ADVERTISEMENT

ತರಕಾರಿ ಸಸಿಗಳ ತವರು ಘಟಪ್ರಭಾ

ವಿನಾಯಕ ಭಟ್ಟ‌
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ದಶಕಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಾತಕಣಗಲೆ ತಾಲ್ಲೂಕಿನ ಜಯಸಿಂಗಪುರದ ನರ್ಸರಿಗಳಿಗೆ ಬೆಳಗಾವಿ ಸೇರಿದಂತೆ ಸುತ್ತಲಿನ ಜಿಲ್ಲೆಗಳ ತರಕಾರಿ ಬೆಳೆಗಾರರು ಅಗೆಯನ್ನು (ಸಸಿ) ಹುಡುಕಿಕೊಂಡು ಹೋಗುತ್ತಿದ್ದರು. ಆದರೆ, ಇಂದು ಅವರೆಲ್ಲ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಘಟಪ್ರಭಾದತ್ತ ಮುಖ ಮಾಡಿದ್ದಾರೆ.

ರೈತರಿಗೆ ಬೇಕಾದ ವಿವಿಧ ತರಕಾರಿಗಳ ಅಗೆಯನ್ನು ತನ್ನ ಮಡಿಲಿನಲ್ಲಿ ವರ್ಷದ 12 ತಿಂಗಳು ಬೆಳೆಸುತ್ತಿರುವ ಘಟಪ್ರಭಾ ಊರು ಇತ್ತೀಚೆಗೆ ತರಕಾರಿ ನರ್ಸರಿಗ

ಳಿಂದಲೇ ಖ್ಯಾತಿ ಪಡೆದಿದೆ. ಘಟಪ್ರಭಾದಿಂದ ಅರಬಾವಿಯತ್ತ ಸಂಕೇಶ್ವರ–ನರಗುಂದ ರಾಜ್ಯ ಹೆದ್ದಾರಿಯಲ್ಲಿ ಹೊರಟರೆ ರಸ್ತೆಯ ಎರಡು ಬದಿಗೆ ಇರುವ ಸಾಲು ಸಾಲು ನರ್ಸರಿಗಳು ಇರುವುದನ್ನು ಕಾಣಬಹುದು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳ ಹಲವು ರೈತರು ಎಂಟು– ಹತ್ತು ವರ್ಷಗಳ ಹಿಂದೆ ತರಕಾರಿ ಸಸಿಯನ್ನು ಜಯಸಿಂಗಪುರ ಸುತ್ತಲಿನ ಪ್ರದೇಶಗಳಿಂದ ತಂದು ನಾಟಿ ಮಾಡುತ್ತಿದ್ದರು. ನರ್ಸರಿಯಿಂದಲೇ ಅಲ್ಲಿನ ಹಲವು ರೈತರು ಒಳ್ಳೆಯ ಆದಾಯ ಪಡೆಯುತ್ತಿರುವುದನ್ನು ಮನಗಂಡ ಘಟಪ್ರಭಾದ ಮೂರ್ನಾಲ್ಕು ರೈತರು ತಮ್ಮ ಜಮೀನಿನಲ್ಲೂ ತರಕಾರಿ ಸಸಿ ಬೆಳೆಸಿ ಮಾರಾಟ ಮಾಡಲು ಮುಂದಾದರು. ಒಂದೆರಡು ವರ್ಷಗಳಲ್ಲೇ ಅದಕ್ಕೆ ನರ್ಸರಿ ರೂಪವನ್ನೂ ಕೊಟ್ಟರು. ಸುತ್ತ ಮುತ್ತಲಿನ ತಾಲ್ಲೂಕುಗಳಿಂದ ಅಗೆ ಖರೀದಿಸಲು ರೈತರು ಬರತೊಡಗಿದರು.

ಇವರು ಯಶಸ್ವಿಯಾಗಿದ್ದನ್ನು ಕಂಡು ಗ್ರಾಮದ ಇನ್ನೂ ಕೆಲವರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ತಮ್ಮ ಜಮೀನಿನಲ್ಲಿ ನರ್ಸರಿ ಆರಂಭಿಸಿದರು. ನೋಡ ನೋಡುತ್ತಿದ್ದಂತೆ ತರಕಾರಿ ಸಸಿಗಳ ತವರೂರಾಗಿ ಘಟಪ್ರಭಾ ಬೆಳೆಯಿತು. ಕಳೆದ ನಾಲ್ಕೈದು ವರ್ಷಗಳಲ್ಲಿ ಘಟಪ್ರಭಾ, ಶಿಂಧಿಕುರಬೇಟ, ಅರಬಾವಿಮಠ, ಅರಬಾವಿವರೆಗೆ ರಸ್ತೆಯ ಪಕ್ಕ ಸುಮಾರು 50ಕ್ಕೂ ಹೆಚ್ಚು ನರ್ಸರಿಗಳು ತಲೆ ಎತ್ತಿವೆ. ಕೆಲವರು ರಸ್ತೆ ಪಕ್ಕದ 20– 30 ಗುಂಟೆ ಜಮೀನನ್ನು ಬಾಡಿಗೆ ಪಡೆದು ನರ್ಸರಿ ಆರಂಭಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ಘಟಪ್ರಭಾದಿಂದ ಅರಬಾವಿವರೆಗೂ ರಸ್ತೆ ಪಕ್ಕದ ಹಲವು ರೈತರ ಜಮೀನಿನಲ್ಲಿ ವರ್ಷದ 12 ತಿಂಗಳು ಹಚ್ಚ ಹಸಿರಿನ ತರಕಾರಿ ಸಸಿಗಳಿರುವ ಮಡಿಗಳು ಕಂಗೊಳಿಸುತ್ತಿವೆ. ಬೆಳಗಾವಿ, ಬೈಲಹೊಂಗಲ, ಅಥಣಿ, ರಾಯಬಾಗ, ಚಿಕ್ಕೋಡಿ, ಹುಕ್ಕೇರಿ, ಸವದತ್ತಿ, ಧಾರವಾಡ, ಮಹಾಲಿಂಗಪುರ, ಬಾದಾಮಿ, ಇಂಡಿ ಸುತ್ತಲಿನ ತರಕಾರಿ ಬೆಳೆಗಾರರು ಇಲ್ಲಿಗೆ ಬಂದು ಅಗೆಯನ್ನು ಖರೀದಿಸುತ್ತಿದ್ದಾರೆ. ತರಕಾರಿ ಬೆಳೆಗೆ ಬೆಳಗಾವಿ ಜಿಲ್ಲೆಯು ಖ್ಯಾತಿ ಪಡೆದಿದ್ದು, ಇಲ್ಲಿನ ತರಕಾರಿ ಹೊರ ರಾಜ್ಯಗಳಿಗೂ ಹೋಗುತ್ತಿವೆ.

ಆಯ್ಕೆಗೆ ಹೆಚ್ಚಿನ ಅವಕಾಶ
ಇಲ್ಲಿನ ನರ್ಸರಿಗಳಲ್ಲಿ ಎಲೆ ಕೋಸು ಹೂ ಕೋಸು, ಮೆಣಸು, ಬದನೆ, ಟೊಮೆಟೊ, ಕ್ಯಾಪ್ಸಿಕಮ್‌ನ ವಿವಿಧ ತಳಿಯ ಸಸಿಗಳು ಸಿಗುತ್ತವೆ. ‘ನಮಗೆ ಬೇಕಾದ ಕಂಪೆನಿಯ ಹಾಗೂ ತಳಿಯ ಅಗೆಯನ್ನು ಆಯ್ಕೆ ಮಾಡಿಕೊಳ್ಳಲು ಘಟಪ್ರಭಾದಲ್ಲಿ ಹೆಚ್ಚಿನ ಅವಕಾಶಗಳಿವೆ. ಇಲ್ಲಿ ಹಲವು ನರ್ಸರಿಗಳಿರುವುದರಿಂದ ಬೇಕಾದಷ್ಟು ಅಗೆ ಒಂದೇ ಕಡೆ ಸಿಗುತ್ತದೆ. ಮುಂಜಾನೆ ಇಲ್ಲಿಗೆ ಬಂದು ಸಸಿ ಖರೀದಿಸಿ ಸಂಜೆಯೊಳಗೆ ಊರಿಗೆ ವಾಪಸ್ಸಾಗಿ ನಾಟಿ ಮಾಡಲು ಅನುಕೂಲವಾಗುತ್ತಿದೆ. ಜಯಸಿಂಗಪುರಕ್ಕೆ ಹೋಗಿ ಬರಲು ದೂರವಾಗುತ್ತಿತ್ತು. ಜೊತೆಗೆ ಖರ್ಚು ಹೆಚ್ಚಾಗುತ್ತಿತ್ತು’ ಎನ್ನುತ್ತಾರೆ ತರಕಾರಿ ಬೆಳೆಗಾರರು.

