ADVERTISEMENT

ಚೆಂಡು ಹೂವಲ್ಲಿ ಚೆಂದದ ಬದುಕು

ಕಿಶನರಾವ್‌ ಕುಲಕರ್ಣಿ
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST
ಚೆಂಡು ಹೂವಲ್ಲಿ ಚೆಂದದ ಬದುಕು
ಚೆಂಡು ಹೂವಲ್ಲಿ ಚೆಂದದ ಬದುಕು   

ಕಲ್ಲಂಗಡಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆದು, ಬೆಲೆ ಹಾಗೂ ಬೆಳೆಯಿಂದ ಸೋತು ಹೋಗಿದ್ದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಅನೇಕ ಸಣ್ಣರೈತರು ಅಲ್ಪಾವಧಿ ಬೆಳೆಯಾಗಿರುವ ವಿವಿಧ ಪುಷ್ಪಕೃಷಿಯತ್ತ ವಾಲಿದ್ದಾರೆ. ಗುಣಮಟ್ಟದಿಂದ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಸಾಧ್ಯ ಎಂಬ ವಿಶ್ವಾಸದಲ್ಲಿದ್ದಾರೆ.

ತಾಲ್ಲೂಕಿನ ಹನುಮನಾಳ ಗ್ರಾಮದ ರೈತ ಮಹೇಶ ಕಟ್ಟಿಮನಿ ಸದ್ಯ ಉತ್ತಮ ಇಳುವರಿಯ ಚೆಂಡುಹೂವು ಬೆಳೆದು ನೆಮ್ಮದಿ ಬದುಕು ಕಾಣುತ್ತಿದ್ದಾರೆ. ಸಾವಯವ ವಿಧಾನದಲ್ಲಿ ಖರ್ಚಿಲ್ಲದೆ ಬೆಳೆದ ಭರಪೂರ ಚೆಂಡು ಹೂವಿನ ಒಂದೇ ಬೆಳೆ ಕೇವಲ 90 ದಿನಗಳಲ್ಲಿ  ನಾಲ್ಕು ಲಕ್ಷ  ರೂಪಾಯಿ ಲಾಭ ತಂದಿದೆ.
ವಿವಿಧ ಬಳಕೆಗೆ ಚೆಂಡು ಹೂವು: ಮಾರಿಗೋಲ್ಡ್, ಮೇರಿ ಮೊಗ್ಗು, ಮಡಕೆ ಮಾರಿಗೋಲ್ಡ್, ಚಿನ್ನದ ಹೂವು, ತೋಟದ ಮಾರಿಗೋಲ್ಡ್ ಎಂದೆಲ್ಲ ಕರೆಯಲಾಗುವ ಈ ಪುಷ್ಪ ಈಚೆಗೆ ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆ ಪಡೆದುಕೊಂಡಿದೆ.

ಆಕರ್ಷಕ ಕಡುಗೆಂಪು ಸೇರಿದಂತೆ ವಿವಿಧ ಬಣ್ಣಗಳ ಈ ಹೂವುಗಳಿಂದ ಔಷಧಿ, ಬಣ್ಣ ಹಾಗೂ ಸುಗಂಧ ದ್ರವ್ಯ ಉತ್ಪಾದನೆ ಮಾಡುತ್ತಿರುವುದರಿಂದಾಗಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಮೊದಲು ಈ ಭಾಗದಲ್ಲಿ ದೀಪಾವಳಿ ಸಂದರ್ಭಕ್ಕೆಂದೇ ಅಲಂಕಾರಕ್ಕಾಗಿ ಬೆಳೆಯುತ್ತಿದ್ದರು. ಆದರೆ ಸದ್ಯ ರೈತರ ವರಸೆ ಬದಲಾಗಿದ್ದು, ಅಲಂಕಾರಕ್ಕೆ ಮಾರುವ ಬದಲು ಕಂಪೆನಿಗಳಿಗೆ ನೀಡುತ್ತಿದ್ದಾರೆ. ಮಹೇಶ ಅವರ ನಾಲ್ಕು ಎಕರೆ ನೀರಾವರಿ ಜಮೀನಿನಲ್ಲಿ ಸಾವಯವ ವಿಧಾನದಲ್ಲಿ ಬೆಳೆದ ಬೆಳೆ ಉತ್ಕೃಷ್ಟ ಮಟ್ಟದ ಹೂವುಗಳನ್ನು ಬಿಟ್ಟಿದೆ. ಈಗಾಗಲೇ 40 ಟನ್‌ವರೆಗೂ ಹೂವುಬೆಳೆ ತೆಗೆದುಕೊಂಡಿದ್ದಾರೆ.

ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ಕೆ.ಜಿ.ಗೆ ₹ 9 ನಿಗದಿಪಡಿಸಲಾಗಿದೆ. ಖರೀದಿಸುವವರು ನೇರವಾಗಿ ತೋಟಕ್ಕೆ ಬಂದು ತೂಕ ಮಾಡಿಕೊಂಡು ಹೋಗಬೇಕು, ಮಾರನೇ ದಿನ ಖಾತೆಗೆ ಹಣ ಸಂದಾಯವಾಗಬೇಕು ಎಂದು ಮಹೇಶ ಅವರು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡ ಬಗ್ಗೆ ಹಾಗೂ ಇಲ್ಲಿಯವರೆಗೆ ಯಾವುದೇ ತೊಂದರೆ ಎದುರಾಗಿಲ್ಲ ಎಂದು ಹೇಳುತ್ತಾರೆ.

‘ಇಲ್ಲಿನ ಮಣ್ಣು, ನೀರು ಹಾಗೂ ಹವಾಮಾನಕ್ಕೆ ಸೂಕ್ತವಾದ ಬೆಳೆ ಇದಾಗಿದೆ. ಸಾಮಾನ್ಯವಾಗಿ ಇದು ನಾಲ್ಕು ತಿಂಗಳ ಬೆಳೆಯಾಗಿದ್ದು, ಉತ್ತಮ ಲಾಭ ಪಡೆದುಕೊಳ್ಳುವಲ್ಲಿ ಸಂದೇಹವಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ರೈತರು ಚೆಂಡು ಹೂವಿನ ಬೇಸಾಯ ಮಾಡಿದ್ದಾರೆ. ಬಳಿಕ ಗಿಡಗಳನ್ನು ಕಿತ್ತು ಗುಂಡಿಗೆ ಹಾಕಿದರೆ ಟನ್‌ಗಟ್ಟಲೆ ಕಾಂಪೋಸ್ಟ್‌ ದೊರಕುತ್ತದೆ’ ಎಂದು ಕೃಷಿ ವಿಜ್ಞಾನಿ ಡಾ.ಎಂ.ಬಿ. ಪಾಟೀಲ ಹೇಳುತ್ತಾರೆ.

ಸಾವಯವ ವಿಧಾನದಲ್ಲಿ ಬಂತು ಬೆಳೆ: ಸಸಿ ಮಡಿಗಳಿಂದ ಹಿಡಿದು ಇಲ್ಲಿಯವರೆಗೆ ಸಂಪೂರ್ಣ ಸಾವಯವ ವಿಧಾನದಲ್ಲಿ ಬೆಳೆಯಲಾಗಿದೆ. ಕೊಟ್ಟಿಗೆ ಗೊಬ್ಬರ, ಗೋಮೂತ್ರ, ಬೇವಿನ ಎಣ್ಣೆ, ಮಜ್ಜಿಗೆ, ಬೆಳ್ಳುಳ್ಳಿ, ಕಾಳು ಮೆಣಸಿನ ದ್ರವ್ಯ, ಎರೆ ಜಲವನ್ನು ಬೆಳೆಗೆ ಬಳಸಲಾಗಿದೆ.

ಪ್ರತಿ ಎಕರೆಗೆ 15 ಸಾವಿರ ಸಸಿಗಳನ್ನು ನೆಡಲಾಗಿದ್ದು ಸಸಿ ನೆಟ್ಟ 40 ದಿನಗಳ ನಂತರ ಫಸಲು ಬರಲು ಪ್ರಾರಂಭವಾಗಿದೆ. 400 ಕೆ.ಜಿ.ಯಿಂದ ಪ್ರಾರಂಭವಾದ ಹೂವಿನ ಕೊಯ್ಲಿನಿಂದ ಸದ್ಯ ಟನ್‌ಗಟ್ಟಲೆ ಹೂವು ಬರುತ್ತಿದೆ. ಸಾಮಾನ್ಯವಾಗಿ 50 ರಿಂದ 60 ದಿನಗಳವರೆಗೆ ಫಸಲು ಬರುತ್ತಿದ್ದು, ಸದ್ಯ ಮಧ್ಯದ ಹಂತದಲ್ಲಿದೆ. ಇಲ್ಲಿಯವರೆಗೆ ಸುಮಾರು 40 ಟನ್‌ ಹೂವು ಬಂದಂತಾಗಿದೆ. ಹೂವು ಬಿಡಿಸುವ ಕೃಷಿ ಕಾರ್ಮಿಕರಿಗೆ ತಲಾ ಕೆ.ಜಿ.ಗೆ ₹1ರಂತೆ ದರ ನಿಗದಿ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಿದ್ದಾರೆ. ಪ್ರತಿಯೊಬ್ಬರು ದಿನವೊಂದಕ್ಕೆ ತಲಾ 250 ಕೆ.ಜಿ.ಯಷ್ಟು ಹೂವು ಬಿಡಿಸುತ್ತಾರೆ.

‘ಒಂದು ಗಿಡದಿಂದ ಪ್ರತಿದಿನ 10 ರಿಂದ 15 ಹೂವು ಬಿಡಿಸಬಹುದು, ಪೂರ್ಣ ಅವಧಿಯಲ್ಲಿ ತಲಾ ಒಂದು ಗಿಡ 15 ರಿಂದ 20 ಕೆ.ಜಿ ಹೂವು ಕೊಡುತ್ತದೆ. ಎಕರೆಗೆ 25 ರಿಂದ 30 ಕ್ವಿಂಟಲ್‌ ಇಳುವರಿ ಸಿಗುತ್ತದೆ, ಅಲ್ಲದೆ ಅಧಿಕ ಖರ್ಚಿನ ಭಾರ ಇಲ್ಲ, ಕಂಪೆನಿಯವರೇ ಬೀಜ ನೀಡುತ್ತಾರೆ, ರೋಗ ರುಜಿನ ಹಾಗೂ ದನಗಳ ಕಾಟ ಈ ಬೆಳೆಗೆ ಇಲ್ಲ’ ಎನ್ನುತ್ತಾರೆ ಮಹೇಶ.

ಔಷಧಿಯಲ್ಲಿ ಚೆಂಡು ಹೂವಿನ ಬಳಕೆ
ಚೆಂಡುಮಲ್ಲಿಗೆಯನ್ನು ಒಂದು ಮುಲಾಮು ಅಥವಾ ಟಿಂಚರ್ ರೂಪದಲ್ಲಿ, ಸುಟ್ಟಗಾಯಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ತೊಂದರೆಗೊಳಗಾಗಿರುವ ರಕ್ತನಾಳಗಳ ಬೆಳವಣಿಗೆ ಹಾಗೂ ಹೊಸ ಚರ್ಮದ ಅಂಗಾಂಶ ಉತ್ತೇಜಿಸುವ ಗುಣ ಹೊಂದಿದೆ. ತಾಜಾ ಹೂವುಗಳನ್ನು ಕನಿಷ್ಠ ದಿನಕ್ಕೆ ಒಮ್ಮೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ಚರ್ಮಕ್ಕೆ ಲೇಪಿಸಿಕೊಂಡರೆ ಚರ್ಮದ ಮೃದುತ್ವ ಹೆಚ್ಚುತ್ತದೆ. ಹೆಚ್ಚಿನ ಮಾಹಿತಿಗೆ ಮಹೇಶ –9448336615 ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT