ADVERTISEMENT

ಕಬ್ಬಿನ ಸವಿ ಹರಿಸುತ...

​ಪ್ರಜಾವಾಣಿ ವಾರ್ತೆ
Published 11 ಜುಲೈ 2016, 19:30 IST
Last Updated 11 ಜುಲೈ 2016, 19:30 IST
ಮಾರಾಟಕ್ಕೆ ಯೋಗ್ಯ ಸಸಿಗಳನ್ನು ಆರಿಸುತ್ತಿರುವ ಮಹಿಳೆಯರು
ಮಾರಾಟಕ್ಕೆ ಯೋಗ್ಯ ಸಸಿಗಳನ್ನು ಆರಿಸುತ್ತಿರುವ ಮಹಿಳೆಯರು   

ಘಟಪ್ರಭಾ ನದಿ ದಡದ ಗೋಕಾಕ ನಗರದ ಬಳಿ ಇರುವ ಶಿಂಗಳಾಪುರ ಪುಟ್ಟ ಗ್ರಾಮದ ಹಸಿರಿನ ಶೆಡ್‌ವೊಂದು ಸದ್ದು ಗದ್ದಲವಿಲ್ಲದೆ ಹೆಸರು ಮಾಡುತ್ತಿದೆ. ಪ್ರತಿದಿನ ಅಸಂಖ್ಯ ರೈತರು ಇದರತ್ತ ಧಾವಿಸುತ್ತಿದ್ದಾರೆ. ಅಲ್ಲಿಂದ ವಾಹನಗಳಲ್ಲಿ ಸಸಿಗಳನ್ನು ತುಂಬಿಕೊಂಡು ಭರ್ರನೆ ಹೋಗುತ್ತಾರೆ.

ಇದು ಸುನೀಲ ಪಂಚಗಾವಿ ಅವರ ನರ್ಸರಿಯಲ್ಲಿ ಕಂಡುಬರುವ ದೃಶ್ಯ. ಸಂಕೇಶ್ವರ ಬಳಿಯ ಕನಗಲಾ ನರ್ಸರಿಗೆ ತರು ತರಲು ಹೋಗಿದ್ದ ಯುವಕ ಅಲ್ಲಿನ ನರ್ಸರಿಯೊಂದರಿಂದ ಪ್ರೇರೇಪಿತರಾಗಿ ಸ್ಥಾಪಿಸಿರುವ ನರ್ಸರಿಯೇ ‘ಪಂಚಗಾವಿ ನರ್ಸರಿ’. 

ತೋಟಗಾರಿಕೆ, ಅದರಲ್ಲೂ ಕಬ್ಬಿನ ನರ್ಸರಿ ನಿರ್ಮಿಸಿ ರೈತರ ಶ್ರೇಯೋಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ ಸುನೀಲ. ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ (ಆರ್.ಕೆ.ವಿ.ವೈ) ಅಡಿ ಪಡೆದಿರುವ ಸಾಲದಲ್ಲಿ ಮೂರು ವರ್ಷಗಳಿಂದ ಈ ನರ್ಸರಿ ನಡೆಸುತ್ತಿದ್ದಾರೆ. ಆರಂಭದಲ್ಲಿ ನಷ್ಟ ಅನುಭವಿಸಿದರೂ ಈಗ ಲಾಭದ ಹಾದಿಯಲ್ಲಿದ್ದಾರೆ.

ಸುಮಾರು 400 ಚದರ ಮೀಟರ್‌ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಪಾಲಿಥೀನ್ ನೆರಳು ಪರದೆಯಲ್ಲಿ ಹಚ್ಚ ಹಸಿರಿನ ಹೊದಿಕೆ ಹಾಸಿದಂತೆ ಕಂಗೊಳಿಸುವ ಕಬ್ಬಿನ ಸಸಿಗಳು ಮೋಡಿ ಮಾಡಿವೆ. ಸುಮಾರು ನೂರೈವತ್ತು ಕೆಲಸಗಾರರು ಕಬ್ಬಿನ ನಾಟಿ, ನೀರು ಹಾಯಿಸುವುದು, ಗೊಬ್ಬರ ಹಾಕುವುದು ಹೀಗೆ ಸಸಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಇಪ್ಪತ್ನಾಲ್ಕು ಗಂಟೆಯೂ ರೈತರ ಕರೆಗೆ ಸ್ಪಂದಿಸಿ, ಅವರ ಬೇಡಿಕೆಗೆ ಅನುಸಾರ ಕಬ್ಬಿನ ಸಸಿ ಪೂರೈಸುವ ಮೂಲಕ ನಾಟಿ ಮಾಡುವ ಸಮಗ್ರ ಮಾಹಿತಿ ನೀಡುತ್ತಾರೆ. ಸಸಿ ಖರೀದಿಸದೇ ಇದ್ದರೂ ಕಬ್ಬಿನ ನಾಟಿ ಬಗ್ಗೆ ಮುಕ್ತವಾಗಿ ಸಲಹೆ ನೀಡುವುದರಿಂದ ಬಹುತೇಕ ರೈತರಿಗೆ ‘ಪಂಚಗಾವಿ ನರ್ಸರಿ’ ಚಿರಪರಿಚಿತ.

ತೋಟಗಾರಿಕಾ ಇಲಾಖೆಯ 2012–13ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಆರಂಭಿಸಲಾಗಿದ್ದ ಈ ನರ್ಸರಿಗೆ ಇಲಾಖೆಯ ಸಹಾಯಕ ನಿರ್ದೇಶಕರ  ಸಲಹೆಯಂತೆ ಹಾಗೂ ಜಿಲ್ಲೆಯ ಕಬ್ಬಿನ ಕಾರ್ಖಾನೆಗಳ ಶಿಫಾರಸಿನಂತೆ ಸುಧಾರಿತ ‘86032’ ತಳಿಯನ್ನೇ ರೈತರಿಗೆ ಪೂರೈಸಲಾಗುತ್ತಿದೆ.

ರೈತರು ಇತರೆ ತಳಿಗಳನ್ನು ಕೇಳಿದಲ್ಲಿ ಸುಧಾರಿತ ತಳಿಗಳಾದ ‘ವಿಭೂತಿ–92005 ಹಾಗೂ 91010 ತಳಿಗಳನ್ನು ಪೂರೈಸುವ ಯೋಜನೆ ಹೊಂದಲಾಗಿದೆ.
‘ಕಳೆದ ಎರಡು ವರ್ಷಗಳಲ್ಲಿ ಮಳೆ ಕೊರತೆಯಿಂದ ಅಷ್ಟೊಂದು ಲಾಭವಾಗದೇ ಇದ್ದರೂ ಪ್ರಸಕ್ತ ವರ್ಷ ಸಮಯಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ನಮಗೂ ಆತ್ಮವಿಶ್ವಾಸ ಮೂಡಿದೆ’ ಎನ್ನುತ್ತಾರೆ ಸುನೀಲ.

‘ಕಬ್ಬು ಚೆನ್ನಾಗಿ ಬೆಳೆದು ಇಳುವರಿ ದೊರಕಬೇಕೆಂದರೆ ಒಂದು ಅಡಿ ಅಂತರದಲ್ಲಿ ನೆಡಬೇಕು. ಇದಕ್ಕಿಂತ ಕಡಿಮೆ ಅಂತರದಲ್ಲಿ ನಾಟಿ ಮಾಡಿದರೆ, ಹುಲುಸಾಗಿ ಬೆಳೆಯುವುದಿಲ್ಲ’ ಎನ್ನುವ ಅನುಭವದ ಮಾತು ಅವರದ್ದು.

ಕಳೆದ ಮೂರು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಇವರು ರೈತರ ಅನುಕೂಲಕ್ಕಾಗಿ ಅರಬಾವಿ, ಮುನ್ನೊಳ್ಳಿಗಳಲ್ಲಿ ಶಾಖೆಗಳನ್ನು ನಿರ್ಮಿಸಿ ಸಸಿಗಳನ್ನು ಇಲ್ಲಿಂದ ರವಾನಿಸುತ್ತಾರೆ. ಪ್ರತಿ ವರ್ಷವೂ ಮಾರಾಟ ಹಂತ ಹಂತವಾಗಿ ವೃದ್ಧಿಯಾಗುತ್ತಿದೆ.

