ADVERTISEMENT

ಇಲಿ ಬೇಟೆಯ ಪ್ರಸಂಗ

ಲಹರಿ

ಗೊರೂರು ಶಿವೇಶ್
Published 21 ಮೇ 2016, 19:51 IST
Last Updated 21 ಮೇ 2016, 19:51 IST
ಚಿತ್ರ – ಈಶ್ವರ ಬಡಿಗೇರ
ಚಿತ್ರ – ಈಶ್ವರ ಬಡಿಗೇರ   

ಬೇಟೆ ಎಂದೊಡನೆ ಕೆನತ್ ಆಂಡರ್‌ಸನ್ ಇಲ್ಲವೆ ಕೆದಂಬಾಡಿ ಜತ್ತಪ್ಪರೈಯವರ ಹುಲಿಯ ಬೇಟೆಯ ದೃಶ್ಯಗಳು ನೆನಪಿಗೆ ಬರಬಹುದು. ಆದರೆ ಈಗ ಬೇಟೆಯ ಮಾತಿರಲಿ, ಸಿನಿಮಾಗಳಲ್ಲಷ್ಟೇ ವನ್ಯಮೃಗಗಳನ್ನು– ಅದರಲ್ಲೂ ಗ್ರಾಫಿಕ್ ಹುಲಿ, ಸಿಂಹಗಳನ್ನು ನೋಡಬೇಕಾದ ಪರಿಸ್ಥಿತಿಯಿದೆ.

ನರಿ, ಜಿಂಕೆಗಳನ್ನು ಬೇಟೆಯಾಡಿದರೂ ಕಂಬಿ ಎಣಿಸಬೇಕಾದ ಸಂದರ್ಭದಲ್ಲಿ ಅವುಗಳ ಬೇಟೆಯನ್ನು, ಅದರ ರೋಮಾಂಚನವನ್ನು ಅನುಭವಿಸಿ ಬರೆಯುವುದು ಅಸಾಧ್ಯವೇ ಸರಿ.

ಅಕ್ಕಪಕ್ಕದವರು ಕಾಯಿ ಒಡೆದರೆ ನಾವು ಕರಟವನ್ನಾದರೂ ಒಡೆಯದಿದ್ದರೆ ಹೇಗೆ? ಹತ್ತಾರು ಕೋಟಿಗಳ ಬಿಗ್ ಬಜೆಟ್‌ನ ಸಿನಿಮಾದೆದುರು ಒಂದೆರಡು ಕೋಟಿಗಳ ಲೋ ಬಜೆಟ್‌ನ ಚಿತ್ರವು ಸೂಪರ್ ಹಿಟ್ ಆದ ಉದಾಹರಣೆಯೂ ಇದೆಯಷ್ಟೇ! ಈ ಪವಾಡವನ್ನು ನಂಬಿಯೇ ಈ ‘ಇಲಿಬೇಟೆ’ಯ ಅನುಭವಗಳು ಆಗಬಹುದೆಂಬ ನಿರೀಕ್ಷೆ ಇದನ್ನು ಬರೆಯಲು ಪ್ರೇರೇಪಿಸಿದೆ.

ಮಂಗಳೂರು ಹೆಂಚಿನ ಮನೆಯ ವರಾಂಡದ ಕೊಠಡಿಯನ್ನೇ ಅಂಗಡಿಯನ್ನಾಗಿ ಮಾಡಿಕೊಂಡಿದ್ದ ಅಟ್ಟವು ಅದಕ್ಕೆ ಹೊಂದಿಕೊಂಡಿದ್ದಿತು. ಅಟ್ಟದ ಮೇಲಿದ್ದ ಭತ್ತದ ಕಣಜ, ಊಟದ ಎಲೆಯ ಪಿಂಡಿಗಳು, ಮದುವೆ, ಪೂಜೆ ಮುಂತಾಗಿ ವಿವಿಧ ಸಂದರ್ಭದಲ್ಲಿ ಬಂದ ಪಾತ್ರೆಗಳು, ಹಳೆಯ ಬಟ್ಟೆ, ತೊಟ್ಟಿಲು, ಇತ್ಯಾದಿ ಒಂದೊಂದರ ಹಿಂದೆಯೂ ಒಂದೊಂದು ಭಾವನಾತ್ಮಕ ಕಾರಣಗಳಿದ್ದು,

ಈ ನೆಪಗಳ ಕಾರಣದಿಂದಲೇ ಉಳಿಸಿಕೊಂಡಿದ್ದರ ಪರಿಣಾಮವಾಗಿ ನಮ್ಮ  ಮನೆಯ ಅಟ್ಟ ಉಪಯುಕ್ತ – ಅನುಪಯುಕ್ತ ವಸ್ತುಗಳಿಂದ ತುಂಬಿಹೋಗಿತ್ತು. ಇದು ಇಲಿ ಹೆಗ್ಗಣಗಳಿಗೆ ಆಡೊಂಬೊಲವಾಗಲು ಕಾರಣವಾಯ್ತು.

ರಾತ್ರಿ ಎಂಟಕ್ಕೆಲ್ಲ ಊಟ ಮುಗಿಸಿ ಮಲಗಲು ಸಿದ್ಧತೆ ನಡೆಸಿದೊಡನೆ ಅಟ್ಟದ ಮೇಲಿನ ಕಿಚ್ ಕಿಚ್ ಆರಂಭವಾಗುತ್ತಿತ್ತು. ಅಟ್ಟದ ದೀಪ ಹಾಕುತ್ತಿದ್ದಂತೆ ಸದ್ದು ಅಡಗುತ್ತಿತ್ತು. ಇವುಗಳನ್ನು ಬಲಿಹಾಕಲು ನಿರ್ದೇಶಿಸಿದ ಅಣ್ಣ ಇಲಿ ಬೋನನ್ನು ತಂದರು. ತೆಂಗಿನಕಾಯಿ ಚೂರೊಂದನ್ನು ಸಿಕ್ಕಿಸಿ ಅಟ್ಟದ ಮೇಲೆ ಇಟ್ಟು ಬಂದರು. ಎರಡು ದಿನವಾದರೂ ಒಂದು ಇಲಿಯೂ ಬೀಳಲಿಲ್ಲ.

ಜೊತೆಗೆ ಕಿಚ್ ಕಿಚ್ ಸದ್ದು ಹೆಚ್ಚಾಗತೊಡಗಿತು. ದಿನಾಲೂ ಬೆಳಿಗ್ಗೆ ಎರಡಾದರೂ ಹೆಗ್ಗಣಗಳನ್ನು ಹೊಡೆದು ಊರ ಕಾಗೆಗಳಿಗೆ ಆಹಾರವಾಗಿಸುತ್ತಿದ್ದ ದೊಡ್ಡಪ್ಪನ ಮಗ ಶ್ರೀಕಾಂತನನ್ನು ಈ ಬಗ್ಗೆ ಕೇಳಲು, ‘ತೆಂಗಿನಕಾಯಿಗಳಿಗೆ ಅವು ಬಗ್ಗುವುದಿಲ್ಲವೆಂದು, ಅವಕ್ಕೆ ಏನಾದರೂ ಕರಿದ ಪದಾರ್ಥ ಆಗಬೇಕು’ ಎಂದು ಸಲಹೆ ನೀಡಿದ.

ಅವನ ಮಾತಿನಂತೆ ಕರಿದ ಬಜ್ಜಿಯನ್ನು ತಂದು ಸಿಕ್ಕಿಸಿ ಅಟ್ಟದ ಮೇಲಿರಿಸಿದೆವು. ಅದಾಗಿ ಹದಿನೈದು ನಿಮಿಷ ಕಳೆದಿಲ್ಲ– ಟಪ್ ಎನ್ನುವ ಸದ್ದು. ‘ಓಹ್ ಬಿತ್ತು’ ಎಂದು ಅಣ್ಣ (ತಂದೆ) ದಡಬಡಿಸಿ ಅಟ್ಟ ಹತ್ತಿದ್ದರು.

