ADVERTISEMENT

ಅಮ್ಮನಂತಿದ್ದೂ ಅಮ್ಮನಂತಾಗದೆ...

ಮುಕ್ತ ಛಂದ

ಗೀರ್ವಾಣಿ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎನ್ನುವ ಗಾದೆಯಿದೆ. ಇದು ಸಾರ್ವಕಾಲಿಕ ಸತ್ಯ. ಇವತ್ತು ಮಗಳು ಇ–ಮೇಲ್, ಮೊಬೈಲ್, ಫೇಸ್‌ಬುಕ್, ವಾಟ್ಸ್ ಅಪ್ ಅಂತ ಹೊಸ ಹೊಸ ವಿಷಯಗಳನ್ನು ಕಲಿತಿರಬಹುದು. ಗೂಗಲ್ ಸರ್ಚ್ ಎಂಜಿನ್ ಬಳಸಿ ಅಮ್ಮನಿಗೇ ಅಮ್ಮನಾಗಿರಬಹುದು. ಪ್ರಗ್ನೆನ್ಸಿ, ತಾಯ್ತನಗಳ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಲಿತು ಅಮ್ಮನನ್ನೇ ಬೆರಗುಗೊಳಿಸಿರಬಹುದು, ಅಮ್ಮನ ಅಡುಗೆ ಮನೆಯ ಗಡಿಗಳನ್ನು ದಾಟಿ, ದೇಶದ ಗಡಿ ದಾಟಿಯೂ ಹೋಗಿ ಬಂದಿರಬಹುದು. ಅಪ್ಪನ ಸಹಾಯವಿಲ್ಲದೇ ಬಸ್ ಕೂಡ ಹತ್ತಿರದ ಅಮ್ಮನ ಕಣ್ ಮುಂದೆಯೇ ಉಕ್ಕಿನ ಹಕ್ಕಿಯನ್ನೇರಿ ಪ್ರಪಂಚ ಸುತ್ತಿರಬಹುದು. ಸಾಫ್ಟ್‌ವೇರ್ ಇಂಜಿನಿಯರ್, ಚಾರ್ಟಡ್ ಅಕೌಂಟಂಟ್, ಟೂರ್ ಗೈಡ್, ಕಂಪ್ಯೂಟರ್ ಟೆಕ್ನೀಷಿಯನ್, ಲೆಕ್ಚರರ್, ಡ್ರೈವರ್, ಮರಿನ್ ಇಂಜಿನಿಯರ್– ಹೀಗೆ ಪುರುಷನ ಸಮಕ್ಕೆ ಕೆಲಸ ಮಾಡಿ ತೋರಿಸಿರ ಬಹುದು. ಆದರೆ ಆಕೆ ತುಂಬಾ ವಿಷಯಗಳಲ್ಲಿ ಅಮ್ಮನ ಮಗಳೇ!

ಮಗಳು ಈಗ ಅಮ್ಮನಂತೆ ಸಾಸಿವೆ ಡಬ್ಬದಲ್ಲಿ ಕಾಸು ಕೂಡಿಡುತ್ತಿಲ್ಲ. ಕಣ್ಣಿನ ಕಾಡಿಗೆಗಾಗಿ ಗಂಡನಲ್ಲಿ ಕೈಯೊಡ್ಡುತ್ತಿಲ್ಲ, ತಿಂಗಳ ಮುಜುಗುರವನ್ನು ಡಿಲೀಟ್ ಮಾಡಿಯಾಗಿದೆ, ಅಮ್ಮನಂತೆ ಸೆರಗ ತುದಿಯಿಂದ ಕಣ್ಣೀರು ಒರೆಸುತ್ತಿಲ್ಲ. ಆ ಜಾಗಕ್ಕೆ ಟಿಶ್ಯು ಬಂದು ಕೂತಿದೆ. ಬ್ಯಾಂಕ್‌ಗೆ, ಗವರ್ನಮೆಂಟ್ ಆಫೀಸುಗಳಿಗೆ, ಮಾರ್ಕೆಟ್ಟಿಗೆ ಹೋಗಲು ಹಿಂಜರಿಕೆಯಿಲ್ಲ. ಹೌದು, ಮಗಳು ಈಗ ಅಮ್ಮನಂತೆ ಇಲ್ಲ. ಆದರೂ ಅಮ್ಮನಾಗುತ್ತಿದ್ದಂತೆ ಅಮ್ಮನಂತಾಗುತ್ತಾಳೆ!

ಕುತೂಹಲದ ವಿಷಯ ಏನಂದ್ರೆ ಹೆಣ್ಣುಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಅಂದುಕೊಳ್ಳುವುದು ನಾನು ಮಾತ್ರ ಅಮ್ಮನಂತಾಗುವುದಿಲ್ಲ ಎಂದು! ನಾನು ಮಾತ್ರ ಅಮ್ಮನಂತೆ ಯಾವಾಗಲೂ ಅಡುಗೆ ಮನೆ ಒಳಗೆ ಸೇರಿಕೊಂಡಿರುವುದಿಲ್ಲ. ನಾನು ಮಾತ್ರ ಅಮ್ಮನಂತೆ ಅಸಹಾಯಕಳಾಗುವುದಿಲ್ಲ. ನಾನು ಮಾತ್ರ ಅಮ್ಮನಂತೆ ಅಪ್ಪನನ್ನು ಅವಲಂಬಿಸಿರುವುದಿಲ್ಲ. ಗಂಡ ಸಿಡುಕಿದಾಗ ಅಮ್ಮನಂತೆ ಕತ್ತಲ ಕೋಣೆ ಸೇರಿ ಬಿಕ್ಕುವುದಿಲ್ಲ. ಅಪ್ಪನ ಬಳಗಕ್ಕೆ ಡೋರ್ ಮ್ಯಾಟ್ ಆಗುವುದಿಲ್ಲ. ಅಮ್ಮನಂತೆ ಮಕ್ಕಳು, ಸಂಸಾರ ಎಂದು ಕಳೆದು ಹೋಗುವುದಿಲ್ಲ. ಅಮ್ಮನಂತೆ ದೈನ್ಯತೆಯೇ ಮೂರ್ತಿವೆತ್ತಂತೆ ಬದುಕುವುದಿಲ್ಲ. ಒಟ್ಟಾರೆ ಅಮ್ಮನಂತೆ ಹಲ್ಲು ಕಚ್ಚಿ ಸಹಿಸಿಕೊಂಡಿರುವುದಿಲ್ಲ ಎಂದು ಹಲವಾರು ಇಲ್ಲಗಳನ್ನು ಬೆಳೆಸಿಕೊಂಡು ಬೆಳೆಯುತ್ತಿರುತ್ತಾಳೆ.

ಆಕೆಯ ಕಣ್ಣಲ್ಲಿ ಅಮ್ಮ ಎಷ್ಟೋ ಸಲ ಪೆದ್ದಿಯಂತೆ ಕಂಡಿರುತ್ತಾಳೆ, ಕೈಲಾಗದವಳಂತೆ ಕಂಡಿರುತ್ತಾಳೆ. ಮನೆಗುಬ್ಬಿಯಂತೆ ಕಂಡಿರುತ್ತಾಳೆ. ದುರ್ಬಲ ಮನಸ್ಸಿನವಳಂತೆ ಕಂಡಿರುತ್ತಾಳೆ. ಎದುರಿಸಲಾಗದ ಹೇಡಿಯಂತೆ ಕಂಡಿರುತ್ತಾಳೆ. ಅಮ್ಮನಿಗೆ ಸಂಸಾರ ನಡೆಸುವ ಜಾಣ್ಮೆಯೇ ಇಲ್ಲ ಅಂದುಕೊಂಡಿರುತ್ತಾಳೆ. ಸುಲಭದ್ದನ್ನು ಕಷ್ಟ ಮಾಡಿಕೊಳ್ಳುವ ಮಳ್ಳು ಎನಿಸಿರುತ್ತಾಳೆ.   

ನಾನಂತೂ ಇಂಥ ಬಾಳು ಬಾಳುವುದಿಲ್ಲ. ನಾನು ಕಾನ್ಫಿಡೆನ್ಸಿನಿಂದ ಬದುಕುತ್ತೇನೆ, ನನ್ನದೇ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತೇನೆ. ನನ್ನ ಸಂಸಾರದಲ್ಲಿ ಸಂಘರ್ಷಗಳಿಗೆ ಅವಕಾಶ ಮಾಡಿ ಕೊಡುವುದಿಲ್ಲ. ಗಂಡನನ್ನು ಮುಷ್ಟಿಯಲ್ಲಿಟ್ಕೋತೀನಿ. ಅವನನ್ನು ಕಂಟ್ರೋಲ್ ಮಾಡಿದ್ದು ಗೊತ್ತೇ ಆಗದ ಹಾಗೆ ನೋಡ್ಕೋತೀನಿ. ನಾನಂತೂ ಗಂಡನ ಕೈಲಿ ಅನ್ನಿಸ್ಕೊಳಲ್ಲ. ನಾನು ಎಜುಕೇಟೆಡ್ ಆಗಿದ್ದರೆ ನನ್ನ ಗಂಡ ನನ್ನ ಗೌರವಿಸೇ ಗೌರವಿಸುತ್ತಾನೆ. ಎಂದೆಲ್ಲ ಅನೇಕ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ, ತನ್ನೊಳಗೇ ಉತ್ತರ ಕಂಡುಕೊಳ್ಳುತ್ತ ಬೆಳೆಯುತ್ತಾಳೆ.

ಅಂದುಕೊಂಡಂತೆ ಡಬಲ್ ಡಿಗ್ರಿ ಪಡೆದು ಇಂಡಿಪೆಂಡೆಂಟ್ ಆಗುತ್ತಾಳೆ. ಒಳ್ಳೆಯ ಕೆಲಸ ಹುಡುಕುತ್ತಾಳೆ, ಓಡಾಡಲು ಸ್ಕೂಟಿ ಖರೀದಿಸುತ್ತಾಳೆ. ಅಮ್ಮನನ್ನು ಕರೆದುಕೊಂಡು ಹೋಗಿ ತನ್ನ ಸಂಬಳದಲ್ಲಿ ಅವಳು ಬಯಸಿದ್ದೆಲ್ಲ ಕೊಡಿಸುತ್ತಾಳೆ. ಅಮ್ಮನಿಗೆ ಧೈರ್ಯ ಹೇಳುತ್ತಾಳೆ. ‘ಬರೀ ಇದೇ ಆಯ್ತು ನಿಂದು’ ಎಂದು ಅಮ್ಮನಿಗೆ ಜೋರು ಮಾಡುತ್ತಾಳೆ. ‘ನಾನು ಬದುಕಿ ತೋರಸ್ತೀನಿ ನೋಡ್ತಿರು’ ಎನ್ನುತ್ತಾಳೆ. ‘ನಿಂಗೇನು ಗೊತ್ತಾಗ್ಲಿಲ್ಲ. ಕಷ್ಟಪಟ್ಟು ಬಿಟ್ಟೆ’ ಎನ್ನುತ್ತಾಳೆ. ಅಮ್ಮನಿಗೂ ಹೌದೆನಿಸುತ್ತೆ. ಅಮ್ಮನೂ ಕೌತುಕದ ಕಣ್ಣಿಂದ ಮಗಳನ್ನು ನೋಡುತ್ತಾಳೆ. ಅರೆರೆ, ನನ್ನ ಮಡಿಲಲ್ಲೇ ಆಡಿ ಬೆಳೆದ ಮಗಳು ಇವತ್ತು ನನಗೇ ಅಮ್ಮನಾಗಿದ್ದಾಳಲ್ಲ ಎಂದು ಹೆಮ್ಮೆಪಡುತ್ತಾಳೆ.

ಮಗಳು ತಿಂಗಳಿಗೆ ಎಣಿಸುವ ದುಡ್ಡಿನ ಒಂದು ಪಾಲನ್ನೂ ಅಮ್ಮ ಆವರೆಗೆ ಕಂಡಿರುವುದಿಲ್ಲ. ಗಂಡನ ಬಳಿ ಹಿಡಿಯಾಗುತ್ತ ದುಡ್ಡು ಕೇಳುವ ಅಮ್ಮನಿಗೆ ಮಗಳು ಸಂಪಾದಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ. 500 ಕೇಳಿದರೆ 100 ರೂಪಾಯಿ ಹಿಡಿಸುವ ಗಂಡನ ಜುಗ್ಗತನಕ್ಕೆ ಒಳಗೊಳಗೇ ಮರುಗಿರುತ್ತಾಳೆ. ‘ಉಳಿದ ದುಡ್ಡು ವಾಪಸ್ ಕೊಡು’ ಎಂದು ಗಂಡ ಕೇಳಿದಾಗ ವಿವರಿಸಲಾಗದ ಅಭದ್ರತೆ ಅನುಭವಿಸಿರುತ್ತಾಳೆ ಅಮ್ಮ. ‘ಮಗಳು ಸದ್ಯ ನನ್ನಂತಾಗಲಿಲ್ಲ. ನನ್ನಂತೆ ಹಣಕ್ಕಾಗಿ ಕೈಯೊಡ್ಡುವ ಸ್ಥಿತಿಯಂತೂ ಅವಳಿಗಿಲ್ಲ’ ಎಂದು ಅಮ್ಮ ಸಮಾಧಾನಪಟ್ಟುಕೊಳ್ಳುತ್ತಾಳೆ.

ಹೌದು. ಮಗಳು ಅಮ್ಮನ ನನಸಾಗದ ಕನಸನ್ನು ನಿಜವಾಗಿಸುವಂತೆ ಒಂದಷ್ಟು ದಿನ ಬದುಕುತ್ತಾಳೆ. ವಿಶ್ವ ಶಕ್ತಿಯ ಒಂದು ಭಾಗವೇ ತಾನು. ತನ್ನಂತೆ ಎಲ್ಲ ಹುಡುಗಿಯರೂ ಬದುಕಿದರೆ ಹೆಣ್ಣಿನ ಸಂಕೋಲೆಗಳು ತಾವಾಗೇ ಬಿಟ್ಟು ಹೋಗುತ್ತವೆ ಎಂಬೆಲ್ಲ ಭ್ರಮೆಯಲ್ಲಿ ಬದುಕುತ್ತಾಳೆ. ಆದರೆ ಮದುವೆಯಾದ ಬಳಿಕ?

ಮಗಳಿಗೆ ಅಷ್ಟು ದಿನ ಅಮ್ಮನ ಕಂಫರ್ಟ್‌ ಝೋನಿನಲ್ಲಿ ಬದುಕುತ್ತಿರುವುದು ಗೊತ್ತೇ ಇರುವುದಿಲ್ಲ. ಅಮ್ಮನ ನೆರಳಲ್ಲಿ ಅವಳು ಕಾಂಪ್ರಮೈಸ್ ಮಾಡಿಕೊಳ್ಳಬೇಕಿರಲಿಲ್ಲ, ನಿರೀಕ್ಷೆ ಮಾಡಬೇಕಿರಲಿಲ್ಲ, ಇನ್ಯಾರದೋ ನಿರೀಕ್ಷೆಗೆ ಕತ್ತು ಕೊಡಬೇಕಿರಲಿಲ್ಲ, ಅಮ್ಮ ತಂದಿಟ್ಟ ಹಾರ್ಲಿಕ್ಸ್ ಅನ್ನು ಕಣ್ಣೆತ್ತಿಯೂ ನೋಡದೇ ಹೊರಟು ಬಿಡಬಹುದಿತ್ತು. ಹಾಲು ಕುಡಿ ಎಂದರೆ ಮುಖ ಸಿಂಡರಿಸಬಹುದಿತ್ತು. ಇದೆಂಥ ಹಳ್ಳಿ ಗೊಡ್ಡು ಥರ ಆಡ್ತೀಯ ಎಂದು ಅಮ್ಮನನ್ನು ಬೈಯಬಹುದಿತ್ತು. ನಿಂಗೆ ಸೆನ್ಸೇ ಇಲ್ಲ ಅಂದುಬಿಡಬಹುದಿತ್ತು.

ಆದರೆ ಒಮ್ಮೆ ಮದುವೆ ಎಂಬ ವ್ಯವಸ್ಥೆಗೆ ಒಳಪಟ್ಟ ದಿನದಿಂದ? ಅಂದಿನಿಂದ ಮಗಳು ಮೆಲ್ಲಗೆ ಅಮ್ಮನಾಗುವತ್ತ ಮುಖ ಮಾಡುತ್ತಾಳೆ. ತನ್ನನ್ನು ತನ್ನ ಸರ್ಟಿಫಿಕೆಟ್ ಕಾಪಾಡತ್ತೆ ಎಂದುಕೊಂಡಿದ್ದವಳಿಗೆ ಅದರ ನಿರರ್ಥಕತೆ ಅರ್ಥವಾಗತೊಡಗುತ್ತದೆ. ಮೊದ ಮೊದಲು ಅವಮಾನಗಳಿಗೆ, ಅಲಕ್ಷ್ಯಗಳಿಗೆ ಸಿಡಿದೇಳುತ್ತಾಳೆ. ನಾನೇನು ಕಡಿಮೆ? ನನಗೇನು ಕಡಿಮೆ? ನಾನ್ಯಾಕೆ ಎಲ್ಲರ ನಿರೀಕ್ಷೆಯನ್ನೂ ತಣಿಸಬೇಕು? ನಾನ್ಯಾಕೆ ಅವರ ದಡ್ಡತನಗಳನ್ನು ಒಪ್ಪಿಕೊಳ್ಳಬೇಕು? ಎಂದು ಬಂಡುಕೋರತನ ತೋರಿಸುತ್ತಾಳೆ.
ಗಂಡನ ಮೌನಗಳಿಗೆ ಅಲಕ್ಷ್ಯದ ಉತ್ತರ ನೀಡುತ್ತಾಳೆ, ಅಪ್ಪನ ಸಿಡುಕಿಗೆ ಅವಮಾನಿತಗೊಂಡು ಅಳುತ್ತಿದ್ದ ಅಮ್ಮನನ್ನು ನೆನೆದು ಗಟ್ಟಿಯಾಗುತ್ತಾಳೆ. ಅಮ್ಮನಂತಾಗುವುದಿಲ್ಲ ಅಂದುಕೊಳ್ಳುತ್ತಾಳೆ. ಗಂಡ ಕೆಲಸ ಬಿಡು ಎಂದಾಗ ‘ಪಾತ್ರೆ ನೀನ್ ತೊಳಕೊಡ್ತೀಯ?’ ಎಂದು ಕೇಳಿ ಬಾಯಿ ಮುಚ್ಚಿಸುತ್ತಾಳೆ. ಆದರೆ ಇವೆಲ್ಲ ಎಷ್ಟು ದಿನ? ಒಂದು ದಿನ ಮಗಳು ಅಮ್ಮನಾಗುತ್ತಾಳೆ. ಆಗ ತೊಟ್ಟಿಲ ಕಂದನಿಗಾಗಿ ಅನಿವಾರ್ಯವಾಗಿ ಕೆಲಸ ಬಿಡುತ್ತಾಳೆ. ಅಥವಾ ಸಂಸಾರದ ಮೋಹ ಕೆಲಸ ಬಿಡುವಂತೆ ಮಾಡುತ್ತದೆ. ಅಲ್ಲಿಂದ ಆಕೆ ನಿಜ ಅರ್ಥದ ಅಮ್ಮನಾಗುವ ಪ್ರಕ್ರಿಯೆ ಶುರುವಾಗುತ್ತದೆ.

ತಾನು ದುಡಿಯುತ್ತಿಲ್ಲ ಎಂಬ ಭಾವ ಅವಳೊಳಗೆ ಅಭದ್ರತೆಯ ಬೀಜ ಬಿತ್ತತೊಡಗುತ್ತದೆ. ಸಂಸಾರವೆಂದರೆ ಕಾಂಪ್ರಮೈಸ್ ಎಂಬ ಸತ್ಯ ನಿಧಾನವಾಗಿಯಾದರೂ ಅರ್ಥವಾಗತೊಡಗುತ್ತದೆ. ಗಂಡನ ಅಸಹನೆಗಳಿಗೆ ಕಿವುಡಾಗತೊಡಗುತ್ತಾಳೆ, ಅವನ ಅಸಹಕಾರಕ್ಕೆ ಬಿಕ್ಕಳಿಕೆ ಎದ್ದು ಬಂದಾಗ ಟಿಶ್ಯು ಪೇಪರಿಗೆ ಕಣ್ಣೀರೊರೆಸಿಕೊಳ್ಳುತ್ತಾಳೆ. ಕಿರುಚಿ, ಕೂಗಾಡಿಬಿಡುವ ಕೋಪ ಬಂದರೂ ಅವಡುಗಚ್ಚುತ್ತಾಳೆ, ಹೊಸ ಡ್ರೆಸ್ ಬೇಕು ಎನಿಸಿದರೂ ಸುಮ್ಮನಿದ್ದು ಬಿಡುತ್ತಾಳೆ. ಮೊಬೈಲಿಗೆ ಕರೆನ್ಸಿ ಇಲ್ಲದಾಗ ಮೈ ಹಿಡಿ ಮಾಡಿಕೊಂಡು ಗಂಡನ ಬಳಿ ಮೆಲ್ಲಗೆ ಉಸುರುತ್ತಾಳೆ. ‘ಅದೆಷ್ಟು ಮಾತಾಡ್ತೀಯ ಮೊಬೈಲ್‌ನಲ್ಲಿ?’ ಎಂದು ಅವನು ತಮಾಷೆಗೆ ಕೇಳಿದರೂ ಸತ್ತೇ ಹೋಗಿಬಿಡೋಣ ಅಂದುಕೊಳ್ಳುತ್ತಾಳೆ. ಮಗುವಿನ ಸಲುವಾಗಿ ಜಗಳವಾದಾಗೆಲ್ಲ ಮಗುವನ್ನು ತಬ್ಬಿ ಕಣ್ಣೀರಿಡುತ್ತಾಳೆ. ಅವನ ಕಡೆಯವರು ಬಂದಾಗ ಸ್ವಂತದ ಸಂತೋಷವನ್ನೂ ಬದಿಗಿಟ್ಟು ಉಪಚರಿಸುತ್ತಾಳೆ. ಅವನಿಗಾಗಿ ಅಡುಗೆ ಮನೆ ಸೇರಿಕೊಂಡು ಗಂಟೆಗಳೇ ಕಳೆಯುತ್ತಾಳೆ. ತಾನು ಕೂಡ ಅವನಂತೆ ಐದಂಕಿ ಸಂಬಳ ತರುತ್ತಿದ್ದೆ ಎಂಬ ಸಂಗತಿಯನ್ನೇ ಮರೆತುಬಿಡುತ್ತಾಳೆ. ಅರೆ! ಎಲ್ಲಿ ಹೋದಳು ಅಮ್ಮನಂತಾಗುವುದಿಲ್ಲ ಅಂದುಕೊಂಡ ಮಗಳು? ಎಲ್ಲಿ ಹೋದವು ಡಬಲ್ ಡಿಗ್ರಿ ಸರ್ಟಿಫಿಕೇಟ್?

ಮಗಳ ಆವೇಶ, ಆದರ್ಶಗಳೆಲ್ಲ ಮದುವೆಯ ಬಂಧನದಲ್ಲಿ ಸಿಕ್ಕು ಕೊನೆಯುಸಿರೆಳೆದಿವೆ. ಹೌದು. ಮದುವೆ ಎನ್ನುವ ಪ್ರಕ್ರಿಯೆ ಎಲ್ಲವನ್ನೂ ನೆಲಕ್ಕೊತ್ತಿ ಹೊಸಕಿ ಹಾಕಿ ಬಿಡಬಲ್ಲದು. ಮದುವೆಯನ್ನು ಉಳಿಸಿಕೊಳ್ಳಬೇಕು, ಅಪ್ಪ, ಅಮ್ಮ ಅಂದುಕೊಂಡ ಆದರ್ಶಗಳಿಗೆ ಕೊಳ್ಳಿ ಇಡಬಾರದು, ಅವರ ಮಾನ ಮರ್ಯಾದೆ ಕಳೆಯಬಾರದು ಅಂದುಕೊಂಡ ಎಲ್ಲ ಹೆಣ್ಣುಮಕ್ಕಳೂ ಅಮ್ಮನಂತಾಗುತ್ತಾರೆ. ಅವಳಂತೆ ಅವಡುಗಚ್ಚಿ ಸಹಿಸುವುದನ್ನು ಕಲಿಯುತ್ತಾರೆ, ಕತ್ತಲ ಕೋಣೆಯಲ್ಲದಿದ್ದರೂ ಬಚ್ಚಲ ಮನೆಗೆ ಹೋಗಿ ಅತ್ತು ಬರುತ್ತಾರೆ. ಸೆರಗ ತುದಿಯಲ್ಲದಿದ್ದರೂ ಚೂಡಿದಾರದ ದುಪ್ಪಟ್ಟಾಕ್ಕೆ ಕಣ್ಣೀರು ಒರೆಸಿಕೊಳ್ಳುತ್ತಾರೆ. ಹೊಗೆ ತಿನ್ನುತ್ತ ಅಡುಗೆ ಮಾಡದಿದ್ದರೂ ಗ್ಯಾಸ್ ಒಲೆ ಎದುರು ಗಂಟೆಗಳನ್ನು ಕಳೆಯುತ್ತಾರೆ. ಗಂಡನ ಬಳಿ ಕೈಯೊಡ್ಡದಿದ್ದರೂ ಅವನೇ ಹಾಕಿದ ದುಡ್ಡನ್ನು ಎಟಿಎಂನಲ್ಲಿ ತೆಗೆದುಕೊಂಡು ತೆಪ್ಪಗಿರುತ್ತಾರೆ. 

ಕೊನೆಗೂ ಮಗಳು ಅಮ್ಮನಂಥ ಅಮ್ಮನಾಗದಿರಬಹುದು. ಆದರೆ ಅಮ್ಮನಂತೆಯೇ ಅಮ್ಮನಾಗಿದ್ದಾಳೆ. ಅಮ್ಮನಂಥ ಹತಾಶೆ ಅನುಭವಿಸದಿರಬಹುದು. ಆದರೆ ಹತಾಶೆಯ ಅನುಭವ ಹೊಂದುತ್ತಾಳೆ. ಅಮ್ಮನಂತೆ ದೈನ್ಯತೆಯೇ ಮೂರ್ತಿವೆತ್ತಂತೆ ಇರದಿರಬಹುದು. ಆದರೆ ದೈನ್ಯದ ಕ್ಷಣಗಳಿಗೆ ಸಾಕ್ಷಿಯಾಗುತ್ತಾಳೆ. ಬದುಕು ಎಂಥವರನ್ನೂ ಮಾಗಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.