ADVERTISEMENT

ಆಧುನಿಕ ಭಗೀರಥರ ಕಥೆಗಳು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST
ಆಧುನಿಕ ಭಗೀರಥರ ಕಥೆಗಳು
ಆಧುನಿಕ ಭಗೀರಥರ ಕಥೆಗಳು   

‘ಈ ದೇಶದಲ್ಲಿ ಬರ ಎಷ್ಟಿದೆಯೋ, ಅದಕ್ಕೂ ಹೆಚ್ಚು ಆತ್ಮವಿಶ್ವಾಸದ ಬರವಿದೆ’ ಎನ್ನುತ್ತಾರೆ ಜಲತಜ್ಞ ಶ್ರೀಪಡ್ರೆ. ಜಲಸಾಕ್ಷರತೆಗೆ ಅಗತ್ಯವಿರುವ ಸಾಮುದಾಯಿಕ ಒಗ್ಗಟ್ಟಿನ ಅಭಾವದ ಕುರಿತು, ಹಾಗೆಯೇ ದೇಶದಲ್ಲಿನ ಹಲವು ಗ್ರಾಮಗಳಲ್ಲಿ ನೀರು ಉಳಿಸಲು ಜನರೇ ಒಂದಾಗಿ ಯಶಸ್ಸು ಕಂಡ ಹಲವು ಕಥೆಗಳ ಕುರಿತು ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ. ಅಂಥ ಲೇಖನಗಳ ಸಂಗ್ರಹವೇ ‘ಜನಶಕ್ತಿಯಿಂದ ನದಿಗಳಿಗೆ ಮರುಜೀವ’.

ಜಲಸಂರಕ್ಷಣೆಗೆ ಇರುವ ಹಲವು ಹಾದಿಗಳನ್ನು, ಸಾಮುದಾಯಿಕ ಇಚ್ಛಾಶಕ್ತಿಯ ಬಲದಿಂದ ಆಗಬಹುದಾದ ಅಗಾಧ ಬದಲಾವಣೆಗಳನ್ನು, ನೀರಿನ ಬಗ್ಗೆ ಬೆಳೆಸಿಕೊಂಡ ಹತ್ತು ಹಲವು ತಪ್ಪು ಕಲ್ಪನೆಗಳನ್ನು ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ.

ದಶಕಗಳಿಂದ ಬತ್ತಿದ್ದ ರಾಜಸ್ಥಾನದ ನಾಂಡವಲಿ ನದಿಯನ್ನು ಅಲ್ಲಿನ ಜನರೇ ಪುನಃ ಹರಿಯುವಂತೆ ಮಾಡಿದ್ದು, ಮಹಾರಾಷ್ಟ್ರದಲ್ಲಿ ಬರವಿಮುಕ್ತಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದು –ಇಂಥ ಸ್ಫೂರ್ತಿದಾಯಕ ಕಥೆಗಳು ಇದರಲ್ಲಿವೆ.

ADVERTISEMENT

ಕೇರಳದಲ್ಲಿ ಮಳೆ ನೀರಿನ ಸಂಗ್ರಹದ ಯಶಸ್ಸಿನ ಕಥೆ ಹೇಳುವ ‘ಬಾವಿಯ ಒಡಲಿಗೆ ಸೂರಿನ ಧಾರೆ’, ‘ಇಲ್ಲಿವೆ ಸ್ಫೂರ್ತಿಯ ಕ್ಯಾಪ್ಸೂಲುಗಳು’, ‘ಮರಳಿ ಕೊಡುಂಗರ ಜೀವನದಿ’, ‘ಸಾಗರದ ಹಳ್ಳಿಗಳಲ್ಲೀಗ ಹೊಳೆಯೊಡಲ ಚಿಂತೆ’... ಹೀಗೆ ಜಲಪಾಠ ಹೇಳುವ ಹನ್ನೊಂದು ಲೇಖನಗಳು ಇವೆ.

ನದಿಗಳ ಪುನರ್‌ಸೃಷ್ಟಿಗೆ ಸಾಮುದಾಯಿಕ ಶ್ರಮವೇ ಬೆನ್ನೆಲುಬು ಎನ್ನುತ್ತಾ, ಈ ದೇಶದ ಬೇರೆ ಬೇರೆ ಪ್ರದೇಶಗಳಿಗೆ ಹೊಂದುವ ಸಿದ್ಧ ಜಲಸಮೃದ್ಧಿ, ಕಾಡು ಬೆಳೆಸುವ ವೈವಿಧ್ಯ, ಬರನಿರೋಧಕ ಜಾಣ್ಮೆಗಳ ಕುರಿತೂ ಮಾಹಿತಿ ನೀಡಿದ್ದಾರೆ.

‘ಜನಸಹಭಾಗಿತ್ವದಲ್ಲಿ ನೀರ ಕಾಯಕ ನಡೆಯುತ್ತದೆಯೋ ಅಲ್ಲಿನ ಕಾಮಗಾರಿಗಳು ಕಳಪೆ ಆಗುವುದಿಲ್ಲ’ ಎನ್ನುವ ಮಾತಿನೊಂದಿಗೆ, ಹಳ್ಳಿಗಳು ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯ ವನ್ನೂ ಸೂಕ್ಷ್ಮವಾಗಿ ವಿವರಿಸಿದ್ದಾರೆ.

ಪ್ರತಿ ಲೇಖನವೂ ಮಣ್ಣು ಹಾಗೂ ನೀರಿನ ರಕ್ಷಣೆ ಕುರಿತ ಅದ್ಭುತ ದಾರಿಗಳನ್ನೂ ತೆರೆದಿಡುವಂತಿದೆ. ಜಲವಿಜ್ಞಾನದ ಒಳಹೊರಗುಗಳನ್ನು ತೋರಿಸಿಕೊಟ್ಟ ಪರಿಸರವಾದಿ, ಲೇಖಕ ಅನುಪಮ್ ಮಿಶ್ರಾ ಅವರಿಗೆ ಈ ಪುಸ್ತಕವನ್ನು ಅರ್ಪಣೆ ಮಾಡಲಾಗಿದೆ.

ಲೇಖನಗಳ ಸಂಪಾದಕ–ಶಿವರಾಂ ಪೈಲೂರು
ಪ್ರಕಾಶನ: ಜಲಕೂಟ, ವಾಣಿ ನಗರ ಹಾಗೂ ಕೃಷಿ ಮಾಧ್ಯಮ ಕೇಂದ್ರ
ಬೆಲೆ 150. ಮೊಬೈಲ್:8660404034

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.