ADVERTISEMENT

ಬರಡು ಭೂಮಿಯಲಿ ಬಹುಬೆಳೆ

ಮಂಜುನಾಥ ಹೊಳಲು
Published 28 ಸೆಪ್ಟೆಂಬರ್ 2015, 19:30 IST
Last Updated 28 ಸೆಪ್ಟೆಂಬರ್ 2015, 19:30 IST

ಇದು ನಾಲ್ಕು ವರ್ಷದ ಹಿಂದೆ ಕಲ್ಲು ಭೂಮಿ. ಈಗ ಗಿಡ-ಮರಗಳ ಹಸಿರು ತೋಟ ಮಾತ್ರವಲ್ಲದೇ ವೈವಿಧ್ಯ ಜೀವಸಂಕುಲಗಳ ತಾಣವೂ ಹೌದು. ಕೃಷಿ ಮಾಡುವ ಮನಸ್ಸಿದ್ದರೆ ಬರಡು ಭೂಮಿಯಲ್ಲೂ ಬಂಗಾರ ಬೆಳೆಯಬಹುದು ಎಂದು ರಾಣೆಬೆನ್ನೂರು ತಾಲ್ಲೂಕಿನ ಬುಡಪನಹಳ್ಳಿ ಗ್ರಾಮದ ಪಂಚಾಕ್ಷರಯ್ಯ ರುದ್ರದೇವರಮಠ ತೋರಿಸಿಕೊಟ್ಟಿರುವ ಪರಿ ಇದು. ರಾಣೆಬೆನ್ನೂರು ಕೇಂದ್ರದಿಂದ ಸನಿಹದಲ್ಲಿರುವ ಇವರ ಕರ್ಮಭೂಮಿಯಲ್ಲೀಗ ಹಸಿರು ಚಿಮ್ಮಿದೆ.

ಸುಸ್ಥಿರ ಆದಾಯದ ಮೂಲ ಕೇಂದ್ರ ಬಿಂದು ಬಹುಬೆಳೆ ಪದ್ಧತಿ. ಈ ಪದ್ಧತಿಯಲ್ಲಿ ನಿರಂತರವಾಗಿ ಕೆಲಸದ ಜೊತೆ ಆದಾಯವೂ ಸಿಗುತ್ತದೆ ಎಂಬುದು ಇವರ ನಿಲುವು. ಆ ದಿನಗಳಲ್ಲೇ ವಿಜ್ಞಾನ ಪದವಿಯನ್ನು ಪಡೆದುಕೊಂಡವರು ಪಂಚಾಕ್ಷರಯ್ಯ. ಸರ್ಕಾರಿ ನೌಕರಿಯ ಸಹವಾಸ ಬೇಡವೆಂದು ಕೃಷಿಯನ್ನು ಆರಂಭಿಸಿದವರು.

ಆದರೆ ತಮ್ಮಲ್ಲಿದ್ದ 10 ಎಕರೆ ಕಲ್ಲು ಭೂಮಿಯಲ್ಲಿ ಕೃಷಿ ಮಾಡುವುದು ಹೇಗೆ ಎಂಬ ಚಿಂತೆ ಕಾಡಿತು. ಅವರ ಈ ಚಿಂತೆಯನ್ನು ಪರಿಹರಿಸಿದವರು ಹಾವೇರಿಯ ಶಿವಾನಂದಪ್ಪ ಎನ್ನುವ ಕೃಷಿಕ. ಸುಸ್ಥಿರ ತೋಟಗಾರಿಕಾ ಕೃಷಿ ಮಾಡುವಂತೆ ಸೂಚಿಸಿ ಪೂರಕ ತಾಂತ್ರಿಕ ಸಲಹೆ ನೀಡಿದರು. ಆ ಸಲಹೆಯಂತೆ ನಡೆದುದೇ ಇಂದೀಗ ಕಲ್ಲು–ಮುಳ್ಳು ಇದ್ದ ಜಾಗದಲ್ಲೆಲ್ಲಾ ಹಸಿರಿನ ಸಿರಿ ಹರಿದಿದೆ.

ಇವರು ಒತ್ತು ನೀಡಿರುವುದು ತೋಟಗಾರಿಕಾ ಬೆಳೆಗಳಿಗೆ. ಪೇರಳೆ, ಸಪೋಟ, ನಿಂಬೆ, ಮಾವು, ಕರಿಬೇವು ಇತ್ಯಾದಿ ಬೆಳೆಗಳನ್ನು ಬೆಳೆಸಿದ್ದಾರೆ. ‘ತೋಟಗಾರಿಕಾ ಬೆಳೆಗಳಿಂದ ಕಾರ್ಮಿಕರ ಸಮಸ್ಯೆ ಬಂದಿಲ್ಲ. ಆರಂಭದ ನಾಲ್ಕು ವರ್ಷ ತೋಟಗಾರಿಕಾ ಬೆಳೆಗಳನ್ನು ಚೆನ್ನಾಗಿ ನೋಡಿಕೊಂಡರೆ ಮುಂದಿನ 30–40 ವರ್ಷ ನಿರಂತರ ಆದಾಯ ಬರುತ್ತದೆ. ಹಾಗಾಗಿ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಲಾಗಿದೆ. ನೀರನ್ನು ಮಿತವಾಗಿ ಬಳಸಬೇಕು ಎನ್ನುವ ಕಾರಣಕ್ಕಾಗಿ ಹನಿ ನೀರಾವರಿ ಅಳವಡಿಸಿದೆ’ ಎನ್ನುತ್ತಾರೆ ಪಂಚಾರಕ್ಷಯ್ಯ.

ವರ್ಷದಲ್ಲಿ ಎರಡು ಸಲ ಸಾವಯವ ಗೊಬ್ಬರವನ್ನು ಪ್ರತಿ ಗಿಡಕ್ಕೆ ನೀಡುತ್ತಾರೆ. ತಿಪ್ಪೆಗೊಬ್ಬರ ಸಹಾ ಹಾಕುತ್ತಾರೆ.  ಕಸಿ ಗಿಡಗಳನ್ನು ನಾಟಿ ಮಾಡಲು ವೈಜ್ಞಾನಿಕ ಅಳತೆಯೊಂದಿಗೆ ಗುಂಡಿ ತೋಡಿ, ಅದಕ್ಕೆ ಬೇವಿನಹಿಂಡಿ ಹಾಗೂ ತಿಪ್ಪೆಗೊಬ್ಬರ ಹಾಕಿದ್ದಾರೆ.

ಬಹುಬೆಳೆ ಪದ್ಧತಿಯ ಪ್ರಯೋಗ
ತೋಟಗಾರಿಕೆ ಬೆಳೆಯೊಂದಿಗೆ, ಕೃಷಿ ಬೆಳೆಯನ್ನೂ ಬಹುಬೆಳೆ ಪದ್ಧತಿ ಅನುಸರಿಸಿ ಬೆಳೆಯುತ್ತಿದ್ದಾರೆ. ಅರ್ಧ ಎಕರೆಯಲ್ಲಿ ಏಕದಳ ಮೇವು ಹಾಗೂ ಇನ್ನುಳಿದ ಅರ್ಧ ಎಕರೆಯಲ್ಲಿ ಅಲಸಂದೆ ಬೆಳೆದಿದ್ದಾರೆ. ಸಪೋಟ ತೋಟಗಾರಿಕೆ ಬೆಳೆಯೊಂದಿಗೆ ಮೆಣಸಿನಕಾಯಿ, ಸೊಪ್ಪಿನ ತರಕಾರಿ, ಈರುಳ್ಳಿ ಹಾಗೂ ಅಲಸಂದೆ ಮಿಶ್ರಬೆಳೆ ಬೆಳೆದಿದ್ದಾರೆ. ಹೊಲದ ಸುತ್ತಲೂ ವಿವಿಧ ಬಗೆಯ ಕಾಡುಮರಗಳನ್ನು ಬೆಳೆಸಿದ್ದಾರೆ. ನೈಸರ್ಗಿಕವಾಗಿ ಬೆಳೆದ ಮರಗಳನ್ನು ಕಡಿದಿಲ್ಲ. ‘ಮರಗಳು ಕೃಷಿಗೆ ಪೂರಕ. ಹಾಗಾಗಿ ಹೆಚ್ಚು ಮರಗಳು ಇದ್ದರೆ ಕೃಷಿ ಸುಸ್ಥಿರ ಆಗುತ್ತದೆ’ ಎಂಬುದು ಅವರ ಅಭಿಮತ.  

ಕಳೆದ ಮೂರು ವರ್ಷಗಳಲ್ಲಿ ಪೇರಳೆ ಹಣ್ಣಿನಿಂದ 38ಸಾವಿರ ರೂಪಾಯಿ, ಕರಿಬೇವು ಬೆಳೆಯಿಂದ ಮೂವತ್ತು ನಿಂಬೆ ಹಾಗೂ ಕರಿಬೇವು ಬೆಳೆಯಿಂದ ಇನ್ನೂ ಇಳುವರಿ ಬರಬೇಕಿದೆ. ತಮಗೆ ಬೇಕಾದ ಬೇಳೆ-ಕಾಳುಗಳನ್ನು ಸ್ವತಃ ಬೆಳೆದುಕೊಳ್ಳುತ್ತಾರೆ. ಅದರಿಂದಲೂ ವರ್ಷಕ್ಕೆ ನಾಲ್ಕೈದು ಸಾವಿರ ಆದಾಯ ಬರುತ್ತದೆ ಎಂಬ ಲೆಕ್ಕಾಚಾರ ಅವರದ್ದು.

‘ಬಹುಬೆಳೆ ಪದ್ಧತಿ ಆರಂಭ ಮಾಡಿ ನಾಲ್ಕು ವರ್ಷ ಕಳೆದಿದೆ. ಅಲ್ಪ ಆದಾಯವೂ ಬಾರದ ಭೂಮಿ ಈಗ ವರ್ಷಕ್ಕೆ ಅರವತ್ತು ಸಾವಿರ ಆದಾಯ ಬರುವಷ್ಟು ಸದೃಢ ಆಗಿದೆ. ಇನ್ನು ನಾಲ್ಕು ವರ್ಷ ಕಳೆದರೆ ಸುಮಾರು ಒಂದು ಲಕ್ಷ ಆದಾಯ ಗ್ಯಾರೆಂಟಿ. ಸಮಯಕ್ಕೆ ಸರಿಯಾಗಿ ಸಾವಯವ ಔಷಧೋಪಚಾರ ನಿಂತಿಲ್ಲ. ಏನಾದರೂ ಪೀಡೆ/ರೋಗ ಬಾಧೆ ಬಂದರೆ ತಜ್ಞರ ಸಲಹೆ ಪಡೆಯುತ್ತೇನೆ’ ಎನ್ನುತ್ತಾರೆ ಪಂಚಾಕ್ಷರಯ್ಯ. ಬರಡು ಭೂಮಿಯಲ್ಲಿ ಸುಸ್ಥಿರ ಪ್ರಗತಿ ಸಾಧಿಸಲು ಬಂಡವಾಳ ಕಡಿಮೆ ಬೇಡುವ ಸಾವಯವ ಬೆಳೆ ಪದ್ಧತಿ, ಸೂಕ್ತ ಬೆಳೆ ಆಯ್ಕೆ ಹಾಗೂ ನಿರಂತರ ಪರಿಶ್ರಮ ಅವಶ್ಯಕ ಎಂಬುವುದು ಅವರ ಮಾತು.

ಆರೋಗ್ಯಕರ ನಾಟಿ ಉಪಚಾರ...
ಇವರು ನಾಟಿ ವೈದ್ಯರೂ ಹೌದು. ಹತ್ತು ಬಗೆಯ ಜ್ವರಕ್ಕೆ, ಬಿಳಿಸೆರಗು, ಮೊಳೆರೋಗ, ನೆಗಡಿ, ತಲೆಸುತ್ತು, ನಾನಾ ಬಗೆಯ ಚರ್ಮದ ರೋಗಗಳು ಹಾಗು ಸಂಧಿವಾತ ರೋಗಗಳಿಗೆ ನಾಟಿ ಮದ್ದನ್ನು ಕೊಡುತ್ತಾರೆ. ಇವರು ಕೊಡುವ ಯಾವುದೇ ಉಪಚಾರಕ್ಕೆ ಇಂತಿಷ್ಟೆ ಹಣವನ್ನು ಕೇಳುವುದಿಲ್ಲ. ಕೊಡುವ ಮನಸ್ಸಿದ್ದರೆ ದೇವರ ಹುಂಡಿಗೆ ಹಾಕಲು ಹೇಳುತ್ತಾರೆ.
ಸಂಪರ್ಕಕ್ಕೆ 9900201907. (ಸಂಜೆ ವೇಳೆ)   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.