ADVERTISEMENT

‘ನಿರುತ್ತರ ಮನೆ’ ಸುತ್ತ...

ಸಂಪತ್ ಬೆಟ್ಟಗೆರೆ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ತಂಗಿ ದೀಪ, ತೇಜಸ್ವಿ ಅವರ ಮನೆಗೆ ಹೋಗಿ ರಾಜೇಶ್ವರಿ ಮೇಡಂ ಅವರನ್ನು ಮಾತನಾಡಿಸಿಕೊಂಡು ಬರೋಣ ಬಾರೋ ಎಂದಳು. ಬಸ್ಸಿನಿಂದಿಳಿದು ಡಾಂಬರು ರಸ್ತೆಯಲ್ಲಿ ಸ್ವಲ್ಪ ದೂರ ನಡೆದರೆ ಪೂರ್ಣಚಂದ್ರ ತೇಜಸ್ವಿ ಅವರ ಕಾಫಿ ತೋಟದ ಮನೆಯ ಪ್ರವೇಶಮಾರ್ಗ ಸಿಗುತ್ತದೆ. ನಾವಲ್ಲಿಗೆ ತಲುಪುತ್ತಿದ್ದಂತೆ ನಮ್ಮ ಕಣ್ಣಿಗೆ ಕಾಣಿಸಿದ್ದು ಹಳದಿ ಬಣ್ಣ ಬಳಿದಿರುವ ಸಾಮಾನ್ಯ ನಮೂನೆಯ ಕಬ್ಬಿಣದ ಗೇಟು. ಮಲೆನಾಡಿನ ಕಾಫಿ ತೋಟದ ಬಹುತೇಕ ಮಾಲೀಕರು ಎತ್ತರೆತ್ತರ ಗೇಟುಗಳನ್ನು ನಿರ್ಮಿಸಿ ಎರಡು ಬದಿಗಳಲ್ಲೂ ಸಿಮೆಂಟ್ ಕಟ್ಟೆ ಕಟ್ಟಿಸಿ ಅಮೃತಶಿಲೆಯ ಮೇಲೆ ಹೆಸರು ಕೊರೆಸಿಕೊಳ್ಳುವುದಕ್ಕಿಂತ ಇದು ವಿಭಿನ್ನವಾಗಿ ಕಂಡಿತು.

ಅಲ್ಲದೇ ‘ನಾಯಿಗಳಿವೆ ಎಚ್ಚರಿಕೆ’, ‘ಅಪ್ಪಣೆ ಇಲ್ಲದೆ ಒಳಗೆ ಪ್ರವೇಶವಿಲ್ಲ’ ಎಂಬಿತ್ಯಾದಿ ನಾಮಫಲಕಗಳು ಇಲ್ಲಿ ತಲೆ ಎತ್ತಿಲ್ಲ. ಗೇಟಿಗೆ ಚಿಲಕ ಸಿಕ್ಕಿಸಿದ್ದಾರಷ್ಟೆ; ಬೀಗ ಹಾಕಿಲ್ಲ. ತಂಗಿಯ ಮೌನದೃಷ್ಟಿಗೆ, ಇದೇ ತೇಜಸ್ವಿ ಅವರ ತೋಟದ ಮನೆ ನಿರುತ್ತರಕ್ಕೆ ದಾರಿ ಎಂದು ಹೇಳುತ್ತ ಮುಂದೆ ಸಾಗಿದೆ.

ಗೇಟನ್ನು ಬದಿಗೆ ಸರಿಸಿ ಇಳಿಜಾರಿನ ಮಣ್ಣಿನ ರಸ್ತೆಯಲ್ಲಿಳಿದರೆ ಎಡ-ಬಲಕ್ಕೆ ಕಾಫಿ ತೋಟ. ಜತೆಗೆ ಏಲಕ್ಕಿ ಗಿಡ, ಮರ ತಬ್ಬಿ ಹಿಡಿದಿರುವ ಕಾಳು ಮೆಣಸು ಬಳ್ಳಿಗಳು, ಬಿಳುವ ಜಾತಿಯ ಹಲಸಿನ ಹಣ್ಣಿನ ಮಿಡಿ. ಅಳಿಲು, ಪಕ್ಷಿ, ತೋಟದಲ್ಲಿನ ಕಾಫಿ ಹಣ್ಣು ಬಿಡಿಸುವ ಹೆಣ್ಣಾಳುಗಳ ಕಲರವ. ಒಂದಿಷ್ಟು ದೂರ ಮುಂದಡಿಗಳನ್ನಿಡುತ್ತ ‘ನಿರುತ್ತರ ತೋಟ’ದ ಮನೆ ತಲುಪಿದೆವು. ತಂಗಿ ಗೋಡೆಯ ಮೇಲೆಲ್ಲಾ ಕಣ್ಣಾಡಿಸಿದಳು. ‘ಏನು ಹುಡುಕುತ್ತಿದ್ದೀಯಾ’ ಎಂದು ಕೇಳಿದೆ. ‘ಇಲ್ಲೆಲ್ಲೂ ಮನೆ ಹೆಸರು ಬರೆದಿಲ್ಲವಲ್ಲ, ಅದನ್ನೇ ನೋಡುತ್ತಿರುವೆ’ ಎಂದಳು. ಉತ್ತರ ಹೊಳೆಯಲಿಲ್ಲ. ನಿರುತ್ತರನಾದೆ!

