ADVERTISEMENT

ಅರಿವಿಗೆ ಇರುವುದು ಹತ್ತು ಮುಖ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 19:45 IST
Last Updated 13 ಸೆಪ್ಟೆಂಬರ್ 2019, 19:45 IST
   

ಗುರುಗಳ ಪ್ರವಚನ ಸಾಗಿತ್ತು. ಎಲ್ಲರಲ್ಲಿಯೂ ಬ್ರಹ್ಮನೇ ಇರುವುದು; ಇರುವುದು ಒಂದೇ ಬ್ರಹ್ಮ. ಅದು ಎಲ್ಲೆಲ್ಲೂ ಎಲ್ಲರಲ್ಲಿಯೂ ಇದೆ. ಬ್ರಹ್ಮವನ್ನು ತಿಳಿದವರಿಗೆ ಹೆದರಿಕೆಯೇ ಇರುವುದಿಲ್ಲ’. ಹೀಗೆ ಸಾಗಿತ್ತು ಗುರುಗಳ ಪ್ರವಚನ.

ಪ್ರವಚನವನ್ನು ಕೇಳಿದ ಶಿಷ್ಯನಿಗೆ ಎಲ್ಲೆಲ್ಲಿಯೂ ಬ್ರಹ್ಮವೇ ತುಂಬಿಕೊಂಡಿರುವಂತೆ ಕಾಣಿಸತೊಡಗಿತು. ಅದೇ ಭಾವದಲ್ಲಿ ರಸ್ತೆಯಲ್ಲಿ ನಡೆದುಬರುತ್ತಿದ್ದಾನೆ.

ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕೋಲಾಹಲ ಮೂಡಿತು. ಜನರೆಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಮದವೇರಿದ ಆನೆಯೊಂದು ಓಡಿಬರುತ್ತಿದೆ. ಅದರ ಭಯದಿಂದ ಜನರು ಓಡುತ್ತಿದ್ದಾರೆ. ಮಾವುತನೂ ಅದರ ಹಿಂದೆ ಓಡಿ ಬರುತ್ತ, ಜನರನ್ನು ಎಚ್ಚರಿಸುತ್ತಿದ್ದಾನೆ.

ADVERTISEMENT

ಶಿಷ್ಯನು ಅದೇ ರಸ್ತೆಯಲ್ಲಿ ಸಾಗುತ್ತಿದ್ದಾನೆ. ಆನೆಗೆ ಎದುರಾಗಿ ಬರುತ್ತಿದ್ದಾನೆ. ಇದನ್ನು ನೋಡಿದ ಮಾವುತ ದೂರದಿಂದಲೇ ಅವನನ್ನು ಎಚ್ಚರಿಸಿದ: ‘ಎಲೈ ಹುಡುಗ, ಪಕ್ಕಕ್ಕೆ ಸರಿ, ಆನೆ ನಿನ್ನತ್ತಲೇ ಬರುತ್ತಿದೆ!’

ಆದರೆ ಆ ಶಿಷ್ಯ ಮಾತ್ರ ಅವನ ಮಾತುಗಳನ್ನು ಕೇಳಿಸಿಕೊಂಡರೂ ಅದರಂತೆ ನಡೆದುಕೊಳ್ಳಲಿಲ್ಲ. ‘ಎಲ್ಲೆಲ್ಲೂ ಬ್ರಹ್ಮವೇ ಇರುವಾಗ, ಆನೆಯೂ ಬ್ರಹ್ಮವೇ ಆಯಿತು, ನಾನೂ ಬ್ರಹ್ಮವೇ ಆಗಿದ್ದೇನೆ. ಬ್ರಹ್ಮಕ್ಕೆ ಬ್ರಹ್ಮದಿಂದ ಹೆದರಿಕೆ ಏಕಾದರೂ ಆಗಬೇಕು?’ ಹೀಗೆಂದು ಯೋಚಿಸುತ್ತ ಆನೆಯ ಕಡೆಗೇ ಅವನು ಹೆಜ್ಜೆ ಹಾಕಿದ. ಆನೆ ಇವನನ್ನು ಸಮೀಪಿಸಿತು. ಮದವೇರಿದ್ದ ಆನೆಯಲ್ಲವೆ? ಆ ಶಿಷ್ಯನನ್ನು ಅದು ತನ್ನ ಸೊಂಡಿಲಿನಿಂದ ಎತ್ತಿಕೊಂಡು, ದೂರಕ್ಕೆ ಬೀಸಿತು. ಶಿಷ್ಯನ ಸೊಂಟ ಮುರಿಯಿತು.

