ADVERTISEMENT

ಕೋವಿಡ್ ಸೋಂಕಿತರಿಗೆ ಮೊದಲ 2 ವಾರ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು: ಅಧ್ಯಯನ

ಪಿಟಿಐ
Published 3 ಆಗಸ್ಟ್ 2021, 15:08 IST
Last Updated 3 ಆಗಸ್ಟ್ 2021, 15:08 IST
   

ಸ್ಟಾಕ್‌ಹೋಮ್: ಕೋವಿಡ್-19 ಸೋಂಕು ತಗುಲಿದ ಮೊದಲ ಎರಡು ವಾರಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಮೂರು ಪಟ್ಟು ಹೆಚ್ಚು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.

ಫೆಬ್ರವರಿ 1 2020 ರಿಂದ ಸೆಪ್ಟೆಂಬರ್ 14 ರವರೆಗೆ ಸ್ವೀಡನ್‌ನಲ್ಲಿ 348,481 ಸಾಮಾನ್ಯ ವ್ಯಕ್ತಿಗಳ ಜೊತೆ 86,742 ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಹೋಲಿಕೆ ಮಾಡಿ ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಉಲ್ಬಣದ ಬಗ್ಗೆ ಅಧ್ಯಯನ ಮಾಡಿದೆ.

‘ಈ ಅಧ್ಯಯನದ ಮೂಲಕ ‘ಕೋವಿಡ್-19 ಸೋಂಕು ತಗುಲಿದ ನಂತರದ ಮೊದಲ ಎರಡು ವಾರಗಳಲ್ಲಿ ತೀವ್ರವಾದ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್(ಹೃದಯಾಘಾತ) ಮತ್ತು ಪಾರ್ಶ್ವವಾಯುವಿನ ಸಂಭವನೀಯತೆ ಮೂರು ಪಟ್ಟು ಹೆಚ್ಚಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.’ಎಂದು ಸ್ವೀಡನ್‌ನ ಉಮಿಯಾ ವಿಶ್ವವಿದ್ಯಾಲಯದ ಅಧ್ಯಯನದ ಭಾಗವಾಗಿದ್ದ ಲೇಖಕ ಒಸ್ವಾಲ್ಡೊ ಫೊನ್ಸೆಕಾ ರೊಡ್ರಿಗಸ್ ಹೇಳಿದರು.

ADVERTISEMENT

‘ಕೋವಿಡ್-19 ತಡೆಗಟ್ಟುವ ಲಸಿಕೆ ಹಾಕಿಸುವುದು ಎಷ್ಟು ಮುಖ್ಯ ಎಂಬುದನ್ನು ನಮ್ಮ ಫಲಿತಾಂಶಗಳು ತೋರಿಸುತ್ತವೆ, ವಿಶೇಷವಾಗಿ ತೀವ್ರ ಹೃದಯ ರಕ್ತನಾಳದ ಅಪಾಯದಲ್ಲಿರುವ ವೃದ್ಧರಿಗೆ ಲಸಿಕೆ ಪ್ರಯೋಜನ ಹೆಚ್ಚಿದೆ,’ ಎಂದು ಕಾಟ್ಸೌಲಾರಿಸ್ ಹೇಳಿದರು.

ಕೊಹಾರ್ಟ್ ಅಧ್ಯಯನ ಮತ್ತು ಸ್ವಯಂ ನಿಯಂತ್ರಿತ ಪ್ರಕರಣ ಸರಣಿ ಎಂಬ ಎರಡು ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಅಧ್ಯಯನದಲ್ಲಿ ಬಳಸಿದ್ದಾರೆ.

‘ಕೋವಿಡ್-19 ರೋಗವು ತೀವ್ರ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್(ಹೃದಯಾಘಾತ) ಮತ್ತು ಇಸ್ಕೀಮಿಕ್ ಸ್ಟ್ರೋಕ್(ಪಾರ್ಶ್ವವಾಯು) ಸಂಭವನೀಯತೆ ಹೆಚ್ಚಿಸಿದೆ ಎಂದು ಎರಡೂ ವಿಧಾನಗಳು ಸೂಚಿಸುತ್ತವೆ.’ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.