ADVERTISEMENT

Valentine Day | ಆ ದಿನಗಳು ಪದೇ ಪದೇ ಹೃದಯದೊಳಗೆ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2020, 13:50 IST
Last Updated 13 ಫೆಬ್ರುವರಿ 2020, 13:50 IST
   

ನೀನು ನನಗೆ ಪ್ರೊಪೋಸ್ ಮಾಡಿದ ದಿನಾನ ನಾವಿಬ್ಬರೂ ಮರೆಯೋದಕ್ಕೆ ಆಗಲ್ಲ ಅನ್ಸುತ್ತೆ.ಯಾಕಂದ್ರೆ ಅದು ನಾವುಗಳಲ್ಲ, ನಮ್ಮಿಬ್ಬರ ಬದುಕುಗಳು ಒಂದಾದ ದಿನ.

ಕಾಲೇಜಿನ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ನಾನು–ನೀನು ಇಬ್ಬರೂ ವಹಿಸಿಕೊಂಡಿದ್ದರಿಂದ, ಇಬ್ಬರೂ ತುಂಬಾ ಟ್ರೆಡಿಶನಲ್ ಆಗಿ ರೆಡಿಯಾಗಿ, ಆತುರಾತುರವಾಗಿ ಕಾಲೇಜಿನ ಕಡೆ ಹೊರಟಿದ್ದೆವು.

ಎದುರಿನಿಂದ ಬಂದ ಮಂಗಳಮುಖಿಯರು ಗಂಡ-ಹೆಂಡತಿ ಯಾವುದೋ ಶುಭ ಕಾರ್ಯಕ್ಕೆ ಹೊರಟಂತಿದೆ. ಎಲ್ಲವೂ ಒಳ್ಳೆಯದಾಗಲಿ, ಎಂದು ಹೇಳಿದರು. ಆಗ ನೀನು ಅವರಿಗೆ ದುಡ್ಡು ಕೊಟ್ಟು ಮುಂದುವರಿದೆ. ಆದರೆ,ನಾಲ್ಕು ಹೆಜ್ಜೆ ಇಟ್ಟ ನಂತರ ‘ಅವರು ಹೇಳಿದ್ದನ್ನು ನಿಜಾ ಮಾಡೋಣವಾ’ಎಂದನಿನ್ನ ಮಾತಿಗೆ ಹೇಗೆ ರೆಸ್ಪಾನ್ಸ್ ಮಾಡ್ಬೇಕು ಅಂತಾನೇ ನನಗೆ ಗೊತ್ತಾಗ್ಲಿಲ್ಲ.

ADVERTISEMENT

ಒಂದು ಕ್ಷಣ ಖುಷಿ, ಆಶ್ಚರ್ಯ, ಭಯವಾಯ್ತ.

ತಿರುಗಿ ಮಂಗಳಮುಖಿಯರ ಹತ್ತಿರಹೋಗಿ ಅವರಿಗೆ ನಾನು ದುಡ್ಡುಕೊಟ್ಟು ಥ್ಯಾಂಕ್ಯು ಅಂತ ಹೇಳಿ ಬಂದೆ.

ಅವರಿಗೆ ನಾನು ಥ್ಯಾಂಕ್ಯೂ ಅಂತ ಹೇಳಿ ಬಂದ್ಮೇಲೆ ನೀನು, ನನ್ನನ್ನು ಪ್ರಶ್ನೆ ಮಾಡಿದೆ. ಮತ್ತೆ ನೀನು ಯಾಕ್ ಅವರಿಗೆ ದುಡ್ಡು ಕೊಟ್ಟೆ? ಯಾಕೆ ಥ್ಯಾಂಕ್ಯೂ ಹೇಳಿದೆ? ಅಂತ.

ಬಹುಶಃ ಈ ನಿನ್ನ ಮುಗ್ಧತೆ ನಂಗೆ ತುಂಬಾ ಇಷ್ಟ ಆಗ್ತಿತ್ತು.

ಯಾಕಂದ್ರೆ ನಾನಲ್ಲಿ ನಿನ್ನ ಪ್ರೀತಿನ ಒಪ್ಪಿಕೊಂಡಿದ್ದೆ ಅನ್ನೋದು ನಿನಗೆ ಅರ್ಥನೇ ಆಗ್ಲಿಲ್ಲ.ಯಾಕಂದ್ರೆ ಈ ಮಾತು ನಿನ್ನ ಬಾಯಲ್ಲಿ ಬರಲಿ ಅಂತ ನಾನು ತುಂಬಾ ದಿನದಿಂದ ಕಾದಿದ್ದೆ.

ಯಾಕಂದ್ರೆ ನನಗೋಸ್ಕರ ನೀ ಮಾಡುತ್ತಿದ್ದ ಎಲ್ಲಾ ಕೆಲಸಗಳು ನನಗೆ ಅರ್ಥವಾಗ್ತಾ ಇತ್ತು ಮತ್ತು ಇದೆಲ್ಲ ಗೊತ್ತಾದರೂ ಗೊತ್ತಾಗದಂತೆ ನಟಿಸುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು.

ಪ್ರತಿಸಲ ಪರೀಕ್ಷೆ ಮೇಲ್ವಿಚಾರಣೆಗೆ ನಾನು ಮತ್ತು ನೀನು ಒಂದೇ ರೂಮ್ನಲ್ಲಿ ನಿಯೋಜನೆ ಆಗ್ತಾ ಇದ್ವಿ. ಬೇರೆಲ್ಲ ಸ್ಟಾಫ್‌ಗಳಿಗೆ ಬ್ರೇಕ್ ಅಲ್ಲಿ ಟೀ ಸಿಕ್ತಾ ಇತ್ತು. ಆದರೆ, ನಮ್ಮ ರೂಮಿಗ್ ಮಾತ್ರ ಕಾಫಿ ಬರ್ತಾ ಇತ್ತು. ಅಲ್ಲಿ ಬರುತ್ತಿದ್ದುದೇ ಅರ್ಧ ಗ್ಲಾಸ್‌ ಕಾಫಿ ಆದರೂನನ್ನ ಗ್ಲಾಸಲ್ಲಿ ಮಾತ್ರ ತುಂಬಾ ಇರ್ತಿತ್ತು.

ನಂಗೆ ಕಾಫಿ ಇಷ್ಟ ಅಂತ ಗೊತ್ತಿದ್ದದ್ದುನಿನಗೆ ಮಾತ್ರ. ಇದೆಲ್ಲದರ ಹಿಂದೆ ನಿಮ್ಮ ಕೈವಾಡವಿದೆ ಅನ್ನೋದು ನನಗೆ ಗೊತ್ತಿತ್ತು.

ಆ ದಿನ ಕೆಮಿಸ್ಟ್ರಿ ಲ್ಯಾಬ್‌ಅಲ್ಲಿ ಅಕಸ್ಮಾತ್‌ಆಗಿ ಆಸಿಡ್ ಬಿದ್ದು ನನ್ನ ಕೈಮೇಲೆ ಆದ ಗಾಯಕ್ಕೆ ನೀ ಪಟ್ಟ ನೋವು ನನಗೆ ಗೊತ್ತಾಗ್ತಾ ಇತ್ತು.

ನನ್ನ ಬರ್ತಡೇ ನನ್ನ ಸ್ಟೂಡೆಂಟ್ಸ್ ಎಲ್ಲಾ ಸೇರಿ ಆಚರಿಸುವಾಗ ನನಗಿಂತ ಹೆಚ್ಚು ಖುಷಿಪಟ್ಟಿದ್ದು ನೀನು ಅನ್ನೋದು ನಿನ್ನ ಕಣ್ಣಲ್ಲಿ ನನಗೆ ಕಾಣಿಸುತ್ತಿತ್ತು

ಒಟ್ಟಿನಲ್ಲಿ ಆ ದಿನಗಳಾ ನನ್ನೆಲ್ಲ ಸಂತೋಷ ಮತ್ತು ದುಃಖದಲ್ಲಿ ನನ್ನ ಕಣ್ಣ ಪರಿಧಿಯ ಅಷ್ಟು ದೂರದಲ್ಲಿ ಕಾಣುತ್ತಿದ್ದ ಏಕೈಕ ವ್ಯಕ್ತಿ ನೀನು.

ಆದರೆ ಅವತ್ತಿನ ಸಂದರ್ಭದಲ್ಲಿ ನಾನು ಮಂಗಳಮುಖಿಯರಿಗೆ ಯಾಕೆ ಥ್ಯಾಂಕ್ಯೂ ಹೇಳಿದೆ ಅನ್ನೋದನ್ನ ನಿನಗೆ ಅರ್ಥ ಮಾಡಿಸುವಷ್ಟು ಸಹನೆ ಅಥವಾ ಸಮಯ ನನ್ನತ್ರ ಇರಲಿಲ್ಲ.

ಮಾರನೆಯ ದಿವಸ ನೀ ಬಂದು ಕಾಫಿ ಕೈಗಿಟ್ಟು ನಿಮ್ಮ ಅಪ್ಪ–ಅಮ್ಮನ ಹತ್ತಿರ ಯಾವಾಗ ಮಾತಾಡಲಿ ಎಂದು ಕೇಳಿದಾಗ, ನಾ ನಿಟ್ಟುಸಿರುಬಿಟ್ಟೆ ಸದ್ಯ ನಿನಗೆಲ್ಲ ಅರ್ಥ ಆಯ್ತು ಅಂತ.

ಇವತ್ಯಾಕೆ ಕಾಫಿ ಗ್ಲಾಸ್ ಅರ್ಧ ಇದೆ, ಅನ್ನೋ ನನ್ನ ಕಣ್ಸನ್ನೆಗೆ ನಿನ್ನ ಕಪ್ಪಿನಿಂದ ನನ್ನ ಕಪ್ಪಿಗೆ ನನ್ನೆದುರೇ ಕಾಫಿ ಹಾಕಿದ್ದು.

ನಮ್ಮ ಪ್ರೀತಿಯನ್ನು ಬಹಿರಂಗವಾಗಿ ಸಂಭ್ರಮಿಸಿದ ಮೊದಲ ದಿನ. ಅಂದಿನಿಂದ ಐದು ಸಂವತ್ಸರಗಳು ನಿನ್ನೊಡನೆ ಯಾವುದು ಕಮ್ಮಿ ಎನಿಸಲಿಲ್ಲ ನನಗೆ ಕಾಫಿಯಂತೆ ಕಾಳಜಿ ಪ್ರೀತಿ ಎಲ್ಲವೂ ಸಂಪೂರ್ಣ.

–ರಮ್ಯಾ ಮಂಜುನಾಥ್

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.