ADVERTISEMENT

ಅಂತರಂಗ: ಹಿಡಿ ಪ್ರೀತಿಗೆ ಮುಗಿಯದ ಹಂಬಲ..!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 23:30 IST
Last Updated 18 ಏಪ್ರಿಲ್ 2025, 23:30 IST
   

ಸರ್ ನನಗೀಗ 27 ವರ್ಷ. ಹಿಡಿ ಪ್ರೀತಿಗಾಗಿ ಇಷ್ಟು ವರ್ಷಗಳ ಹಂಬಲಿಸುತ್ತಲೇ ಇದ್ದೇನೆ. ಇಷ್ಟರೊಳಗೆ ಮೂರು ಬಾರಿ ಪ್ರೀತಿ ಮಾಡಿದ್ದೇನೆ. ಎಲ್ಲವೂ ವೈಫಲ್ಯದ ತುತ್ತುತುದಿಯೆ. ಓದಿನಲ್ಲಿಯೂ ಹುಶಾರು, ಒಳ್ಳೆಯ ಕೆಲಸ ಇದೆ. ನನ್ನನ್ನು ನಾನೇ ಗೇಲಿ ಮಾಡಿಕೊಂಡು, ನಗುತ್ತಲೇ ಎಲ್ಲವನ್ನು ಸ್ವೀಕರಿಸಿದ್ದೇನೆ. ಆದರೆ, ನಿಜವಾದ ಪ್ರೀತಿಯನ್ನು ಕಾಣದೇ ಮನಸ್ಸು ಸದಾ ಅನಾಥ ಭಾವ ಅನುಭವಿಸುತ್ತದೆ. ಪ್ರೀತಿಯಲ್ಲಿ ಎಲ್ಲವೂ ಸಾಧ್ಯ ಎನ್ನುತ್ತಾರೆ. ನನಗೆ ಮಾತ್ರ ಮೋಸ, ವಂಚನೆ, ಹತಾಶೆ, ನೋವು, ಸಂಕಟಗಳಷ್ಟೆ ಸಾಧ್ಯವಾಗಿದೆ. ಅಪ್ಪ ಅಮ್ಮನದು ಆದರ್ಶ ಬದುಕು, ಕಟ್ಟುನಿಟ್ಟಿನ ನಿಲುವು. ನನಗೆ ಅಲ್ಲಿಯೂ ಸರಿ ಹೋಗುವುದಿಲ್ಲ. ಸ್ನೇಹಿತರಲ್ಲಿ ಪ್ರೀತಿ ಸಿಗುತ್ತದೆ ಅದು ಸಾಲುವುದಿಲ್ಲ. ಪ್ರೀತಿಯ ಸಂಬಂಧ ಉಳಿಸಿಕೊಳ್ಳಲು ಇರುವ ಮಾರ್ಗವೇನು?


ನಿಮ್ಮ ಪ್ರಶ್ನೆಯಲ್ಲೇ ಒಂದು ಸಣ್ಣ ಎಳೆಯನ್ನು ನೀವೇ ಬಿಡಿಸಿಟ್ಟಿದ್ದೀರಿ. ಆದರೆ ಬಹುಶಃ ಅದೇ ನಿಮ್ಮ ಈ ಸಂದಿಗ್ಧ ಪರಿಸ್ಥಿತಿಗೆ ಮೂಲ ಕಾರಣವಿರಬಹುದು ಎಂಬುವುದನ್ನು ನಿಮಗೆ ಗುರುತಿಸಲು ಸಾಧ್ಯವಾಗದೇ ಇರಬಹುದು.

