ADVERTISEMENT

ಎದ್ದ ಗಳಿಗೆ ಸರಿ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST

ಸಂಜೆ 7ಕ್ಕೆ ನನ್ನ ಪರಮಾಪ್ತ ಗೆಳತಿ ವ್ಯಂಜನಳ ಮದುವೆಯ ಆರತಕ್ಷತೆ. ನನ್ನ ಗಂಡನಿಗೆ ಮೊದಲೇ 5 ಗಂಟೆಗೆ ಮನೆಗೆ ಬರಲು ಹೇಳಿದ್ದೆ. ಅಸಾಮಿ 5-30 ಆದರೂ ಪತ್ತೆ ಇಲ್ಲ. ಫೋನ್ ಬಂದಿತು.

‘ಚಿನ್ನಾ, ಅರ್ಜೆಂಟ್ ಮೀಟಿಂಗ್ ಇದೆ. ನನಗೆ ಬರೋಕಾಗಲ್ಲ. ನೀನು ಹೋಗಿ ಬಾ ಕಾರು ಕಳಿಸಲಾ?’

‘ಏನೂ ಬೇಕಿಲ್ಲ’ ಎಂದು ಫೋನ್ ಕುಕ್ಕಿದೆ. ಮಧ್ಯಾಹ್ನ ನೋಡಿದ್ದ ‘ಸುಬ್ಬಲಕ್ಷ್ಮಿ ಸಂಸಾರ’ದ ನಾಯಕನಂತೆ ಆಫೀಸಿನಲ್ಲಿ ಏನಾದರೂ ಕುಚ್‌ ಕುಚ್‌ ಇಟ್ಟುಕೊಂಡಿರಬಹುದೇ ಎನಿಸಿದರೂ ಛೇ! ಅವರು ಅಂಥವರಲ್ಲ ಅನ್ನಿಸಿತ್ತು.

ADVERTISEMENT

ಬೇಗ ಬೇಗ ಕಾಫಿ ಮಾಡಲು ಫ್ರಿಜ್ ತೆರೆದರೆ ಹಾಲು ಒಡೆದಿತ್ತು. ಲೋಟ ಕುಕ್ಕಿ ಹೇಗೋ ಒಂದು ರೇಷ್ಮೆಸೀರೆ ಸುತ್ತಿಕೊಂಡು ಸಿದ್ದಳಾದೆ. ವ್ಯಾನಿಟಿ ಬ್ಯಾಗ್, ಗೆಳತಿಗೊಂದು ಗಿಫ್ಟ್ ಹಿಡಿದು ಹೊರ ಬಾಗಿಲಿಗೆ ಬೀಗ ಹಾಕಿದ್ದಾಯ್ತು. ಸ್ವಲ್ಪ ದೂರ ಬಂದಾಗ ನೆನಪಾಯಿತು ಹಿಂಬದಿಯ ಬಾಗಿಲಿಗೆ ಒಳಗಿನಿಂದ ಬೀಗ ಹಾಕಿದೆನಾ? ನೆನಪಾಗುತ್ತಿಲ್ಲ. ಮತ್ತೆ ಓಡಿದೆ. ಮುಂಬಾಗಿಲು ತೆಗೆದು ಒಳ ಹೋಗಿ ನೋಡಿದರೆ ಅಯ್ಯೋ ಬೀಗ ಹಾಕಿದ್ದೆ!

ಪುನಃ ಸಿಟಿಬಸ್ ಸ್ಟ್ಯಾಂಡಿಗೆ ಬರುವಷ್ಟರಲ್ಲಿ 6-45ರ ಬಸ್ ಹೋಗಿಯಾಗಿತ್ತು. ಆಟೋಗೆ ಕೈ ಹಿಡಿದರೆ ನಾವು ಹೋಗುವ ಕಡೆಗೆ ಯಾರೂ ಬರಲು ತಯಾರಿಲ್ಲ. ಅವರು ಹೋಗುತ್ತಿರುವ ದಾರಿಯಲ್ಲಿಯೇ ನಾವು ಹೋಗಬೇಕಷ್ಟೇ! ಮನೆಯಲ್ಲಿ 12 ಲಕ್ಷದ ಕಾರಿದ್ದೂ ಈ ಪ್ರಾರಬ್ಧ ಕರ್ಮ! ಯಾವ ಜನ್ಮದ ಪುಣ್ಯವೋ ಒಂದು ಆಟೋದವ ಹತ್ತಿಸಿಕೊಂಡ. ಅವನ ಹೊಟ್ಟೆ ತಣ್ಣಗಿರಲಿ!

