ADVERTISEMENT

ಕೃಷಿಯಲ್ಲಿ ಮುಯ್ಯಾಳು

ಲಕ್ಷ್ಮಣ ಟಿ.ನಾಯ್ಕ
Published 17 ಸೆಪ್ಟೆಂಬರ್ 2012, 19:30 IST
Last Updated 17 ಸೆಪ್ಟೆಂಬರ್ 2012, 19:30 IST
ಕೃಷಿಯಲ್ಲಿ ಮುಯ್ಯಾಳು
ಕೃಷಿಯಲ್ಲಿ ಮುಯ್ಯಾಳು   

ಕೃಷಿ ಚಟುವಟಿಕೆ ಗರಿಬಿಚ್ಚಿವೆ. ಎಲ್ಲೆಡೆ ಮಳೆ ಸುರಿದ ಪರಿಣಾಮ ನಾಟಿ, ಮಣ್ಣು ಹದ ಮಾಡುವ ಕೆಲಸ ನಡೆಯುತ್ತಲೇ ಇದೆ. ಮೈಸೂರು ಆಸುಪಾಸಿನಲ್ಲಿ ಬಹುತೇಕ ಮಂದಿ ನಾಟಿ ಕೆಲಸ ಮಾಡಿದರೂ ಉಪಬೆಳೆಗಳಾದ ಶೇಂಗಾ, ಶುಂಠಿ, ಕಬ್ಬಿನ, ಅರಿಷಿಣ, ಜೋಳಕ್ಕೆ ಸಂಬಂಧಿಸಿದ ಕೆಲಸಗಳಿಗೇನು ಬರವಿಲ್ಲ.

ಮಲೆನಾಡು ಪ್ರದೇಶದಲ್ಲಿ ನಾಟಿಗೆ ಬಾರದೇ ಇರುವ ಹುಡಿ ಮಣ್ಣಿನ ಗದ್ದೆಯಲ್ಲಿ ಬಿತ್ತನೆ ಸಾಂಗವಾಗಿ ನಡೆದು ಕಳೆ ಕೀಳುವ ಕೆಲಸವೂ ಜೋರಾಗಿದೆ. ಮೈಸೂರು ಆಸುಪಾಸಿನಲ್ಲಿ ತಂಬಾಕು ಸಸಿ ಹಾಕುವುದೇ ಪ್ರಧಾನ ಕೆಲಸ. ಆ ಕೆಲಸ ಮುಗಿದ ನಂತರ ಬತ್ತದ ಕೆಲಸಕ್ಕೆ ಅಮರಿಕೊಳ್ಳುವುದು ವಾಡಿಕೆ.

ಆದರೆ, ಇದಕ್ಕೆ ಆಳು-ಕಾಳು ಹೇಗೆ? ಇದು ರೈತರನ್ನು ಕಾಡುವ ದೊಡ್ಡ ಸಮಸ್ಯೆ. ಕೇಂದ್ರ ಸರ್ಕಾರದ ತಂದ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಆಳು-ಕಾಳುಗಳನ್ನು ಹುಡುಕುವ ಕಷ್ಟ ದಿನೇ ದಿನೇ ದೊಡ್ಡದಾಗಿ ಬೆಳೆಯುತ್ತಿದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದರೆ ದಿನವೊಂದಕ್ಕೆ 120 ರೂಪಾಯಿ ಸಿಕ್ಕೇ ಸಿಗುತ್ತದೆ.
 
ಅಲ್ಲಿ ಕೆಲಸವೂ ಕಡಿಮೆ. ಕೃಷಿಯ್ಲ್ಲಲಾದರೆ ಮೈಮುರಿದು ಕೆಲಸ ಮಾಡಲೇಬೇಕು. ಖಾತ್ರಿ ಯೋಜನೆಯಲ್ಲಿ ವಾರಕ್ಕೊಮ್ಮೆ ಬಟವಾಡೆ ಖಚಿತ. ಆದ್ದರಿಂದ ಆಳುಗಳ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ.
 
ಇದಕ್ಕೆ ಉಪಾಯ ಏನು? ಆಳು ಹುಡುಕುವುದು ಬಲು ಕಷ್ಟವೇ ಸರಿ. ಹಾಗೆಂದು ರೈತರು ಕೈಕಟ್ಟಿ ಕುಳಿತುಕೊಳ್ಳಲು ಕಾಲವಲ್ಲ ಇದು. ಮಳೆ ಬಂದರೂ ಕಷ್ಟ, ಬಾರದೇ ಇದ್ದರೆ ಇನ್ನೂ ಕಷ್ಟ. ಇದಕ್ಕೆ ರೈತರು ಕಂಡುಕೊಂಡಿದ್ದು ಮುಯ್ಯಾಳು ಪದ್ಧತಿ.

ಏನಿದು? ಇದು ಹೊಸದಲ್ಲ. ಇದೊಂದು ರೀತಿಯಲ್ಲಿ ಕೊಡು-ಕೊಳ್ಳುವ ರೀತಿ. ಇದು ಅಪ್ಪಟ ಮಲೆನಾಡು ಶಬ್ದ. ಮೈಸೂರು ಭಾಗದಲ್ಲೂ ಪ್ರಚಲಿತದಲ್ಲಿದೆ ಎನ್ನುತ್ತಾರೆ ಹುಣಸೂರು, ನಂಜನಗೂಡು ರೈತರು.

ಮುಯ್ಯಿ ಎಂದರೆ ಕೊಡುಗೆ ಎಂದು ಅರ್ಥ. ಮದುವೆ ಮನೆಯಲ್ಲಿ ಮುಯ್ಯಿ ನೀಡುವ ಪದ್ಧತಿ ಇದ್ದೇ ಇದೆ. ಪಟ್ಟಣ ಭಾಷೆಯಲ್ಲಿ ಅದು ಕೊಡುಗೆ ಅಲಿಯಾಸ್ ಗಿಫ್ಟ್ ಎಂಬ ಅರ್ಥ ಪಡೆದಿದೆ. ಆದರೆ, ಕೃಷಿಯಲ್ಲಿ ಹಾಗೆ ಅಲ್ಲ.

ಒಂದು ದಿನ ನಮ್ಮ ಹೊಲದ ಕೆಲಸಕ್ಕೆ ನೀವು ಬರುವುದು, ಇನ್ನೊಂದು ದಿನ ನಿಮ್ಮ ಕೆಲಸಕ್ಕೆ ನಾವು ಹೋಗುವ ವ್ಯವಸ್ಥೆಯೇ ಮುಯ್ಯಾಳು. ಇಲ್ಲಿ ಹಣದ ವಹಿವಾಟು, ಕೂಲಿ ಕೊಡುವ ಪದ್ಧತಿ ಇಲ್ಲ. ಅಂದರೆ, ಯಾರಿಗೂ ಯಾರೂ ಹಣ ಕೊಡುವುದಿಲ್ಲ. ಇಬ್ಬರ ಮನೆ, ಹೊಲದಲ್ಲೂ ಅದೇ ಶ್ರಮದಿಂದ ಕೆಲಸ ಮಾಡಬೇಕು ಅಷ್ಟೇ. ಒಂದು ರೀತಿಯಲ್ಲಿ `ಸ್ನೇಹದ ಕೆಲಸ~ ಎಂತಲೂ ಕರೆಯಬಹುದು.

ಹೀಗೆ ಹೇಳಬಹುದು: ರಾಮಯ್ಯನವರ 3 ಎಕರೆ ಬಿತ್ತನೆ ಮಾಡಲು 10 ಆಳು ಬೇಕು. ಆದರೆ ಮನೆಯಲ್ಲಿ ಇರುವವರು ಐದು ಜನ ಮಾತ್ರ. ಕೆಲಸ ಸಾಗುವುದೇ ಇಲ್ಲ. ಅದರ ಜತೆಗೆ ನೇಗಿಲು, ಎರಡು ಜತೆ ಎತ್ತು ಸಹ ಬೇಕು. ಈ ಎಲ್ಲರೂ ತಿಮ್ಮಪ್ಪನವರ ಸಹಾಯ ಪಡೆಯಬೇಕು.

ತಿಮ್ಮಪ್ಪನ ಮನೆಯಲ್ಲಿಯೂ ಐದು ಜನ ಇರುತ್ತಾರೆ. ಒಂದು ದಿನದಲ್ಲಿ 10 ಜನ 3 ಎಕರೆ ಬಿತ್ತನೆ ಮಾಡಿ, ಇಲ್ಲವೇ ನಾಟಿ ಮಾಡಿ, ರಂಟೆ ಹೊಡೆದು ಮಧ್ಯಾಹ್ನ 3 ಗಂಟೆಗೋ ಇಲ್ಲವೇ ನಾಲ್ಕು ಗಂಟೆಗೂ ಮನೆ ಬರುತ್ತಾರೆ.

ಮಾರನೇ ದಿನ ಇಲ್ಲವೇ ಇನ್ನೊಂದು ದಿನ ರಾಮಯ್ಯರ ಮನೆಗೆ ಹೋಗಿ ಕೆಲಸ ಮಾಡಿ ಮುಗಿಸುವ ಪರಿಯೇ ಮುಯ್ಯಾಳು. ಇದು ಕೇವಲ ಬಿತ್ತನೆ ಮಾತ್ರವಲ್ಲ. ಬಿತ್ತನೆ ಒಂದು ಇಲ್ಲವೇ ಎರಡನೇ ದಿನದ ಕೆಲಸ.

ಆದರೆ, ಕಳೆ ಕೀಳುವುದು ಹಾಗೂ ನಾಟಿ ಮಾಡುವ ಕೆಲಸ ಮಾತ್ರ ಕಡಿಮೆ ಎಂದರೂ 15 ದಿನವಾದರೂ ಇರುತ್ತದೆ. ಬಿತ್ತನೆಯಲ್ಲಿ ಗಂಡಸರು ಹಾಗೂ ಮಹಿಳೆಯರು ಭಾಗಿಯಾದರೆ ನಾಟಿ ಕೆಲಸಕ್ಕೆ ಮಹಿಳೆಯರೇ ಮುಯ್ಯಾಳು ಪದ್ಧತಿಗೆ ಹೊಂದಿಕೊಂಡು ಬಿಡುತ್ತಾರೆ.

ಇದು ಯಶಸ್ವಿಯಾಗಿರುವುದು ಸಹ ಮಹಿಳಾ ಕೃಷಿಕರಿಂದಲೇ. ಮಹಿಳೆಯರು ತಿಂಗಳುಗಟ್ಟಲೆ ಈ ಪದ್ಧತಿಗೆ ಹೊಂದಿಕೊಂಡು ತಮ್ಮ ಗದ್ದೆ ಹಾಗೂ ಇನ್ನೊಬ್ಬರ ಗದ್ದೆ ಕೆಲಸ ಮುಗಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಈ ಪದ್ಧತಿ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.