ADVERTISEMENT

ಜಾನುವಾರುಗಳಿಗೂ ಒತ್ತಡವಿದೆ...

ಮುರಳೀಧರ ಕಿರಣಕೆರೆ
Published 21 ನವೆಂಬರ್ 2016, 19:30 IST
Last Updated 21 ನವೆಂಬರ್ 2016, 19:30 IST
ಜಾನುವಾರುಗಳಿಗೂ ಒತ್ತಡವಿದೆ...
ಜಾನುವಾರುಗಳಿಗೂ ಒತ್ತಡವಿದೆ...   

ನನ್ನ ಪರಿಚಯದ ರೈತರೊಬ್ಬರ ಮನೆಯಲ್ಲಿ ಏಳೆಂಟು ಹಸುಗಳಿವೆ. ಮೂರು ಮಲೆನಾಡು ಗಿಡ್ಡ ತಳಿಯವು, ಉಳಿದವು ಮಲೆನಾಡು ಗಿಡ್ಡ ಮತ್ತು ಜರ್ಸಿ ಸಂಕರಣದ ಮಿಶ್ರ ತಳಿ ರಾಸುಗಳು. ಆ ದನಕರುಗಳನ್ನು ನೋಡುವುದೇ ಆನಂದ. ಮೈಕೈ ತುಂಬಿಕೊಂಡು ಆರೋಗ್ಯವಾಗಿವೆ. ಚರ್ಮವೂ ಅಷ್ಟೇ ನುಣುಪಾಗಿದೆ. ಸಾಮಾನ್ಯವಾಗಿ ಮಲೆನಾಡು ಗಿಡ್ಡ ತಳಿಯಲ್ಲಿ ಹಾಲಿನ ಇಳುವರಿ ತುಂಬಾ ಕಮ್ಮಿ ಇದ್ದರೂ ಈ ಹಸುಗಳು ಮಾತ್ರ ಚೆನ್ನಾಗಿ ಹಾಲು ಕರೆಯುತ್ತಿವೆ. ಕಾಯಿಲೆ ಕಸಾಲೆ ಅಂತ ಚಿಕಿತ್ಸೆ ನೀಡಿದ್ದೇ ಅಪರೂಪ.

ಅವರ ಈ ರೀತಿಯ ಸಾಕಾಣಿಕೆಯ ರಹಸ್ಯ ತಿಳಿದಾಗ ನನಗೂ ಆಶ್ಚರ್ಯವಾಯಿತು. ಹಾಗಂತ ಅವರು ತುಂಬಾ ಹಿಂಡಿ(ಪಶು ಆಹಾರ) ಕೊಡುತ್ತಿಲ್ಲ. ಮನೆಯ ಪಕ್ಕದ ಸ್ವಲ್ಪ ಜಾಗದಲ್ಲಿ ಬೆಳಿಗ್ಗೆ ಮೂರ್ನಾಲ್ಕು ಗಂಟೆ ಅಡ್ಡಾಡಲು ಬಿಡುತ್ತಾರೆ. ಗದ್ದೆ ತೋಟದಿಂದ ತರುತ್ತಿದ್ದ ಹುಲ್ಲನ್ನು ಎಲ್ಲವಕ್ಕೂ ಹಂಚಿ ಹಾಕುತ್ತಾರೆ. ಪ್ರತಿನಿತ್ಯ ಮೈ ತೊಳೆಯಲು ಸಾಧ್ಯವಾಗದಿದ್ದರೂ ಹುಲ್ಲಿನ ಚಂಡೆಯಿಂದ ಪ್ರತಿಯೊಂದರ ಮೈ ಉಜ್ಜುತ್ತಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ಹಿಂಡಿ ಮಿಶ್ರಣ ಕೊಡುವಾಗಲೂ ಅಷ್ಟೇ, ಆಹಾರದಲ್ಲಿ ಕೈ ಆಡಿಸುತ್ತಾ ಅವುಗಳ ತಲೆ ನೇವರಿಸುತ್ತಾರೆ. ಪ್ರತಿಯೊಂದನ್ನು ಅವುಗಳ ಹೆಸರಿನಿಂದ ಕರೆದಾಗ ತಲೆಯೆತ್ತಿ ಖುಷಿಯಿಂದ ಪ್ರತಿಕ್ರಿಯಿಸುತ್ತವೆ.

