ADVERTISEMENT

ತೋಟಗಾರಿಕೆ ಬೆಳೆ ಹೂ ಉದುರುವಿಕೆ ತಡೆವ ಆರೈಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST
ತೋಟಗಾರಿಕೆ ಬೆಳೆ ಹೂ ಉದುರುವಿಕೆ ತಡೆವ ಆರೈಕೆ
ತೋಟಗಾರಿಕೆ ಬೆಳೆ ಹೂ ಉದುರುವಿಕೆ ತಡೆವ ಆರೈಕೆ   

ಹಲವು ಬೆಳೆಗಳಲ್ಲಿ ಹೂವು ಉದುರುವುದು ಸಾಮಾನ್ಯ ಸಮಸ್ಯೆ ಆಗಿರುತ್ತದೆ. ಆದರೆ ತೋಟಗಾರಿಕೆ ಬೆಳೆಗಳಲ್ಲಿ ಹೂವು ಉದುರಿ ಹೋದರೆ, ಇಳುವರಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೂವು ಉದುರಲು ಸಾಕಷ್ಟು ಕಾರಣಗಳಿರುತ್ತವೆ. ಆ ಕಾರಣಗಳನ್ನು ಅರಿತರೆ ಬೆಳೆಗಳನ್ನು ಕಾಪಾಡಿಕೊಳ್ಳುವ ಸುಲಭ ಮಾರ್ಗವೂ ಕಾಣುತ್ತದೆ.

ಹೂವು ಉದುರುವಿಕೆ ಎಲ್ಲಾ ಬೆಳೆಗಳಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ.

ಇವುಗಳಲ್ಲಿ ಮುಖ್ಯವಾಗಿರುವುದು ಪರಾಗ ಸ್ಪರ್ಶದ ಕೊರತೆ. ಬೆಳೆಗಳಲ್ಲಿ ಹೂವು ಉದುರುವಿಕೆಗೆ ಪ್ರಮುಖ ಕಾರಣವೇನೆಂದರೆ ಪರಾಗ ಸ್ಪರ್ಶವಾಗದೆ ಇರುವುದು. ಬೆಳೆಗಳಲ್ಲಿ ಅನೇಕ ರೀತಿಯಿಂದ ಪರಾಗ ಸ್ಪರ್ಶ ಕ್ರಿಯೆ ಜರುಗುತ್ತದೆ.

ADVERTISEMENT

ಉದಾ: ಜೇನುನೊಣ, ಇರುವೆ, ದುಂಬಿ, ಕಡಜ, ಗಾಳಿ, ನೀರು ಇತ್ಯಾದಿ. ಇವುಗಳ ಅಲಭ್ಯತೆಯಿಂದ ಸರಿಯಾದ ಸಮಯದಲ್ಲಿ ಪರಾಗ ಸ್ಪರ್ಶವಾಗಲಿಲ್ಲವೆಂದರೆ ಹೂವು ಉದುರುವುದು ನಿಶ್ಚಿತ. ಹಾಗಾಗಿ ರೈತರು ತಮ್ಮ ಹೊಲಗದ್ದೆಗಳಲ್ಲಿ ಎಕರೆಗೆ 2 ರಿಂದ 5 ಜೇನು ಪೆಟ್ಟಿಗೆಗಳನ್ನು ಸ್ಥಾಪಿಸುವ ಮುಖೇನ ಜೇನು ನೊಣಗಳಿಂದ ಪರಾಗ ಸ್ಪರ್ಶ ಕ್ರಿಯೆ ವೃದ್ಧಿಸಿ, ಹೂವು ಉದುರುವಿಕೆ ಕಡಿಮೆಯಾಗಿ ಇಳುವರಿ ಹೆಚ್ಚಲು ಸಹಕಾರಿಯಾಗುತ್ತದೆ.

ಉಷ್ಣಾಂಶದ ಏರುಪೇರು: ಹಗಲಿನ ಹೆಚ್ಚು ಮತ್ತು ರಾತ್ರಿಯ ಕಡಿಮೆ ಉಷ್ಣಾಂಶದ ಏರುಪೇರಿನಿಂದಲೂ ಹೂವುಗಳು ಉದುರುತ್ತವೆ. ಉದಾ: ಬೆಳಗಿನ ಉಷ್ಣಾಂಶ 290 ಸೆಲ್ಸಿಯಸ್‌ಗಿಂತ ಜಾಸ್ತಿ ಹಾಗೂ ರಾತ್ರಿ ಉಷ್ಣಾಂಶ ಕನಿಷ್ಠ ಮಟ್ಟ 120 ಸೆಲ್ಸಿಯಸ್‌ಗಿಂತ ಕಡಿಮೆಯಾದಾಗಲೂ ಹೆಚ್ಚಿನ ಪ್ರಮಾಣದ ಹೂವುಗಳು ಬೆಳೆಗಳಲ್ಲಿ ಉದುರುತ್ತವೆ.

ಬೆಳೆಯ ತಾಕಿನ ಉಷ್ಣಾಂಶವನ್ನು ಕಡಿಮೆ ಮಾಡಲು ಬೆಳೆಗಳ ಮೇಲೆ ನೀರನ್ನು ಸಿಂಪಡಿಸುವುದು ಅಥವಾ ತುಂತುರು ನೀರಾವರಿ ಪದ್ಧತಿ ಅಳವಡಿಸುವ ಮೂಲಕ ವಾತಾವರಣದ ಉಷ್ಣಾಂಶ ಮಿತಗೊಳಿಸಲು ಅನುಕೂಲವಾಗುತ್ತದೆ.

ಪೋಷಕಾಂಶಗಳ ಕೊರತೆ: ಯಾವುದೇ ಬೆಳೆ ಸರಿಯಾದ ರೀತಿಯಲ್ಲಿ ಬೆಳೆದು, ಹೂಬಿಟ್ಟು ಫಸಲು ಕೊಡಲು 16 ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ಬೇಕೇ ಬೇಕು. ಭೂಮಿಯಲ್ಲಿನ ಕಡಿಮೆ ಪೋಷಕಾಂಶಗಳ ಮಟ್ಟ ಇಲ್ಲವೇ ಅಲಭ್ಯತೆ ಇತ್ಯಾದಿ ಕಾರಣಗಳಿಂದಲೂ ಬೆಳೆಗಳಲ್ಲಿ ಹೂಗಳು ಉದುರುತ್ತವೆ.

ಹಾಗಾಗಿ ಬೆಳೆ ಆಧರಿಸಿ ಪ್ರತಿ ಬೆಳೆಗೆ ಹೂ ಬಿಡುವ ಮುನ್ನ 4 ರಿಂದ 6 ವಾರಗಳ ಮುಂಚಿತವಾಗಿ ಸಾವಯವ ಮೂಲದ ಗೊಬ್ಬರಗಳು, ರಸಗೊಬ್ಬರ, ಅಣುಜೀವಿ ಗೊಬ್ಬರ ಇತ್ಯಾದಿ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುವುದು ಉತ್ತಮ.

ಇತ್ತೀಚಿನ ದಿನಗಳಲ್ಲಿ ಲಘುಪೋಷಕಾಂಶಗಳ ಕೊರತೆ ಬೆಳೆಗಳಲ್ಲಿ ಕಂಡು ಬರುತ್ತಿದ್ದು, ಇವುಗಳ ನಿರ್ವಹಣೆಗೆ ವಿವಿಧ ರೀತಿಯ ಲಘು ಪೋಷಕಾಂಶಗಳ ಮಿಶ್ರಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ (ಮಲ್ಟಿಪ್ಲೆಕ್ಸ್, ಬಯೋಸೈಡ್ ಇತ್ಯಾದಿ), ಕೆಲವೊಂದನ್ನು ಮಣ್ಣಿಗೆ ಸೇರಿಸಿದರೆ, ಕೆಲವನ್ನು ಎಲೆಗಳ ಮೇಲೆ ಸಿಂಪಡಿಸಬೇಕಾಗುತ್ತದೆ.

ಉದಾ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರುಘಟ್ಟ ಹೊರ ತಂದಿರುವ (ತರಕಾರಿ, ನಿಂಬೆ, ಮಾವು, ಬಾಳೆ, ದ್ರಾಕ್ಷಿ ಇತ್ಯಾದಿಗಳಿಗೆ) ವಿವಿಧ ಪೋಷಕಾಂಶಗಳನ್ನು ವಿವಿಧ ಬೆಳೆಗಳಿಗೆ ಬಳಸಿ ಲಘು ಪೋಷಕಾಂಶಗಳ ಕೊರತೆಯನ್ನು ನಿವಾರಿಸಬಹುದಾಗಿದೆ.

ನೀರಿನ ಕೊರತೆ: ಮೊಗ್ಗು ಹಾಗೂ ಹೆಚ್ಚಿನ ಮಟ್ಟದ ಹೂಗಳ ಉದುರುವಿಕೆಗೆ ನೀರಿನ ಕೊರತೆ ಸಹ ಬಹು ಮುಖ್ಯ ಕಾರಣ.  ಈ ಕೊರತೆ ನೀಗಲು, ಭೂಮಿಗೆ ಸಮಯವರಿತು ನೀರು ಹಾಯಿಸುವುದು ಹಾಗೂ ವಿವಿಧ ನೀರಾವರಿ ಪದ್ಧತಿಗಳನ್ನು (ಹನಿ ನೀರಾವರಿ, ತುಂತುರು ನೀರಾವರಿ) ಅಳವಡಿಸಿಕೊಂಡರೆ ಉತ್ತಮ.

ಅನೇಕ ರೀತಿಯ ಹೊದಿಕೆಗಳನ್ನು (ಪ್ಲಾಸ್ಟಿಕ್, ಕೃಷಿ ತ್ಯಾಜ್ಯ) ಬಳಕೆ ಮಾಡುವ ಮುಖೇನ ಭೂಮಿಯಿಂದ ತೇವಾಂಶ ಆವಿಯಾಗುವುದನ್ನು ನಿರ್ಬಂಧಿಸಿ ಯಾವಾಗಲೂ ಭೂಮಿ ತೇವದಿಂದ ಕೂಡಿರಲು ಸಹಾಯಕವಾಗಿರುತ್ತದೆ. ಮಣ್ಣು ಮತ್ತು ಮಳೆ ಅಂಶಗಳನ್ನು ಗಮನಿಸಿ ಭೂಮಿಯು ಬಿರುಕು ಬಿಡದ ಹಾಗೆ ಮಣ್ಣಿಗೆ ನೀರು ಒದಗಿಸಿದರೆ ಹೂವು ಉದುರುವಿಕೆ ತಡೆಯಬಹುದು.

ಕೀಟಬಾಧೆಯಿಂದ ಹೂವು ಉದುರುವುದು: ತೋಟಗಾರಿಕೆ ಬೆಳೆಗಳಲ್ಲಿ ರಸ ಹೀರುವ ಗುಂಪಿಗೆ ಸೇರಿದ ಥ್ರಿಪ್ಸ್ ಹಾಗೂ ಕೊರಕಗಳಿಂದ ಹೆಚ್ಚಿನ ಮಟ್ಟದ ಮೊಗ್ಗು ಹಾಗೂ ಹೂಗಳು ಉದುರುವಿಕೆಯನ್ನು ಕಾಣಬಹುದು. ಇವುಗಳ ನಿರ್ವಹಣೆಗೆ ಔಷಧಿ ಸಿಂಪರಣೆ ಜೊತೆ ಜೊತೆಗೆ, ಬದಲಿ ಪದ್ಧತಿಗಳ ಬಗ್ಗೆಯೂ ಒಲವು ತೋರುವುದು ಅವಶ್ಯ.

ಉದಾ: ಕಳೆ ರಹಿತ ಬೆಳೆ (ಜಮೀನಿನಲ್ಲಿ ಕಳೆಗಳು ಕೀಟ ಮತ್ತು ರೋಗಗಳಿಗೆ ಆಶ್ರಯ ತಾಣವಾಗಿರುತ್ತದೆ); ಆರಿಸಿ ತೆಗೆಯುವುದು / ನಾಶ ಪಡಿಸುವುದು (ಹೆಚ್ಚು ತೊಂದರೆಗೆ ಒಳಪಟ್ಟ ಭಾಗ/ಸಸ್ಯವನ್ನು ಆರಿಸಿ ತೆಗೆದು ಸುಟ್ಟು ಹಾಕುವುದು); ನೀರು ಸಿಂಪರಣೆ (ಕೀಟ ಬಾಧೆಗೊಳಗಾದ ಭಾಗ / ಗಿಡಕ್ಕೆ ನಿರಂತರವಾಗಿ ನೀರನ್ನು ಸಿಂಪಡಿಸುವ ಮೂಲಕ ನಿರ್ವಹಣೆ).

ಇತ್ತೀಚಿನ ದಿನಗಳಲ್ಲಿ ಪರಿಸರ ಪ್ರಿಯ ತಂತ್ರಜ್ಞಾನಗಳಾದ ಹಳದಿ ಅಂಟು ಹಾಳೆ, ಮೋಹಕ ಬಲೆಗಳು, ಮುಸುಕಿನ ಜೋಳ, ಮೇವಿನ ಜೋಳದ ಸಾಲುಗಳನ್ನು ಬೆಳೆಯ ಸುತ್ತ ಅಥವಾ ಸೀರೆಗಳನ್ನು ಬೆಳೆಯ ಸುತ್ತ ಪರದೆಯಾಗಿ ಬಳಕೆ ಮಾಡುವುದೂ ಒಳ್ಳೆಯ ಉಪಾಯಗಳು.

ಹೆಚ್ಚು ರಾಸಾಯನಿಕ ಔಷಧಿ ಸಿಂಪರಣೆ: ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಗಳಲ್ಲಿ ಕಂಡು ಬರುವ ಕೀಟ ಮತ್ತು
ರೋಗಗಳ ನಿರ್ವಹಣೆಗೆ ಹೆಚ್ಚಿನ ಮಟ್ಟದ ವಿಷಕಾರಿ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ.  ಹಾಗಾಗಿ, ಈ ವಿಷಕಾರಿ ಕೀಟ/ರೋಗ ನಾಶಕಗಳು ಪರಾಗ ಸ್ಪರ್ಶ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಕೀಟಗಳ ಸಂತಾನೋತ್ಪತ್ತಿ ಮೇಲೆ ಅಡ್ಡ ಪರಿಣಾಮ ಬೀರಿ ಅವುಗಳ ಸಂತತಿ ಕ್ಷೀಣಿಸುತ್ತಿದೆ.

ಉದಾ: ಜೇನುನೊಣಗಳು ಸುಮಾರು 11 ಗಂಟೆಯಿಂದ ಮೂರು ಗಂಟೆವರೆಗೆ ಹೂಗಳಲ್ಲಿ ಹೆಚ್ಚು ಓಡಾಟ ಮಾಡಿ ಪರಾಗ ಸ್ಪರ್ಶ ಕ್ರಿಯೆಗೆ ಸಹಕಾರಿಯಾಗಿವೆ. ಆದರೆ ರೈತರು ಇದೇ ಸಮಯದಲ್ಲಿ ಔಷಧಿ ಸಿಂಪರಣೆ ಮಾಡುವುದರಿಂದ ಜೇನು ನೊಣಗಳು ಬೆಳೆಗಳಿಂದ ದೂರವಿದ್ದು ಪರಾಗ ಸ್ಪರ್ಶ ಕ್ರಿಯೆಗೆ ಧಕ್ಕೆಯಾಗುತ್ತದೆ.

ಪರಾಗ ಸ್ಪರ್ಶಕ್ಕೆ ಒಳಗಾಗದ ಹೂವುಗಳು ಉದುರುತ್ತವೆ ಅಥವಾ ಕಳಚಿ ಬೀಳುತ್ತವೆ. ಈ ಸಮಸ್ಯೆ ನಿವಾರಣೆಗೆ ರೈತರು ಸಸ್ಯಜನ್ಯ ಕೀಟನಾಶಕಗಳು, ಕಷಾಯ, ಪರಿಸರ ತಂತ್ರಜ್ಞಾನ ಬಳಸುವ ಮುಖಾಂತರ ವಿಷಕಾರಿ ಕೀಟನಾಶಕಗಳ ಬಳಕೆ ತಗ್ಗಿಸಿ, ಜೇನು, ಇತರೆ ಪರಾಗ ಸ್ಪರ್ಶ ಕ್ರಿಯೆಗೆ ಸಹಕಾರಿಯಾಗಿರುವ ಕೀಟ ಪ್ರಪಂಚದ ಉನ್ನತಿಗೆ ಸಹಾಯ ಮಾಡಿದಂತಾಗುತ್ತದೆ.

ಪ್ರಖರ ಇಲ್ಲವೇ ಮಂದ ಬೆಳಕು: ಹೆಚ್ಚಿನ ಬೆಳಕು ಇಲ್ಲವೇ ಬೆಳಕಿನ ಅಭಾವದಿಂದಲೂ ಹೂವು ಉದುರುತ್ತವೆ. ಹಾಗಾಗಿ ಬೆಳೆಗಳನ್ನು ಹೆಚ್ಚು ನೆರಳಿರುವ ಪ್ರದೇಶದಲ್ಲಿ ಬೆಳೆದಾಗ ಸರಿಯಾದ ರೀತಿಯಲ್ಲಿ ಸೂರ್ಯ ಕಿರಣ ಬೆಳೆಯ ಮೇಲೆ ತಲುಪಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಉದಾ: ಬೆಳೆಯ ಸಾಲುಗಳು ಆದಷ್ಟು ಪೂರ್ವ ಪಶ್ಚಿಮ ದಿಕ್ಕಿಗೆ ಬರುವ ಹಾಗೆ ಬಿತ್ತನೆ ಕ್ರಮ ತೆಗೆದುಕೊಳ್ಳುವುದು. ಸವರುವಿಕೆ /ವಿರಳೀಕರಣ ಇತ್ಯಾದಿ ಕ್ರಮಗಳಿಂದ ಸುಲಲಿತವಾಗಿ ಬೆಳಕು, ಗಾಳಿ ಸಂಚರಿಸಿ ಬೆಳೆಗಳಲ್ಲಿ ಅಧಿಕ ಉತ್ಪತ್ತಿಗೆ ಸಹಕಾರಿಯಾಗುತ್ತದೆ.

ಚಳಿ ಮತ್ತು ಮಳೆ ವಾತಾವರಣ: ಜೇನು ನೊಣವಾಗಲೀ ಅಥವಾ ಇತರೆ ಕೀಟಗಳು ಚಳಿ ಹಾಗೂ ಮಳೆಯ ವಾತಾವರಣವಿದ್ದಾಗ ಪರಾಗ ಸ್ಪರ್ಶ ಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದರಿಂದಲೂ ಬೆಳೆಗಳಲ್ಲಿ ಹೂವುಗಳು ಉದುರುತ್ತವೆ.

ಲೇಖಕರು ಸಹ ಪ್ರಾಧ್ಯಾಪಕರು, ಮಂಡ್ಯ ಕೃಷಿ ವಿಜ್ಞಾನ ಕೇಂದ್ರ (ತೋಟಗಾರಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.