‘ನಮ್ಮ ಜಮೀನಿನಲ್ಲಿ ಬೀಜ ಬಿತ್ತಿದರೆ ಸಸಿ ಸರಿಯಾಗಿ ಬೆಳೆಯುವುದಿಲ್ಲ. ಇಲ್ಲಿನ ಮಣ್ಣಿನಲ್ಲಿ ಸಸಿ ಸಮೃದ್ಧವಾಗಿ ಬೆಳೆಯುತ್ತದೆ. ಕಾಯಿಯೂ ಹೆಚ್ಚು ಬರುತ್ತದೆ. ಹೀಗಾಗಿ 10 ಗುಂಟೆಗೆ ಮೆಣಸು ಹಾಕಲು 2,500 ಸಸಿಯನ್ನು ಖರೀದಿಸಲು ಇಲ್ಲಿಗೆ ಬಂದಿದ್ದೇನೆ’ ಎನ್ನುತ್ತಾರೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿಯ ರೈತ ಸುಧಾಕರ ನಂಜಣ್ಣ.

ರೈತರಿಗೆ ದಿನವೂ ಗಳಿಕೆ
ವರ್ಷಪೂರ್ತಿ ಸಸಿ ಬೆಳೆಸಿ ಮಾರಾಟ ಮಾಡುವುದರಿಂದ ನರ್ಸರಿಯಲ್ಲಿ ತೊಡಗಿಕೊಂಡ ರೈತರ ಕೈಗೆ ದಿನವೂ ಅಲ್ಪ ಪ್ರಮಾಣದ ಹಣ ಬರುತ್ತದೆ. ವಿಶೇಷವಾಗಿ ಮೇ, ಜೂನ್‌, ಜುಲೈ ಹಾಗೂ ನವೆಂಬರ್‌, ಡಿಸೆಂಬರ್‌ ತಿಂಗಳಿನಲ್ಲಿ ಹೆಚ್ಚಿನ ಆದಾಯ ಬರುತ್ತದೆ.
‘ನಮಗಿರುವ ಸ್ವಲ್ಪ ಜಮೀನಿನಲ್ಲಿ ಮೊದಲು ನಾವು ತರಕಾರಿ ಬೆಳೆಯುತ್ತಿದ್ದೆವು.

ಹತ್ತು ವರ್ಷಗಳ ಹಿಂದೆ 30 ಗುಂಟೆ ಜಾಗದಲ್ಲಿ ನರ್ಸರಿ ಆರಂಭಿಸಿದೆವು. ಇಬ್ಬರು ಮಕ್ಕಳು ಇದರಲ್ಲೇ ದುಡಿಯುತ್ತಿದ್ದಾರೆ. ಸಸಿ ಸರಿಯಾಗಿ ಮಾರಾಟವಾದರೆ ದಿನಕ್ಕೆ ಒಬ್ಬರಿಗೆ ₹250ರಿಂದ ₹300 ಕೈಗೆ ಸಿಗುತ್ತದೆ. ತಿಂಗಳಿಗೆ ಒಬ್ಬರಿಗೆ ಸರಾಸರಿ ₹8ಸಾವಿರದವರೆಗೂ ಸಿಕ್ಕಿದೆ. ಈಗ ಮೂರು ನರ್ಸರಿಯನ್ನು ತೆರೆದಿದ್ದೇವೆ. ಈ ಬಾರಿ ಮಳೆ ಸರಿಯಾಗಿ ಆಗದೇ ಇರುವುದರಿಂದ ಸಸಿ ಕಡಿಮೆ ಹೋಗುತ್ತಿದೆ’ ಎನ್ನುತ್ತಾರೆ ಪರಮೇಶ್ವರ ನರ್ಸರಿಯ ಮುತ್ತಪ್ಪ ಬಾಳಪ್ಪ ಮುತಾರಿ.

