ADVERTISEMENT

ಹೋರಾಟವೇ ಅಸ್ಮಿತೆ: ಮೀನುಗಾರ ಮಹಿಳೆ ಬೇಬಿ ಸಾಲ್ಯಾನ್

ಪ್ರಜಾವಾಣಿ ವಿಶೇಷ
Published 6 ಮಾರ್ಚ್ 2021, 19:30 IST
Last Updated 6 ಮಾರ್ಚ್ 2021, 19:30 IST
ಬೇಬಿ ಸಾಲ್ಯಾನ್
ಬೇಬಿ ಸಾಲ್ಯಾನ್   

ಎಲ್ಲೆಲ್ಲೂ ಆಧುನಿಕತೆ ಆವರಿಸಿಕೊಂಡಿದೆ ಎಂಬುದು ಎಲ್ಲರ ಬಾಯಲ್ಲೂ ಸುಲಭಕ್ಕೆ ಉದುರುವ ಮಾತು. ಇದರಿಂದ ಯಾರಿಗೆ ಹಿತವಾಯ್ತಾ, ಅಹಿತವಾಯ್ತಾ ಗೊತ್ತಿಲ್ಲ. ಈ ಆಧುನಿಕತೆ, ತಂತ್ರಜ್ಞಾನಗಳು ಮೀನುಗಾರ ಮಹಿಳೆಯರ ಸಂಕಟಗಳನ್ನು ತಗ್ಗಿಸಿದ್ದಂತೂ ನಿಜ.

ನಸುಕಿನಲ್ಲೆದ್ದು ಸಮುದ್ರದೆದುರು ಕೈವೊಡ್ಡಿ ತರುವ ಮೀನುಗಳು, ತುಂಬಿದ ಬುಟ್ಟಿಯನ್ನು ತಲೆಮೇಲೆ ಹೊತ್ತು, ದಾರಿಯುದ್ದಕ್ಕೂ ಪಟಪಟನೆ ಉದುರುವ ಬೆವರ ಹನಿಗಳು, ಚಪ್ಪಲಿ ಇಲ್ಲದ ಕಾಲುಗಳಲ್ಲಿ ಊರೂರು ಅಲೆದು ವ್ಯಾಪಾರ ಮಾಡುತ್ತಿದ್ದ ಕಷ್ಟದ ದಿನಗಳಿಗೆ ಈಗ ಪೂರ್ಣವಿರಾಮ ಬಿದ್ದಿದೆ. ವಾಹನ ಸೌಕರ್ಯಗಳು, ಬಲೆಗೆ ಸಿಕ್ಕ ಮೀನುಗಳನ್ನು ಕೆಡದಂತೆ ಇಡುವ ವ್ಯವಸ್ಥೆಗಳು ಶ್ರಮಜೀವಿಗಳ ಹೊಯ್ದಾಟದ ದಿನಗಳನ್ನು ತಹಬಂದಿಗೆ ನಿಲ್ಲಿಸಿವೆ. ಹೇಳಿಕೇಳಿ, ನೀರಿನ ಸಾಂಗತ್ಯದಲ್ಲಿ ಬೆಳೆದವರು ನಾವು, ನೀರಿನಂತೆ ನೆಲೆ ಸಿಕ್ಕಲ್ಲಿ ಹೊಂದಿಕೊಳ್ಳುವ ಗುಣ ಬೆಳೆಸಿಕೊಂಡಿದ್ದೇವೆ.

21ನೇ ಶತಮಾನದಲ್ಲಿರುವ ನಾವು ಸಮಾನತೆ ಪಡೆದಿದ್ದೇವಾ ಗೊತ್ತಿಲ್ಲ, ಆದರೆ, ಸಹಕಾರ ಸಿಗುತ್ತಿದೆಯೆಂಬ ನಿಟ್ಟುಸಿರು ಇದೆ. ವ್ಯಾಪಾರ–ವಹಿವಾಟು, ಸಹಕಾರ ಸಂಘಗಳು ಮೀನುಗಾರ ಮಹಿಳೆಯರನ್ನು ಆರ್ಥಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿ ಗಟ್ಟಿಗೊಳಿಸಿವೆ. ಹೊಸಿಲಾಚೆ ಹೆಜ್ಜೆ ಇಟ್ಟಿರುವ ಹೆಣ್ಮಗಳಿಗೆ, ಸಮಾಜವನ್ನು ಎದುರಿಸುವ ತಾಕತ್ತು ಮೈಗಂಟಿದೆ. ಹಾಗೆಂದು ಕುಟುಂಬ ನಿರ್ವಹಣೆಯ ಭಾರವನ್ನು ಇಂದಿಗೂ ಹೆಗಲ ಮೇಲೆ ಹೊತ್ತಿರುವವಳು ಮಹಿಳೆಯೇ. ಕೈಗೆ ಸಿಗುವ ಕಾಸು, ಅದರಲ್ಲೇ ಬಚ್ಚಿಟ್ಟ ಗಳಿಕೆಯನ್ನು ಮಕ್ಕಳ ಶಿಕ್ಷಣಕ್ಕೆ ಧಾರೆಯೆರೆದು ಸಂತೃಪ್ತಿ ಕಾಣುತ್ತಿದ್ದಾಳೆ. ಹೋರಾಟವೇ ನಮ್ಮ ಬದುಕು. ಅಸ್ಮಿತೆಯೋ, ಅಸ್ತಿತ್ವವೋ ಅವೆಲ್ಲ ನಮಗೆ ಅರ್ಥವಾಗದ ವಿಷಯಗಳು. ಅವನ್ನೆಲ್ಲ ಯೋಚಿಸುತ್ತಿದ್ದರೆ ಬದುಕಿನ ಜಟಕಾ ಬಂಡಿ ನಡೆಯದು. ಬಂಡಿಗೆ ಹೆಗಲೊಡ್ಡಿದರಷ್ಟೇ ಜೀವನ. ಅಮ್ಮ ಪ್ರತಿದಿನ 10–15 ಕಿಲೊ ಮೀಟರ್ ನಡೆದು ಮನೆ ಬಾಗಿಲಿಗೆ ಹೋಗಿ ಮೀನು ವ್ಯಾಪಾರ ಮಾಡುತ್ತಿದ್ದರು. ಸುಡುಬಿಸಿಲಿಗೆ ದೇಹವೊಡ್ಡಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕಷ್ಟವನ್ನು ಈಗ ಹೈಟೆಕ್ ಮಾರ್ಕೆಟ್‌ಗಳು ಮರೆಸಿವೆ. ಅದೇ ನೆಮ್ಮದಿ. ಮೀನುಗಾರ ಮಹಿಳೆಯರು–ಪುರುಷರು, ನೀರು ಮತ್ತು ದೋಣಿ ಇದ್ದ ಹಾಗೆ. ಇಬ್ಬರೂ ಪರಸ್ಪರ ಪೂರಕವಾಗಿದ್ದರೆ ಬದುಕು ಚಲನಶೀಲ.

ADVERTISEMENT

ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.