ADVERTISEMENT

ಭಾರತ-ಅಮೆರಿಕ ಸಹಕಾರ ವೃದ್ಧಿಗಾಗಿ ‘ಸಿಸಿಇಪಿ ಮಸೂದೆ’ ಮಂಡನೆ

ಪಿಟಿಐ
Published 14 ಸೆಪ್ಟೆಂಬರ್ 2021, 6:17 IST
Last Updated 14 ಸೆಪ್ಟೆಂಬರ್ 2021, 6:17 IST
ರಾಬರ್ಟ್ ಮೆಂಡೇಜ್‌
ರಾಬರ್ಟ್ ಮೆಂಡೇಜ್‌   

ವಾಷಿಂಗ್ಟನ್‌: ಅಮೆರಿಕ ಮತ್ತು ಭಾರತ ನಡುವೆ ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ದಿಗೊಳಿಸುವ ಮಸೂದೆಯೊಂದನ್ನು ಅಮೆರಿಕ ಸಂಸದ ರಾಬರ್ಟ್ ಮೆಂಡೇಜ್‌ ಅವರು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.

ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಯ ಅಧ್ಯಕ್ಷರಾಗಿರುವ ರಾಬರ್ಟ್‌ ಮೆಂಡೇಜ್‌ ಅವರು ‘ಅಮೆರಿಕ–ಭಾರತ ಹವಾಮಾನ ಮತ್ತು ಶುದ್ಧ ಇಂಧನ ಪಾಲುದಾರಿಕೆ(ಸಿಸಿಇಪಿ)’ ಮಸೂದೆ ಮಂಡಿಸಿದರು. ಸಾಮಾನ್ಯ ಸವಾಲುಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ಜತೆಯಾಗಿ ಕೆಲಸ ಮಾಡಿದರೆ, ಉತ್ತಮ ಫಲಿತಾಂಶ ಸಿಗಲಿದೆ ಎಂಬುದಾಗಿ ಅವರು ಹೇಳಿದರು.

‘ಹವಾಮಾನ ಬದಲಾವಣೆ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಗಮನದಲ್ಲಿಕೊಂಡು ಅಮೆರಿಕ–ಭಾರತ ನಡುವೆ ಶುದ್ಧ ಇಂಧನ ಪಾಲುದಾರಿಕೆಯನ್ನು ಬಲಿಷ್ಠಗೊಳಿಸಲು ಈ ಮಸೂದೆಯು ನೆರವಾಗಲಿದೆ' ಎಂದರು.

ADVERTISEMENT

‘ಉಭಯ ರಾಷ್ಟ್ರಗಳ ನಡುವೆ ಹವಾಮಾನ ಮತ್ತು ಶುದ್ಧ ಇಂಧನದ ಪಾಲುದಾರಿಕೆಯನ್ನು ಸ್ಥಾಪಿಸುವ ಮೂಲಕ ಕೇವಲ ಅಮೆರಿಕ ಮತ್ತು ಭಾರತ ಸರ್ಕಾರಗಳ ನಡುವೆ ಮಾತ್ರವಲ್ಲದೇ ವಿಶ್ವವಿದ್ಯಾಲಯ ಹಾಗೂ ಖಾಸಗಿ ವಲಯಗಳ ನಡುವೆಯೂ ಯಶಸ್ವಿ ಸಹಭಾಗಿತ್ವಕ್ಕೆ ಅಡಿಪಾಯ ಹಾಕಲಿದ್ದೇವೆ. ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸುವಲ್ಲಿ ಮುಂದಾಳತ್ವವನ್ನು ವಹಿಸಲು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಅವರು ತಿಳಿಸಿದರು.

ಇದು ಶುದ್ಧ ಇಂಧನ ತಂತ್ರಜ್ಞಾನ ಮತ್ತು ಶಕ್ತಿ ಪ್ರಸರಣದ ಮುಖ್ಯ ವೇದಿಕೆಯಾಗಲಿದೆ. ಶುದ್ಧ ಇಂಧನ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತುಜಂಟಿ ಸಂಶೋಧನೆಗೆ ಉತ್ತೇಜನ, ಭಾರತದ ಶುದ್ಧ ಇಂಧನ ಮಾರುಕಟ್ಟೆಯಲ್ಲಿ ಅಮೆರಿಕದ ಖಾಸಗಿ ಹೂಡಿಕೆಗೆ ಪ್ರೋತ್ಸಾಹ ಮತ್ತು ಭಾರತದ ಹೊಸ ನವೀಕರಿಸಬಲ್ಲ ಇಂಧನ ಉತ್ಪಾದನಾ ಸಾಮರ್ಥ್ಯದ ವೃದ್ಧಿಗಾಗಿ ಕ್ರಮ ಸೇರಿದಂತೆ ಹಲವು ಅಂಶಗಳನ್ನು ಈ ಕಾಯ್ದೆ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.