ಮನೆ ಆವರಣದ ಸುತ್ತ ಹಸಿರು ಹುಲ್ಲಿನ ಮೆತ್ತೆ. ಬಣ್ಣದ ಹೂವಿನ ಗಿಡಗಳು, ಮಳೆ-ಬಿಸಿಲೆನ್ನದೆ ಪುಟ್ಟ ಮಕ್ಕಳು ಆಡಿಕೊಳ್ಳಲು ಅನುಕೂಲವಾದಂಥ ಹಜಾರ. ನಿರುತ್ತರದ ಮುಂಬಾಗಿಲು ತೆರೆದಿತ್ತು. ರಾಜೇಶ್ವರಿ ಮೇಡಂ ‘ಬನ್ನಿ ಕುಳಿತುಕೊಳ್ಳಿ!’ ಎಂದು ಕರೆದರು. ಚಾವಡಿ ಪ್ರವೇಶಿಸುತ್ತಿದ್ದಂತೆ ಮಧ್ಯದಲ್ಲೊಂದು ಪುಟ್ಟ ಟಿಪಾಯಿ. ಅದರ ಸುತ್ತಲು ಬೆತ್ತದ ಕುರ್ಚಿಗಳು, ರಾಜೇಶ್ವರಿಯವರು ಕ್ಲಿಕ್ಕಿಸಿರುವ ತೇಜಸ್ವಿಯವರ ವಿವಿಧ ಭಾವಭಂಗಿಯ ಛಾಯಾಚಿತ್ರಗಳು, ಪ್ರಶಸ್ತಿಪತ್ರ, ಸ್ಮರಣಿಕೆಗಳು, ಸ್ವತಃ ತೇಜಸ್ವಿಯವರು ರಚಿಸಿರುವ ಲಂಬಾಣಿ ಹೆಣ್ಣು ಮಗಳೊಬ್ಬಳ ಚೆಲುವಿನ ಬಣ್ಣದ ರೇಖಾಚಿತ್ರ. ಇವೆಲ್ಲವೂ ಒಳಾಂಗಣ ಸೌಂದರ್ಯವನ್ನು ಹೃದಯ ತುಂಬಿಕೊಳ್ಳುವಂತೆ ಅದ್ದೂರಿತನವಿಲ್ಲದೆ ಅಚ್ಚುಕಟ್ಟಾಗಿ ಜೋಡಿಸಿರುವುದು ಕಂಡುಬಂತು.

ಮನೆ ಹಿಂದಿನ ಬಚ್ಚಲ ಸೌದೆ ಒಲೆ, ಕಾಫಿ ಒಣಗಿಸುವ ಕಣ, ಪಕ್ಕದಲ್ಲೇ ಇರುವ ಮನೆಯಂಗಳದ ಪುಟ್ಟಕೆರೆ, ಏರಿ ಮೇಲಿನ ಬಣ್ಣದ ಬಿದಿರು, ಕ್ವಾವ... ಕ್ವಾವ... ಎಂದು ಕೂಗುವ ಕಾಡಿನ ಹುಂಡುಕೋಳಿಯ ಧ್ವನಿಸಂಗಮ. ಇವೆಲ್ಲವೂ ಬರಹಗಾರ ತೇಜಸ್ವಿ ಅವರ ಬದುಕಿನ ಜೀವಸೆಲೆಯಾಗಿ ಗೋಚರಿಸಿತು.

ಹಕ್ಕಿ ಬಳಗ ಸುತ್ತ ಕೂಡಿ,
ಬೈಗು ಬೆಳಗು ಹಾಡಿ ಹಾಡಿ
ಮಲೆಯ ನಾಡ ಸಗ್ಗ ಮಾಡಿ
ನಲಿಸುತಿದ್ದ ನನ್ನ ಮನೆ

ಇದು ಕುವೆಂಪು ಅವರು 1927ನೇ ಇಸವಿಯಲ್ಲಿ ಬರೆದ ಮಕ್ಕಳ ಪದ್ಯದ ಸಾಲುಗಳು. ನನ್ನ ಮನೆ ಹೆಸರಿನ ಈ ಕವಿತೆ ಬರೆಯುವಾಗ ಅವರಿಗೆ ಇಪ್ಪತ್ಮೂರರ ವಯಸ್ಸು. ಕವಿ ಮನಸಿನ ಇಂತಹ ಮಲೆನಾಡು ಮನೆಗಳೀಗ ಕೇವಲ ಕನಸು. ಆದರೆ ತೇಜಸ್ವಿ ಅವರ ಮನೆಯ ವಾತಾವರಣ ಕವಿ ಕುವೆಂಪು ಪ್ರೀತಿಗೆ ವಾಸ್ತವ ಜೀವಚಿತ್ರದಂತಿದೆ. ನಿಜ, ನಮ್ಮ ವರ್ತಮಾನದ ಎಷ್ಟೋ ಪ್ರಶ್ನೆಗಳಿಗೆ ಉತ್ತರದಂತಿರುವ ಈ ಮನೆಗೆ ‘ನಿರುತ್ತರ’ ಎಂಬ ಹೆಸರೇ ನಿರ್ಮಲತೆಯ ಪ್ರತೀಕವಾಗಿದೆ. ಈ ನಿಟ್ಟಿನಲ್ಲಿ ನಾವು ಉತ್ತರ ಕಂಡುಕೊಳ್ಳಬೇಕಷ್ಟೆ. ಆಗ ಮಾತ್ರ ನಮ್ಮ ಕನಸಿನ ಮನೆಯನ್ನು ಮನಸಿನ ಮನೆಯಾಗಿ ರೂಪಿಸಿಕೊಳ್ಳಲು ಸಾಧ್ಯ ಎನಿಸಿತು ನನಗೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.