ADVERTISEMENT

ಅಚೀವರ್ಸ್ ರೆಕಾರ್ಡ್‌ ಸೇರಿದ ಮೂರರ ‘ತರುಣ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 19:30 IST
Last Updated 2 ಅಕ್ಟೋಬರ್ 2019, 19:30 IST
ತರುಣ್‌
ತರುಣ್‌   

ಒಂದು ವರ್ಷ, ಎರಡು ತಿಂಗಳಿನ ಮಗುವಾಗಿದ್ದಾಗಲೇ ಮಲೇಷ್ಯಾದಲ್ಲಿ ನಡೆದ ‘ಸ್ಮಾರ್ಟ್‌ಕಿಡ್‌ ಏಷ್ಯಾ’ ಎಂಬ ಪ್ರದರ್ಶನದಲ್ಲಿ ಬಹುಮಾನ ಪಡೆದಿದ್ದ. ಈಗ ತನ್ನ ಬುದ್ಧಿಶಕ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕಣ್ಣು ಅರಳಿಸಿ ನೋಡುವಂತೆ ಮಾಡಿ ‘ಇಂಡಿಯನ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌’ ಪ್ರವೇಶಿಸಿದ್ದಾನೆ ಮೂರರ ಹರೆಯದ ತರುಣ್‌.

ಈ ಪೋರ, ಬೆಂಗಳೂರಿನ ಆರ್‌ಟಿ ನಗರದ ವಿಜಯ್‌ ಹಾಗೂ ವಸಂತಿ ದಂಪತಿಯ ಮಗ. ಈ ಪುಟಾಣಿಯ ಕಲಿಕೆ, ಆಸಕ್ತಿ, ಇಂಟೆಲಿಜೆನ್ಸಿಗೆ ಪ್ರಸಂಶೆಗಳ ಸುರಿಮಳೆಯೇ ಹರಿದುಬಂದಿದೆ.

ತರುಣನಲ್ಲಿದೆ ಅಗಾಧ ನೆನಪಿನ ಶಕ್ತಿ. ಈ ಚಿಕ್ಕವಯಸ್ಸಿಗೆ ಮಕ್ಕಳ ಇಂಗ್ಲಿಷ್‌ ಪುಸ್ತಕಗಳನ್ನು ಸರಾಗವಾಗಿ ಓದುತ್ತಾನೆ. ಸೌರಮಂಡಲ ಗ್ರಹಗಳನ್ನು ಹೆಸರಿಸುತ್ತಾನೆ. 50ಕ್ಕೂ ಹೆಚ್ಚು ಹಣ್ಣುಗಳ ಹೆಸರು ಹೇಳುತ್ತಾನೆ. 40ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಹೆಸರಿಸುತ್ತಾನೆ. ಚಾರ್ಟ್‌ನಲ್ಲಿರುವ ಚಿತ್ರಗಳನ್ನು ತೋರಿಸಿ, ಅವುಗಳ ಬಗ್ಗೆ ಕೇಳಿದರೆ ಸಾಕು, ಆ ಚಾರ್ಟ್‌ನಲ್ಲಿರುವ ಎಲ್ಲ ಚಿತ್ರಗಳ ಹೆಸರಿನೊಂದಿಗೆ ವಿವರಿಸುತ್ತಾನೆ ತರುಣ್‌.

ADVERTISEMENT

ಮಕ್ಕಳ ಇಂಗ್ಲಿಷ್‌ ಪುಸ್ತಕಗಳನ್ನು ಸುಲಭವಾಗಿ ಓದುತ್ತಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸೌರಮಂಡಲದ ಬಗ್ಗೆ ತಿಳಿಯುವ ಕುತೂಹಲ ಅವನದ್ದು. ಅದಕ್ಕಾಗಿ ಪುಸ್ತಕಗಳನ್ನು ಹುಡುಕಾಡುತ್ತಾನೆ.ಅನೇಕ ಪ್ರಾಣಿಗಳ ಹೆಸರನ್ನು ಗುರುತಿಸುವುದರ ಜತೆಗೆ ಅವುಗಳ ಶಬ್ದ ಕೂಡ ಅನುಕುರಿಸುತ್ತಾನೆ.‌ಬಣ್ಣಗಳ ಆಯ್ಕೆಯಲ್ಲೂ ತುಂಬಾ ಚುರುಕು. ಜತೆಗೆ, ಚಿತ್ರಗಳಿಗೆ ಬಣ್ಣ ಹಚ್ಚುವುದರಲ್ಲೂ ನಿಸ್ಸೀಮ.

