ADVERTISEMENT

ವಿಕಾರ ಆಕೃತಿಗಳ ಚಿತ್ರ ಬಿಡಿಸುತ್ತಾ..

​ಪ್ರಜಾವಾಣಿ ವಾರ್ತೆ
Published 7 ಮೇ 2016, 10:36 IST
Last Updated 7 ಮೇ 2016, 10:36 IST
ವಿಕಾರ ಆಕೃತಿಗಳ ಚಿತ್ರ ಬಿಡಿಸುತ್ತಾ..
ವಿಕಾರ ಆಕೃತಿಗಳ ಚಿತ್ರ ಬಿಡಿಸುತ್ತಾ..   

ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಕಲಾವಿದ ಸೋಮಶೇಖರ್‌ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇಂದಿರಾನಗರದ ಲೇಝಿ ಸೂಝಿಯಲ್ಲಿ ಇತ್ತೀಚೆಗೆ ಆಯೋಜನೆಗೊಂಡಿತ್ತು.

ಸಣ್ಣ ವಯಸ್ಸಿನಿಂದಲೇ ಚಿತ್ರಕಲೆ ಸೋಮಶೇಖರ್‌ ಅವರ ಆಪ್ತ ವಲಯ. ಇವರ ಇಂಗ್ಲಿಷ್‌ ಶಿಕ್ಷಕರು ಕಲೆಯ ಬಗ್ಗೆ ಇವರಿಗಿರುವ  ಆಸಕ್ತಿ ಕಂಡು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಂದಿನಿಂದ ಇವರ ಕಲಾ ಪಯಣ ಆರಂಭವಾಯಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೂಲತಃ ಚನ್ನಪಟ್ಟಣದವರಾದ ಸೋಮಶೇಖರ್‌ ಇದುವರೆಗೂ 350ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ.

ಸೋಮಶೇಖರ್‌ ಪ್ರಕಾರ ಚಿತ್ರಕಲೆ ಎಂದರೆ ಕೇವಲ ಸುಂದರ ವಸ್ತುಗಳ ಪ್ರತಿಬಿಂಬವಲ್ಲ, ವಿಕೃತಿಗಳೂ ಇರಬೇಕು. ‘ನನಗೆ ವಿಕಾರ ಆಕೃತಿಗಳು, ಕತ್ತಲು ಇವುಗಳ ಕುರಿತು ಚಿತ್ರ ರಚಿಸುವುದೆಂದರೆ ಇಷ್ಟ, ಜೊತೆಗೆ ಮನುಷ್ಯನ ಮುಖಭಾವಗಳನ್ನು ಚಿತ್ರಿಸಲು ಸದಾ ಹಾತೊರೆಯುತ್ತೇನೆ’ ಎನ್ನುತ್ತಾರೆ ಸೋಮಶೇಖರ್‌ .

ಹೆಣ್ಣಿನ ಸೌಂದರ್ಯ, ಬದಲಾದ ಕಾಲಘಟ್ಟದ ಸೌಂದರ್ಯದ ಕುರಿತ ಮನೋಭಾವ, ಸುತ್ತಲಿನ ಪರಿಸರ ಇವರ ಚಿತ್ರಕಲೆಯ ವಸ್ತುಗಳು. ಇದುವರೆಗೂ ಎಂಟು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಹಲವಾರು ಕ್ಯಾಂಪ್‌ಗಳಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿದ್ದಾರೆ. ಮೈಸೂರು ದಸರದಲ್ಲಿ ಇವರ ಚಿತ್ರಗಳು ಪ್ರದರ್ಶನವಾಗಿವೆ.

ಗಾಳಿಪಟಗಳೆಂದರೆ ಎಲ್ಲಿಲ್ಲದ ಅಕ್ಕರೆ, ಹಾಗಾಗಿ ಗಾಳಿಪಟಗಳು ಕಾಗದದ  ಮೇಲೆ ಕಲಾಕೃತಿಯಾಗಿ ಮೂಡಿವೆ. ‘ಹೆಚ್ಚಾಗಿ ಕಪ್ಪು ಬಣ್ಣ ಬಳಸುತ್ತೇನೆ.
ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಳಿದ ವರ್ಣಗಳನ್ನು ಪ್ರಯೋಗಿಸುತ್ತೇನೆ. ಕಪ್ಪು ಬಣ್ಣಕ್ಕೂ ಅದರದೇ ಸೌಂದರ್ಯವಿದೆ’ ಎಂದು ಮುಗುಳು ನಗು ಬೀರುತ್ತಾರೆ ಸೋಮಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.