ADVERTISEMENT

ಬಾಯಿಗೇಕೆ ದುರ್ಗಂಧ ಶತ್ರು?

ಡಾ.ಶ್ವೇತಾ ಹೊನ್ನುಂಗರ
Published 22 ಫೆಬ್ರುವರಿ 2019, 19:32 IST
Last Updated 22 ಫೆಬ್ರುವರಿ 2019, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆಂದದ ಹುಡುಗಿ. ಹದಿನಾರರ ಹರೆಯ. ಹವಳದ ತುಟಿಯನ್ನು ಅರೆಬಿರಿದು ನಗುತ್ತಿದ್ದರೆ ಮಾತನಾಡಿಸುವ ಆಕರ್ಷಣೆ. ಆದರೆ ಸಂಭಾಷಣೆಯ ಸಂತಸ ಹಂಚಿಕೊಳ್ಳಬೇಕು ಎನಿಸುವಷ್ಟರ‍್ಲಲೇ ಕೈಯ್ಲಲ್ದಿದ ಪುಟ್ಟ ಕರವಸ್ತ್ರ ಬಾಯಿಗೆ ಬೀಗ ಜಡಿಯುತ್ತದೆ. ಮುಖದಲ್ಲದ್ದ ಜೀವಕಳೆ ಹಿಂಡಿಹೋಗುತ್ತದೆ.

ಮಧ್ಯೆ ವಿಲನ್‌ ಆಗಿ ನಿಂತಿದ್ದು ಬಾಯಿಯ ದುರ್ವಾಸನೆ.ಪ್ರತಿ ನಾಲ್ವರ‍ಲ್ಲಿ ಒಬ್ಬರನ್ನು ಅಮರಿಕೊಂಡು ಭಾವನಾತ್ಮಕವಾಗಿ ಜಗ್ಗಾಡಿಸುವ ಈ ಸಮಸ್ಯೆಗೆ ಕಾರಣಗಳು ಹಲವಾರು. ಶೇ. 90ರಷ್ಟು ಪ್ರಕರಣಗಳಲ್ಲಿ ಕೆಟ್ಟ ವಾಸನೆಯ ಮೂಲ ಬಾಯಿಯೇ. ಈ ದುರ್ಗಂಧದ ತೀವ್ರತೆಯೂ ಹಗಲು, ರಾತ್ರಿ ಬದಲಾಗುತ್ತದೆ. ಹಗಲು ಹೊತ್ತು ತಿನ್ನುವ ಬೆಳ್ಳುಳ್ಳಿ, ಈರುಳ್ಳಿ, ಮಾಂಸ, ಮೀನು, ಚೀಸ್ ಮೊದಲಾದ ಆಹಾರ ಪದಾರ್ಥಗಳು, ಚಟ ತೀರಿಸಿಕೊಳ್ಳಲು ಮಾಡುವ ಧೂಮಪಾನ, ಮದ್ಯಪಾನ ಕೆಟ್ಟ ವಾಸನೆಗೆ ಕಾರಣಗಳಾದರೆ, ರಾತ್ರಿ ಹೊತ್ತು ಆಮ್ಲಜನಕದ ಕೊರತೆಯಿಂದ, ಸ್ಥಗಿತಗೊಳ್ಳುವ ಚಟುವಟಿಕೆಯಿಂದ ದುರ್ವಾಸನೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಹೀಗಾಗೇ ಬೆಳಿಗ್ಗೆ ಎದ್ದ ಕೂಡಲೇ ಬಾಯಿಯಿಂದ ಗವ್ವನೆ ಹೊಡೆಯುವ ಗವಲು.

ಬಾಯಿಯ ದುರ್ವಾಸನೆ ಶೇಕಡಾ 80 ರಷ್ಟು ಜನರಲ್ಲಿ ಕಂಡು ಬರುತ್ತದೆ. ಆದರೆ ಇದರ ಅರಿವು ಬಹತೇಕ ಜನರಿಗೆ ಇರುವುದಿಲ್ಲ. ಇದು ಬಾಯಿಯ ಮೂಲಕ ಉಸಿರಾಡುವವರಲ್ಲಿ ಹೆಚ್ಚು. ಸುಮಾರು ಶೇ. 85ರಷ್ಟು ಜನರಲ್ಲಿ ಇದಕ್ಕೆ ಕಾರಣ ಬಾಯಿಯ ಸ್ವಚ್ಛತೆ ಇಲ್ಲದಿರುವುದು.

ADVERTISEMENT

ನಾವು ಆಹಾರ ತಿಂದ ಬಳಿಕ ಬಾಯಿಯನ್ನು ಸ್ವಚ್ಛಗೊಳಿಸದಿದ್ದರೆ ಹಲ್ಲಿಗೆ ಅಂಟಿಕೊಂಡಿರುವ ಆಹಾರದ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆವಿಯಾಗುವ ಗಂಧಕ ಮತ್ತು ಜಲಜನಕದ ಸಲ್ಫೈಡ್ ಮುಂತಾದ ಅನಿಲಯುಕ್ತ ವಸ್ತುಗಳು ಉತ್ಪತ್ತಿಯಾಗಿ ಬಾಯಿಯ ವಾಸನೆಯನ್ನು ಹೆಚ್ಚು ಮಾಡಬಹುದು.

