ADVERTISEMENT

ಬದುಕು ಬದಲಿಸಿತು ಆಡು ಸಾಕಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2016, 19:30 IST
Last Updated 18 ಜುಲೈ 2016, 19:30 IST
ಬದುಕು ಬದಲಿಸಿತು ಆಡು ಸಾಕಣೆ
ಬದುಕು ಬದಲಿಸಿತು ಆಡು ಸಾಕಣೆ   

ಇತ್ತೀಚಿನ ವರ್ಷಗಳಲ್ಲಿ ನಿರಂತರ ಅನಾವೃಷ್ಟಿ, ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕದ ಸಂಕಷ್ಟ...
ಇವಕ್ಕೆಲ್ಲಾ ಸಡ್ಡು ಹೊಡೆದು ಪರಿಸ್ಥಿತಿಯನ್ನು ನಿಭಾಯಿಸಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕರೋಶಿಯ ವೀಣಾ ಶಿವಬಾಳು ನಿರ್ವಾಣಿ ಕಂಡುಕೊಂಡ ಮಾರ್ಗ ಆಡು ಸಾಕಣೆ.

ಆಡು ಸಾಕಣೆ ಹೆಚ್ಚಾಗಿ ಪುರುಷರೇ ಮಾಡುತ್ತಿರುವ ಈ ಹೊತ್ತಿನಲ್ಲಿ ವೀಣಾ ಅವರು ಬೋಯರ್, ಜಮುನಾಪಾರಿ, ಶಿರೋಹಿ, ಉಸ್ಮಾನಾಬಾದಿ ಮೊದಲಾದ ಪ್ರಸಿದ್ಧ ತಳಿಗಳ 94 ಆಡು ಮತ್ತು  ಹೋತಗಳನ್ನು ಸಾಕುವ ಮೂಲಕ ಆರ್ಥಿಕ ಸಬಲತೆಯತ್ತ ಮುಂದಡಿ ಇಟ್ಟಿದ್ದಾರೆ.

ಬಿ.ಎ ಪದವೀಧರರಾಗಿರುವ ವೀಣಾ ನೌಕರಿಯನ್ನು ಅರಸುವ ಬದಲು ಕಂಡುಕೊಂಡ ಕ್ಷೇತ್ರ ಕೃಷಿ. ಆದರೆ ಕೃಷಿಯಲ್ಲಿಯೂ ಆಡು ಸಾಕಣೆ ಅವರಿಗೆ ಇಷ್ಟವಾಗಿ ಕಂಡಿತು. ಆರಂಭದಲ್ಲಿ ಐದು ಆಡುಗಳಿಂದ ಅವರು ಸಾಕಣೆ ಆರಂಭಿಸಿದರು. ‘ಒಣ ಪ್ರದೇಶಗಳಲ್ಲಿ ಆಡು ಸಾಕಣೆಯಿಂದಲೇ ಆರ್ಥಿಕ ಸಬಲತೆ ಹೊಂದಲು ಸಾಧ್ಯ ಎಂಬುದನ್ನು ಮನಗಂಡೆ.

2013ರಲ್ಲಿ ₹50 ಸಾವಿರ ಪ್ರಾರಂಭಿಕ ಬಂಡವಾಳ ತೊಡಗಿಸಿ ಒಂದು ಜಮುನಾಪಾರಿ ಹೋತ ಮತ್ತು 5 ಆಡುಗಳ ಸಾಕಾಣಿಕೆ ಆರಂಭಿಸಿದೆ. ಅವುಗಳ ವಂಶಾಭಿವೃದ್ಧಿಯಿಂದಾಗಿ ಎರಡು ವರ್ಷಗಳಲ್ಲಿ ಸುಮಾರು 25ರಿಂದ30 ಆಡುಗಳಾದವು. ಅವುಗಳ ಪ್ರಮಾಣವೀಗ 94 ಆಗಿದೆ’ ಎನ್ನುತ್ತಾರೆ ವೀಣಾ.

ಸದ್ಯ ಆಡು ಸಾಕಾಣಿಕೆಗೆ ₹8 ಲಕ್ಷ ಬಂಡವಾಳ ತೊಡಗಿಸಲಾಗಿದ್ದು, ಸುಮಾರು ₹3 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಶೆಡ್‌ ನಿರ್ಮಿಸಿದ್ದಾರೆ. ವರ್ಷವೊಂದಕ್ಕೆ ಆಡು ಸಾಕಾಣಿಕೆಯಿಂದ ಖರ್ಚು ವೆಚ್ಚ ಕಳೆದು ವಾರ್ಷಿಕ ಕನಿಷ್ಠ ₹5 ಲಕ್ಷ ಆದಾಯ ಗಳಿಸುವ ಲೆಕ್ಕಾಚಾರ ವೀಣಾ ನಿರ್ವಾಣಿ ಅವರದ್ದು. ಇವುಗಳ ಹಿಕ್ಕೆ ಮತ್ತು ಮೂತ್ರವನ್ನು ಕೃಷಿಗೆ ಗೊಬ್ಬರವಾಗಿ ಬಳಸಲಾಗುತ್ತಿದೆ.

ಸಖತ್‌ ಮಾರುಕಟ್ಟೆ
ಸಾಂಪ್ರದಾಯಿಕ ಸ್ಥಳೀಯ ತಳಿಗಳ ಆಡುಗಳನ್ನು ಸಾಕುವುದರಿಂದ ತೂಕ ಮತ್ತು ಮಾಂಸದ ಇಳುವರಿ ಕಡಿಮೆ. ಹಾಗಾಗಿ ಆಡು ಸಾಕಾಣಿಕೆಗೆ ವಾಣಿಜ್ಯಿಕ ಆಯಾಮ ನೀಡಿ ಸುಧಾರಿತ ತಳಿಗಳ ಲಾಭದಾಯಕ ಆಡು ಸಾಕಾಣಿಕೆ ಅನಿವಾರ್ಯ. ಹಾಗಾಗಿ ಉತ್ತರ ಭಾರತ ಮೂಲದ ಜಮುನಾಪಾರಿ, ಪಂಜಾಬ್ ಮೂಲದ ಬೀಟಲ್‌, ಉಸ್ಮಾನಾಬಾದಿ, ಸುಜೋತ್‌, ರಾಜಸ್ತಾನ ಮೂಲದ ಶಿರೋಹಿ, ಆಸ್ಟ್ರೇಲಿಯಾ ಮೂಲದ ಬೋಯರ್ ತಳಿಯ ಮೇಕೆಗಳನ್ನು ಸಾಕಾಣಿಕೆ ಮಾಡಿರುವುದಾಗಿ ಹೇಳುತ್ತಾರೆ ವೀಣಾ.

ಮಾಂಸದ ತಳಿಯ ಈ ಮೇಕೆ ಮತ್ತು ಹೋತಗಳಿಗೆ ಪುಣೆ, ಫಲ್ಟನ್, ಗಡಹಿಂಗ್ಲಜ ಹಾಗೂ ಸ್ಥಳೀಯವಾಗಿ ಬಡಿಗವಾಡ, ಘಟಪ್ರಭಾ ಮೊದಲಾದ ಕಡೆಗಳಲ್ಲಿ ಉತ್ತಮ ಮಾರುಕಟ್ಟೆ ಇದೆ. ಜಮುನಾಪಾರಿ ತಳಿಯ 2 ವರ್ಷದ ಆಡಿಗೆ ಸದ್ಯ ₹15 ರಿಂದ 20 ಸಾವಿರ ಬೆಲೆ ಇದೆ. ಬೀಟಲ್‌, ಸುಜೋತ್‌ ತಳಿಯ ಸಜೀವ ಮೇಕೆ ಪ್ರತಿ ಕೆ.ಜಿ.ಗೆ ₹550 ಬೆಲೆ ಬಾಳುತ್ತಿವೆ.

ಅತ್ಯಂತ ದುಬಾರಿಯಾಗಿರುವ ಶುದ್ಧ ಬೋಯರ್‌ ತಳಿಯ ಸಜೀವ ಹೋತ ಪ್ರತಿ ಕೆ.ಜಿ.ಗೆ ಇಂದಿನ ಮಾರುಕಟ್ಟೆಯಲ್ಲಿ ₹1750 ಹಾಗೂ ಹೆಣ್ಣು ಬೋಯರ್‌ ₹4000 ಪ್ರತಿ ಕೆ.ಜಿಗೆ ಬೆಲೆ ಹೊಂದಿದೆ. ಶುದ್ಧ ಬೋಯರ್‌ ತಳಿಯ 3 ತಿಂಗಳ ಮರಿ ₹25 ರಿಂದ ₹28 ಸಾವಿರಕ್ಕೆ ಮಾರಾಟವಾಗುತ್ತದೆ. ಆದರೆ, ಶುದ್ಧ ಬೋಯರ್‌ ತಳಿಯ ಆಡು ಎಲ್ಲ ಹವಾಮಾನಕ್ಕೆ ಹೊಂದಿಕೊಳ್ಳುವುದು ಕಷ್ಟ. ಉಸ್ಮಾನಾಬಾದಿ ತಳಿಯೊಂದಿಗೆ ಇದನ್ನು ಮಿಶ್ರತಳಿ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಬೇಕು.

‘ಆಡಿನ ಹಾಲು ಆರೋಗ್ಯಕ್ಕೆ ಉತ್ತಮ. ಔಷಧೀಯ ಗುಣಗಳೂ ಇದರಲ್ಲಿವೆ. ಆದರೆ, ಸ್ಥಳೀಯವಾಗಿ ಆಡಿನ ಹಾಲಿಗೆ ಮಾರುಕಟ್ಟೆ ಇಲ್ಲ. ಹೀಗಾಗಿ ಹಾಲನ್ನು ಸಂಪೂರ್ಣವಾಗಿ ಮರಿಗಳಿಗೆ ಬಿಡುತ್ತೇವೆ. ಇದರಿಂದ ಮರಿಗಳ ಬೆಳವಣಿಗೆಯೂ ಶೀಘ್ರವಾಗುತ್ತದೆ’ ಎಂಬ ಮಾಹಿತಿ ನೀಡುತ್ತಾರೆ ಅವರು.

ಆಹಾರ ನಿರ್ವಹಣೆ ಸುಲಭ: ಆಡುಗಳಿಗೆ ಯಾದವಾಡದಿಂದ ಒಣ ಮೇವಿನ ಹೊಟ್ಟು ತರಿಸುತ್ತಾರೆ. ಇನ್ನುಳಿದಂತೆ ಅವರ ಹೊಲದಲ್ಲಿಯೇ ಬೆಳೆದಿರುವ ಗೋವಿನ ಜೋಳ, ಕಡಲೆ, ಗೋಧಿ ನುಚ್ಚನ್ನು ಕೈತಿಂಡಿಯಾಗಿ ನೀಡುತ್ತಾರೆ.

ಆಗಾಗ ಬಹುವಾರ್ಷಿಕ ಮೇವುಗಳಾದ ಚೊಗಚಿ, ಹಿಪ್ಪುನೇರಳೆ ಮೊದಲಾದ ಹಸಿ ಮೇವನ್ನೂ ನೀಡುತ್ತಾರೆ.  ಅಲ್ಲದೇ ಆಡು ಮತ್ತು ಹೋತಗಳ ಶೀಘ್ರ ಬೆಳವಣಿಗೆಗೆ ಪೌಷ್ಟಿಕ ಆಹಾರ ಒದಗಿಸುತ್ತಾರೆ. ‘ಆಡುಗಳಿಗೆ ಬಹಳ ಮೇವು ಬೇಕಾಗಿಲ್ಲ. ಎಲೆಗಳನ್ನು ತಿಂದರೂ ಬದುಕುತ್ತವೆ.

ಆಡುಗಳಿಗೆ ಕೈತಿಂಡಿಯಾಗಿ ನೀಡುವ ದ್ವಿದಳ ಧಾನ್ಯ, ಹಸಿ ಮೇವು ನಮ್ಮ ಹೊಲದಲ್ಲಿಯೇ ಬೆಳೆಯುವುದರಿಂದ ಆಹಾರ ವೆಚ್ಚದಲ್ಲೂ ಕಡಿತವಾಗುತ್ತದೆ. ಆಡುಗಳಿಗೆ ವೈದ್ಯಕೀಯ ಚಿಕಿತ್ಸೆ, ಪೌಷ್ಟಿಕ ಆಹಾರಕ್ಕೆ ಮಾತ್ರ ಖರ್ಚಾಗುತ್ತದೆ.

ಆಡುಗಳು ಆಗಾಗ ಜ್ವರ, ನೆಗಡಿ ಮತ್ತು ಕೆಮ್ಮು ಬಾಧೆಗೆ ಒಳಗಾಗುತ್ತವೆ. ಸೂಕ್ತ ವೈದ್ಯಕೀಯ ಕಾಳಜಿ, ಕಾಲ ಕಾಲಕ್ಕೆ ಮೇವು, ಉತ್ತಮ ಆರೈಕೆ ಮಾಡಿದರೆ ಆಡು ಸಾಕಾಣಿಕೆಯಿಂದ ಉತ್ತಮ ಆರ್ಥಿಕ ಲಾಭ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಅವರು.

ಸಂಪರ್ಕಕ್ಕೆ : 9945031775

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.