ನೋಡಿದರೆ ಒಂದಲ್ಲ ಎರಡು ಇಲಿ! ಪೈಪೋಟಿಯಲ್ಲಿ ಬೋನಿನ ಒಳಗೆ ಓಡಾಡುತ್ತಿವೆ. ಅಣ್ಣ ರಣೋತ್ಸಾಹದಿಂದ ಅಟ್ಟದ ಮೇಲೆ ಮೇಲೆ ಬರಲು ಆಜ್ಞಾಪಿಸಿದರು. ನಿದ್ದೆಗಣ್ಣಿನಲ್ಲಿಯೆ ಹತ್ತಿ ಮೇಲೆ ಹೋದ ನನಗೆ ಮೂಲೆಯಲ್ಲಿದ್ದ ಖಾಲಿ ಅಕ್ಕಿ ಚೀಲವನ್ನು ಹಿಡಿಯಲು ಹೇಳಿದರು. ಚೀಲದ ಬಾಯಿಗೆ ಬೋನಿನ ಬಾಗಿಲನ್ನು ಹಿಡಿದು ಚೀಲದ ಬಾಯಿ ಮುಚ್ಚಲು ಹೇಳಿದರು. ಬೋನಿನ ಬಾಗಿಲು ತೆರೆದೊಡನೆ ಎರಡು ಇಲಿಗಳು ಚೀಲದೊಳಗೆ ನುಗ್ಗಿದವು.

ನೋಡನೋಡುತ್ತಿರುವಂತೆ ಒಂದು ಇಲಿ ಚೀಲದ ಅಡಿಯಲ್ಲಿದ್ದ ತೂತಿನೊಳಗಿನಿಂದ ಓಡಿಹೋಯಿತು. ಮತ್ತೊಂದು ಇಲಿ ಚೀಲದ ಬಾಯಿ ಹಿಡಿದಿದ್ದ ನನ್ನ ಕೈಗಳ ನಡುವೆ ತೂರಿಹೋಯಿತು. ಬಹಳ ಕಷ್ಟಪಟ್ಟು ಹಿಡಿದಿದ್ದ ಮೂಷಿಕಗಳು ಈ ರೀತಿ ಓಡಿಹೋದದ್ದು ಕಂಡು ರುದ್ರನೇತ್ರರಾದ ತಂದೆಯು ಆ ಚೀಲವನ್ನು ಮಡಚಿ ನನಗೆ ನಾಲ್ಕು ಬಡಿಯಲು, ನಾನು ಭೂಮಿ–ಆಕಾಶ ಒಂದಾದಂತೆ ಬೊಬ್ಬೆ ಇಟ್ಟೆನು.

ಆಗಷ್ಟೇ ಕಣ್ಣಿಗೆ ನಿದ್ದೆ ಹತ್ತಿದ್ದ ಅಮ್ಮ ಗಡಬಡಿಸಿ ಎದ್ದು, ಮಗನಿಗೆ ಹೊಡೆತ ಬಿದ್ದದ್ದಕೋ, ನಿದ್ರಾಭಂಗವಾಗಿದ್ದಕ್ಕೋ ಅಣ್ಣನ ಮೇಲೆ ವಾಕ್ಸಮರದಲ್ಲಿ ತೊಡಗಿದರು. ಅವರನ್ನು ಜಗಳಕ್ಕೆ ಬಿಟ್ಟು ನಾನು ಕೌದಿಯಲ್ಲಿ ಸೇರಿ ನಿದ್ರಾದೇವಿಗೆ ಶರಣಾದೆನು. ಓಡಿಹೋದ ಇಲಿಗಳು ತಮ್ಮ ಬಳಗಕ್ಕೆ ವಿಷಯವನ್ನು ತಿಳಿಸಿದವೋ ಏನೋ? ಬೋನಿಗೆ ಮತ್ತಾವುದೇ ಇಲಿ ಬೀಳಲಿಲ್ಲ.

ಮುಂದಿನ ಪ್ರಯೋಗಕ್ಕೆ ಅಣ್ಣ ತರಿಸಿದ್ದು ಹಕ್ಕಿಗಳನ್ನು ಇರಿಸುವ ತಂತಿಬಲೆ ಮಾದರಿಯ ಬೋನು. ಅದು ಚಕ್ರವ್ಯೂಹದ ಮಾದರಿಯ ಬೋನು! ಒಳಗೆ ಹೋಗಲು ದಾರಿಯುಂಟೇ ಹೊರತು ಹೊರಗೆ ಬರಲು ಇಲ್ಲ. ಹೊಸ ಮಾದರಿಯ ಬಲೆಯ ಅರಿವಿಲ್ಲದ ಜೋಡಿ ಇಲಿಗಳು ಈ ಬಾರಿ ಚಕ್ರವ್ಯೂಹ ಪ್ರವೇಶಿಸಿ, ಹೊರ ಬರಲು ಆಗದೆ ಕಿಚ್ ಕಿಚ್ ಸದ್ದು ಮಾಡಲಾರಂಭಿಸಿದವು.

ಅವುಗಳನ್ನು ಚೀಲದೊಳಗೆ ಬಿಟ್ಟು ಬಡಿಯಲು ಸಾಧ್ಯವಾಗದ ಕಾರಣ, ನೀರಿಗೆ ಬಿಡುವುದೇ ಮಾರ್ಗವೆಂದು ಊರ ಮುಂದೆ ಹರಿಯುತ್ತಿದ್ದ ಕಾಲುವೆಯ ಬಳಿಗೆ ತೆಗೆದುಕೊಂಡು ಹೊರಟರು. ಸಂತೆಮಾಳವನ್ನು ದಾಟಿ ಹೋಗುವ ಮುನ್ನ ಏನನ್ನಿಸಿತೋ ಏನೋ ಅಲ್ಲಿಯೇ ಬುಟ್ಟಿಯನ್ನು ತೆರೆದರು. ಆ ಮೂಷಿಕಗಳು ಬುಡು ಬುಡು ಎಂದು ಓಡುತ್ತಾ ನೇರವಾಗಿ ಸಂತೆಮಾಳಕ್ಕೆ ಎದುರಿಗಿದ್ದ ದುಮ್ಮಿಕೊಪ್ಪಲಿನ ಶೆಟ್ಟರ ಮನೆ ಹೊಕ್ಕವು.

ತನ್ನ ಕಾಲ ಬಳಿಯೆ ಮನೆ ಹೊಕ್ಕ ಇಲಿಗಳನ್ನು ಕಂಡು ಶೆಟ್ಟರು ಹೌಹಾರಿದರು. ಸಂತೆಯ ವ್ಯಾಪಾರದ ಪರಿಕರಗಳನ್ನು ವ್ಯಾಪಾರಿಗಳು ಅವರ ಮನೆಯಲ್ಲಿ ಇರಿಸುತ್ತಿದ್ದರು. ಇದಕ್ಕೆ ಶೆಟ್ಟರಿಗೆ ಬಾಡಿಗೆಯನ್ನು ಕೊಡುತ್ತಿದ್ದರು.

ಇಂಥ ಸ್ಥಳವನ್ನು ಇಲಿ–ಹೆಗ್ಗಣಗಳು ಪ್ರವೇಶಿಸಿದರೆ, ಮುಂದಿನ ಕಥೆ? ಇದನ್ನು ಊಹಿಸಿದ್ದ ಶೆಟ್ಟರು ಹೊರಬಂದು ಯಾವ ರೀತಿ ಬಯ್ಯಬೇಕೋ ತಿಳಿಯದೆ ತಮ್ಮ ಆತಂಕ–ದುಗುಡವನ್ನು ಹಂಚಿಕೊಳ್ಳುವ ಹಾದಿ ಅರಿಯದೇ ಪೆಚ್ಚು ನಗೆ ನಗತೊಡಗಿದರು. ಪಶ್ಚಾತ್ತಾಪದ ಮುಖ ಹೊತ್ತ ಅಣ್ಣ ಮನೆ ಪ್ರವೇಶಿಸಿದರು.

ಮುಂದೆ ಮೊದಲು ಮಾಡಿದ ತಪ್ಪನ್ನು ಮಾಡದೆ ಕಾಲುವೆಗೆ ತೆಗೆದುಕೊಂಡು ನೀರಿಗೆ ಬಿಡಲು ಯತ್ನಿಸಿದರೂ ಅದೊಂದು ದೀರ್ಘಕಾಲಿಕ ಪರಿಶ್ರಮ ಎನ್ನಿಸತೊಡಗಿತು. ಜೊತೆಗೆ ಒಮ್ಮೊಮ್ಮೆ ಇಲಿಗಳು ನೀರಿನಲ್ಲಿ ಈಜಿಕೊಂಡು ದಡ ಸೇರತೊಡಗಿದವು.

ಈ ಬಾರಿ ಹಾಸನದಿಂದ ತಂದದ್ದು ಇಕ್ಕಳದ ಮಾದರಿಯದ್ದು. ಬಾಯನ್ನು ಬಿಚ್ಚಿ ಅದರ ಹಲ್ಲಿನ ಮಾದರಿಯನ್ನು ಪರೀಕ್ಷಿಸಲು ಹೋಗಿ ಅಣ್ಣನ ಕೈಗೆ ಗಾಯವಾಯಿತು. ಟಿ.ಟಿ. ಇಂಜೆಕ್ಷನ್ ತೆಗೆದುಕೊಂಡು ಬಂದು ಬೋನನ್ನು ಅಟ್ಟದ ಮೇಲಿರಿಸಿದರೂ ಇಲಿಗಳು ಅದರ ಹತ್ತಿರವೂ ಸುಳಿಯಲಿಲ್ಲ. ಅಟ್ಟ ಹತ್ತುವ ಮಕ್ಕಳು ಎಡವಟ್ಟು ಮಾಡಿಕೊಂಡಾರೆಂದು ಅದನ್ನು ಅಮ್ಮ ಮಾಯಮಾಡಿದರು.

ಪ್ರತಿದಿನ ಅರ್ಧ ಡಬ್ಬದಷ್ಟು ಭತ್ತ ತಿಂದು ಜೊಳ್ಳನ್ನು ಆಚೆಗೆ ಸುರಿಯುವ ಕೆಲಸವನ್ನು ವಹಿಸಿದ ಇಲಿಗಳ ಬೇಟೆಗೆ ಬೇರೆ ಯಾರನ್ನೂ ನೆಚ್ಚಿಕೊಳ್ಳುವುದು ಸರಿಯಿಲ್ಲವೆಂದು ಭಾವಿಸಿದ ಅಣ್ಣ, ಬೋನಿಗೆ ಬಿದ್ದ ಇಲಿಗಳನ್ನು ತಾವೇ ಚೀಲಕ್ಕೆ ಹಾಕಿ ಬಡಿಯಲಾರಂಭಿಸಿದರು.

ಮನೆಯಲ್ಲಿ ಮಾತ್ರ ಉಪಟಳ ನೀಡುತ್ತಿದ್ದ ಈ ಇಲಿಗಳು ಮುಂದೆ ಗದ್ದೆಯಲ್ಲಿ ಕಾಣಿಸತೊಡಗಿದವು. ಅಲ್ಲಿ ಅವುಗಳನ್ನು ಹಿಡಿಯುವುದು ಅಸಾಧ್ಯದ ಮಾತು. ಅದಕ್ಕೆ ಅವುಗಳನ್ನು ಹಿಡಿಯಲು ಕೆಲವು ಕಸುಬುದಾರರು ಬರುತ್ತಿದ್ದರು. ಗದ್ದೆಯ ಒಂದು ಬದುವಿನ ಬಿಲಕ್ಕೆ ಹೊಗೆಯನ್ನು ಹಾಕಿದರೆ ಬಿಲದ ಇನ್ನೊಂದು ಬದಿಯಲ್ಲಿ ಬುಡುಬುಡು ಎಂದು ಆಚೆ ಬರುತ್ತಿದ್ದ, ಕೊಂಚ ಭತ್ತದ ಬಣದಲ್ಲಿರುತ್ತಿದ್ದ ಇಲಿಗಳನ್ನು ಹಿಡಿದು ಬಡಿದು,

ತಾವು ತಂದಿದ್ದ ಚೀಲಕ್ಕೆ ಹಾಕಿಕೊಳ್ಳುತ್ತಿದ್ದರು. ಹೊಗೆ ಕಡಿಮೆ ಆದ ನಂತರ ಅಲ್ಲಿ ಅಗೆದರೆ ಅಲ್ಲಿ ಭತ್ತದ ತೆನೆಗಳ ಸಂಗ್ರಹವೇ ಇದೆ! ಇಲಿ ಹಿಡಿದ ಕೆಲಸಕ್ಕೆ ಕೂಲಿ ಎಂದು ತೆನೆಗಳನ್ನು ಅವರು ಹೊತ್ತೊಯ್ಯಲು ಹೋದರೆ, ‘ಕೂಲಿ ಕೊಡುತ್ತೇನೆಯೇ ಹೊರತು ಭತ್ತದ ತೆನೆಯನ್ನು ಕೊಡಲಾರೆ’ ಎಂಬ ಜಟಾಪಟಿ ಅಣ್ಣನಿಗೂ ಅವರಿಗೂ ಏರ್ಪಟ್ಟು ಕೊನೆಗೆ ಕೂಲಿ ಜೊತೆಗೆ ಹಳೆ ಶರ್ಟು, ಸೀರೆ ಇತ್ಯಾದಿಗಳನ್ನು ಪಡೆದ ಅವರು ಭತ್ತ ಬಿಟ್ಟು ಹೋದರು.

ನಲವತ್ತು ಐವತ್ತು ವರ್ಷಗಳಿಗೆ ಬಿದಿರು ಹೂಬಿಟ್ಟು ಬಿದಿರಕ್ಕಿಯಾಗುವುದೆಂದು, ಆ ವರ್ಷ ಬರಗಾಲ ಬರುತ್ತದೆಯೆಂಬುದು ಪ್ರತೀತಿಯಾಗಿತ್ತು. ಬಿದಿರು ಭತ್ತ ಬಿಡುವುದಕ್ಕೂ ಬರಗಾಲಕ್ಕೂ ಏನೂ ಸಂಬಂಧ ಎಂಬುದು ಬಹಳ ದಿನಗಳಿಂದ ಕಾಡುವ ಪ್ರಶ್ನೆಯಾಗಿತ್ತು. ಬಿದಿರಿನ ಬನವೇ ಹೂಬಿಟ್ಟು ಬಿದಿರಕ್ಕಿ ಆಗಿ, ಇಲಿಗಳಿಗೆ ಯಥೇಚ್ಚ ಆಹಾರ ದೊರೆಯುವುದರಿಂದ ಅವುಗಳ ಸಂತಾನ ಹೆಚ್ಚಾಗಿ, ಅವು ದವಸ ಧಾನ್ಯದ ಮೇಲೂ ದಾಳಿಯಿಡುವುದರಿಂದ ಆ ವರ್ಷ ಬರಗಾಲ ಕಟ್ಟಿಟ್ಟ ಬುತ್ತಿ ಎಂಬುದು ನಂತರ ತಿಳಿಯಿತು.

ಇಲಿಗಳ ನಿಗ್ರಹಕ್ಕೆ ಬೆಕ್ಕನ್ನಾದರೂ ಸಾಕಬಾರದೆ ಎಂಬ ತಿಳಿದವರ ಸಲಹೆಯ ಮೇರೆಗೆ ಅಟ್ಟದ ಮೇಲೆ ಬೆಕ್ಕು ಬಿಟ್ಟರೆ, ಇಲಿಗಳೆಲ್ಲ ರಾತ್ರಿಯಲ್ಲಿ ಬೆಕ್ಕಿನ ಮೇಲೆ ಸಂಘಟಿತ ದಾಳಿ ನಡೆಸಬೇಕೆ? ಬೆಕ್ಕಿನ ವಿಕಾರ ಚೀತ್ಕಾರದಿಂದಾಗಿ ಅದನ್ನು ಹೊರಹಾಕಬೇಕಾಯಿತು.

ಇಸ್ಪೀಟ್ ಆಡುವಾಗ ಯಾರೋ ಸ್ನೇಹಿತರು ‘ಇಲಿಯ ಅಂಡನ್ನು ಹೊಲಿದರೆ ಅದಕ್ಕೆ ಮಲವಿಸರ್ಜನೆಯಾಗದೆ ಹುಚ್ಚು ಹಿಡಿದಂತಾಗಿ, ಸಿಕ್ಕ ಇಲಿಗಳನ್ನು ಕಚ್ಚಿ ಕಚ್ಚಿ ಸಾಯಿಸುತ್ತದೆ’ ಎಂಬ ಸಲಹೆ ನೀಡಿದ್ದಾರೆಂದು ಅಣ್ಣ ಹೇಳಿದರು. ಅಂಡನ್ನು ಹೊಲಿಯುವ ಕೆಲಸ ಯಾರದ್ದು ಎಂಬ ಪ್ರಶ್ನೆ ಬರಲಾಗಿ, ಆ ಪ್ರಯೋಗ ಯೋಜನೆಯ ಹಂತದಲ್ಲಿಯೇ ಬಿದ್ದುಹೋಯಿತು.

ಮುಂದೆ ಇಲಿಗಳ ಸಾಮ್ರಾಜ್ಯ ವಿಸ್ತರಿಸಿ ಅಟ್ಟದ ಮೇಲಿಂದ ಕೆಳಗಿಳಿದು ವಿಹರಿಸಿ, ಮತ್ತೆ ಅಟ್ಟಕ್ಕೆ ಹಿಂತಿರುಗುತ್ತಿದ್ದವು. ಒಮ್ಮೆ ಮಧ್ಯರಾತ್ರಿ ಎಚ್ಚರವಾಗಿ ನೋಡಿದರೆ– ಅಟ್ಟದ ಹಲಗೆಯಲ್ಲಿದ್ದ ಮೊಳೆಗೆ ಕಟ್ಟಿದ್ದ ಸೊಳ್ಳೆ ಪರದೆಯ ಒಂದು ದಾರವನ್ನೇ ದಾರಿಯಾಗಿಸಿಕೊಂಡು, ಒಂದರ ಹಿಂದೊಂದು ಇಲಿಗಳು ಇಳಿದು ನನ್ನ ತಲೆಯ ಹಿಂದೆಯೇ ಬಂದು ವಿವಿಧ ದಾರಿಗಳನ್ನು ಹಿಡಿದು ಹೋಗುತ್ತಿವೆ.

ಮಾರನೇ ದಿನ ಬೆಳಿಗ್ಗೆ ಒಲೆಗೆ ಬೆಂಕಿ ಹಾಕಲು ಹೋದ ಅಕ್ಕನಿಗೆ ಕಿಚ್ ಕಿಚ್ ಸದ್ದು ಬರಲು ನಮ್ಮನ್ನು ಕೂಗಿದರು. ನೋಡಿದರೆ ಕಂಡದ್ದು ಬಿಳಿಯ ಬಾಲ! ನಿಧಾನವಾಗಿ ಬಾಲವನ್ನು ಎಳೆದರೆ ಅದು ಇನ್ನೊಂದು ಇಲಿಯ ಬಾಲವನ್ನು ಕಚ್ಚಿ ಹಿಡಿದಿದೆ.

ಎಳೆಯುತ್ತಾ ಹೋದಂತೆ ಒಂದರ ಹಿಂದೊಂದು ಎಂಬಂತೆ ನಾಲ್ಕು ಬಿಳಿ ಇಲಿಗಳು. ರೈಲುಬೋಗಿಗಳ ರೀತಿ ಇದ್ದ ಅವುಗಳನ್ನು ಅಚ್ಚರಿಯಿಂದ ನೋಡುತ್ತಿರಬೇಕಾದರೆ ಬಂದ ಅಣ್ಣ ‘ಬಡಿಯೋದ್ಬಿಟ್ಟು ನೋಡ್ತಾ ಇದ್ದೀಯ’ ಎಂದು ದೊಣ್ಣೆ ತಂದು ಪ್ರಹಾರ ಮಾಡತೊಡಗಿದ.

ಅವು, ತಮ್ಮ ಪ್ರಾಣ ಉಳಿಸಿಕೊಳ್ಳಲು ಅಡುಗೆಮನೆಯ ತುಂಬಾ, ನಮ್ಮ ಕಾಲುಗಳ ನಡುವೆಯೇ ಓಡಾಡತೊಡಗಿದಾಗ ನಾವೆಲ್ಲರೂ ಅಲ್ಲಿದ್ದ ತಟ್ಟೆ, ಹರಿವಾಣಗಳಲ್ಲಿ ಭರತನಾಟ್ಯ ಆರಂಭಿಸಿದೆವು. ಈ ಯುದ್ಧದಲ್ಲಿ ಎರಡು ಇಲಿ ಸತ್ತು, ಇನ್ನೆರಡು ಪಾರಾದವು.

ಮುಂದೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದ ಇಲಿಗಳನ್ನು ಹೊಡೆದು ಹಾಕುತ್ತಿದ್ದರಾದರೂ, ‘ಎಲ್ಲ ಜೀವಿಗಳಿಗೂ ಈ ಭೂಮಿಯ ಮೇಲೆ ಬದುಕಲು ಹಕ್ಕಿದೆ’ ಎಂಬುದನ್ನು ಅರಿತವರಂತೆ ಅಣ್ಣ ತೀವ್ರಗಾಮಿ ಯೋಚನೆಯನ್ನು ಬಿಟ್ಟುಬಿಟ್ಟರು.

ಈಗ ಊರುಬಿಟ್ಟು ನಗರ ಸೇರಿ ಆರ್.ಸಿ.ಸಿ. ಮನೆಯಲ್ಲಿ ಬಂಧಿತರಾಗಿರುವ ನಮಗೆ ಮನೆಯೊಳಗೆ ಇಲಿಯ ಕಾಟ ಕಡಿಮೆ. ಆದರೆ ಹೊರಗೆ ಹೆಗ್ಗಣಗಳ ಸಂಖ್ಯೆ ಹೆಚ್ಚು. ಬೆಳಿಗ್ಗೆ ಐದಕ್ಕೆ ಎದ್ದು ವಾಕಿಂಗ್‌ಗೆ ಹೊರಟರೆ ಯಾರನ್ನೂ ಕೇರ್ ಮಾಡದೆ ಆ ಚರಂಡಿಯಿಂದ ಈ ಚರಂಡಿಗೆ ಹೆಗ್ಗಣಗಳು ಹಾದುಹೋಗುತ್ತಿರುತ್ತವೆ.

ಮನೆಯ ಹೊರಗಿನ ಈ ಹೆಗ್ಗಣಗಳು ನಮ್ಮ ಸುಪರ್ದಿಗೆ ಬರದಿರುವುದರಿಂದ ನಾವು ಸುಮ್ಮನಿದ್ದೇವೆ. ಒಳಗೆ ಬರಲಾರದ ಅವು ಸುಮ್ಮನೇನು ಕುಳಿತಿಲ್ಲ. ಬದಲಾಗಿ ಆಚೆ ನಿಲ್ಲಿಸಿದ್ದ ಕಾರಿನ ಒಳಸೇರಿ ವೈರುಗಳನ್ನು ಕಚ್ಚಿ ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆ.

ನನ್ನ ಸ್ನೇಹಿತ ರಾಮಣ್ಣನ ಕಾರಿನ ಫ್ಯಾನಿನ ಬ್ಲೇಡಿಗೆ ಸಿಕ್ಕ ಹೆಗ್ಗಣ ‘ಆತ್ಮಾಹುತಿ’ ಮಾಡಿಕೊಂಡಿತು. ಆದರೆ, ಅದನ್ನು ತಿಳಿಯದೆ ರಾಮಣ್ಣ ಕಾರನ್ನು ಚಲಾಯಿಸಿದಾಗ, ಹದಗೆಟ್ಟಿದ್ದ ಬ್ರೇಕ್‌ ಕೈಕೊಟ್ಟು ರಾಮಣ್ಣ ಕೂದಲೆಳೆಯಿಂದ ಜೀವ ಉಳಿಸಿಕೊಂಡರು. ಹೆಗ್ಗಣದ ಅವಶೇಷವನ್ನು ತೆಗೆಯಲು ಪಡಿಪಾಟಲು ಪಟ್ಟಿದ್ದನ್ನು ನಮ್ಮಲ್ಲಿ ನಿವೇದಿಸಿಕೊಂಡು ವಿಷಾದದಿಂದ ನಕ್ಕಿದ್ದರು ರಾಮಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT