ADVERTISEMENT

ಆ ಯುಗಾದಿಯ ಚಿತ್ರ

ಕವಿತೆ

ಮಂಜುನಾಥ ವಿ.ಎಂ.
Published 28 ಮಾರ್ಚ್ 2015, 19:30 IST
Last Updated 28 ಮಾರ್ಚ್ 2015, 19:30 IST
ಆ ಯುಗಾದಿಯ ಚಿತ್ರ
ಆ ಯುಗಾದಿಯ ಚಿತ್ರ   

ಏಪ್ರಿಲ್ ತಿಂಗಳ ಹೂಚಿಗುರಿನ ಮೋಹಕ ಬೆಳಕು ಬಲೆಯಂತೆ
ನನ್ನ ಮೈಮೇಲೆ ಬಿತ್ತು.
ಬಿರುಕುಗೋಡೆಗೆ ತಳ್ಳಿಬಿಟ್ಟಿದ್ದ ಸೈಕಲ್ ಚಕ್ರವನ್ನು ಕಡ್ಡಿಯಿಂದ
ಹೊಡೆದುಕೊಂಡು ಅಪ್ಪನೆದುರಿಗೆ ನಿಂತೆ,
ಬಡ್ಡಿ ರಾಮಚಂದ್ರನ ರೇಗಿದ ಮುಖ
ಅವನ ಮುಖದ ಮೇಲೆ ಮೊಹರಿನಂತೆ ಅಚ್ಚೊಡೆದಿತ್ತು.

ದೇವಾಲಯದ ತುದಿಯಲ್ಲಿನ ಶಿಲುಬೆಯನ್ನು ನೋಡಿದೆ,
‘ಹಬ್ಬಕ್ಕೆ ಬಟ್ಟೆ ತತ್ತೀನಿ, ನಡೀ’ ಅಂದ ಅಪ್ಪ ಕಾಣಲಿಲ್ಲ,
ಅವನು ಸೀಳಿದ ಹಾದಿಯಲ್ಲಿ ಗುಬ್ಬಚ್ಚಿಗಳ ಹಿಂಡು. 

ಚಕ್ರವನ್ನು ಗುಡುಗುಡಿಸಿದೆ,
ನಿರಾಶೆಯ ಕಾರ್ಮೋಡ ಚದುರತೊಡಗಿತು.

ಮನೆಗೋಡೆಗೆ ಬಿದ್ದ ಹೂಬಳ್ಳಿಗೆ ನಾವೆಲ್ಲರೂ ತಗುಲಿಕೊಂಡಿದ್ದೆವು,
ವಲಸೆಹಕ್ಕಿಗಳಂತೆ.
ಅಪ್ಪ ಹೊಸ ಉಡುಪುಗಳನ್ನೊತ್ತ ಸೈಕಲ್ಲಿನೊಂದಿಗೆ ಮನೆಹಾದಿಯ
ಹೂಬಳ್ಳಿಯೊಳಗೆ ತೂರುತ್ತಿದ್ದಂತೆ,
ನಾವೆಲ್ಲರೂ ಏರೋಪ್ಲೇನ್ ಚಿಟ್ಟೆಗಳಂತೆ ಮುತ್ತಿಕೊಂಡೆವು,
ಅವನನ್ನು ಮುತ್ತಿಡುತ್ತಾ...

ADVERTISEMENT

ನಮ್ಮ ಪಾಲಿನ ಹೊಸ ಉಡುಪುಗಳಿಗೆ
ಹೊಂಗೆ ಚಿಗುರಿನ ಸುಗಂಧ ಹನಿಯತೊಡಗಿತ್ತು.

ಆ ತಿಂಗಳಿನ ಕಾಣಿಕೆಯೇ ಹಾಗೆ:
ಬಣ್ಣ ಬೀರುವ ಕತ್ತಲಿನಲ್ಲಿ ಅಪ್ಪ ಕಾಗದ ಪತ್ರವೊಂದನ್ನು ಅಮ್ಮನಿಗೆ ತೋರಿಸಿ,
ಕಾಯಿನ್‌ಗಳ ಪುಟ್ಟಚೀಲವನ್ನು ಅವಳ ಕೈಗಿತ್ತು ನೆಲ ಕಚ್ಚಿದ;
ಅವಳು ಮೌನ ವಹಿಸಿ ಬೆನ್ನುಮರವನ್ನು ದಿಟ್ಟಿಸಿದಳು.

ಅಡುಗೆ ಮನೆಯೊಳಗಿಳಿದಿದ್ದ ಬಳ್ಳಿ ಚಿಗುರು ಸವಿಯುವ ಅಳಿಲುಗಳು
ಸುಳಿಯತೊಡಗಿದವು.

ಹಬ್ಬಕ್ಕೆ ಮೂರು ದಿನಗಳಷ್ಟೇ ಉಳಿದಿದ್ದವು.
ಅಮಿತಾಬ್ ಹೇರ್‌ಸ್ಟೈಲ್‌ನ ಟೈಲರ್ ಚೆನ್ನ,
ತನ್ನ ಎಂದಿನ ಧಿಮಾಕು ಪ್ರದರ್ಶಿಸಿ ನಮ್ಮೆಲ್ಲರ ಮನಗೆದ್ದಿದ್ದ.
‘ಇವೆಲ್ಲ ರೆಡಿಮೇಡ್ ಬಟ್ಟೆಗಳು, ಒಂದೊಂದು ಹೊಲ್ಗೆ ಬೀಳ್ಬೇಕು’
ಎಲ್ಲವನ್ನೂ ಹೆಗಲಿಗೇರಿಸಿಕೊಂಡು ಆ ಬೆಳಿಗ್ಗೆ ಅಸ್ತಮಿಸಿದ.

ಮರ ಏರಿದೆವು,
ಬಳ್ಳಿ ಹಿಡಿದಾಡಿದೆವು, ಉದುರುವ ಚಿಗುರೆಲೆಗಳಲ್ಲಿ ಮುಖವಿಟ್ಟು ಸುಖಿಸಿದೆವು;
ಕಾದೆವು ನಮ್ಮ ಉಡುಪುಗಳಿಗಾಗಿ.

‘ಆ ಹಣ್ಣೆಲೆಗೊಂಚಲು ಉದುರಿ ಬಿದ್ದರೆ ಯುಗಾದಿ ಅಂದ ಅಮ್ಮ,
ಕಲಾವಿದ ಪೀಟರ್ ಬರೆದ ಗುಲಾಬಿಗಿಡಗಳಿಗೆ ಬಣ್ಣ ತುಂಬುತ್ತಿದ್ದಳು.

ಆ ಏರುಹಾದಿ ಖಾಲಿ ಹೊಡೆಯತೊಡಗಿತು,
ಬಾಂಬೆ ಟೈಲರ್ ಅಂಗಡಿಗೆ ಹೋಗಿ ಚೆನ್ನನ ಕುರಿತು ಕೇಳಿದೆವು.
ಕುಡಿತಕ್ಕಾಗಿ ನಮ್ಮ ಹೊಸ ಉಡುಪುಗಳನ್ನು ತಬ್ಬಲಿ ಕುಟುಂಬವೊಂದಕ್ಕೆ
ಮಾರಿಕೊಂಡ ಚೆನ್ನ,
ಹುಚ್ಚುನಗೆಗಳಲ್ಲಿ, ವಿಕಾರ ಅಳುವಿನಲ್ಲಿ ಕರಗಿದ್ದ;
ದೇಶಾಂತರ ಹೋಗಿದ್ದ.

ಹಬ್ಬದ ಹಕ್ಕಿಗಳು ತೋರಣದ ತೂಗುಯ್ಯಾಲೆಯಲ್ಲಿ ನೆನಪು ಬಿಚ್ಚುತ್ತಿದ್ದವು.
‘ಅವನಿನ್ನು ಬರಲಾರ,
ಹೊಲಿಗೆ ಹಾಕಿದ ಹೊಸ ಉಡುಪುಗಳನ್ನು ಇನ್ನೆಂದಿಗೂ ತರಲಾರ’ ಎಂದು
ಮನೆ ಗೋಡೆಯ ಮರದ ಗಿಣಿ ಕಣಿ ನುಡಿಯಿತು.

ಆ ಯುಗಾದಿಯ ಚಿತ್ರ ಅಳಿದು,
ನಮ್ಮ ಬೆನ್ನುಗಳು ಉಜ್ಜಿ ಗೋಡೆ ಗುಲಾಬಿಗಿಡಗಳ ಬಣ್ಣ ಮಾಸತೊಡಗಿತು.

‘ಯುಗಾದಿಗೆ ಮಾಡ್ದ ಸಾಲ ತೀರ್ಸೋ,
ಇಲ್ಲಾಂದ್ರೆ ಕುದುವಿಕ್ಕಿದ ಮನೆ ಬಿಟ್ಟುಹೋಗಲೇ’
ಬಡ್ಡಿ ರಾಮಚಂದ್ರ ಅಪ್ಪನನ್ನು ಸೀಳತೊಡಗಿದ,
ಒಣಕಟ್ಟಿಗೆಯನ್ನು ಕೊಡಲಿಯಿಂದ ಕೊಚ್ಚಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.