ADVERTISEMENT

ಪ್ರೀತಿ, ಹಣ ಯಾವುದು ಮುಖ್ಯ?

ಕಾವ್ಯ ಸಮತಳ
Published 5 ಜುಲೈ 2018, 20:29 IST
Last Updated 5 ಜುಲೈ 2018, 20:29 IST
ನಾಯೀಕತೆ ನಾಟಕ ತಂಡದ ಸದಸ್ಯರು
ನಾಯೀಕತೆ ನಾಟಕ ತಂಡದ ಸದಸ್ಯರು   

ತಂತ್ರಜ್ಞಾನ, ಆಸೆಗಳಿಂದಾಗಿ ಜನರ ನಡುವಿನ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿರುವ ಈ ಕಾಲಘಟ್ಟದಲ್ಲಿ ಪ್ರೀತಿ ಮತ್ತು ದುಡ್ಡಿನಲ್ಲಿ ಯಾವುದು ಪ್ರಮುಖ ಎಂಬುದನ್ನು ವಿಡಂಬನಾತ್ಮಕವಾಗಿ ವಿವರಿಸುವುದೇ ‘ನಾಯೀಕತೆ’.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ ‘ನಾಯೀಕತೆ’ಯು ಶೈಲೇಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ರಂಗರೂಪಕ್ಕೆ ಸಜ್ಜಾಗಿದೆ.

ಪ್ರಪಂಚದಲ್ಲಿ ಪ್ರೀತಿ ದೊಡ್ಡದೋ, ದುಡ್ಡು ದೊಡ್ಡದೋ ಎಂಬುದನ್ನುಹೇಳಲು ಒಂದು ತಂಡ ಗುಂಪು ಸೇರುತ್ತದೆ. ಹೀಗೆ ಆರಂಭಗೊಳ್ಳುವ ನಾಟಕವು ಎರಡು ಗುಂಪಾಗಿ ಭಾಗವಾಗುತ್ತವೆ. ಒಂದು ತಂಡ ‘ಪ್ರೀತಿನೇ ಹೆಚ್ಚು’ ಎಂದು ವಾದಿಸಿದರೆ ಮತ್ತೊಂದು ತಂಡ ಇಲ್ಲ ‘ದುಡ್ಡೇ ಎಲ್ಲ’ ಎನ್ನುತ್ತದೆ. ಹೀಗೆ ಎರಡೂ ತಂಡಗಳ ವಾದಗಳನ್ನು ಆಲಿಸಿದ ಹಿರಿಕನೊಬ್ಬ ಪ್ರೀತಿ ಮತ್ತು ದುಡ್ಡು ಎರಡೂ ಇರುವ ಕತೆಯೊಂದನ್ನು ಹೇಳಲು ಆರಂಭಿಸುತ್ತಾನೆ.

ADVERTISEMENT

ಒಂದು ಪುಟ್ಟ ಹಳ್ಳಿಯೊಂದರಲ್ಲಿ ದುಡ್ಡಿನ ಮದದಿಂದ ಮೆರೆಯುತ್ತಿದ್ದ ಪಟೇಲನೊಬ್ಬ ಆ ಊರಿಗೆ ಬರುವ ದೊಂಬರಾಟದ ಗುಂಪಿನಲ್ಲಿದ್ದ ಒಂದು ಹುಡುಗಿಯ ಮೇಲೆ ಕಣ್ಣಾಕುತ್ತಾನೆ. ಕಷ್ಟದಲ್ಲಿದ್ದ ಆ ಹುಡುಗಿಯ ಪೋಷಕರು ಪಟೇಲನು ತೋರಿಸುವ ಹಣದಾಸೆಗೆ ಬಲಿಯಾಗಿ ಮಗಳನ್ನು ಮಾರಲು ಸಿದ್ಧವಾಗುತ್ತಾರೆ. ಇವೆಲ್ಲವನ್ನು ಗಮನಿಸಿದ ಹುಡುಗಿಯು ಪಟೇಲನ ವಿರುದ್ಧ ಸೆಟೆದು ನಿಂತು, ಪಟೇಲನ ಶಿಷ್ಯನ ಸಹಾಯದಿಂದ ಪಟೇಲರಿಗೆ ಬುದ್ಧಿ ಕಲಿಸುತ್ತಾಳೆ. ನಾಟಕ ಕೊನೆಗೆ ಈ ತಂಡಗಳಲ್ಲಿ ಯಾವುದು ಹೆಚ್ಚುಎಂಬ ನಿರ್ಧಾರಕ್ಕೆ ಬರುತ್ತವೆಎಂಬುದೇ ಕುತೂಹಲಕರ ವಿಷಯ.

ವಿಡಂಬನೆ ಮತ್ತು ಹಾಸ್ಯಾತ್ಮಕ ರೀತಿಯಲ್ಲಿ ನಾಟಕವನ್ನು ಕಟ್ಟಿಕೊಡಲಾಗಿದ್ದು,ಉತ್ತರ ಕರ್ನಾಟಕದ ಭಾಷಾ ಸೊಗಡು, ಹಾಡುಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ.

ಕಳೆದ ಹತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಹವ್ಯಾಸಿ ಹಾಗೂ ವೃತ್ತಿಪರ ರಂಗ ಕಲಾವಿದರು ಸೇರಿ ಕಟ್ಟಿಕೊಂಡಿರುವ ತಂಡವೇ ಸೈಡ್‌ವಿಂಗ್‌. ಕಳೆದ ಒಂದು ವರ್ಷದಿಂದ ಪರಿಸರ ಜಾಗೃತಿ ಮೂಡಿಸುವ ವಿವಿಧ ಬೀದಿನಾಟಕಗಳನ್ನು ಈ ತಂಡವು‍ಪ್ರದರ್ಶಿಸಿದೆ. ‘ಇಲ್ಲಾ ಅಂದ್ರೆ ಇದೆ’, ಸಡನ್ನಾಗಿ ಸತ್ತೋದ್ರೆ’, ಸರ್ಗಾ ಮುಂತಾದ ನಾಟಕಗಳನ್ನು ರಚಿಸಿ ನಿರ್ದೇಶಿಸಿದೆ. ಶೈಲೇಶ್‌ ಕುಮಾರ್‌ ಅವರು ನಿರ್ದೇಶಿಸಿರುವ ಈ ನಾಟಕವನ್ನು ಸೈಡ್‌ವಿಂಗ್‌ ಕಲಾತಂಡವು ಪ್ರಸ್ತುತ ಪಡಿಸುತ್ತಿದೆ.

ನಾಟಕ: ನಾಯೀಕತೆ

ರಚನೆ: ಡಾ. ಚಂದ್ರಶೇಖರ ಕಂಬಾರ

ನಿರ್ದೇಶನ: ಶೈಲೇಶ್‌ ಕುಮಾರ್‌

ಸ್ಥಳ: ಕೆ.ಎಚ್‌. ಕಲಾಸೌಧ, ಹನುಮಂತನಗರ

ದಿನಾಂಕ: ನಾಳೆ (ಶನಿವಾರ) ರಾತ್ರಿ 7.30

ಪ್ರವೇಶ ದರ: ₹100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.