‘ತರಕಾರಿ ಬೆಳೆಗಾರರು ನಾಟಿಗೆ ಸಿದ್ಧವಾಗಿರುವ ಸಸಿಯನ್ನು ಹೆಚ್ಚೆಚ್ಚು ಖರೀದಿಸುತ್ತಿರುವುದರಿಂದ ನರ್ಸರಿ ಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿನ ಕೆಂಪು ಜಾಜ್‌ ಮಣ್ಣಿನಲ್ಲಿ ಸಸಿ ಸಮೃದ್ಧವಾಗಿ ಬೆಳೆಯುತ್ತದೆ. ಕಳೆದ ಮೂರು ವರ್ಷಗಳಿಂದ 30 ಗುಂಟೆಯಲ್ಲಿ ನರ್ಸರಿ ಮಾಡುತ್ತಿದ್ದೇನೆ. ಆಳಿನ ಪಗಾರು, ಬೀಜ– ಗೊಬ್ಬರ, ಔಷಧಿ ಖರ್ಚು ತೆಗೆದರೆ ವರ್ಷಕ್ಕೆ ₹2 ಲಕ್ಷದವರೆಗೆ ಲಾಭ ಸಿಗುತ್ತದೆ’ ಎಂದು ಶಿವಬಸವ ಪಾರ್ವತಿ ನರ್ಸರಿಯ ಮಲ್ಲಿಕಾರ್ಜುನ ನೆರ್ಲೆ ಮಾಹಿತಿ ನೀಡಿದರು.

‘ಈ ಹಿಂದೆ ನರ್ಸರಿಯಲ್ಲಿ ಕೆಲಸಕ್ಕೆ ಹೋದ ಅನುಭವದಿಂದ ಎರಡು ವರ್ಷಗಳ ಹಿಂದೆ 20 ಗುಂಟೆ ಜಾಗವನ್ನು ಬಾಡಿಗೆ ಪಡೆದು ನರ್ಸರಿ ಆರಂಭಿಸಿದ್ದೇನೆ. ದಿನವಿಡಿ ಹೊಲದಲ್ಲೇ ದುಡಿಯಬೇಕು. ತಪ್ಪದೇ ದಿನವೂ ನೀರುಣಿಸಬೇಕು. ಹಿಂದೆ ಕೂಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಹಣ ಸಂಪಾದಿಸುತ್ತಿದ್ದೇನೆ’ ಎನ್ನುತ್ತಾರೆ ಮಾಯಮ್ಮದೇವಿ ನರ್ಸರಿಯ ಶಂಕರ ಮಾಯಣ್ಣವರ.

ಲಗ್ಗೆಯಿಟ್ಟ ನರ್ಸರಿಗಳು
ಗ್ರೀನ್‌ಹೌಸ್‌ನಲ್ಲಿ ತರಕಾರಿ ಸಸಿ ಬೆಳೆಸುವ ಹೈಟ್‌ಕ್ ನರ್ಸರಿಗಳು ಇಲ್ಲಿ ತಲೆ ಎತ್ತತೊಡಗಿವೆ. ಕಳೆದ ಹದಿನೈದು ವರ್ಷಗಳಿಂದ ಈ ಭಾಗದಲ್ಲಿ ಮಾವು ಹಾಗೂ ತೆಂಗಿನ ಸಸಿಗಳ ವ್ಯಾಪಾರ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ರೆಡ್ಡೆಪ್ಪ ಚಣ್ಣೂರಿ ಅವರು ಶಿಂಧಿಕುರಬೇಟದ ಬಳಿ ಜಾಗವನ್ನು ಬಾಡಿಗೆ ಪಡೆದು ಕಳೆದ ವರ್ಷ ಶ್ರೀ ಸಿದ್ಧಿವಿನಾಯಕ ಹೈಟೆಕ್‌ ನರ್ಸರಿ ಆರಂಭಿಸಿದ್ದರು. ಇದರಲ್ಲಿ ಯಶಸ್ಸು ಕಂಡಿದ್ದರಿಂದ ತಮ್ಮ ಸಂಬಂಧಿಕರೊಂದಿಗೆ ಸೇರಿ ಈ ವರ್ಷ ಪಕ್ಕದಲ್ಲಿಯೇ ಇನ್ನೂ ಎರಡು ನರ್ಸರಿ ಆರಂಭಿಸಿದ್ದಾರೆ. ಮೂರು ನರ್ಸರಿಗೆ ಅವರು ಒಟ್ಟು ₹20 ಲಕ್ಷ ಬಂಡವಾಳ ಹೂಡಿದ್ದಾರೆ.

‘ಪ್ಲಾಸ್ಟಿಕ್‌ ಟ್ರೇನಲ್ಲಿ ತೆಂಗಿನ ನಾರಿನ ಗೊಬ್ಬರದಲ್ಲಿ ಬೀಜ ಬಿತ್ತಿ ಸಸಿಯನ್ನು ಬೆಳೆಸುತ್ತೇವೆ. ಬೇರು ಭೂಮಿಯೊಳಗೆ ನಾಟದಂತೆ ನೋಡಿಕೊಳ್ಳುತ್ತೇವೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದರಿಂದ ಸಸಿ ತನಗೆ ಬೇಕಾದಷ್ಟು ಮಾತ್ರ ನೀರನ್ನು ಹೀರಿಕೊಳ್ಳುತ್ತದೆ. ಬಿಸಿಲು ಬೀಳದೇ ಇರುವುದರಿಂದ ಸಸಿ ಒಣಗುವುದಿಲ್ಲ. ಸಸಿಗೆ ಮುಚ್ಚಿಗೆಯನ್ನೂ ಮಾಡುತ್ತೇವೆ. ಹೀಗಾಗಿ ಹೊರಗಿನ ಕೀಟವೂ ದಾಳಿ ಮಾಡುವುದಿಲ್ಲ. ಸಸಿ ಸಮೃದ್ಧವಾಗಿ ಬೆಳೆಯುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚಿರುತ್ತದೆ. ಜಮೀನಿನಲ್ಲಿ ಬೆಳೆಯುವ ಸಸಿಗಿಂತಲೂ ನಾವು ಬೆಳೆಯುವ ಸಸಿಗೆ ಸ್ವಲ್ಪ ಬೆಲೆ ಹೆಚ್ಚಾಗುತ್ತದೆ. ಹೀಗಿದ್ದರೂ ಗ್ರೀನ್‌ಹೌಸ್‌ನಲ್ಲಿ ಬೆಳೆಯುವ ಸಸಿಯ ಮಹತ್ವ ಅರಿತು ರೈತರು ಒಯ್ಯುತ್ತಿದ್ದಾರೆ’ ಎನ್ನುತ್ತಾರೆ ರೆಡ್ಡೆಪ್ಪ ಚಣ್ಣೂರಿ.
***
ನರ್ಸರಿಯಿಂದ ಕಾಲ ಕಾಲಕ್ಕೆ ಆದಾಯ ಬರುತ್ತದೆ. ಆದರೆ, ತರಕಾರಿ ಸಸಿಯನ್ನು ನಿಗದಿತ ಅವಧಿಯಲ್ಲೇ ಕಿತ್ತು ನಾಟಿ ಮಾಡಬೇಕಾಗಿರುವುದರಿಂದ ಕೆಲವು ಬಾರಿ ರೈತರು ಬರದಿದ್ದಾಗ ಎಲ್ಲ ಸಸಿಯನ್ನು ಕಿತ್ತು ಎಸೆಯಬೇಕಾಗುವುದರಿಂದ ನಷ್ಟವೂ ಆಗುತ್ತದೆ
-ಮಲ್ಲಿಕಾರ್ಜುನ ನೇರ್ಲೆ,
ಶಿವಬಸವ ಪಾರ್ವತಿ ನರ್ಸರಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT