ADVERTISEMENT

ಮರಣದಂಡನೆ, ಅಂಗಚ್ಛೇದನದ ಶಿಕ್ಷೆ ಮರಳಿ ಜಾರಿಗೆ: ತಾಲಿಬಾನ್‌ 

ಏಜೆನ್ಸೀಸ್
Published 24 ಸೆಪ್ಟೆಂಬರ್ 2021, 14:50 IST
Last Updated 24 ಸೆಪ್ಟೆಂಬರ್ 2021, 14:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಅಪರಾಧಕ್ಕೆ ಪ್ರತಿಯಾಗಿ ಮರಣದಂಡನೆ, ಅಂಗಚ್ಛೇದನದ ಶಿಕ್ಷೆ ಜಾರಿಗೆ ಬರಲಿದೆ. ಆದರೆ, ಅದು ಸಾರ್ವಜನಿಕವಾಗಿ ನಡೆಯುವುದಿಲ್ಲ ಎಂದು ತಾಲಿಬಾನ್‌ ತಿಳಿಸಿದೆ.

ತಾಲಿಬಾನ್‌ ಸಂಸ್ಥಾಪಕರಾದ ‌ಮುಲ್ಲಾ ನೂರುದ್ದೀನ್ ತುರಾಬಿ ‌ ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್‌– ಎಪಿ’ಗೆ ಸಂದರ್ಶನ ನೀಡಿದ್ದಾರೆ. ಅಪರಾಧ ಮತ್ತು ಅದಕ್ಕೆ ಸಂಬಂಧಿಸಿದ ಶಿಕ್ಷೆಗಳ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಜನಸಂದಣಿಯ ನಡುವೆ, ಕೆಲವೊಮ್ಮೆ ಕ್ರೀಡಾಂಗಣಗಳಲ್ಲಿ ನಡೆಯುತ್ತಿದ್ದ ಗಲ್ಲುಶಿಕ್ಷೆ ಬಗ್ಗೆ ಆಕ್ರೋಶಗಳಿವೆ ಎಂಬ ವಾದಕ್ಕೆ ತುರಾಬಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಫ್ಗಾನಿಸ್ತಾನದ ತಾಲಿಬಾನ್‌ ಆಡಳಿತದಲ್ಲಿ ಮೂಗು ತೂರಿಸದಂತೆ ಅವರು ಜಗತ್ತಿನ ಇತರ ರಾಷ್ಟ್ರಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ADVERTISEMENT

‘ಕ್ರೀಡಾಂಗಣದಲ್ಲಿ ಶಿಕ್ಷೆ ನೀಡುತ್ತಿದ್ದ ವಿಧಾನಕ್ಕಾಗಿ ಎಲ್ಲರೂ ನಮ್ಮನ್ನು ಟೀಕಿಸಿದರು. ಆದರೆ ಅವರ ಕಾನೂನುಗಳು ಮತ್ತು ಅವರ ಶಿಕ್ಷಾ ಪದ್ಧತಿಗಳ ಬಗ್ಗೆ ನಾವು ಏನನ್ನೂ ಹೇಳಿಲ್ಲ. ನಮ್ಮ ಕಾನೂನುಗಳು ಹೇಗಿರಬೇಕು ಎಂದು ಯಾರೂ ನಮಗೆ ಹೇಳಬೇಕಿಲ್ಲ. ನಾವು ಇಸ್ಲಾಂ ಅನ್ನು ಅನುಸರಿಸುತ್ತೇವೆ ಮತ್ತು ಕುರಾನ್‌ ಮೂಲಕ ನಮ್ಮ ಕಾನೂನುಗಳನ್ನು ರೂಪಿಸುತ್ತೇವೆ,’ ಎಂದು ತುರಾಬಿ ತಿಳಿಸಿದರು.

ನ್ಯಾಯಾಧೀಶರು(ಮಹಿಳೆಯರನ್ನು ಒಳಗೊಂಡಂತೆ) ಪ್ರಕರಣಗಳನ್ನು ತೀರ್ಮಾನಿಸುತ್ತಾರೆ. ಆದರೆ ಅಫ್ಗಾನಿಸ್ತಾನದ ಕಾನೂನುಗಳ ಆಧಾರವು ಕುರಾನ್ ಆಗಿರುತ್ತದೆ. ಅದೇ ಶಿಕ್ಷೆಗಳನ್ನು ಮತ್ತೆ ಜಾರಿಗೆ ತರಲಾಗುತ್ತದೆ ಎಂದು ತುರಾಬಿ ಹೇಳಿದ್ದಾರೆ.

ತುರಾಬಿ ಅವರು ಈ ಹಿಂದಿನ ತಾಲಿಬಾನ್‌ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. ಜೊತೆಗೆ, ಧಾರ್ಮಿಕ ಪೊಲೀಸ್‌ಗಿರಿ, ನೈತಿಕತೆ ಪ್ರಚಾರ–ಅನೈತಿಕತೆಯ ನಿರ್ಮೂಲನೆ ವಿಭಾಗದ ಮುಖ್ಯಸ್ಥರೂ ಆಗಿದ್ದರು.

ಕೊಲೆ ಮಾಡಿದ ಅಪರಾಧಿಗೆ ಮರಣ ದಂಡನೆ ವಿಧಿಸಲಾಗುತ್ತಿತ್ತು. ಸಂತ್ರಸ್ತ ಕುಟುಂಬಸ್ಥರ ಮೂಲಕ ಅಪರಾಧಿಯ ತಲೆಯನ್ನು ತೆಗೆಸಲಾಗುತ್ತಿತ್ತು. ಒಂದು ವೇಳೆ ಸಂತ್ರಸ್ತ ಕುಟುಂಬ ಅಪರಾಧಿಯಿಂದ ಹಣ ಬಯಸಿದರೆ, ಜೀವದಾನ ಸಿಗುತ್ತಿತ್ತು. ಕಳ್ಳತನ ಮಾಡಿದರೆ ಕೈಗಳನ್ನು ಕತ್ತರಿಸಲಾಗುತ್ತಿತ್ತು. ರಸ್ತೆಯಲ್ಲಿ ದರೋಡೆ ಮಾಡಿದವನ ಕಾಲು ಮತ್ತು ಕೈಗಳನ್ನು ಕಡಿಯಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.