ADVERTISEMENT

ಪಾಲಿಹೌಸ್‌ನಲ್ಲಿ ಕಾರ್ನೇಶನ್‌

ಗಣಂಗೂರು ನಂಜೇಗೌಡ
Published 30 ಜನವರಿ 2017, 19:30 IST
Last Updated 30 ಜನವರಿ 2017, 19:30 IST
ಒಂದೂವರೆ ಎಕರೆ ಪ್ರದೇಶದಲ್ಲಿನ ಪಾಲಿಹೌಸ್‌ನಲ್ಲಿರುವ ಕಾರ್ನೇಶನ್‌ ಹೂದೋಟ
ಒಂದೂವರೆ ಎಕರೆ ಪ್ರದೇಶದಲ್ಲಿನ ಪಾಲಿಹೌಸ್‌ನಲ್ಲಿರುವ ಕಾರ್ನೇಶನ್‌ ಹೂದೋಟ   

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಚಂದಗಿರಿಕೊಪ್ಪಲು ಗ್ರಾಮದ ಜನರಿಗೆ ಕಾರ್ನೇಶನ್‌ ಹೂವಿನ ಪರಿಚಯವೇ ಇರಲಿಲ್ಲ. ಇಂಥದ್ದೊಂದು ಹೂವನ್ನು ಆ ಭಾಗದವರು ಕಂಡದ್ದೇ ಇಲ್ಲ. ಆದರೆ ಇದೀಗ ಅಲ್ಲಿ ಕಾರ್ನೇಶನ್‌ ಘಮಲು ಎಲ್ಲೆಡೆ ಪಸರಿಸುತ್ತಿದೆ.

ಇದಕ್ಕೆ ಕಾರಣ ಮೋಹನ್‌ ಎಂಬ ಪುಷ್ಪ ಬೆಳೆಗಾರ. ಮೋಹನ್‌ ಅವರು ಒಂದೂವರೆ ಎಕರೆ ವಿಸ್ತೀರ್ಣ (4,132 ಚದರ ಮೀಟರ್‌)ದಲ್ಲಿ ಕಾರ್ನೇಶನ್‌ ಬೆಳೆದಿರುವುದು ಮಾತ್ರವಲ್ಲದೇ, ನಿರೀಕ್ಷೆಗೂ ಮೀರಿ ಫಸಲು ಕಂಡಿದ್ದಾರೆ. ಒಟ್ಟು ಒಂಬತ್ತು ಸಾವಿರ ಸಸಿಗಳನ್ನು ಬೆಳೆಸಲಾಗಿದ್ದು, ಕೆಂಪು, ತಿಳಿಗೆಂಪು, ಬಿಳಿ, ಹಳದಿ, ತಿಳಿ ಹಳದಿ, ನೇರಳೆ, ಢಾಳ ನೇರಳೆ ಮಾತ್ರವಲ್ಲದೆ ದ್ವಿ ಬಣ್ಣದ (ಬೈ ಕಲರ್‌)ಕಾರ್ನೇಶನ್‌ ಹೂಗಳೂ ಮೋಹನ್‌ ಅವರ ತೋಟದಲ್ಲಿ ಅರಳುತ್ತಿವೆ.

ಪಾಲಿಹೌಸ್‌ ಮತ್ತು ಹನಿ ನೀರಾವರಿ ಪದ್ಧತಿಯಲ್ಲಿ ಈ ಗಿಡಗಳನ್ನು ಬೆಳೆಸಿದ್ದಾರೆ. ಒಂದು ತಿಂಗಳಿನಿಂದ ಹೂ ಕೊಯ್ಯಲಾಗುತ್ತಿದ್ದು, ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇದೀಗ ಮೋಹನ್‌ ಅವರ ತೋಟ ಆ ಸುತ್ತಮುತ್ತಲಿನ ಜನರ ಕುತೂಹಲದ ತಾಣವಾಗಿದೆ. ಮೋಹನ್‌ ಅವರ ತೋಟಕ್ಕೆ ಬಂದು ಹೊಸ ಹೂವಿನ ಬಗ್ಗೆ  ಅಲ್ಲಿನವರು ಮಾಹಿತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ‘ಫ್ಲೋರೆನ್‌್ಸ ಫ್ಲೋರಾ’ ಮತ್ತು ‘ಜೋಫಾರ್‌ ಫ್ಲಾರಿಟೆಕ್‌’ ಫಾರಂಗಳಿಂದ ಕಾರ್ನೇಶನ್‌ ಸಸಿಗಳನ್ನು ತಂದು ಬೆಳೆಸಲಾಗಿದೆ. ಪ್ರತಿ ಸಸಿಯನ್ನು ₹10ರ ದರದಲ್ಲಿ ಖರೀದಿಸಿ ತಂದು ನಾಟಿ ಮಾಡಿದ್ದಾರೆ.

ಹಾಲೆಂಡ್‌, ಇಸ್ರೇಲ್‌, ಅಮೆರಿಕದಲ್ಲಿ ಹೆಚ್ಚು ಬೆಳೆಯಲಾಗುವ  ಕಾರ್ನೇಶನ್‌ ಹೂ ಗಿಡ  ಅತಿ ಸೂಕ್ಷ್ಮ ಪ್ರಭೇದದ ಸಸ್ಯ. ಒಂದು ಆರೋಗ್ಯವಂತ ಕಾರ್ನೇಶನ್‌ ಗಿಡ ತನ್ನ ಜೀವಿತದಲ್ಲಿ 10ರಿಂದ 12 ಹೂಗಳನ್ನು ಕೊಡುತ್ತದೆ. ಪ್ರತಿ ಹಂತದಲ್ಲಿ ಎಚ್ಚರಿಕೆಯಿಂದ ನೋಡಿಕೊಂಡರೆ ನಿರೀಕ್ಷಿತ ಲಾಭ ಖಚಿತ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.


ಮಾರುಕಟ್ಟೆ: ಮೋಹನ್‌ ಅವರ ತೋಟದಲ್ಲಿ ಪ್ರತಿ ಕೊಯ್ಲಿಗೆ 500ರಿಂದ 600 ಹೂಗಳು ಸಿಗುತ್ತಿವೆ. 20 ಹೂಗಳ ಒಂದು ಗುಚ್ಛ ಮಾಡಿ, ಕಾಗದ ಸುತ್ತಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ದಿನ ಬಿಟ್ಟು ದಿನ ಹೂ ಕೊಯ್ಯಲಾಗುತ್ತಿದ್ದು, ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಹೂವಿನ ಮಾರುಕಟ್ಟೆಗೆ ಹೂ ಕೊಂಡೊಯ್ದು ಮಾರಾಟ ಮಾಡಲಾಗುತ್ತಿದೆ. ಹೂ ತೆಗೆದುಕೊಂಡ ಹೋದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗುತ್ತಿದೆ. ಬೇಡಿಕೆಯಷ್ಟು ಹೂ ಪೂರೈಸಲು ಆಗುತ್ತಿಲ್ಲ ಎನ್ನುತ್ತಾರವರು.

ಗಿಡದಿಂದ ಕಿತ್ತ 15 ದಿನಗಳವರೆಗೆ ತಾಜಾ ಆಗಿಯೇ ಇರುವುದರಿಂದ ಈ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಸಕ್ಕರೆ ಬೆರೆಸಿದ ನೀರಿನಲ್ಲಿ ಹೂಗಳ ಕಾಂಡವನ್ನು ಅದ್ದಿ ಇಟ್ಟರೆ 25 ದಿನಗಳವರೆಗೂ ಹೂಗಳು ನಗುತ್ತಿರುತ್ತವೆ. ನಿರಂತರವಾಗಿ ಲಘು ಸುವಾಸನೆ ಬೀರುವುದು ಈ ಹೂವಿನ ಮತ್ತೊಂದು ವಿಶೇಷ.

‘ಬಿಡಿ ಕಾರ್ನೇಶನ್‌ ಹೂವಿಗೆ 4–8 ರೂಪಾಯಿವರೆಗೆ ಬೆಲೆ ಇದೆ. ಕೆಲವೊಮ್ಮೆ ಒಂದು ಹೂ 10 ರೂಪಾಯಿವರೆಗೆ ಮಾರಾಟವಾಗುತ್ತದೆ. ಬೆಂಗಳೂರಿನಲ್ಲಿ ಐಶಾರಾಮಿ ಹೋಟೆಲ್‌ಗಳವರು ಇದನ್ನು ಹೆಚ್ಚಾಗಿ ಖರೀದಿಸುತ್ತಾರೆ. ಸಿರಿವಂತರ ಮದುವೆ ಮನೆಗಳ ಅಲಂಕಾರಕ್ಕಾಗಿಯೂ ಈ ಹೂವಿಗೆ ಅಧಿಕ ಬೇಡಿಕೆ ಇದೆ. ಬೆಂಗಳೂರು ಮಾರುಕಟ್ಟೆಯಿಂದ ಮುಂಬೈ, ದೆಹಲಿ, ಕೋಲ್ಕತ್ತಾ ಮಾತ್ರವಲ್ಲದೆ ಹೊರ ದೇಶಗಳಿಗೂ ಕಾರ್ನೇಶನ್‌ ರಫ್ತಾಗುತ್ತದೆ. 5 ಸಾವಿರಕ್ಕೂ ಹೆಚ್ಚು ಕಾರ್ನೇಶನ್‌ ಹೂ ಗುಚ್ಛಗಳನ್ನು ಸರಬರಾಜು ಮಾಡುವಂತಾದರೆ ನೇರವಾಗಿ ನಾವೇ ವಿದೇಶಕ್ಕೆ ರಫ್ತು ಮಾಡಿ ಹೆಚ್ಚು ಲಾಭ ಗಳಿಸಬಹುದು’ ಎನ್ನುತ್ತಾರೆ ಪುಷ್ಪ ಕೃಷಿಕ ಮೋಹನ್‌.

ಸರ್ಕಾರದ ನೆರವು: ‘ಪಾಲಿಹೌಸ್‌ ಮತ್ತು ಹನಿ ನೀರಾವರಿ ಪದ್ಧತಿಯಲ್ಲಿ ಕಾರ್ನೇಶನ್‌ ಹೂ ಬೆಳೆಯುವವರಿಗೆ ಸರ್ಕಾರದಿಂದ ₹20 ಲಕ್ಷದವರೆಗೆ ಸಹಾಯ ಧನ ಸಿಗುತ್ತದೆ.ಒಮ್ಮೆ ಪಾಲಿಹೌಸ್‌ ನಿರ್ಮಿಸಿಕೊಂಡರೆ ಅದರಲ್ಲಿ 5ರಿಂದ 6 ವರ್ಷಗಳ ಕಾಲ ಹೂ ಮತ್ತು ತರಕಾರಿ ಬೆಳೆ ಬೆಳೆಯಬಹುದು. ವೈಜ್ಞಾನಿಕ ವಿಧಾನದಲ್ಲಿ, ಬೇಡಿಕೆ ಇರುವ ತರಕಾರಿ ಮತ್ತು ಪುಷ್ಪ ಕೃಷಿ ಮಾಡುವವರಿಗೆ ಬ್ಯಾಂಕ್‌ಗಳೂ ಸಾಲ ಕೊಡುತ್ತವೆ. ರೈತರು ಭತ್ತ, ಕಬ್ಬು, ತೆಂಗು ಇತರ ಸಾಂಪ್ರದಾಯಿಕ ಬೆಳೆಗೆ ಜೋತು ಬೀಳದೆ ಲಾಭದಾಯಕ ತರಕಾರಿ ಅಥವಾ ಪುಷ್ಪ ಕೃಷಿಯತ್ತ ಮುಖ ಮಾಡಬೇಕು’ ಎನ್ನುವುದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್‌ ಕುಮಾರ್‌ ಅವರ ಸಲಹೆ.

‘ಕಾರ್ನೇಶನ್‌ ಹೂ ಬೆಳೆಗೆ ಪೈರು ಖರೀದಿ, ಪಾಲಿಹೌಸ್‌ ನಿರ್ಮಾಣ, ಕೂಲಿ ಎಲ್ಲ ಸೇರಿ ಇದುವರೆಗೆ ₹70 ಲಕ್ಷ ಹಣ ಖರ್ಚಾಗಿದೆ. ಇದು ವಿದೇಶಿ ಸಸ್ಯವಾದರೂ ಲೋಕಪಾವನಿ ನದಿ ದಡದಲ್ಲಿ ನಿರೀಕ್ಷೆಯಂತೆ ಬೆಳೆದಿದೆ. ಈಗಾಗಲೇ ಹೂ ಮಾರಾಟದಿಂದ ಹಣ ಗಳಿಕೆ ಆರಂಭವಾಗಿದೆ. ನಿರೀಕ್ಷಿತ ಬೆಲೆ ಸಿಕ್ಕರೆ ಒಂದೂವರೆ ವರ್ಷದಲ್ಲಿ ಎಲ್ಲ ಖರ್ಚು ಬರುತ್ತದೆ. ನಂತರದ ಒಂದೂವರೆ ವರ್ಷ ಲಾಭ ಎಣಿಸಿಕೊಳ್ಳಬಹುದು’ ಎನ್ನುತ್ತಾರೆ ಮೋಹನ್‌. ಅವರ ಸಂಪರ್ಕಕ್ಕೆ: 9901706753. 

ಕಾರ್ನೇಶನ್‌ ಬೆಳೆಯಿರಿ ಹೀಗೆ
* ಕಾರ್ನೇಶನ್‌ ಗಿಡವನ್ನು ನಾಟಿ ಮಾಡುವ ಮುನ್ನ ಫಲವತ್ತಾದ ಮಣ್ಣಿನ ಬೆಡ್‌ ತಯಾರಿಸಿಕೊಳ್ಳಬೇಕು

* ಕೆಮ್ಮಣ್ಣು, ಕೊಟ್ಟಿಗೆ ಗೊಬ್ಬರ, ಸ್ವಲ್ಪ ಪ್ರಮಾಣದಲ್ಲಿ ತೆಂಗಿನ ನಾರು (ಕೊಕೊ ಪಿಟ್‌) ಮತ್ತು ಭತ್ತದ ಜೊಳ್ಳು ಸೇರಿಸಿ ಬೆಡ್‌ ಸಿದ್ಧಪಡಿಸಿಕೊಳ್ಳಬೇಕು.

* ಸಿದ್ಧಪಡಿಸಿದ ಬೆಡ್‌ಗೆ ನಿರಂತರ ನೀರುಣಿಸಿ ಮೃದು ಮಣ್ಣಿನ ಫಲವತ್ತತೆ ವೃದ್ಧಿಸುವಂತೆ ಮಾಡಬೇಕು

* ಕಾರ್ನೇಶನ್‌ ಗಿಡ ನಾಟಿ ಮಾಡುವ ಮೊದಲೇ ಪಾಲಿ ಹೌಸ್‌ ನಿರ್ಮಿಸಿಕೊಳ್ಳಬೇಕು. ಅದರ ಒಳಗೆ ಸದಾ ಕಾಲವೂ 35 ರಿಂದ 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವಂತೆ ನೋಡಿಕೊಳ್ಳಬೇಕು

ADVERTISEMENT

* ಒಂದು ಬೆಡ್‌ನಲ್ಲಿ 4 ಸಾಲುಗಳಲ್ಲಿ ಪೈರು ನಾಟಿ ಮಾಡಿದರೆ ಒಳಿತು. ಆದರೆ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಕನಿಷ್ಠ 20 ಸೆಂ.ಮೀ. ಅಂತರ ಇರಬೇಕು. 25 ಸೆಂ.ಮೀ ಅಂತರದಲ್ಲಿ ಹನಿ ನೀರಿನ ನಳಿಕೆ ಅಳವಡಿಸಿ ದಿನಕ್ಕೆ 15ನಿಮಿಷಗಳ ಕಾಲ ನೀರುಣಿಸಬೇಕು

* ವಾರಕ್ಕೆ ಒಮ್ಮೆ ಕೀಟನಾಶಕ ಸಿಂಪಡಿಸಬೇಕು

* ಹೀಗೆ ಬೆಳೆಸಿದ ಕಾರ್ನೇಶನ್‌ ಗಿಡ 3 ತಿಂಗಳಿಗೆ ಹೂ ಕೊಡಲಾರಂಭಿಸುತ್ತದೆ. ಮೂರು ವರ್ಷಗಳವರೆಗೆ ಅದು ಸತತವಾಗಿ ಹೂ ಕೊಡುತ್ತಲೇ ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.