ADVERTISEMENT

ಮೂತ್ರ ಕಲ್ಲು: ಎಚ್ಚೆತ್ತುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 25 ಮೇ 2016, 10:31 IST
Last Updated 25 ಮೇ 2016, 10:31 IST
ಮೂತ್ರ ಕಲ್ಲು: ಎಚ್ಚೆತ್ತುಕೊಳ್ಳಿ
ಮೂತ್ರ ಕಲ್ಲು: ಎಚ್ಚೆತ್ತುಕೊಳ್ಳಿ   

ಜಾನುವಾರುಗಳಲ್ಲಿ ಮೂತ್ರ ಕಟ್ಟುವಿಕೆ ವಿವಿಧ ಕಾರಣಗಳಿಗೆ ಬರುತ್ತದೆ. ಅವುಗಳಲ್ಲಿ ಮುಖ್ಯವಾದವು ಮೂತ್ರಕೋಶದ, ಮೂತ್ರನಾಳದ ಅಥವಾ ಮೂತ್ರ ಜನಕಾಂಗದ ಸೋಂಕು. ಇವೆಲ್ಲಕ್ಕಿಂತ ಮುಖ್ಯವಾದ ಕಾರಣ ಮೂತ್ರ ನಾಳದಲ್ಲಿ ಬೆಳೆದುಕೊಳ್ಳುವ ಕಲ್ಲುಗಳು. ಈ ಕಲ್ಲುಗಳು ವಿವಿಧ ರಾಸಾಯನಿಕ ಗುಣಗಳನ್ನು ಹೊಂದಿರುತ್ತವೆ.

ಮೂತ್ರನಾಳದಲ್ಲಿನ ಕಲ್ಲುಗಳು ಆಡು, ಕುರಿ, ಮೇಕೆ, ಕುದುರೆ ಇತ್ಯಾದಿಗಳಲ್ಲಿ ಕಾಣಿಸಿದರೂ ಎತ್ತುಗಳಲ್ಲಿ ಇದು ಸಾಮಾನ್ಯ ತೊಂದರೆ. ಕಸಿ ಮಾಡಿದ ನಂತರ ಬಹಳಷ್ಟು ಎತ್ತುಗಳಲ್ಲಿ, ಮೂತ್ರ ನಾಳ ಕಟ್ಟಿಕೊಂಡು, ಮೂತ್ರ ಸಂಗ್ರಹ ಕೋಶ ಒಡೆದು ಹೋಗಿ ಅವು ಸಾವನ್ನಪ್ಪುತ್ತವೆ.

ಏನಿದು ಮೂತ್ರ ನಾಳದ ಕಲ್ಲು?: ಮನುಷ್ಯರಲ್ಲಿ ಮೂತ್ರಕೋಶದ ಕಲ್ಲುಗಳು ಸಾಮಾನ್ಯ. ಅದರಂತೆಯೇ ಜಾನುವಾರುಗಳಲ್ಲಿಯೂ ಮೂತ್ರ ಜನಕಾಂಗದ ವಿವಿಧ ಭಾಗಗಳಲ್ಲಿ ಕಲ್ಲುಗಳು ಬೆಳೆದುಕೊಳ್ಳುತ್ತವೆ. ಇದಕ್ಕೆ ನಿಖರ ಕಾರಣ ಹೇಳಲಾಗದಿದ್ದರೂ ಪಶುವಿನ ಪೋಷಣೆ, ಶರೀರ ಕ್ರಿಯೆ ಮತ್ತು ಅದರ ಅರೈಕೆಯಲ್ಲಿನ ವಿಧಾನಗಳಲ್ಲಿನ ವ್ಯತ್ಯಾಸ ಪ್ರಮುಖವಾಗಿರುತ್ತದೆ. ಅವುಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಆಹಾರ: ಪಶು ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಮ್ಯಾಗ್ನೇಶಿಯಂ ಅಂಶವಿದ್ದು ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಮತ್ತು ರಂಜಕದ ಪ್ರಮಾಣ ಇದ್ದಲ್ಲಿ ಮೂತ್ರದ ಕಲ್ಲುಗಳು ಬೆಳೆದುಕೊಳ್ಳುತ್ತವೆ. ಕಡಿಮೆ ಪ್ರಮಾಣದ ಒಣಹುಲ್ಲು, ನೀರಿನ ಸೇವನೆ, ನೀರಿನಲ್ಲಿ ಹೆಚ್ಚಿದ ವಿವಿಧ ಖನಿಜಾಂಶಗಳ ಸಾಧ್ಯತೆ, ವಿಟಮಿನ್‌ಗಳ ಕೊರತೆ ಮತ್ತು ಪ್ರಮುಖವಾಗಿ ಆಕ್ಸಾಲೇಟ್ ಹೊಂದಿದ ಹುಲ್ಲಿನ ಸೇವನೆ ಇವು ಪ್ರಮುಖ ಕಾರಣ.

ಅದರಲ್ಲೂ ಹೆಚ್ಚಿನ ಪ್ರಮಾಣದ ಭತ್ತದ ಹುಲ್ಲನ್ನು ದೀರ್ಘ ಕಾಲ ಸೇವಿಸುವ ಎತ್ತುಗಳಲ್ಲಿ ಮತ್ತು ಗಂಡು ಎಮ್ಮೆ ಕರುಗಳಲ್ಲಿ ಮೂತ್ರನಾಳದಲ್ಲಿ ಕಲ್ಲು ಬೆಳೆದು ತೊಂದರೆ ಕೊಡುವುದು ಬಹಳ ಸಾಮಾನ್ಯ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜಾನುವಾರು ನೀರು ಕಡಿಮೆ ಸೇವಿಸಿದಾಗ ಮೂತ್ರನಾಳಗಳಲ್ಲಿ ಸಣ್ಣ ಹರಳುಬೆಳೆದು ಕ್ರಮೇಣ ಗಾತ್ರ ಹೆಚ್ಚಿಸಿಕೊಳ್ಳುತ್ತಾ 3–4 ಸೆಂ.ಮೀ ಗಾತ್ರದ ಕಲ್ಲಾಗಿ ಪರಿವರ್ತನೆಗೊಳ್ಳುತ್ತವೆ. ಅವು ಮೂತ್ರ ಜನಕಾಂಗದ ವಿವಿಧ ಭಾಗಗಳಲ್ಲಿ ಸೇರಿ ಹಾನಿಯನ್ನುಂಟು ಮಾಡುತ್ತವೆ.

ಮೂತ್ರಕೋಶದ ಸೋಂಕು: ಹಲವಾರು ವಿಧದ ಬ್ಯಾಕ್ಟೀರಿಯಾಗಳು ಮೂತ್ರಕೋಶ, ಮೂತ್ರಾಶಯ, ಮೂತ್ರನಾಳದ ಸೋಂಕು ಉಂಟಾಗಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದೇ ಇದ್ದಲ್ಲಿ ಅದರಿಂದಲೂ ಮೂತ್ರಕೋಶದ ಕಲ್ಲುಗಳು ಬೆಳೆಯಬಹುದು.

ಪ್ರಭೇದದ ಪ್ರಭಾವ: ಮೂತ್ರನಾಳದ ಕಲ್ಲುಗಳು ಹೆಣ್ಣು ಪ್ರಾಣಿಗಳಲ್ಲಿ ಬಹಳ ಕಡಿಮೆ.  ಮೂತ್ರನಾಳವು ಗಂಡು ಪ್ರಾಣಿಯಲ್ಲಿ ತುಂಬಾ ಉದ್ದವಿದ್ದು, ಅದರಲ್ಲೂ ಸಿಗ್ಮಾಯಿಡ್ ಭಾಗದಲ್ಲಿ ತೀವ್ರ ತಿರುವು ಇರುವುದರಿಂದ ಇಲ್ಲಿಯೇ ಮೂತ್ರ ನಾಳದ ಕಲ್ಲುಗಳು ಬೆಳೆದು ತೊಂದರೆ ಕೊಡುವುದು ಸಾಮಾನ್ಯ.

ಲಕ್ಷಣಗಳು: ಭಾಗಶಃ ಮೂತ್ರನಾಳದ ಕಟ್ಟುವಿಕೆ: ಕಲ್ಲುಗಳ ಗಾತ್ರ ಚಿಕ್ಕದಾಗಿದ್ದಾಗ ಭಾಗಶಃ ಮೂತ್ರ ನಾಳ ಕಟ್ಟಿ ನೋವಿನಿಂದ ತಿಣುಕಾಡುತ್ತದೆ. ಇದರಿಂದ ಅವು ಮೇವು ತಿನ್ನುವುದನ್ನು ಬಿಡುತ್ತವೆ. ಸ್ವಲ್ಪ ಪ್ರಮಾಣ ಮೂತ್ರ ಜಿನುಗುತ್ತಿರುತ್ತದೆ. ರಕ್ತವೂ ಮೂತ್ರದಲ್ಲಿ ಇರಬಹುದು.

ಪೂರ್ಣ ಪ್ರಮಾಣದ ಮೂತ್ರನಾಳದ ಕಟ್ಟುವಿಕೆ: ಲಕ್ಷಣಗಳು ಭಾಗಶಃ ಮೂತ್ರನಾಳದ ಕಟ್ಟುವಿಕೆಯಂತೆ ಇದ್ದರೂ ನೋವಿನ ಪ್ರಮಾಣ ಹೆಚ್ಚು. ಮೂತ್ರ ಮಾಡಲು ತಿಣುಕುತ್ತಿದ್ದರೂ  ಮೂತ್ರ ಬರುವುದಿಲ್ಲ. ಇದರಿಂದ ಜಾನುವಾರು ಗೂನು ಬೆನ್ನಾಗಿ ನೋವು ಅನುಭವಿಸುತ್ತದೆ.

ಮೂತ್ರ ನಾಳದ ಒಡೆಯುವಿಕೆ: ಮೂತ್ರ ನಾಳವು ಪೂರ್ಣ ಪ್ರಮಾಣದಲ್ಲಿ ಕಟ್ಟಿಕೊಂಡ ನಂತರ ಒಂದೆರಡು ದಿನಗಳಲ್ಲಿ ಒಡೆದು ಹೋಗುತ್ತದೆ. ಇದರಿಂದ ತಾತ್ಕಾಲಿಕವಾಗಿ ಜಾನುವಾರು ಚೇತರಿಸಿಕೊಂಡಂತೆ ಕಂಡರೂ ಸೋರಿದ ಮೂತ್ರವು ಚರ್ಮದ ಅಡಿ ಸೇರಿಕೊಂಡು, ಕ್ರಮೇಣ ಚರ್ಮ ಕಿತ್ತುಕೊಂಡು ಬರುತ್ತದೆ.

ಮೂತ್ರಾಶಯದ ಒಡೆಯುವಿಕೆ: ಅತ್ಯಂತ ನೋವಿನಿಂದ ಬಳಲುತ್ತಿರುವ ಜಾನುವಾರು ಇದ್ದಕ್ಕಿದ್ದಂತೆ ಚೇತರಿಸಿಕೊಂಡಂತೆ ಕಂಡರೆ ಮೂತ್ರಾಶಯ ಒಡೆದಿದೆ ಎಂದು ಊಹಿಸಬಹುದು. ಆದರೆ ರೈತರು ಬಹಳಷ್ಟು ಸಲ ಅವರ ಜಾನುವಾರು ಚೇತರಿಸಿಕೊಂಡಿದೆ ಎಂದು ತಪ್ಪಾಗಿ ಭಾವಿಸುತ್ತಾರೆ. ಕ್ರಮೇಣ ಹೊಟ್ಟೆಯಲ್ಲಿ ಮೂತ್ರವು ಶೇಖರಗೊಳ್ಳುತ್ತಾ ಹೋದಂತೆ, ಅದು ರಕ್ತಕ್ಕೆ ಸೇರಿ ಎರಡು ದಿನಗಳ ನಂತರ  ಕ್ರಮೇಣ ಜಾನುವಾರು ಮಂಕಾಗಿ, ಮೇವು ನಿಲ್ಲಿಸುತ್ತದೆ.

ಹೊಟ್ಟೆಯಲ್ಲಿ ಶೇಖರವಾದ ಮೂತ್ರದಲ್ಲಿನ ಕಲ್ಮಶಗಳು ರಕ್ತ  ಸೇರಿ ರಕ್ತದಲ್ಲಿನ ಯೂರಿಯಾ ಪ್ರಮಾಣ ಇತ್ಯಾದಿಗಳು ಜಾಸ್ತಿಯಾದಂತೆ ಜಾನುವಾರಿನ ಮರಣದ ದಿನ ಸಮೀಪಿಸುತ್ತದೆ.

ಪತ್ತೆ ಮಾಡುವಿಕೆ: ಪ್ರತಿ ದಿನ ಎತ್ತುಗಳು ಕುಡಿಯುವ ನೀರು ಮತ್ತು ವಿಸರ್ಜಿಸುವ ಮೂತ್ರದ ಪ್ರಮಾಣವನ್ನು ಗಮನಿಸಿ. ಗಂಡು ಜಾನುವಾರುಗಳಲ್ಲಿ ಅದರಲ್ಲೂ ಕಸಿ ಮಾಡಿದ ನಂತರ ಎತ್ತುಗಳಲ್ಲಿ ಮತ್ತು 3-4 ತಿಂಗಳ ಗಂಡು ಎಮ್ಮೆ–ಕರುಗಳಲ್ಲೇ ಈ  ಸಮಸ್ಯೆ ಬಹಳ ಸಾಮಾನ್ಯ   ಲೇಖಕರ ಸಂಪರ್ಕ: 080–23410506. 

ತಡೆಗಟ್ಟುವಿಕೆ  ಹೀಗೆ...
ಮೂತ್ರನಾಳದಲ್ಲಿ ಕಲ್ಲಾದ ನಂತರ ಪರದಾಡುವುದಕ್ಕಿಂತ, ಕಲ್ಲುಗಳು ಬೆಳೆಯದಂತೆ ನೋಡಿಕೊಳ್ಳಿ. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳ ಅನುಪಾತ ಸರಿಯಾಗಿರುವಂತೆ ಖನಿಜ ಮಿಶ್ರಣ ನೀಡಿ. ಬೇಸಿಗೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನೀಡಿ. ಕೆಲವು ಆಕ್ಷಾಲೇಟ್ ಹೊಂದಿದ ಗಿಡಗಳ ಅಥವಾ ಭತ್ತದ ಹುಲ್ಲಿನ ನಿರಂತರ ಸೇವನೆಯಿಂದಲೂ ಕಲ್ಲು ಬೆಳೆಯುವ ಸಾಧ್ಯತೆ ಇದ್ದು, ಇವುಗಳನ್ನು ದೀರ್ಘ ಕಾಲ ನೀಡದೇ ಇರುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.