ADVERTISEMENT

ಚೀಟಿ ಅಂಟಿಸಿ ಪ್ರೀತಿ ಗೆಲ್ಲಿಸಿ...

ಅಪ್ಪನ ಸರಿದಾರಿಗೆ ತರಲು ಮಗ ಸರದಾರ ಹೂ ಹಿಡಿದು ಕೂತ,,

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 20:00 IST
Last Updated 20 ಜನವರಿ 2019, 20:00 IST
ಯುವ ಸರದಾರನ ಜಾತಿ ಆಕ್ರೋಶ
ಯುವ ಸರದಾರನ ಜಾತಿ ಆಕ್ರೋಶ   

ಪ್ರೀತಿಪಾತ್ರರನ್ನು ಒಪ್ಪಿ ಮದುವೆಯಾಗುವುದು ಸಮಾಜಕ್ಕೆ ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ಜಾತಿ ಭೇದವೆನ್ನುವುದು ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಇದು ನನ್ನ ಬಲವಾದ ನಂಬಿಕೆ. ನೀವು ಒಪ್ಪುವಿರಾದರೆ ನಿಮ್ಮದೊಂದು ಪೂರಕ ಸಂದೇಶ ಬರೆದು ಅಂಟಿಸಿ, ಒಂದು ಗುಲಾಬಿ ಹೂವನ್ನು ಎತ್ತಿಕೊಂಡು ಸಹಮತ ವ್ಯಕ್ತಪಡಿಸಿ. ಹೀಗೊಂದು ಫಲಕ ಹಿಡಿದು ಗುಲಾಬಿ ಹೂಗಳ ಹರವಿಕೊಂಡು ಪಂಜಾಬ್‌ ಯುವಕ ಯುವರಾಜ್‌ ಸಿಂಗ್‌ ಈ ವಾರಾಂತ್ಯದ ಸಂಜೆ ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ.

ಯಾಕೋ ಸರದಾರಾ ನಿನ್ನ ಲವ್‌ ಸ್ಟೋರಿಗೆ ಜಾತಿ ಅಷ್ಟೊಂದು ಕಾಡಿತೇನೋ? ಎಂದು ಕೆಣಕಿದರೆ, ‘ಹೌದು. ನಮ್ಮಪ್ಪ ನನಗೆ ಯಾವತ್ತೂ ಜಾತಿ ಬಗ್ಗೆ ಮಾತನಾಡುತ್ತಾನೆ. ಬೆಂಗಳೂರಿಗೆ ಓದಲು ಹೋಗಿ, ಅಲ್ಲಿ ಯಾವುದಾದರೂ ಹುಡುಗೀನ ಕಟ್ಕೊಂಡರೆ ನಾನು ಸುಮ್ಮನಿರಲ್ಲ. ನೀನು ಮದುವೆ ಆಗುವುದಾದರೆ ನಮ್ಮ ಜನಾಂಗದ ಹುಡುಗಿಯನ್ನೇ ಆಗಬೇಕು ಎಂದು ಅಪ್ಪ ಕಟ್ಟಾಜ್ಞೆ ಮಾಡಿದ್ದಾನೆ ಅದಕ್ಕೆ ಈ ಮಾರ್ಗದ ಮೂಲಕ ನನ್ನ ಪ್ರತಿಭಟನೆಯನ್ನು ದಾಖಲಿಸುತ್ತಿದ್ದೇನೆ. ಈ ದನಿಯೊಂದಿಗೆ ಹಲವು ದನಿಗಳ ಸೇರಿಸಿ ಅವನಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಅಂತಾನೆ.

ಹೀಗೆ ಬೀದಿಯಲ್ಲಿ ಕೂತ ಯುವಕನಿಗೆ ಹಲವರು ಸಂತೈಸಿ ಸಹಮತ ವ್ಯಕ್ತಪಡಿಸಿ ಗುಲಾಬಿ ಹೂ ಎತ್ತಿಕೊಂಡರು. ಪುಟ್ಟ ಹಳದಿ ಚೀಟಿಯಲ್ಲಿ ತಮ್ಮದೂ ಒಂದಷ್ಟು ಸಂದೇಶಗಳ ಬರೆದು ಯುವಕ ಹಿಡಿದುಕೊಂಡಿದ್ದ ಫಲಕಕ್ಕೆ ಅಂಟಿಸಿ ಜಾತಿ ವಿರುದ್ಧದ ದನಿಗೆ ದನಿಗೂಡಿಸಿದರು. ಕೊಂಚ ದೂರದಲ್ಲಿ ಯುವತಿಯೊಬ್ಬಳು ಟ್ರೈಪಾಡ್‌ ಹಾಕಿ, ಕ್ಯಾಮೆರಾ ಇಟ್ಟುಕೊಂಡು ಅಲ್ಲಿ ನಡೆಯುತ್ತಿದ್ದುದನ್ನೆಲ್ಲ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದಳು.

ADVERTISEMENT

ಇದೆಲ್ಲ ಡೆಟಾ ಎಡಿಟ್‌ ಆಗಿ, ಯುಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತಿತರ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿ ಅಂತೂ ಸರದಾರನ ಅಪ್ಪ ದೊಡ್ಡ ಸರದಾರನ ಕಣ್ಣು, ಕಿವಿಗೂ ಬೀಳುವ ಸಾಧ್ಯತೆ ಹೆಚ್ಚು. ಹಾಗೆ ನಮ್ಮ ಸಮಾಜದ ಸಾಂಸ್ಕೃತಿಕ ಪೊಲೀಸ್‌ಗಿರಿಯ ಕಿವಿ, ಕಣ್ಣುಗಳಿಗೆ ಮತ್ತು ಮುಖ್ಯವಾಗಿ ಮನಸುಗಳಿಗೆ ಮುಟ್ಟಿ ಮನದಟ್ಟು ಮಾಡಲಿ. ಯುವಕರ ಇಂಥ ಆಶೋತ್ತರಗಳಿಗೆ ಸಮಾಜ ಯಾವತ್ತೂ ತಾಯಿಯ ಅಂತಃಕರಣ ವ್ಯಕ್ತಪಡಿಸುತ್ತ ಬಂದಿದೆ. ಈಗಲೂ ಅದು ಮುಂದುವರಿಯುತ್ತದೆ. ಮೆಟ್ರೊ ಇಂಥ ಯುವ ನಡೆಗಳನ್ನು ಸ್ವಾಗತಿಸುತ್ತದೆ. ನಿಮ್ಮ ಇಂಥ ಭಿನ್ನ ದನಿಗಳನ್ನು ಮೆಟ್ರೊ ಜೊತೆ ಹಂಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.