ಕೊಟ್ಟಿಗೆಯಲ್ಲೂ ಅಷ್ಟೆ. ಗಾಳಿ ಬೆಳಕು ಧಾರಾಳವಾಗಿದೆ. ಜಾನುವಾರುಗಳ ಆರೋಗ್ಯದ ಗುಟ್ಟು ಇಲ್ಲಿಯೇ ಅಡಗಿತ್ತು. ದನ-ಕರುಗಳಿಗೂ ಮನಸ್ಸಿದೆ, ಭಾವನೆಗಳಿವೆ ಎಂದು ಅವರು ಅರಿತಿದ್ದಾರೆ. ಹಾಗಾಗಿ ಮನೆಯ ಸದಸ್ಯರೆಂಬಂತೆ ಅವುಗಳನ್ನು ಸಲಹುತ್ತಿದ್ದಾರೆ. ತಮ್ಮ ಯಜಮಾನ ತೋರುವ ಪ್ರೀತಿ ಕಾಳಜಿಗಳಿಗೆ ಅವು ಆರೋಗ್ಯಕರವಾಗಿ ಸ್ಪಂದಿಸುತ್ತಿವೆ.

ಹೌದು, ಮನುಷ್ಯರಂತೆ ಪ್ರಾಣಿಗಳಿಗೂ ಭಾವನೆಗಳಿವೆ. ಅವೂ ಯೋಚಿಸಬಲ್ಲವು. ಮಾತು ಬಾರದ್ದರಿಂದ ವಿವಿಧ ಭಾವನೆಗಳನ್ನು ದೇಹ(ಆಂಗಿಕ) ಭಾಷೆಯ ಮೂಲಕ ವ್ಯಕ್ತಪಡಿಸುತ್ತವೆ. ಮೆದುಳು ಮಾನವನಷ್ಟು ಬೆಳವಣಿಗೆ ಹೊಂದದಿದ್ದರೂ ಅವುಗಳಿಗೂ ಖುಷಿಯುಂಟು, ದುಃಖಗಳುಂಟು, ಭಯವುಂಟು, ಒತ್ತಡವೂ ಉಂಟು. ಕಣ್ಣುಗಳನ್ನು ಅಗಲಿಸುವುದು, ಕಿವಿಗಳ ಚಲನೆ, ಮಾಲೀಕನನ್ನು ನೆಕ್ಕುವುದು, ಮೈಯಿಂದ ಉಜ್ಜುವುದು, ತಲೆಯಿಂದ ಸವರುವುದು... ಹೀಗೆ ಹತ್ತಾರು ರೀತಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಪಶುಪಾಲಕರಾದವರಿಗೆ ಜಾನುವಾರುಗಳಿಗೂ ಭಾವನೆಗಳಿವೆ ಎಂಬ ಅರಿವಿದ್ದರೆ ಅವುಗಳ ಪೋಷಣೆಯಲ್ಲಿ ಮಾನವೀಯತೆ ತೋರಬಹುದು.

ನಮ್ಮಲ್ಲಿ ಬಹುತೇಕ ರೈತರು ವೈಜ್ಞಾನಿಕ ರೀತಿಯಲ್ಲಿ ಜಾನುವಾರುಗಳನ್ನು ಸಾಕುತ್ತಿಲ್ಲ. ಸಾಂಪ್ರದಾಯಿಕ ಕೊಟ್ಟಿಗೆಗಳಲ್ಲಿ ಗಾಳಿ ಬೆಳಕು ತೀರಾ ಕಮ್ಮಿ. ಹಲವರು ಹಗಲು ಹೊತ್ತಿನಲ್ಲೂ ಹೊರಗಡೆ ಕಟ್ಟುವುದಿಲ್ಲ. ಇಂತಹ ಕತ್ತಲೆಯಲ್ಲಿ ದನಕರುಗಳನ್ನು ಕಟ್ಟುವುದರಿಂದ ಸಹಜವಾಗಿಯೇ ಅವು ಒತ್ತಡ ಅನುಭವಿಸುತ್ತವೆ. ಚರ್ಮರೋಗ ಬಾಧಿಸಿ, ಹಾಲಿನ ಇಳುವರಿ ಕುಸಿಯುತ್ತದೆ. ಸದಾ ಕತ್ತಲೆ ವಾತಾವರಣ ಉಣ್ಣೆ, ಹೇನುಗಳಂಥ ಪರಾವಲಂಬಿ ಜೀವಿಗಳ ಸಂತಾನೋತ್ಪತ್ತಿಗೆ ಅನುಕೂಲಕರ. ಇವುಗಳು ಜಾನುವಾರುಗಳ ರಕ್ತ ಹೀರುವುದಷ್ಟೇ ಅಲ್ಲ ಕಾಯಿಲೆಗಳನ್ನೂ ಹರಡಿಸುತ್ತವೆ.