ವಿಧಾನ: ಪ್ರಾಥಮಿಕವಾಗಿ ಸುಧಾರಿತ ತಳಿಯ ಈ ಕಬ್ಬನ್ನು ರೈತರಿಂದ ಖರೀದಿಸಲಾಗುತ್ತದೆ. ಯಂತ್ರದ ಮೂಲಕ ಸುಮಾರು ಎರಡು ಇಂಚಿನ ತುಂಡು ಮಾಡಿದ ಕಬ್ಬಿನ ಗಣಿಕೆ (ಕಣ್ಣಿರುವ)ಗಳನ್ನು ಗೊಬ್ಬರದೊಂದಿಗೆ (ಟ್ರೇ) ತಟ್ಟೆಯಲ್ಲಿ ಮೂರು ದಿನಗಳವರೆಗೆ  ಇಟ್ಟು ಮೇಲೆ ಬಟ್ಟೆ ಅಥವಾ ಎಲೆಗಳಿಂದ ಹೊದಿಸಲಾಗುತ್ತದೆ.  ನಾಲ್ಕನೇ ದಿನ ಅವು ಮೊಳಕೆಯೊಡೆದ ನಂತರ ಆ ಸಸಿಗಳನ್ನು ಹೊರಗೆ ಇರಿಸಲಾಗುತ್ತದೆ.

ADVERTISEMENT

ಅವು ಎರಡು ವಾರಗಳಲ್ಲಿ ಮೂರು ನಾಟಿ ಮಾಡಲು ಸಿದ್ಧಗೊಳ್ಳುತ್ತವೆ. ಒಟ್ಟಾರೆ ಹದಿನೈದು ದಿನದ ಪ್ರಕ್ರಿಯೆಯಲ್ಲ ಸಸಿಗಳನ್ನು ವಿಂಗಡಿಸಿ ದೊಡ್ಡ ಸಸಿಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಒಂದಕ್ಕೆ ₹2.50. ರೈತರ ಬೇಡಿಕೆಗೆ ಅನುಸಾರ ಪೂರೈಸಲಾಗುತ್ತದೆ.

‘ನೈಸರ್ಗಿಕವಾಗಿ ಬೆಳೆದ ಈ ಸಸಿಗಳು ಉತ್ತಮ ಇಳುವರಿ ನೀಡುವುದು ಖಂಡಿತ ಎಂದು ಕೃಷಿ ಇಲಾಖೆಯ ತಜ್ಞರು ಖಚಿತಪಡಿಸಿದ್ದಾರೆ’ ಎನ್ನುತ್ತಾರೆ ಸುನೀಲ. ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಕಬ್ಬು ನಾಟಿ ಭರದಿಂದ ಸಾಗಿದೆ. ಕಾರ್ಖಾನೆಗಳು ಕಬ್ಬು ನುರಿಯಲಾರಂಭಿಸುವವರೆಗೂ ಇವರು ಸಸಿಗಳನ್ನು ಪೂರೈಸುತ್ತಾರೆ.

ಅವರ ಸಂಪರ್ಕಕ್ಕೆ 9844534401.

*100 ಜನರಿಗೆ ಉದ್ಯೋಗ

* ಒಂದು ಸಸಿಗೆ ₹ 2.50

* ಮುನವಳ್ಳಿ, ಅರಬಾವಿಯಲ್ಲಿ ಶಾಖೆಗಳು

* ಕೃಷಿ ಇಲಾಖೆ–ಕಾರ್ಖಾನೆಗಳ ಶಿಫಾರಸಿನ ‘86032’ ಸುಧಾರಿತ ತಳಿ.

*‘ವಿಭೂತಿ–92005 ಹಾಗೂ 91010 ತಳಿಗಳ ಪೂರೈಸುವ ಯೋಜನೆ.

*­ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ) ಅಡಿ ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.