ADVERTISEMENT

ಶ್ರಮಜೀವಿ ಮಹಿಳೆಯರಿಗೆ ಸಲಾಂ!

ಎಂ.ಆರ್.ಮಂಜುನಾಥ
Published 27 ಏಪ್ರಿಲ್ 2019, 9:53 IST
Last Updated 27 ಏಪ್ರಿಲ್ 2019, 9:53 IST
   

ರೈಲು ಪ್ರಯಾಣ ಎಂದರೆ ನೂರೆಂಟು ನೆನಪುಗಳು ಕಾಡುತ್ತವೆ. ರೈಲು ನಿಲ್ದಾಣದ ಒಳಗೆ ಪ್ರವೇಶಿಸುತ್ತಿರುವಂತೆ ಕಿವಿಗೆ ಬೀಳುವ ’ನಿಮ್ಮ ಪ್ರಯಾಣ ಸುಖಕರವಾಗಲಿ’ ಎಂಬ ಧ್ವನಿ; ಕಣ್ಣಿಗೆ ಕಾಣುವ ಹತ್ತಾರು ನಾಮಫಲಕಗಳು. ಗಂಟೆಗಳ ಮೊದಲೇ ನಿಲ್ದಾಣದಲ್ಲಿ ಕುಳಿತು, ರಾತ್ರಿಯಾದರೆ ಅಲ್ಲೇ ನೆಲದ ಮೇಲೆ ಉರುಳಿಕೊಂಡು ಘೋಷಣೆಗಳು ಮೊಳಗಿದಾಗ ದಿಗ್ಗನೆ ಎದ್ದು ಕೂರುವ ಪ್ರಯಾಣಿಕರು. ಒಂದೇ ಬೋಗಿಯಲ್ಲಿ ಅಕ್ಕಪಕ್ಕ ಕುಳಿತ ಅಪರಿಚಿತ ಪ್ರಯಾಣಿಕರ ಜೊತೆ ಒಂದಿಷ್ಟು ಹರಟೆ. ನಂತರ ಅವರೆಲ್ಲೋ, ನಾವೆಲ್ಲೋ. ಬರ್ಥ್‌ನಲ್ಲಿ ಸುಖವಾಗಿ ಮಲಗಿ ಕನಸು ಕಾಣುತ್ತ, ಸವಿನೆನಪುಗಳಲ್ಲಿ ತೇಲುತ್ತ ಪಯಣಿಸುವ ಸಾವಿರಾರು ಮಂದಿ. ಆದರೆ ಈ ಸುಖ ಪಯಣದ ಹಿಂದೆ ಎಷ್ಟೋ ಶ್ರಮಜೀವಗಳ ಕಾಣದ ಕೈಗಳ ಪರಿಶ್ರಮ ಅಡಗಿದೆ. ಅವರು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಸುಖ ಪಯಣ ದುಃಖತಪ್ತವಾಗಲು ಎಷ್ಟು ಸಮಯ ಬೇಕು?

ರೈಲ್ವೆ ವರ್ಕ್‌ಶಾಪ್‌ನಲ್ಲಿ ದುಡಿಯುವ ಕಾರ್ಮಿಕರೆಂದರೆ ಕಣ್ಣಿಗೆ ಕಟ್ಟುವುದು ಪುರುಷರು. ಆದರೆ ಮೈಸೂರು ವಲಯದಲ್ಲಿರುವ ರೈಲ್ವೆ ವರ್ಕಶಾಪ್‌ಗಳಲ್ಲಿ 150ಕ್ಕೂ ಅಧಿಕ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಜೊತೆಗೆ ರೈಲ್ವೆಗೇಟಿನಲ್ಲಿ ಮೂವರು ಮತ್ತು ರೈಲ್ವೆ ಟ್ಯ್ರಾಕ್‌ನಲ್ಲಿ 28 ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿರುವ ಈ ಹೆಣ್ಣುಮಕ್ಕಳ ಕಠಿಣ ಶ್ರಮ ಇತರರಿಗೆ ಮಾದರಿಯಾಗುವಂಥದ್ದು.

ಬೇಸಿಗೆಯ ಸಮಯದಲ್ಲಿ ಕಂಬಿಗಳು ಬಾಗಿಕೊಳ್ಳುತ್ತವೆ. ಕೆಲವೊಮ್ಮೆ ತಾಪಮಾನಕ್ಕೆ ತಕ್ಕ ಹಾಗೆ ಇದರ ಜಾಯಿಂಟ್‌ ಸರಿಯಾಗಿದೆಯಾ ಎಂದು ಪರೀಕ್ಷಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ರೈಲು ಹಳಿ ತಪ್ಪಿ ಅವಗಢ ಸಂಭವಿಸುವ ಸಾಧ್ಯತೆ ಅಧಿಕ. ಹೀಗಾಗಿ ಅಲ್ಲಲ್ಲಿ ಹಳಿಗಳು ಜಾರದಂತೆ ಕಂಬಿಗಳ ನಡುವೆ ಇರುವ ಜಲ್ಲಿಕಲ್ಲುಗಳನ್ನು ಸರಿಪಡಿಸುತ್ತಾ ಸಾಗಬೇಕು. ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ ನಿಜ. ಆದರೂ ಇದೊಂದು ಸವಾಲಿನ ಕೆಲಸ. ಮಳೆಗಾಲದಲ್ಲಿ ಹಳಿಗಳ ಕೆಳಭಾಗ ಆಧಾರ ಕಳೆದುಕೊಂಡಾಗ ಮಣ್ಣು ಸಡಿಲಗೊಳುತ್ತದೆ. ಅಂತಹ ಸಂದರ್ಭದಲ್ಲಿ ರೈಲುಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ತಕ್ಷಣ ಪರಿಶೀಲಿಸಿ ನಿಲ್ದಾಣಕ್ಕೆ ಮಾಹಿತಿ ನೀಡಬೇಕು. ಗಾಳಿ, ಮಳೆ, ಬಿಸಿಲು ಎನ್ನದೆ ಪ್ರಯಾಣ ಸುಖಕರವಾಗಿರಲಿ ಎಂದು ಶ್ರಮಿಸುವ ಈ ಮಹಿಳಾ ಕಾರ್ಮಿಕರ ದಿನಚರಿ ನಿಜಕ್ಕೂ ಶ್ರಮದಾಯಕ.

ADVERTISEMENT

‘15 ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಮೆಕ್ಯಾನಿಕ್‌ ಆಗಿ ಸೇವೆ ಸಲ್ಲಿಸುತ್ತಿದೇನೆ. ರೈಲು ಪರ ಊರಿನಿಂದ ಬಂದು ನಿಲ್ದಾಣದಲ್ಲಿ ನಿಂತ ಕ್ಷಣ ಪ್ರತಿಯೊಂದು ಬೋಗಿಗಳ ಕೆಳಗೆ ಬಗ್ಗಿ ಗಾಲಿಗಳು ಹಾಗೂ ಅದಕ್ಕೆ ಅಳವಡಿಸಿರುವ ಬ್ರೇಕ್‌ ಲಾಕ್‌ಗಳು ಸರಿಯಾಗಿದೆಯ ಎಂದು ಪರಿಶೀಲಿಸಬೇಕು. ರೈಲಿನ ಮುಂದಿನ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಡಬೇಕು. ನಂತರವೇ ರೈಲಿನ ಮುಂದಿನ ದಾರಿ ಸುಖಮಯವಾಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಮುಗಿಯಿತು’ ಎನ್ನುತ್ತಾರೆ 45 ವರ್ಷ ವಯಸ್ಸಿನ ಸರಳಾ ಯಾದವ್.

ಗಂಡಸರಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ರೈಲ್ವೆ ವರ್ಕ್‌ಶಾಪ್‌ನಲ್ಲಿ ಸುಮಾರು 150 ಮಹಿಳೆಯರು ರೈಲುಬೋಗಿಯ ಬ್ರೇಕ್‌ಲೈನ್, ಇಲೆಕ್ಟ್ರಿಕ್‌ ವೈರಿಂಗ್ ಕೆಲಸ, ವೆಲ್ಡಿಂಗ್ ಕೆಲಸವನ್ನು ಮಾಡುತ್ತಿದ್ದಾರೆ. ರೈಲು ಬಂದು ಹೋಗುವಾಗ ರೈಲ್ವೆ ಗೇಟ್ ಭದ್ರಪಡಿಸಬೇಕು. ಹಳ್ಳಿಗಳ ಕಡೆ ಎತ್ತಿನ ಬಂಡಿ, ಇನ್ನಿತರ ವಾಹನ ರೈಲ್ವೆಕಂಬಿ ದಾಟದ ಹಾಗೆ ನೋಡಿಕೊಳ್ಳಬೇಕು. ಎಲ್ಲವೂ ಸರಿಯಾಗಿದೆ ಎಂದು ಹಸಿರು ಬಾವುಟ ತೋರಿದಾಗ ಮಾತ್ರ ರೈಲು ಮುಂದಿನ ನಿಲ್ದಾಣಕ್ಕೆ ತೆರಳುತ್ತದೆ. ಇವೆಲ್ಲ ಕೆಲಸವನ್ನೂ ಚಾಚೂತಪ್ಪದೆ ಮಾಡಬೇಕಾದ್ದು ರೈಲ್ವೆಗೇಟ್ ಗ್ಯಾಂಗ್‌ಮ್ಯಾನ್ ಕೆಲಸ.

‘ಸ್ವಲ್ಪ ಕಷ್ಟದ ಕೆಲಸ. ಅದರೂ ಕೊಟ್ಟ ಕೆಲಸವನ್ನು ನಿಷ್ಟೆಯಿಂದ ಮಾಡುತ್ತೇನೆ. ಕೆಲವೊಂದು ಸಾರಿ ರೈಲ್ವೆ ಕಂಬಿಗಳ ಪಕ್ಕದಲ್ಲಿ ಹರಡಿರುವ ಜೆಲ್ಲಿಕಲ್ಲುಗಳನ್ನು ಮತ್ತೆ ಸರಿ ಪಡಿಸಬೇಕು. ದಿವಸಕ್ಕೆ ಇಂತಿಷ್ಟು ಮೀಟರ್ ಅಂತ ಕೆಲಸ ಮಾಡಬೇಕು. ಗ್ಯಾಂಗ್‌ಮ್ಯಾನ್‌ಗಳ ಜೊತೆಯಲ್ಲಿ ಕೆಲಸ ಮಾಡಬೇಕಾಗುತ್ತದೆ’ ಎನ್ನುತ್ತಾರೆ 29 ವರ್ಷ ವಯಸ್ಸಿನ ಯಶೋದ.

‘ಕಳೆದ 8 ವರ್ಷಗಳಿಂದ ಗೇಟ್ ಕೆಲಸ ಮಾಡುತ್ತಿದ್ದೇನೆ. ಹೊಸದರಲ್ಲಿ ರೈಲು ಹೋಗುವ ರಭಸಕ್ಕೆ ಭಯವಾಗುತ್ತಿತ್ತು. ಬರಬರುತ್ತ ಹೊಂದಿಕೊಂಡೆ. ದಿವಸಕ್ಕೆ ಲಕ್ಷಾಂತರ ಜನ ರೈಲಿನಲ್ಲಿ ನಮ್ಮನ್ನು ನಂಬಿ ಪ್ರಯಾಣ ಮಾಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೆ ಎಂದು ನೆನೆಸಿಕೊಂಡರೂ ಭಯವಾಗುತ್ತದೆ. ಇಷ್ಟು ವರ್ಷ ಕಪ್ಪು ಚುಕ್ಕೆ ಇಲ್ಲದ ಹಾಗೆ ಕರ್ತವ್ಯ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳುತ್ತಾರೆ 37 ವರ್ಷ ವಯಸ್ಸಿನ ಪ್ರೇಮ.

ಈ ಕಾರ್ಮಿಕರ ದಿನದಂದು ಈ ಶ್ರಮಜೀವಿ ಮಹಿಳೆಯರಿಗೆ ಒಂದು ಸಲಾಂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.