ಜಾನುವಾರುಗಳನ್ನು ಬೆಳಿಗ್ಗೆ ಒಂದೆರಡು ಗಂಟೆ ಬಿಸಿಲಿಗೆ ಕಟ್ಟುವುದರಿಂದ ಸೂರ್ಯನ ಬೆಳಕಿನಿಂದ ದೇಹದಲ್ಲಿ ವಿಟಮಿನ್ ‘ಡಿ’ ಉತ್ಪತ್ತಿಯಾಗುತ್ತದೆ. ಆಹಾರದಿಂದ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳಲು ಈ ಜೀವಸತ್ವ ಅತ್ಯಗತ್ಯ. ಹಾಗಾಗಿ ಹಾಲಿನ ಇಳುವರಿ ಸುಧಾರಿಸುತ್ತದೆ, ಮೂಳೆ ಗಟ್ಟಿಯಾಗುತ್ತದೆ. ಚರ್ಮದ ಆರೋಗ್ಯ ಉತ್ತಮವಾಗುತ್ತದೆ. ಬಿಸಿಲು ಹೆಚ್ಚಾದಾಗ ನೆರಳಲ್ಲಿ ಕಟ್ಟುವ ವ್ಯವಸ್ಥೆ ಮಾಡಬೇಕು. ಹೊರಗೆ ಅಡ್ಡಾಡಿಸಲು/ಮೇಯಿಸಲು ಜಾಗವಿದ್ದರೆ ಇನ್ನೂ ಅನುಕೂಲ. ಇಂಥ ಮುಕ್ತ ವಾತಾವರಣದಲ್ಲಿ ಅವುಗಳ ಮಾನಸಿಕ ಒತ್ತಡ ಕಮ್ಮಿಯಿದ್ದು ಲವಲವಿಕೆಯಿಂದಿರುತ್ತವೆ.

ಕೊಟ್ಟಿಗೆಯಲ್ಲಿ ಕಟ್ಟುವಾಗಲೂ ಅಷ್ಟೆ. ಇಕ್ಕಟ್ಟಾಗಿ ಕಟ್ಟುವುದು, ತಿರುಗಲು, ಮಲಗಲು ಜಾಗವಿಲ್ಲದಿರುವುದು, ಹಾಯುವ ದನ ಎಮ್ಮೆಯನ್ನು ಹತ್ತಿರದಲ್ಲಿ ಕಟ್ಟುವುದು, ಕುಡಿಯುವ ನೀರಿಗೆ ವ್ಯವಸ್ಥೆ ಮಾಡದಿರುವುದು, ಕಡಿಮೆ ಆಹಾರ ನೀಡುವುದು ಎಲ್ಲವೂ ಒತ್ತಡಕಾರಕಗಳೇ. ಗೊಚ್ಚೆ ತುಂಬಿರುವ ಜಾಗದಲ್ಲಿ ಜಾನುವಾರುಗಳನ್ನು ಕಟ್ಟುವುದರಿಂದಲೂ ಅವು ಒತ್ತಡ ಅನುಭವಿಸುತ್ತವೆ. ಅಂತಹ ಜಾಗದಲ್ಲಿ ಮಲಗಿದಾಗ ಕೆಚ್ಚಲಿನ ಭಾಗ ಗಲೀಜಾಗುವುದರಿಂದ ಕೆಚ್ಚಲು ಬಾವಿನ ಸಮಸ್ಯೆ ಹೆಚ್ಚು. ಕೆಚ್ಚಲು ಬಾವಿಗೆ ತಕ್ಷಣ ಸರಿಯಾದ ಚಿಕಿತ್ಸೆ ದೊರಕದಿದ್ದರೆ ಒಳಗೆ ಗಂಟಾಗಿ ಹಾಲು ಸ್ರವಿಸುವ ಗ್ರಂಥಿಗೆ ಹಾನಿಯಾಗಿ ಕೆಚ್ಚಲಿನ ಆ ಭಾಗದಲ್ಲಿ ಹಾಲಿನ ಉತ್ಪಾದನೆ ಶಾಶ್ವತವಾಗಿ ನಿಂತು ಹೋಗಿ ಆರ್ಥಿಕ ನಷ್ಟ ಉಂಟಾಗುತ್ತದೆ.

