ADVERTISEMENT

ತಾರಸಿ ಮೇಲೆ ತರಕಾರಿ ಮಾರ್ಕೆಟ್‌!

ವಿ.ಬಾಲಕೃಷ್ಣ ಶಿರ್ವ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ತಾರಸಿ ಮೇಲೆ ತರಕಾರಿ ಮಾರ್ಕೆಟ್‌!
ತಾರಸಿ ಮೇಲೆ ತರಕಾರಿ ಮಾರ್ಕೆಟ್‌!   

ದಶಕದ ಹಿಂದಿನ ಮಾತು. ಮಂಗಳೂರಿನ ಮಾರ್ನಮಿಕಟ್ಟೆಯ ಬ್ಲಾನಿ ಡಿಸೋಜ ಅವರ ಮನೆಯ ಟೆರೇಸ್‌ ಮೇಲೆ ಕಾಬುಲ್ ದ್ರಾಕ್ಷಿ ಗೊಂಚಲು ಗೊಂಚಲಾಗಿ ತೂಗತೊಡಗಿದಾಗ ಊರಿಗೆ ಊರೇ ಅಚ್ಚರಿ ಪಟ್ಟಿತು. ಕರಾವಳಿಯಲ್ಲಿ ದ್ರಾಕ್ಷಿ ಬೆಳೆಯುವುದೇ ಇಲ್ಲ ಎನ್ನುವ ಮಾತನ್ನು ಸುಳ್ಳು ಮಾಡಿದ್ದ ಡಿಸೋಜಾ ಅವರು ಇದನ್ನು ಸತ್ಯ ಮಾಡಿ ತೋರಿಸಿದ್ದು  ತಾರಸಿ ಮೇಲೆ! ಸಸಿ ನೆಟ್ಟು 14 ವರ್ಷಗಳಲ್ಲಿ ಫಲ ಕಂಡಿತ್ತು ದ್ರಾಕ್ಷಿ. ಮೊದಲ ಇಳುವರಿಯಾಗಿ 40ಕೆ.ಜಿಯಷ್ಟು ದ್ರಾಕ್ಷಿ ಇವರ ಕೈ ಸೇರಿತ್ತು.

ಇದೇ ರೀತಿಯ ಚಮತ್ಕಾರಿ ಗಿಡ, ಬಳ್ಳಿಗಳು ಇವರ ತಾರಸಿಯನ್ನು ತುಂಬಿಸಿವೆ. ತೊಂಡೆ ಗಿಡವನ್ನು ಮಣ್ಣಿನ ಕುಂಡದಲ್ಲಿ ನೆಟ್ಟು ಚಪ್ಪರಕ್ಕೆ ಹಾಯಿಸಿ ಸುಮಾರು 150 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ ಬೆಳೆದು ಚಪ್ಪರಕ್ಕೆ ಹಾಯಿಸಿ 10 ವರ್ಷಗಳಿಂದ 5–6ಸಾವಿರ ರೂಪಾಯಿಗಳನ್ನು  ತೊಂಡೆಕಾಯಿ ಮಾರಾಟ ಒಂದರಿಂದಲೇ ಪಡೆಯುತ್ತಿದ್ದಾರೆ. ಅಲಸಂದೆ, ಹೀರೇಕಾಯಿ, ಹಾಗಲಕಾಯಿ, ಸೋರೆಕಾಯಿ, ಮುಳ್ಳುಸೌತೆ, ಪಡವಲಕಾಯಿ, ಬೀನ್ಸ್ ಎಲ್ಲವೂ ಬಾಲ್ಕನಿಯಲ್ಲಿರುವ ಚಪ್ಪರದ ಮೇಲೆ ತೂಗಾಡುತ್ತಿವೆ.

ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಬೆಂಡೆ, ಪುದೀನಾ, ಮೆಣಸು, ಟೊಮೆಟೊ, ಶುಂಠಿ, ಕರಿಮೆಣಸು, ನುಗ್ಗೆ ಕಾಯಿ ಬೆಳೆಸುತ್ತಿದ್ದಾರೆ. ‘10–12 ವರ್ಷಗಳಿಂದ ಮಾರುಕಟ್ಟೆಯಿಂದ ತರಕಾರಿ ತಂದಿಲ್ಲ. ಎಲ್ಲವನ್ನೂ ನಾವೇ ಬೆಳೆಸಿಕೊಳ್ಳುತ್ತಿದ್ದೇವೆ. ನಮಗೆ ಹೆಚ್ಚಾದುದನ್ನು ಮಾರಾಟ ಮಾಡುತ್ತಿದ್ದೇವೆ. ವಿಷಮುಕ್ತ ತರಕಾರಿ ತಿನ್ನುತ್ತಿರುವ ನೆಮ್ಮದಿ ನಮಗಿದೆ’ ಎನ್ನುತ್ತಾರೆ ಡಿಸೋಜಾ.

ನಾಲ್ಕು ಜಾತಿಯ (ಕೆಂಪು, ಕೆ.ಜಿ. ಪೇರಳೆ, ಥೈಲೆಂಡ್ ಸೀಡ್‌ಲೆಸ್, ಸ್ಟ್ರಾಬರಿ) ಸೀಬೆ ಹಣ್ಣುಗಳು ಭರಪೂರ ಇಳುವರಿ ನೀಡುತ್ತಿವೆ. ವಿವಿಧ ಜಾತಿಯ ಸಪೋಟ (ಕ್ರಿಕೆಟ್ ಬಾಲ್, ದ್ವಿವರ್ಣದ ಸಪೋಟ, ಮದ್ರಾಸ್ ಸಪೋಟ), ದಾಳಿಂಬೆ, ಮೂಸಂಬಿ, ಕಿತ್ತಳೆ (ಹುಳಿ ಸಿಹಿ ಮಿಶ್ರಿತ ಕಿತ್ತಳೆ, ಮಡಿಕೇರಿ ಕಿತ್ತಳೆ, ಸಿಪ್ಪೆ ಸಮೇತ ತಿನ್ನುವ ಕಿತ್ತಳೆ, ಷರಬತ್ತಿಗೆ ಉಪಯೋಗಿಸುವ ಕಿತ್ತಳೆ) ಕೂಡ ತಾರಸಿಯಲ್ಲಿ ಕಂಗೊಳಿಸುತ್ತಿದೆ. ಎಲ್ಲಾ ಕಾಲದಲ್ಲಿಯೂ ಮಾವಿನ ಹಣ್ಣು ಇಲ್ಲಿ ಸಿಗುತ್ತದೆ!

ಕೇವಲ ಮಣ್ಣು, ತರಗೆಲೆಗಳಿಂದಲೇ ಒಂದು ಕೆ.ಜಿ ತೂಗುವ ಹಲಸು ಬಿಟ್ಟಿರುವುದು ಡಿಸೋಜಾ ಅವರನ್ನೇ ಅಚ್ಚರಿಗೊಳಿಸಿದೆ. ಇವಿಷ್ಟೇ ಅಲ್ಲದೇ, ಸೇಬು, ಅಂಜೂರ, ಸಿಹಿ ಹುಣಸೆ, ಬುಗುರಿ ಹಣ್ಣು, ನೆಲ್ಲಿ, ದ್ವಾರೆಹುಳಿ, ಅಮಟೆಕಾಯಿ, ಸೀತಾಫಲ, ರಾಮಫಲ, ನೇರಳೆ ಹಣ್ಣು, ವೀಳ್ಯದೆಲೆ, ಲವಂಗ, ಕಾಳು ಮೆಣಸು ಹೀಗೆ 200ಕ್ಕೂ ಅಧಿಕ ಹಣ್ಣು, ತರಕಾರಿ ಬೆಳೆಗಳು ಇಲ್ಲಿ ತುಂಬಿಹೋಗಿವೆ.

ಇವೆಲ್ಲವನ್ನೂ ಅತಿ ಸರಳ ವಿಧಾನದಲ್ಲಿ ಬೆಳೆಸಲಾಗುತ್ತಿದೆ ಎನ್ನುತ್ತಾರೆ ಡಿಸೋಜ. ‘ಗ್ರಾಫ್ಟ್ ಮಾಡಿದ ಗಿಡ ತಂದು ಬೆಳೆಯುತ್ತಿದ್ದೇನೆ. ಮೊದಲು 21/21 ಗಾತ್ರದ ಕುಂಡಗಳಿಗೆ ಅರ್ಧದಷ್ಟು ಮಣ್ಣು ತುಂಬಿಸಬೇಕು. ಅಂದರೆ 1:1:1:1 ಅನುಪಾತದಲ್ಲಿ ಮಣ್ಣು, ಮರಳು, ಕಾಕ್‌ಪಿಟ್, ಸೆಗಣಿ ಗೊಬ್ಬರ ತುಂಬಿ ಗ್ರಾಫ್ಟ್‌ ಮಾಡಿದ ಗಿಡ ಇಟ್ಟು ಮುಕ್ಕಾಲು ಭಾಗ ತುಂಬಿಸಬೇಕು. ದಿನವೂ ಒಂದು ಲೀಟರ್‌ ನೀರು ಹಾಕಬೇಕು.

ಹದಿನೈದು ದಿವಸಕ್ಕೊಮ್ಮೆ ತರಗೆಲೆ, ಅಡುಗೆ ತ್ಯಾಜ್ಯ, ಸೆಗಣಿ ಹಾಕಬೇಕು. ಆಗ ಗಿಡಗಳು ಬೇಗನೆ ಬೆಳೆಯುತ್ತವೆ. 15 ದಿನಕ್ಕೊಮ್ಮೆ ಬೇವಿನ ಎಣ್ಣೆ (10ಮಿಲಿ ಲೀಟರ್‌ಗೆ ಒಂದು ಲೀಟರ್ ನೀರು ಹಾಕಿ ಒಂದು ಚಿಟಿಕೆ ಸೋಪ್ ಪುಡಿ) ಮಿಶ್ರಣವನ್ನು ಎಲೆ, ಎಲೆಯ ಹಿಂಭಾಗ, ಕಾಂಡಕ್ಕೆ ಸಿಂಪಡಿಸಬೇಕು.

ಬಾಡಿದ ಎಲೆ ತೆಗೆದು ಬುಡಕ್ಕೆ ಹಾಕಬೇಕು’ ಎನ್ನುತ್ತಾರೆ ಬ್ಲಾನಿ. ತರಕಾರಿ ಗಿಡ ಮಾಡುವುದಾದರೆ ಎಸೆದ ಪ್ಲಾಸ್ಟಿಕ್ ತೊಟ್ಟೆ, ಮಣ್ಣು ತರಗೆಲೆ ಹೊಯಿಗೆ ಇತ್ಯಾದಿ ತುಂಬಿಸಿ ಬೀಜ ಬಿತ್ತಿ ನಂತರ ಮೊಳಕೆಯೊಡೆದಾಗ, ಕಾಂಪೋಸ್ಟ್ ಗೊಬ್ಬರ ಹಾಕಿ ಗಿಡವಾದ ನಂತರ ಮಣ್ಣಿನ ಕುಂಡಕ್ಕೆ ವರ್ಗಾಯಿಸಬಹುದು ಎನ್ನುವುದು ಅವರ ಮಾತು.

ಅಂದಹಾಗೆ ಇವರ ಮನೆಗೆ ಹೋಗಬೇಕೆಂದರೆ ಮಾರ್ನಮಿಕಟ್ಟೆಯ ಮೊದಲ ಬ್ರಿಡ್ಜ್‌ ಬಳಿಯ ಬಲಭಾಗದ ರಸ್ತೆಯಲ್ಲಿ ಮುಂದೆ ಸಾಗಿ ಎಡಕ್ಕೆ ತಿರುಗಬೇಕು. ಸಂಪರ್ಕಕ್ಕೆ 9972716340.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.