ADVERTISEMENT

ಬೀಜದ ಮಾಹಿತಿಗೆ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST
ಬೀಜದ ಮಾಹಿತಿಗೆ ಸಂಶೋಧನಾ ಕೇಂದ್ರ
ಬೀಜದ ಮಾಹಿತಿಗೆ ಸಂಶೋಧನಾ ಕೇಂದ್ರ   

ಮಾಳಿಂಗರಾಯ
ಬೀಜದ ಉಪಚಾರ ಸರಿಯಾಗಿದ್ದರೆ ಮಾತ್ರ ಬಿತ್ತನೆ ಕಾರ್ಯ ಸುಸೂತ್ರವಾಗಿ ನಡೆಯುತ್ತದೆ. ಆದ್ದರಿಂದ ಬೀಜದ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಲು ರಾಜ್ಯದ ಐದು ಕಡೆಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಬೀಜ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳ ಪೈಕಿ ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಇರುವ ಕೇಂದ್ರವೂ ಒಂದು.

1974ರಲ್ಲಿ ಸ್ಥಾಪನೆಯಾದ ಈ ಸಂಶೋಧನಾ ಕೇಂದ್ರವು 36.5 ಹೆಕ್ಟೇರ್‌ ವ್ಯಾಪ್ತಿ ಪ್ರದೇಶದಲ್ಲಿ ವಿವಿಧ ಬಗೆಯ ಸಂಶೋಧನೆಗಳನ್ನು ನಡೆಸುತ್ತಿದೆ. ಈ ಸಂಶೋಧನೆ ಫಲವಾಗಿ ಈಗ ರೈತರಿಗೆ ಉಪಯುಕ್ತ ಮಾಹಿತಿಗಳು ಲಭ್ಯವಿವೆ. ಹೆಬ್ಬಿದಿರು, ಬೆಟ್ಟನೆಲ್ಲಿ, ಅರಳಿ, ತಪಸಿ, ಕಮರ, ನಂದಿ, ತೇಗ, ಸಾಗುವಾನಿ, ಸೀತಾಫಲ, ಹಲಸು, ಬೀಟೆ, ದೇವದಾರು ಹಿಪ್ಪೆ, ನೇರಳೆ, ರಕ್ತಚಂದನ ಶ್ರೀಗಂಧ ಇತ್ಯಾದಿ ಕಾಡುಮರಗಳ ಮಾಹಿತಿ ಬಯಸುವ ರೈತರಿಗೆ ಮಾಹಿತಿಗಳು ಇಲ್ಲಿ ಲಭ್ಯವಿದೆ. ಅದೇ ರೀತಿ ಹೆಬ್ಬೇವು,  ನೆಲ್ಲಿ, ಬೇಲದಹಣ್ಣು,  ಹಲಸು, ಸೀತಾಫಲ, ಸಿಲ್ವರ್‌ ಓಕ್‌ ಮುಂತಾದ ಬೆಳೆಗಳ ಬೀಜಗಳ ಬಗ್ಗೆಯೂ ಇಲ್ಲಿ ತಿಳಿವಳಿಕೆ ನೀಡಲಾಗುವುದು.

ಕಾಡುಬೀಜಗಳ ಸಂಗ್ರಹ: ಈ ಕೇಂದ್ರದಲ್ಲಿ ನಿರ್ದಿಷ್ಟ ಪ್ರದೇಶದ ಕಾಡುಬೀಜಗಳನ್ನು ಸಂಗ್ರಹಿಸಲಾಗುತ್ತದೆ. ಋತುಮಾನಕ್ಕೆ ತಕ್ಕಂತೆ ಬೀಜಗಳನ್ನು ತಂದು ಕಸಿ ಮಾಡಲಾಗುತ್ತದೆ. ಬೇರೆ ಬೇರೆ ಮಣ್ಣಿನ ಗುಣಕ್ಕೆ ಹೊಂದಿಕೊಂಡು ಬೆಳೆಯಬಲ್ಲ ಬೀಜ ಮಾದರಿಗಳನ್ನು ಪರೀಕ್ಷಿಸಿ ವರದಿ ಸಿದ್ಧಪಡಿಸಲಾಗುತ್ತದೆ.

ಸಂಶೋಧನೆ ಯಶಸ್ವಿಯಾದ ನಂತರ ಸಸಿಗಳನ್ನು ಆಯಾ ಹವಾಗುಣಕ್ಕೆ ಅನುಕೂಲವಾಗುವ ನರ್ಸರಿಗಳಿಗೆ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ಇಲ್ಲಿ ಟಿಂಬರ್‌ಗೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಥೈಲೆಂಡ್‌ನ ಬಿದಿರು ಬೀಜವನ್ನು ಇಲ್ಲಿನ ಮಣ್ಣಿನ ಗುಣಕ್ಕೆ ಬೆಳೆಯಬಹುದು ಎಂಬುದನ್ನೂ ಸಂಶೋಧನೆಯಿಂದ ಕಂಡುಕೊಂಡಿದೆ.

ಅರಣ್ಯ ಇಲಾಖೆಯ ಬೀಜ ಸಂಶೋಧನೆ ಕೇಂದ್ರದ ಒಂದು ವಿಭಾಗವಾದ ಬೆಂಗಳೂರು ವಿಶ್ವವಿದ್ಯಾಲಯದ ಸಮೀಪದಲ್ಲಿರುವ ‘ಧನ್ವಂತರಿ’ಯಲ್ಲಿ ಎರಡು ಲಕ್ಷಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಆಯುಷ್‌ ಇಲಾಖೆಯ ಸಲಹೆಯಲ್ಲಿ ಬೆಳೆಸಲಾಗುತ್ತಿದೆ. ಆರ್ಯುವೇದ ಸಸ್ಯಗಳ ಆಸಕ್ತಿ ಹೊಂದಿರುವ ಸ್ವಯಂಸೇವಾ ಸಂಸ್ಥೆಗಳು, ಹಾಗೂ ಜನರಿಗೆ ಬೇಡಿಕೆ ಮೇರೆಗೆ ಬೆಳೆದು ವಿತರಿಸಲಾಗುತ್ತಿದೆ.

ಚಿಟ್ಟೆಗಳ ಸಂತತಿ ಸಂರಕ್ಷಣೆಯ ಉದ್ದೇಶದಿಂದ ಈ ಅರಣ್ಯ ಪ್ರದೇಶದಲ್ಲಿ ಅವುಗಳಿಗೆ ಸೂಕ್ತವಾಗಿರುವ ಸಸ್ಯ ಗಿಡಗಳನ್ನು ಬೆಳೆಸಲಾಗುತ್ತಿದೆ. ಒಟ್ಟು 124 ಚಿಟ್ಟೆ ಪ್ರಭೇದಗಳಲ್ಲಿ ಶೇ 40ರಷ್ಟು ಜಾತಿಯ ಚಿಟ್ಟೆಗಳನ್ನು ಇಲ್ಲಿ ಕಾಣಬಹುದು. ಸಂಪರ್ಕಕ್ಕೆ: 080–2658766. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT