶ್ರಮ, ನೋವು, ಕಣ್ಣೀರು, ಪ್ರತಿಫಲಕ್ಕೆ ಅವರ ಜೊತೆಗೆ ಇದ್ದೇವೆ’ ಎಂದು ತಿಳಿಸಿದರು.
ಸಾಧಕಿಯರ ಪ್ರಶಸ್ತಿಗೆ ಸಮಿತಿಯ ಮುಂದೆ 30 ಶಿಫಾರಸುಗಳು ಬಂದಿದ್ದವು. ಸಾಧನೆ ತೋರಿದ ಮಹಿಳೆಯ ಹಿನ್ನೆಲೆ, ಪರಿಸ್ಥಿತಿ, ಕಾರ್ಯದ ಸಾಧಕ–ಬಾಧಕ ಗಮನಿಸಿ ಅಂಕಗಳನ್ನು ನೀಡಿದೆವುರತ್ನಕಲಾ, ನಿವೃತ್ತ ನ್ಯಾಯಮೂರ್ತಿ
ನೈಜ ಸಾಧಕರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆರ್ಥಿಕ, ಸಾಮಾಜಿಕ ಸ್ತರಗಳನ್ನು ಗಮನಿಸಿ ಆಯ್ಕೆಗೆ ಮಾನದಂಡ ರೂಪಿಸಿದೆವು. ಬದುಕಿನಲ್ಲಿ ಕಷ್ಟಪಟ್ಟು ಮೇಲೆ ಬಂದು ಸಾಧನೆ ತೋರಿದವರಿಗೆ ಆದ್ಯತೆ ಸಿಕ್ಕಿದೆ.ಧರಣಿದೇವಿ ಮಾಲಗತ್ತಿ, ಐಪಿಎಸ್ ಅಧಿಕಾರಿ
ಜನಪ್ರಿಯತೆ ಗಳಿಸಿದವರಿಗೆ ಮಾತ್ರವೇ ಗೌರವ, ಸನ್ಮಾನ ಸಿಗುತ್ತದೆ. ಎಲೆಮರೆಯ ಕಾಯಿಗಳನ್ನು ಗುರುತಿಸುವ ಅವಕಾಶ ಸಿಕ್ಕಿದ್ದಕ್ಕೆ ‘ಪ್ರಜಾವಾಣಿ’ಗೆ ಆಭಾರಿಯಾಗಿದ್ದೇನೆ. ಎಲ್ಲ ಕ್ಷೇತ್ರ, ಸ್ಥಳಗಳನ್ನು ಆಧರಿಸಿ ಸಾಧಕಿಯರನ್ನು ಆಯ್ಕೆ ಮಾಡಿದ್ದೇವೆಮಾಳವಿಕಾ ಅವಿನಾಶ್, ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.