ADVERTISEMENT

ಎಷ್ಟೋ ಬಾರಿ ವಯಸ್ಕರಾದ ಮೇಲೆ ಕಂಡುಬರುವಂತಹ ಸಮಸ್ಯೆಗಳಿಗೆ ಮೂಲ ಬಾಲ್ಯದಲ್ಲಿ ಇರುತ್ತದೆ ಎಂಬುವುದನ್ನು ಅನೇಕರು ಅರ್ಥಮಾಡಿಕೊಳ್ಳುವುದಿಲ್ಲ. ಇದು ಕೆಲವರಿಗೆ ನಂಬುವುದಕ್ಕೆ ಸುಲಭ ಸಾಧ್ಯವಲ್ಲದಿದ್ದರೂ, ಇದು ನಿಜ. ಸುಲಭವಾಗಿ ವಿವರಿಸುವುದಾದರೆ, ಇವತ್ತು ನಾವು ಏನಾಗಿದ್ದೇವೋ ಅದಕ್ಕೆ ನಾವು ಭೂತಕಾಲದಲ್ಲಿ ಮಾಡಿದಂತಹ ನಿರ್ಧಾರಗಳು ಅಥವಾ ಕೆಲಸಗಳೇ ಕಾರಣವಲ್ಲವೇ? ಹಾಗೆಯೇ ನಾವು ಇವತ್ತು ನಾವು ಏನನ್ನು ಭಾವನಾತ್ಮಕವಾಗಿ ಅನುಭವಿಸುತ್ತಿದ್ದೇವೆಯೋ ಅದಕ್ಕೆ ನಮಗೆ ಹಿಂದೆ ಆಗಿರುವಂತಹ ಭಾವನಾತ್ಮಕ ಗಾಸಿ ಕಾರಣವಾಗಿರಬಹುದು.

ನೀವು ನಿಮ್ಮ ನಿತ್ಯಜೀವನದಲ್ಲಿ ನಗುತ್ತಲೇ ಇರುವ ವ್ಯಕ್ತಿಯೇ ಆಗಿದ್ದರೂ, ಎಲ್ಲೋ ಒಂದು ಕಡೆ ನಿಮ್ಮ ಮನಸ್ಸಿನಲ್ಲಿ ಯಾವುದೋ ನೋವು ಖಂಡಿತವಾಗಿಯೂ ಕಾಡುತ್ತಿರಬಹುದು. ಮತ್ತು ಆ ನೋವಿನಿಂದ ಹೊರಬರುವುದಕ್ಕೆ ನೀವು ನಗುವನ್ನು ಒಂದು ಮಾಧ್ಯಮವಾಗಿಯೂ ಬಳಸಿಕೊಳ್ಳುತ್ತಿರಬಹುದು. ಅಥವಾ ಅದು ನಿಮ್ಮ ಸಹಜ ವ್ಯಕ್ತಿತ್ವವೂ ಆಗಿರಬಹುದು.

ಮೂರು ಬಾರಿ ಪ್ರೀತಿ ಮಾಡಿಯೂ ವಿಫಲರಾಗಿದ್ದೀರಿ ಎಂದ ಮಾತ್ರಕ್ಕೆ ಅದನ್ನು ಒಂದು ಋಣಾತ್ಮಕ ಹಣೆಪಟ್ಟಿಯಾಗಿ ಕಟ್ಟಿಕೊಳ್ಳಬೇಕಿಲ್ಲ. ಆದರೆ ಇಲ್ಲಿ ಆಳವಾಗಿ ನಾವು ಗಮನಿಸಬೇಕಾದುದು ಇನ್ನೇನೋ ಇದೆ. ಸಾಧಾರಣವಾಗಿ ಈ ರೀತಿಯ ಸಂದರ್ಭಗಳಲ್ಲಿ

ಗಮನಿಸಬೇಕಾದಂತಹ ಅಂಶಗಳು

  • ನಿಮ್ಮ ಮೂರೂ ಜನ ಸಂಗಾತಿಗಳಲ್ಲಿ ಏನಾದರೂ ಸಾಮ್ಯತೆ ಇತ್ತಾ?

  • ಅವರೆಲ್ಲರಲ್ಲೂ ಯಾವುದಾದರೂ ಹವ್ಯಾಸವೋ ಅಥವಾ ಅಭ್ಯಾಸವೋ ಸಾಮಾನ್ಯವಾಗಿ ಕಂಡುಬಂದಿತ್ತಾ?

  • ಈ ಮೂರೂ ಜನರೂ ನಿಮ್ಮನ್ನು ಭೇಟಿ ಮಾಡಿ ಮಾತನಾಡಿಸಿದ ರೀತಿಯಲ್ಲಿ ಎಲ್ಲಾದರೂ ಸಾಮಾನ್ಯ ಅಂಶಗಳಿದ್ದುವೋ?

  • ಈ ಮೂವರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಯಾವುದಾದರೂ ಒಂದೇ ನಮೂನೆಯ ಪ್ಯಾಟರ್ನ್‌ಗಳು ಕಾಣಸಿಗುತ್ತವೆಯೋ?

ಈ ಎಲ್ಲಾ ಪ್ರಶ್ನೆಗಳಿಗೂ ‘ಹೌದು’ ಎನ್ನುವ ಉತ್ತರ ನಿಮ್ಮದಾಗಿದ್ದರೆ, ಅದಕ್ಕೆ ಮೂಲ ಕಾರಣ ನಿಮ್ಮ ಬಾಲ್ಯದಲ್ಲಿ ಇರುತ್ತದೆ. ಎಷ್ಟೋ ಬಾರಿ ಆದರ್ಶಮಯ ಜೀವನವನ್ನು ನಡೆಸುವವರು ಕೆಲವೊಂದು ಸೂಕ್ಷ್ಮವಾದಂತಹ ಭಾವನಾತ್ಮಕ ವಿಚಾರಗಳಿಗೆ ಗಮನ ಕೊಡುವುದಿಲ್ಲ. ಉದಾಹರಣೆಗೆ, ನಮ್ಮ ಪಾರಂಪರಿಕ ಮೌಲ್ಯಗಳ ಪ್ರಕಾರ ತಂದೆಯಾದವನು ತನ್ನ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಳ್ಳಬಾರದು. ಸಾಧ್ಯವಾದಷ್ಟು ಉಗ್ರವಾಗಿಯೋ ಅಥವಾ ಗಂಭೀರವಾಗಿಯೋ ಇರಬೇಕು. ಹಾಗಾದಾಗ ಎಷ್ಟೋ ಬಾರಿ ಮಕ್ಕಳಿಗೆ ತಂದೆಯಿಂದ ನಿಜವಾಗಿಯೂ ಸಿಗಬೇಕಾದ ಮತ್ತು ಸಿಗಬಹುದಾದ ಪ್ರೀತಿ ಸಿಗದೇ ಹೋಗಿರುತ್ತದೆ.