ರಿಸೆಪ್ಶನ್‌ ಹಾಲ್ ಮೆಟ್ಟಿಲೇರುವಾಗ ಬಲಗಾಲಿಗೆ ಸೀರೆ ತೊಡರಿದಂತಾಯಿತು. ಒಳ ಹೋದೆ. ಏಕೋ ಸೀರೆಯ ಒಳ ಮಡಿಕೆ ಬಿಚ್ಚಿದೆಯೇನೋ ಎನಿಸಿತು. ಗೆಳತಿಯರೆಲ್ಲ ‘ಏನೇ ಸುಬ್ಬಿ...’ ಎಂದು ಸುತ್ತುವರಿದಿದ್ದರು. ಹೆಣ್ಣಿನ ಕಡೆಯವರಿಗೆಂದು ಮೀಸಲಾದ ಕೋಣೆಗೆ ಹೋಗಿ ನಿಲುವುಗನ್ನಡಿಯಲ್ಲಿ ನೋಡಿಕೊಂಡೆ. ಸೀರೆ ಏನೂ ಆಗಿಲ್ಲ. ಆದರೆ ಮತ್ತೊಂದು ಭಾರೀ ದುರಂತ ಘಟಿಸಿಬಿಟ್ಟಿದೆ. ಸೀರೆಯ ಸೆರಗಿಗೂ ಬ್ಲೌಸ್‍ನ ಬಣ್ಣಕ್ಕೂ ಒಂದಿನಿತೂ ಮ್ಯಾಚಿಂಗ್ ಇಲ್ಲ. ಇರಲಿ, ವಧುವನ್ನು ಮಾತಾಡಿಸಿ, ಕವರ್ ಕೈಗಿಟ್ಟು ಬಫೆಗೆ ತಟ್ಟೆ ಹಿಡಿದು ಭಿಕ್ಷುಕರಂತೆ ಸಾಲು ನಿಂತಿದ್ದಾಯ್ತು. ಬರ್ಫಿ, ಬಿಸಿಬೇಳೆ ಬಾತ್, ತಟ್ಟೆ ಹಿಡಿದು ಹೆಜ್ಜೆ ಹಾಕುವಷ್ಟರಲ್ಲಿ ಹಿಂದಿನಿಂದ ಯಾವುದೋ ಸಣ್ಣ ಹುಡುಗ ಬಂದು ಹಾಯ್ದುಬಿಟ್ಟ.

ತಿಳಿ ಹಳದಿ ರೇಷ್ಮೆ ಸೀರೆಯ ತುಂಬಾ ಬಿಸಿ ಬೇಳೆ ಬಾತ್‍ನ ಚಿತ್ತಾರ. ಸೀದಾ ಬಾತ್‍ರೂಮಿಗೆ ಹೋಗಿ ಅಷ್ಟಿಷ್ಟು ತೊಳೆದುಕೊಂಡು ಹಿಂದಿನ ಬಾಗಿಲಿನಿಂದ ಹೊರ ಹೋದೆ. ಆಟೋ ಹತ್ತಿ ಮನೆ ತಲುಪಿದಾಗ ರಾತ್ರಿ 10.

ಪತಿ ಪರಮೇಶ್ವರರು ಆನಂದವಾಗಿ ಚಿಪ್ಸ್ ಮೆಲುಕುತ್ತಾ ‘ಎಫ್’ ಚಾನಲ್ ನೋಡುತ್ತಿದ್ದರು. ಅದುವರೆಗಿನ ಬ್ರಹ್ಮಾಂಡ ಕೋಪವನ್ನೆಲ್ಲ ಅವರ ಮೇಲೆ ಕಕ್ಕಿದೆ. ಪಾಪ ಆ ಮೂದೇವಿ ತಬ್ಬಿಬ್ಬು!.

–ಕೆ.ಲೀಲಾ ಶ್ರೀನಿವಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.