ಮಲೆನಾಡಿನ ಸಾಂಪ್ರದಾಯಿಕ ಕೊಟ್ಟಿಗೆಗಳಲ್ಲಿ ನೆಲಕ್ಕೆ ಸೊಪ್ಪು/ದರಗು ಹಾಸುತ್ತಾರೆ. ಹಾಗಾಗಿ ನೆಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸ್ವಲ್ಪ ಕಷ್ಟ. ಅದರಲ್ಲೂ ಮಳೆಗಾಲದಲ್ಲಿ ಗೊಚ್ಚೆ ಜಾಸ್ತಿ. ಸರಿಯಾಗಿ ನಿರ್ವಹಣೆ ಮಾಡದೆ ತೀರಾ ರಾಡಿಯಲ್ಲಿ ಕಟ್ಟುವುದರಿಂದ ಕೆಚ್ಚಲು ಬಾವು ಸಮಸ್ಯೆ ಜೊತೆಗೆ ಸೊಳ್ಳೆ, ನುಸಿ, ಕಚ್ಚುವ ನೊಣಗಳಂತಹ ಕೀಟಗಳ ಉತ್ಪತ್ತಿಯೂ ಜಾಸ್ತಿಯಾಗಿ ಜಾನುವಾರುಗಳು ಹಿಂಸೆ ಅನುಭವಿಸುತ್ತವೆ.

ADVERTISEMENT

ಇದು ಚರ್ಮರೋಗಕ್ಕೆ ಎಡೆ ಮಾಡಿಕೊಡುತ್ತದೆ. ವಾತಾವರಣದಲ್ಲಿ ಹಠಾತ್ ಬದಲಾವಣೆಯಾದಾಗ, ಗರ್ಭಾವಸ್ಥೆಯಲ್ಲಿ, ಕರು ಹಾಕಿದಾಗ, ಬೇರೆಡೆಗೆ ಸಾಗಾಣಿಕೆ ಮಾಡಿದಾಗಲೂ ಜಾನುವಾರುಗಳು ಒತ್ತಡ ಅನುಭವಿಸುತ್ತವೆ. ಒತ್ತಡ ಅಧಿಕವಾದಾಗ ಬೇರೆ ಬೇರೆ ರೀತಿ ಪರಿಣಾಮಗಳಾಗುತ್ತವೆ. ರಸದೂತಗಳ (ಹಾರ್ಮೋನ್) ಮಟ್ಟದಲ್ಲಿ ಏರುಪೇರಾಗುತ್ತದೆ. ಹಾಲಿನ ಇಳುವರಿ ಕುಸಿಯುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪ್ರಾಣಿಗಳ ಶರೀರದಲ್ಲಿ ತಟಸ್ಥವಾಗಿರುವ ಕೆಲವು ರೋಗಾಣುಗಳು ಅವುಗಳ ರೋಗ ನಿರೋಧಕ ಶಕ್ತಿ ಕುಸಿದಾಗ ಒಮ್ಮೆಲೆ ಸಂಖ್ಯೆಯಲ್ಲಿ ವೃದ್ಧಿಗೊಂಡು ಹಲವು ಕಾಯಿಲೆಗಳನ್ನು ಹುಟ್ಟು ಹಾಕುತ್ತವೆ. ಸ್ವಲ್ಪ ಅಸಡ್ಡೆ ಮಾಡಿದರೂ ಈ ರೋಗಗಳು ಜೀವಕ್ಕೆ ಅಪಾಯ ತರಬಹುದು. ಅಲ್ಲದೆ ಹಾಲಿನ ಪ್ರಮಾಣ ಕಡಿಮೆಯಾಗಿ ಆರ್ಥಿಕವಾಗಿ  ನಷ್ಟವಾಗುತ್ತದೆ.