ಅಥವಾ ಇದು ತಂದೆ - ತಾಯಿ ಇಬ್ಬರಿಂದಲೂ ಉಂಟಾದಂತಹ ಗಾಸಿಯೂ ಇರಬಹುದು. ಉದಾಹರಣೆಗೆ, ನಿಮ್ಮ ಬಾಲ್ಯದಲ್ಲಿ ಅವರುಗಳು ತಮ್ಮದೇ ಆದಂಥ ಜವಾಬ್ದಾರಿಗಳನ್ನು ನಿರ್ವಹಿಸುವ ಕಾರಣದಿಂದಾಗಿ ನಿಮಗೆ ಅವರಿಂದ ಎಷ್ಟು ಗಮನ (attention) ಬೇಕಿತ್ತೋ ಅಷ್ಟು ಕೊಟ್ಟಿಲ್ಲದಿದ್ದರೆ ಅದರಿಂದಾಗಿಯೂ ವಯಸ್ಕರಾದ ಮೇಲೆ ಯಾರು ನಮಗೆ ಗಮನ ಹೆಚ್ಚು ಕೊಡುತ್ತಾರೋ ಅವರೆಡೆಗೆ ನಾವು ಸೆಳೆಯಲ್ಪಡುತ್ತೇವೆ. ಎಷ್ಟೋ ಮಂದಿಗೆ ಬಾಲ್ಯದ ಇಂತಹ ಗಾಸಿ ಇದ್ದಂಥ ಸಂದರ್ಭದಲ್ಲಿ ಒಂದು ಸ್ವಲ್ಪ ಅಟೆಂಷನ್ ಸಿಕ್ಕಿದ ಕೂಡಲೇ, ಬರಡಾಗಿದ್ದ ಭೂಮಿಯ ಮೇಲೆ ನೀರು ಚಿಮುಕಿಸಿದಂತೆ ಭಾಸವಾಗುತ್ತದೆ ಮತ್ತು ಅಂಥ ವ್ಯಕ್ತಿಗಳ ಜೊತೆಗೆ ಸಂಬಂಧವನ್ನು ಬೆಳೆಸುತ್ತಾರೆ. ಆದರೆ, ಒಂದಷ್ಟು ಸಮಯವಾದ ಮೇಲೆ, ಅದೇ ವ್ಯಕ್ತಿಗಳು ಹಿಂಸೆ, ಕ್ರೌರ್ಯ, ಮೋಸ, ವಂಚನೆ ಇಂತಹ ಕೃತ್ಯಗಳನ್ನು ಮಾಡುತ್ತಾರೆ. ಆದರೆ, ತಮಗೆ ಆ ರೀತಿಯಲ್ಲಾದರೂ ಅಟೆಂಷನ್ (ಗಮನ) ಸಿಗುತ್ತದಲ್ಲಾ ಎಂಬ ಕಾರಣಕ್ಕೆ ಅಂತಹ ವ್ಯಕ್ತಿಗಳ ಜೊತೆ ಸಂಬಂಧವನ್ನು ಅನೇಕರು ಮುಂದುವರಿಸುತ್ತಾರೆ. ಮತ್ತೆ ಯಾವಾಗ ಸಂಬಂಧ ವಿಷಮಯವಾಗುತ್ತದೋ ಆವಾಗ ಅದರಿಂದ ಹೊರಬರುತ್ತಾರೆ. ಆದರೆ, ದುರದೃಷ್ಟವಶಾತ್ ಮತ್ತೆ ಅಂತಹುದೇ ವ್ಯಕ್ತಿಯ ಬಲೆಗೆ ಬೀಳುತ್ತಾರೆ. ಹೀಗೆ ಸರಣಿ ಸಂಬಂಧಗಳಲ್ಲಿ ಬೆಂದು ಹೋಗುತ್ತಾರೆ. ಆಮೇಲೆ ಪ್ರೀತಿ - ಮದುವೆ ಮುಂತಾದ ವಿಚಾರಗಳಲ್ಲಿ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ.

ಈ ಬರಹವನ್ನು ಓದುವಾಗ ನಿಮಗೆ ಎಲ್ಲಾದರೂ ನಿಮ್ಮದೇ ಕಥೆಯನ್ನು ಓದಿದ ಹಾಗೆ ಅನ್ನಿಸಿದರೆ, ಅಥವಾ ನಿಮ್ಮ ಕಥೆಗೆ ಬಹಳ ಹತ್ತಿರವಿದೆ ಅಂತ ಅನಿಸಿದರೆ, ಅದಕ್ಕೆ ಮೂಲ ಕಾರಣ ನಿಮ್ಮ ಬಾಲ್ಯಕಾಲದ ಗಾಸಿಗಳು. ಅವುಗಳನ್ನು ರಿಗ್ರೆಷನ್ ಥೆರಪಿಯ ಮೂಲಕವಷ್ಟೇ ತೆಗೆಯಬಹುದು. ಆದರೆ ಅಂಥ ಪ್ಯಾಟರ್ನ್ ಇದೆ ಅಂತಾದರೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಜೀವನ ಪರ್ಯಂತ ಕಷ್ಟವನ್ನೇ ಅನುಭವಿಸುವಂತಹ ಪರಿಸ್ಥಿತಿ ಎದುರಾಗಬಹುದು.

ಜೀವನದಲ್ಲಿರುವ ಭಾವನೆಗಳ ಭಾರವನ್ನು ಹಗುರ ಮಾಡಿದಷ್ಟೂ, ಉತ್ಸುಕತೆ ಮತ್ತು ಜೀವಂತಿಕೆ ಚಿಮ್ಮುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.