ಇಂಗ್ಲಿಷ್‌ ಮಾತನಾಡುತ್ತಾ, ಈಗ ಸ್ಪ್ಯಾನಿಷ್ ಭಾಷೆ ಕಲಿಯಲು ಆರಂಭಿಸಿದ್ದಾನೆ. ಯಾವುದೇ ಒಂದು ಮಕ್ಕಳ ಪುಸ್ತಕ ಕೊಟ್ಟರೆ, ಅದನ್ನು ಪೂರ್ತಿಯಾಗಿ ಓದಿ ಮುಗಿಸುವುದು ಈ ಪುಟಾಣಿಯ ಹವ್ಯಾಸ.ಅನೇಕ ಮಕ್ಕಳು ಮೊಬೈಲ್‌ನಲ್ಲಿ ಗೇಮ್‌ ಆಡುವುದು ಸಾಮಾನ್ಯ. ಆದರೆ, ತರುಣ್, ಮೊಬೈಲ್‌ ಬಳಸಿಕೊಂಡು, ಯುಟ್ಯೂಬ್‌‌‌ನಲ್ಲಿ ನಾಸಾದ ಬಗ್ಗೆಯೂ ಗಮನಿಸುತ್ತಾ, ತಾಯಿಗೆ ವಿವರಿಸುತ್ತಾನೆ. ‘ಸಾಮಾನ್ಯವಾಗಿ ಮಕ್ಕಳು ಈ ವಯಸ್ಸಿನಲ್ಲಿ ತಮ್ಮದೇ ಲೋಕದಲ್ಲಿ ಇರುತ್ತಾರೆ. ಆದರೆ ಇವನು ಮಾತ್ರ ಅನ್ಯಗ್ರಹಗಳ ಬಗ್ಗೆ ಮಾಹಿತಿ ಹುಡುಕುವುದರಲ್ಲಿಯೇ ದಿನ ಕಳೆಯುತ್ತಾನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ತರುಣ್ ತಾಯಿ ವಸಂತಿ ಅಣ್ಣಾಮಲೈ.

‘ನಾವು ಮಲೇಷ್ಯಾದಲ್ಲಿದ್ದಾಗ ಅಲ್ಲಿನ ಮಾಲ್‌, ರೆಸ್ಟೊರೆಂಟ್‌ಗಳ ಬೋರ್ಡ್ ಮೇಲೆ ಬರೆದ ಹೆಸರುಗಳನ್ನು ಸುಲಭವಾಗಿ ಓದುತ್ತಿದ್ದ. ಅರೇ! ಇದೇನು, ಇವನು ಇಷ್ಟು ಸುಲಭವಾಗಿ ಇಂಗ್ಲಿಷ್‌ ಹೇಗೆ ಓದುತ್ತಾನಲ್ಲಾ’ ಎಂದು ಎನ್ನಿಸುತ್ತಿತ್ತು. ದಾರಿಯಲ್ಲಿ ಕಂಡಿದ್ದನ್ನೆಲ್ಲ ‘ಇದೇನು’ ಎಂದು ಪ್ರಶ್ನೆ ಮಾಡದೇ ಮುಂದಕ್ಕೆ ಹೋಗುತ್ತಿರಲಿಲ್ಲ. ಹೇಳಿದ್ದೆಲ್ಲವನ್ನೂ ನೆನಪಿಟ್ಟುಕೊಂಡು, ನಮಗೆ ನೆನಪಿಸುತ್ತಿದ್ದ. ಇವೆಲ್ಲ ನೋಡುತ್ತಿದ್ದಾಗ, ನನಗಂತೂ ಅಚ್ಚರಿಯಾಗಿತ್ತು‘ ಎನ್ನುತ್ತಾರೆ ವಸಂತಿ.

ಒಮ್ಮೆ ಹೀಗಾಯ್ತು; ವಸಂತಿ ಅವರು, ತರುಣ್‌ನನ್ನು ಶಾಲೆಗೆ ಸೇರಿಸಲು ಹೋಗಿದ್ದರು. ಆ ವೇಳೆ, ಶಿಕ್ಷಕಿಯೊಬ್ಬರ ಎದುರು ಅಲ್ಲೇ ಇದ್ದ ಮಕ್ಕಳ ಇಂಗ್ಲಿಷ್‌ ಪುಸ್ತಕವನ್ನು ಓದಿ ಮುಗಿಸಿದ್ದ ಈ ಪೋರ. ಅದನ್ನು ಕಂಡು ಶಿಕ್ಷಕಿಯೇ ಬೆರಗಾಗಿದ್ದರಂತೆ.

ಮಗನ ಕ್ರಿಯಾಶೀಲ ಚಟುವಟಿಕೆಯನ್ನು ಮುಂದುವರಿಸಬೇಕು, ಅವನ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದೊಂದಿಗೆ, ಎಂಎನ್‌ಸಿ ಕಂಪನಿಯ ಕೆಲಸವನ್ನೇ ಬಿಟ್ಟರು ವಸಂತಿ. ಮನೆಯಲ್ಲೇ ಮಗನಿಗೆ ಆಟ, ಪಾಠ ಶುರುಮಾಡಿದ್ದರು. ಈಗ ಪೂರ್ಣ ಪ್ರಮಾಣದಲ್ಲಿ ತನ್ನ ಮಗನ ಬೆಳವಣಿಗೆಗೆ ತೊಡಗಿಸಿಕೊಂಡಿದ್ದಾರೆ.

ಪ್ರಯೋಗದಲ್ಲೇ ಹೆಚ್ಚು ಸಮಯ:ತರುಣನ ಕಲಿಕೆಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ತಾಯಿಗೆ ಅವುಗಳಿಂದ ದಿನಕ್ಕೊಂದು ಪ್ರಯೋಗ ಮಾಡಿ ತೋರಿಸುವುದು ತರುಣನ ಹವ್ಯಾಸ. ಕೆಲ ಸಮಸ್ಯೆಗಳಿಗೆ ಯುಟ್ಯೂಬ್‌‌ನಲ್ಲಿ ಪರಿಹಾರ ಕಂಡುಕೊಂಡು ಅವುಗಳ ಚಿತ್ರ ಬರೆದು ಪ್ರಯೋಗ ಮುಂದುವರೆಸುತ್ತಾನೆ. ‘ಏನಿದು?’ ಎಂದು ಕೇಳಿದವರಿಗೆ, ಆ ಪ್ರಯೋಗವನ್ನು ಮಾಡಿಯೇ ವಿವರಿಸುತ್ತಾನೆ.

ಬಕೆಟ್‌ನಲ್ಲಿ ನೀರು ತುಂಬಿಸಿ ಅದಕ್ಕೆ ಚಿಕ್ಕದಾದ ಕಪ್ಪು ಡಬ್ಬಿ ಹಾಕಿ ತಿರುಗಿಸಿ, ‘ಕಪ್ಪು ರಂಧ್ರ ಹೇಗೆ ಉಂಟಾಗುತ್ತದೆ’ ಎಂದು ತೋರಿಸಿ ಕೊಡುತ್ತಾನಂತೆ.ಹೀಗೆ ಅಚ್ಚರಿಪಡುವಷ್ಟು ಬುದ್ಧಿವಂತಿಕೆ ಹೊಂದಿರುವ ತರುಣನ ಬುದ್ಧಿಶಕ್ತಿ, ಕ್ರಿಯಾಶೀಲತೆಯನ್ನು ನೋಡಬೇಕೆಂದರೆ, ಯೂಟ್ಯೂಬ್‌ನಲ್ಲಿ ‘ತರುಣ್ ಕಿಡ್ಸ್‌ ಟಿವಿ’ ಎಂದು ಟೈಪ್‌ ಮಾಡಿ, ವೀಡಿಯೊ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.