ಜಾನುವಾರುಗಳಿಗೆ ಪ್ರತಿ ದಿನ ಸ್ನಾನ ಮಾಡಿಸಿ. ಬ್ರಷ್ ಇಲ್ಲವೆ ಹುಲ್ಲುಚೆಂಡು ಬಳಸಿ ಮೈಯನ್ನು ಚೆನ್ನಾಗಿ ಉಜ್ಜಿ ತೊಳೆಯಬೇಕು. ಅವುಗಳನ್ನು ಪ್ರತಿನಿತ್ಯ ಮಾತನಾಡಿಸಿ. ಪ್ರೀತಿಯಿಂದ ಮೈದಡವಿ. ಆಹಾರ ಕೊಡುವಾಗ ಕೈಯಾಡಿಸಿ. ಪ್ರೀತಿಯಿಂದ ಕೊಟ್ಟ ಆಹಾರ ಪೂರ್ಣ ರಕ್ತಗತವಾಗುವುದು.
ಹಸು ಹಾಲು ಸೊರೆಯದಿದ್ದಾಗ, ಕರೆಯುವಾಗ ಕಾಲೆತ್ತಿದಾಗ ಹೊಡೆದು ಬಡಿದು ಮಾಡಬಾರದು. ಜಾನುವಾರುಗಳು ಶಾಂತ ಪರಿಸರ ಬಯಸುತ್ತವೆ.

ಹಾಗಾಗಿ ಸದ್ದು ಗದ್ದಲಗಳಿಂದ ಆದಷ್ಟು ದೂರವಿಡಿ. ಕೊಟ್ಟಿಗೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಲಿ, ಕೊಟ್ಟಿಗೆಯೊಳಗೆ ಗಾಳಿ, ಬೆಳಕು ಧಾರಾಳವಾಗಿ ಬರುವಂತಿರಲಿ. ಹೊರ ಬಿಟ್ಟು ಮೇಯಿಸಲು ಜಾಗವಿಲ್ಲದಿದ್ದರೆ ಬೆಳಿಗ್ಗೆ ಒಂದೆರಡು ಗಂಟೆಯಾದರೂ ಬಿಸಿಲಿಗೆ ಬಿಡಿ. ಉಳಿದ ಸಮಯದಲ್ಲಿ ನೆರಳಲ್ಲಿ ಕಟ್ಟಬಹುದು. ಕುಡಿಯುವಷ್ಟು ಸ್ವಚ್ಛ ನೀರು ಒದಗಿಸಿ. ಹಿಂಡಿ, ಒಣ ಹುಲ್ಲು, ಹಸಿರು ಮೇವನ್ನು ಸಾಧ್ಯವಾದಷ್ಟು ಹೊಂದಿಸಿ ಹಾಕಿ.

ಜಾನುವಾರುಗಳನ್ನು ಯಾವಾಗಲೂ ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ರೂಢಿಸಿಕೊಂಡಾಗ ಒತ್ತಡ, ಅನಾರೋಗ್ಯದ ಲಕ್ಷಣಗಳನ್ನು ಬೇಗನೆ ಗುರುತಿಸಲು ಸಹಕಾರಿಯಾಗುತ್ತದೆ. ಒಟ್ಟಿನಲ್ಲಿ ಜಾನುವಾರುಗಳ ಆರೋಗ್ಯ ಮತ್ತು ಅಧಿಕ ಹಾಲು ಉತ್ಪಾದನೆಯ ದೃಷ್ಟಿಯಿಂದ ಅವುಗಳು ಒತ್ತಡದಿಂದ ಬಳಲದಂತೆ ನೋಡಿಕೊಳ್ಳುವುದು ಅತಿ ಅಗತ್ಯ. 
–ಲೇಖಕರು ಶಿವಮೊಗ್ಗ ಜಿಲ್ಲೆಯ ಮೇಗರವಳ್ಳಿಯ ಮುಖ್ಯ ಪಶುವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.