ADVERTISEMENT

ಹಸಿರಿ ಮನೆಯಲ್ಲಿ ಜರ್ಬೆರಾ

ಗಣಂಗೂರು ನಂಜೇಗೌಡ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಎಚ್‌. ನಾಗರಾಜ ಅವರಿಂದ ಸಲಹೆ ಪಡೆಯುತ್ತಿರುವ ಸುಲ್ತಾನ್‌ ಮಹಮದ್‌ಖಾನ್‌.
ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಎಚ್‌. ನಾಗರಾಜ ಅವರಿಂದ ಸಲಹೆ ಪಡೆಯುತ್ತಿರುವ ಸುಲ್ತಾನ್‌ ಮಹಮದ್‌ಖಾನ್‌.   

ಕಬ್ಬು, ಭತ್ತ, ತರಕಾರಿ ಬೆಳೆಗಳಿಗೆ ಹೋಲಿಸಿದರೆ ಪುಷ್ಪ ಕೃಷಿ ತುಸು ತ್ರಾಸದಾಯಕ ಎಂಬುದು ನಿಜ. ಆದರೆ ಬಂಪರ್‌ ಬೆಳೆ ಬಂದು ಉತ್ತಮ ಬೆಲೆ ಸಿಕ್ಕರೆ ಕೈ ತುಂಬಾ ಹಣ ಎಣಿಸಿಕೊಳ್ಳಬಹುದು ಎಂಬುದೂ ಅಷ್ಟೇ ದಿಟ.

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿ ಗ್ರಾಮದ ಬಳಿ ರೈತನೊಬ್ಬ ಯಶಸ್ವಿಯಾಗಿ ಜರ್ಬೆರಾ ಪುಷ್ಪ ಕೃಷಿ ಮಾಡುತ್ತಿದ್ದಾರೆ. ಮೈಸೂರಿನ ಸುಲ್ತಾನ್‌ ಮಹಮದ್‌ಖಾನ್‌ ಎಂಬುವರು ತಮ್ಮದೇ ಜಮೀನಿನಲ್ಲಿ, ಹಸಿರು ಮನೆ ಪದ್ಧತಿಯಲ್ಲಿ ಜರ್ಬೆರಾ ಹೂ ಬೆಳೆಯುತ್ತಿದ್ದಾರೆ. 13 ಗುಂಟೆಯಲ್ಲಿ ಈ ಹೂ ಬೆಳೆಯಲಾಗುತ್ತಿದೆ.

ವಿವಿಧ ವರ್ಣದ ಹೂ ಕೊಡುವ 9 ಸಾವಿರ ಗಿಡಗಳನ್ನು ನಾಟಿ ಮಾಡಿದ್ದು, ಕಿತ್ತಳೆ, ಬಿಳಿ, ಕೆಂಪು, ಹಳದಿ ಮತ್ತು ತಿಳಿಗೆಂಪು ಬಣ್ಣದ ಹೂಗಳು ಇವರ ತೋಟದಲ್ಲಿ ಅರಳಿವೆ. ಸದ್ಯ ವಾರಕ್ಕೊಮ್ಮೆ 6 ರಿಂದ 7 ಸಾವಿರ ಜರ್ಬೆರಾ ಹೂ ಕೊಯ್ಯುತ್ತಿದ್ದಾರೆ. ಹೀಗೆ ಕೊಯ್ದ ಹೂಗಳನ್ನು 10ರಂತೆ ಬಂಚ್‌ ಮಾಡಿ, ಅದಕ್ಕೆ ಪ್ಲಾಸ್ಟಿಕ್‌ ಹೊದಿಕೆ ಸುತ್ತಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ಇಲ್ಲಿ ಬೆಳೆದ ಹೂಗಳನ್ನು ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಸುಲ್ತಾನ್‌ ಮಹಮದ್‌ಖಾನ್‌ ಪ್ರತಿ ವಾರ ಹಣ ಎಣಿಸಿಕೊಳ್ಳುತ್ತಿದ್ದಾರೆ.

ಬೆಳೆಯುವ ವಿಧಾನ: ಜರ್ಬೆರಾ ಹೂವಿನ ಕೃಷಿ ಗುಲಾಬಿ, ಚೆಂಡು, ಸೇವಂತಿಗೆ ಹೂ ಕೃಷಿಗಿಂತ ಹೆಚ್ಚು ಶ್ರಮ ಮತ್ತು ವೆಚ್ಚವನ್ನು ಬಯಸುತ್ತದೆ. ಪೈರುಗಳನ್ನು ಭೂಮಿಯಲ್ಲಿ ನಾಟಿ ಮಾಡುವ ಮುನ್ನ ಮಣ್ಣನ್ನು ಹದ ಮಾಡಿಕೊಳ್ಳಬೇಕು. ಸಾಕಷ್ಟು ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿದ ಬಳಿಕ ಅರ್ಧ ಅಡಿ ಎತ್ತರ ಬೆಡ್‌ ತಯಾರಿಸಿಕೊಳ್ಳಬೇಕು. ನಂತರ ಒಂದೊಂದು ಅಡಿಗೆ ಒಂದು ಸಸಿಯನ್ನು ನಾಟಿ ಮಾಡಬೇಕು. ಹಸಿರು ಮನೆಯಲ್ಲಿ ಕನಿಷ್ಠ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವಂತೆ ನೋಡಿಕೊಂಡರೆ ಗಿಡ ಉತ್ತಮವಾಗಿ ಬೆಳೆಯುತ್ತದೆ. ವಾರಕ್ಕೆ ಒಮ್ಮೆಯಾದರೂ ದ್ರಾವಣ ರೂಪದಲ್ಲಿ ರಸಗೊಬ್ಬರವನ್ನು ನಳಿಕೆ ಮೂಲಕ ಕೊಡಬೇಕು.

ಸಿಂಪಡಣೆ ಮೂಲಕವೂ ಗಿಡಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡಬಹುದು. ಗಿಡಗಳ ಬೆಳವಣಿಗೆ ಮತ್ತು ರೋಗ ನಿಯಂತ್ರಣಕ್ಕೆ ಅಗತ್ಯ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಜರ್ಬೆರಾ ಗಿಡಕ್ಕೆ ತ್ರಿಬ್ಸ್, ವೈಲ್ಡ್ಸ್, ರಂಗೋಲಿ, ಸುರುಳಿ ರೋಗ ಬರುವ ಸಾಧ್ಯತೆ ಇರುತ್ತದೆ. ನಿರೀಕ್ಷೆಯಂತೆ ಗಿಡ ಬೆಳೆದರೆ ಪೈರು ನಾಟಿ ಮಾಡಿದ ಎರಡೂವರೆ ತಿಂಗಳಿಗೆ (75 ದಿನ) ಗಿಡದಿಂದ ಹೂ ಕೊಯ್ಯಬಹುದು. ಸತತ ಮೂರು ವರ್ಷಗಳ ಕಾಲ ಈ ಗಿಡ ಹೂ ಕೊಡುತ್ತಲೇ ಇರುತ್ತದೆ.

ವಿಶೇಷತೆ: ಗಿಡದಿಂದ ಕಿತ್ತ ನಂತರವೂ 5 ದಿನಗಳ ಕಾಲ ಜರ್ಬೆರಾ ಹೂ ತಾಜಾತನದಿಂದಲೇ ಇರುತ್ತದೆ. ಸಕ್ಕರೆ ಬೆರೆತ ನೀರಿನಲ್ಲಿ ಹೂವಿನ ಕಾಂಡವನ್ನು ಅದ್ದಿ ಇಟ್ಟರೆ 7ರಿಂದ 8 ದಿನಗಳವರೆಗೂ ಈ ಹೂ ನಗುತ್ತಲೇ ಇರುತ್ತದೆ. ಹಾಗಾಗಿ ಹೊರ ರಾಜ್ಯ, ದೇಶಗಳಿಗೆ ಇದು ಹೆಚ್ಚಾಗಿ ರಫ್ತಾಗುತ್ತದೆ. ಹಾಗಾಗಿ ಈ ಹೂವಿಗೆ ಸದಾ ಕಾಲವೂ ಮಾರುಕಟ್ಟೆ ಇರುತ್ತದೆ. ಮದುವೆ ಮಾಸ ಶುರುವಾದರೆ ಜರ್ಬೆರಾ ಹೂಗಳಿಗೆ ಬೇಡಿಕೆ ಹಾಗೂ ಬೆಲೆ ಎರಡೂ ದುಪ್ಪಟ್ಟಾಗುತ್ತದೆ.

‘ಜರ್ಬೆರಾ ಪುಷ್ಪ ಕೃಷಿ ಮಾಡುವವರಿಗೆ ಕೃಷಿ ಭಾಗ್ಯ ಯೋಜನೆಯಡಿ ಸರ್ಕಾರದ ನೆರವು ಕೂಡ ಸಿಗುತ್ತದೆ. ಪ್ರತಿ ಚದರ ಮೀಟರ್‌ ಲೆಕ್ಕದಲ್ಲಿ ನೆರವು ನೀಡಲಾಗುತ್ತದೆ. ಆದರೆ ತೋಟಗಾರಿಕೆ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಿ ಹಸಿರು ಮನೆ ನಿರ್ಮಾಣ ಸೇರಿದಂತೆ ಕೃಷಿಗೆ ಪೂರಕವಾದ ಕೆಲಸ ಆರಂಭಿಸಲು ಒಪ್ಪಿಗೆ ಪತ್ರ ಪಡೆದವರಿಗೆ ಮಾತ್ರ ಈ ಸವಲತ್ತು ಸಿಗುತ್ತದೆ. ಕೆಲಸ ಪೂರ್ಣಗೊಳಿಸಿದ ಬಳಿಕವಷ್ಟೇ ರೈತರಿಗೆ ಸರ್ಕಾರದ ಸಹಾಯ ಧನದ ಹಣ ಸಂದಾಯವಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್‌. ನಾಗರಾಜು ಹೇಳುತ್ತಾರೆ.

‘ಕಳೆದ ಹತ್ತಾರು ವರ್ಷಗಳಿಂದ ಕೋಳಿ ಸಾಕಣೆ ಮಾಡುತ್ತಿದ್ದೆ. ಸಂಬಂಧಿಕರೊಬ್ಬರ ಸಲಹೆಯಂತೆ ಮೊದಲ ಬಾರಿಗೆ ಜರ್ಬೆರಾ ಹೂ ಬೆಳೆಯಲು ತೊಡಗಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಕೆ.ಎಫ್‌ ಬಯೋ ಪ್ಲಾಂಟ್‌ ಕಂಪೆನಿಯಿಂದ ಪೈರು ತಂದು ನಾಟಿ ಮಾಡಲಾಗಿದೆ. ಎಂಬಿಎ ಓದಿಕೊಂಡಿರುವ ಮಗ ನಿಸಾರ್‌ ಅಹಮದ್‌ಖಾನ್‌ನ ಮುತುವರ್ಜಿಯಿಂದ ನಿರೀಕ್ಷೆಯಂತೆ ಬೆಳೆ ಬಂದಿದೆ. ಹಸಿರು ಮನೆ ನಿರ್ಮಿಸಿ ಹನಿ ನೀರಾವರಿ ಅಳವಡಿಸಿಕೊಂಡಿರುವುದರಿಂದ ಜರ್ಬೆರಾ ಗಿಡಗಳು ರೋಗಮುಕ್ತವಾಗಿವೆ.

ನಳಿಕೆ ಮೂಲಕ ನೀರು ಮತ್ತು ಪೋಷಕಾಂಶ ನೀಡಲಾಗುತ್ತಿದೆ. ಇನ್ನೂ ಮೂರು ವರ್ಷ ಹೂ ಸಿಗಲಿದ್ದು, ಪ್ರತಿ ವರ್ಷ 5ರಿಂದ 8 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದೇನೆ. 1350 ಚದರ ಮೀಟರ್‌ ವಿಸ್ತೀರ್ಣದಲ್ಲಿ ಜರ್ಬೆರಾ ಹೂ ಬೆಳೆಯಲು ಸರ್ಕಾರದಿಂದ ₹6.90 ಲಕ್ಷ ಸಹಾಯ ಧನ ಸಿಕ್ಕಿದೆ. ಇದರಿಂದಾಗ ಬೇಸಾಯದ ವೆಚ್ಚವೂ ತಗ್ಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಸುಲ್ತಾನ್‌ ಮೊಹಮ್ಮದ್‌ ಖಾನ್‌.

ಸಂಪರ್ಕಕ್ಕೆ: 91643 43405.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.