ಸುಧಾರಿಸಿಕೊಂಡ ಶಿಷ್ಯ ಗುರುವಿನಲ್ಲಿಗೆ ಹೋದ. ‘ಗುರುಗಳೇ! ನೀವು ಎಲ್ಲರಲ್ಲೂ ಬ್ರಹ್ಮವೇ ಇರುವುದು ಎಂದು ಹೇಳಿದಿರಿ. ಆದರೆ ಬ್ರಹ್ಮವಾದ ಆನೆ, ಬ್ರಹ್ಮವಾದ ನನ್ನನ್ನು ಸೊಂಡಿಲಿನಿಂದ ಎತ್ತಿ ಒಗೆದದ್ದು ಸರಿಯೇ’ ಎಂದು ಕೇಳಿದ.

ಆಗ ಗುರುಗಳು ನಗುತ್ತ ಹೇಳಿದರು: ‘ಹೌದು, ನಿಜ! ನೀನೂ ಬ್ರಹ್ಮ, ಆನೆಯೂ ಬ್ರಹ್ಮ; ಬ್ರಹ್ಮದಿಂದ ಬ್ರಹ್ಮಕ್ಕೆ ಏನೂ ತೊಂದರೆ ಆಗದು. ಆದರೆ ಆ ಮಾವುತನೂ ಬ್ರಹ್ಮವೇ ಅಲ್ಲವೆ? ಅವನು ನಿನಗೆ ಎಚ್ಚರಿಕೆ ಕೊಟ್ಟನಲ್ಲವೆ? ಬ್ರಹ್ಮವೇ ಕೊಟ್ಟ ಎಚ್ಚರಿಕೆಯನ್ನು ನೀನು ಉಪೇಕ್ಷಿಸಬಾರದಿತ್ತು, ಅಲ್ಲವೆ?’

ಶಿಷ್ಯನಿಗೆ ಅವನ ತಪ್ಪಿನ ಆರಿವಾಯ್ತು.

***

ನಾವು ಕೂಡ ಎಷ್ಟೋ ಸಲ ಆ ಶಿಷ್ಯನಂತೆಯೇ ವರ್ತಿಸುತ್ತೇವೆ. ವಿಷಯನ್ನು ಪೂರ್ಣವಾಗಿ ಗ್ರಹಿಸದೆ, ನಮಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಅರ್ಥಸೈಸಿಕೊಳ್ಳುತ್ತೇವೆ. ವಸ್ತುನಿಷ್ಠವಾದ ಅರ್ಥವನ್ನು ಗ್ರಹಿಸಲು ಸಾಧ್ಯವಾಗದಿದ್ದಾಗ ತೊಂದರೆಗೆ ಒಳಗಾಗುತ್ತೇವೆ. ಹೀಗಾಗಿ ವಿಷಯವೊಂದರ ಸಮಗ್ರ ಮಾಹಿತಿ ನಮಗೆ ಇರಬೇಕು. ಒಂದೊಂದು ವಿಷಯದ ಹಿಂದೆಯೂ ಹಲವಾರು ಸ್ತರಗಳ ಅರ್ಥವೂ ತಾತ್ಪರ್ಯವೂ ಇರುತ್ತದೆ. ಅದನ್ನು ಅರ್ಥಮಾಡಿಕೊಂಡು, ಆ ಬಳಿಕವಷ್ಟೆ ಅದನ್ನು ಅನ್ವಯಕ್ಕೆ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.