ಕೆಲವು ಸೂಕ್ಷ್ಮಾಣುಗಳು ವಸಡಿನ ಎಡೆಗಳಲ್ಲಿ ಕಂಡುಬರಬಹುದು. ಅಲ್ಲದೆ ಹಲ್ಲಿನ ಸುತ್ತ ಇರುವ ದಂತದ ಪಾಚಿ ಅಥವಾ ಕಟ್ಟಿಕೊಂಡಿರುವ ದಂತದ ಗಾರೆಗಳಿಂದ ಬಾಯಿಯ ವಾಸನೆ ಹೆಚ್ಚಾಗುವುದು. ಕೆಲವರಿಗೆ ಎಷ್ಟು ಬಾರಿ ಹಲ್ಲು ಶುಚಿಗೊಳಿಸಿದರೂ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಇದರ ಯಾತನೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಜೊತೆಗೆ ಇಂತಹ ವ್ಯಕ್ತಿಗಳ ಜೊತೆ ವ್ಯವಹರಿಸುವಾಗ ಅಥವಾ ಜೀವನ ನಡೆಸುವ ವ್ಯಕ್ತಿಗೂ ಅದು ಹಿಂಸೆ. ಬಾಯಿ ದುರ್ವಾಸನೆ ಕೆಲವೊಮ್ಮೆ ಮುಜಗರಕ್ಕೀಡು ಮಾಡುವುದೂ ಇದೆ.

ಕಾರಣಗಳು

*ಬಾಯಿಯನ್ನು ಶುಚಿಗೊಳಿಸದೆ ಇರುವುದು.

*ಉಪವಾಸ ಮಾಡುವುದು

* ಧೂಮಪಾನ, ಮದ್ಯಪಾನ ಮತ್ತು ತಂಬಾಕು ಸೇವನೆ

* ಜೊತೆಗೆ ಹುಳುಕು ಹಲ್ಲುಗಳಲ್ಲಿ ಆಹಾರ ಪದಾರ್ಥ ಸೇರಿಕೊಂಡು ವಾಸನೆ ಬರಬಹುದು.

* ಶ್ವಾಸಕೋಶದ ಸೋಂಕುರೋಗ, ಕರುಳಿನ ಸೋಂಕುರೋಗ, ಜಠರದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ.

* ಸತತ ಔಷಧ ಸೇವನೆ, ಮಧುಮೇಹ

* ವಸಡಿನ ಸುತ್ತ ಬೆಳೆದಿರುವ ದಂತಪಾಚಿ, ಬಾಯಿಯ ಮತ್ತು ಶ್ವಾಸಕೋಶದ ಕ್ಯಾನ್ಸರಿನಿಂದಲೂ ಬಾಯಿಯ ವಾಸನೆ ಬರುವುದು.

ತಡೆಗಟ್ಟುವ ವಿಧಾನಗಳು

* ಬಾಯಿಯನ್ನು ದಿನಕ್ಕೆರಡು ಬಾರಿ ಶುಚಿಗೊಳಿಸಿ

* ಹೆಚ್ಚು ದ್ರವಾಹಾರ ಸೇವಿಸಿ.

* ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮುಂತಾದ ಚಟಗಳಿಂದ ದೂರವಿರಿ.

* ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

* ಊಟದ ನಂತರ ಲವಂಗ, ಏಲಕ್ಕಿ, ತುಳಸಿ ಇತ್ಯಾದಿಗಳನ್ನು ಸೇವಿಸಿ ಬಾಯಿಯನ್ನು ಶುಚಿಗೊಳಿಸಿ.

* ದಂತ ಕುಳಿಗಳಿದ್ದರೆ ಸೂಕ್ತ ಚಿಕಿತ್ಸೆ ಪಡೆಯಿರಿ. ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರಿಂದ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳಿ.

* ಜೊಲ್ಲಿನ ಪ್ರಮಾಣ ಕಡಿಮೆ ಇದ್ದಲ್ಲಿ ಅಥವಾ ರಕ್ತ ಒಸರುತ್ತಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಿರಿ.

* ಬಾಯಿ ದುರ್ವಾಸನೆ ಸಂಕೀರ್ಣವಾದ ಸಾಮಾಜಿಕ ಸಮಸ್ಯೆಯೂ ಹೌದು. ಇದರಿಂದ ಕೆಲವೊಬ್ಬರು ಖಿನ್ನತೆಗೆ ಒಳಗಾಗುತ್ತಾರೆ. ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುವ ಈ ತೊಂದರೆಗೆ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಆಯುರ್ವೇದ ಚಿಕಿತ್ಸೆ

* ಮಾವಿನ ಎಲೆಯ ಪುಡಿ, ಬೇವಿನ ಪುಡಿ, ಖದಿರ ಮತ್ತು ಯುಷ್ಟಿಮಧ ಪುಡಿಗಳನ್ನು ಸೇರಿಸಿ ಅಥವಾ ಒಂದೊಂದಾಗಿ ಹಲ್ಲು ಮತ್ತು ವಸಡುಗಳನ್ನು ಉಜ್ಜಬೇಕು.

* ತ್ರಿಫಲ ಕಷಾಯದಿಂದ ಬಾಯಿ ಮುಕ್ಕಳಿಸಬೇಕು.

* ಖದಿರಾದಿ ವಟಿಯನ್ನು ಆಗಿಯಬೇಕು.

(ಲೇಖಕಿ ಬೆಂಗಳೂರಿನ ಲೋಟಸ್‌ ಆಯುರ್‌ಕೇರ್‌ನಲ್ಲಿ ಆಯುರ್ವೇದ ಮತ್ತು ಪಂಚಕರ್ಮ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.