ADVERTISEMENT

ಕರಾವಳಿಗರ ಅಚ್ಚುಮೆಚ್ಚಿನ ಬ್ರೆಕ್‌ಫಾಸ್ಟ್ ಗಂಜಿಯೂಟ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 19:30 IST
Last Updated 2 ಸೆಪ್ಟೆಂಬರ್ 2017, 19:30 IST
ಕರಾವಳಿಗರ ಅಚ್ಚುಮೆಚ್ಚಿನ ಬ್ರೆಕ್‌ಫಾಸ್ಟ್ ಗಂಜಿಯೂಟ
ಕರಾವಳಿಗರ ಅಚ್ಚುಮೆಚ್ಚಿನ ಬ್ರೆಕ್‌ಫಾಸ್ಟ್ ಗಂಜಿಯೂಟ   

* ಕೃಷ್ಣವೇಣಿ ಕಿದೂರು

ಪಿರಿಪಿರಿ ಸುರಿಯುವ ಮಳೆ. ಬೆಳಗ್ಗಿನ ತಿಂಡಿಗೆ ಕರೆದಾಗ ಒಳಬಂದರೆ ಅಲ್ಲಿದ್ದುದು ನಾಲ್ಕಾರು ಕುಡಿಬಾಳೆ ಮಾತ್ರ. ಬೆಂಕಿಗೊಡ್ಡಿ ಬಾಡಿಸಿದ ಎಲೆಯ ಎಡದ ಮೂಲೆಯಲ್ಲಿ ಮಾವಿನ ಮಿಡಿಯ ಉಪ್ಪಿನಕಾಯಿ, ಬಲದ ಭಾಗದ ಮೇಲ್ಗಡೆ ಹಿತ್ತಲ ಗಿಡದ ತರಕಾರಿಯ ಗೊಜ್ಜು. ಅಗಲವಾದ ಬಾಳೆಯ ಎಲೆಯಲ್ಲಿ ಹದವಾಗಿ ಬೆಂದ ಕುಸುಬಲಕ್ಕಿ ಗಂಜಿ.

ಗಂಜಿ ಅಂದರೆ ಅರ್ಥ ತಿಳಿಯದವರಿಗೆ ವಿವರಿಸಬೇಕಿದ್ದರೆ ಅದಕ್ಕೆ ಅಕ್ಕಿ ಬೆಂದ ನೀರು ಅಂತ ಸರಳವಾಗಿ ಹೇಳಬಹುದು. ಕುಸುಬಲಕ್ಕೀನ? ಹಾಗಂದರೇನು? ಕೆಂಪಕ್ಕಿ ಅಥವಾ ಕುಚ್ಚಲಕ್ಕಿ ಎಂದು ಕರೆಯಲಾಗುವ ಈ ಅಕ್ಕಿ ಕರಾವಳಿಯ ಸ್ಪೆಶಲ್.

ADVERTISEMENT

ಸಮುದ್ರ ಕಿನಾರೆಯ ಇಲ್ಲಿನ ಊರುಗಳಲ್ಲಿನ ಗದ್ದೆಗಳಲ್ಲಿ ಉತ್ತಮ ತಳಿಯ ಭತ್ತ ಬಿತ್ತಿ, ಹುಲುಸಾಗಿ ನೇಜಿ ಅಥವಾ ಭತ್ತದ ಗಿಡ ಬೆಳೆಸುತ್ತಾರೆ. ಅದರಲ್ಲಿ ಗೊಂಚಲು ಗೊಂಚಲಾಗಿ ಕದಿರುಗಳು ಬಂದಾಗ ಅದರ ತುಂಬ ಮೆತ್ತನ್ನ ಅಕ್ಕಿಯ ಕಾಳುಗಳು. ಇದು ಬಲಿತು ಭತ್ತದ ಕಾಳುಗಳಾಗುತ್ತದೆ. ಕಟಾವು ಮಾಡಿ ಕಾಳುಗಳನ್ನು ಬೇರ್ಪಡಿಸಿದ ಮೇಲೆ ಭತ್ತವನ್ನು ಹಂಡೆಗೆ ತುಂಬಿ ಬೇಯಿಸಿ ಒಣಗಿಸುವ ಕೆಲಸವಿದೆ. ಆ ಭತ್ತವನ್ನು ರೈಸ್ ಮಿಲ್ಲಿನಲ್ಲಿ ಅಕ್ಕಿ ಮಾಡಿದರೆ ಸಿಗುವುದು ಕುಸುಬಲಕ್ಕಿ ಅಥವಾ ಕೆಂಪಕ್ಕಿ, ತಾಜಾ ದಕ್ಷಿಣ ಕನ್ನಡದ ಭಾಷೆಯಲ್ಲಿ ಕುಚ್ಚಲಕ್ಕಿ. ಬೇಯಿಸದೆ ಹಾಗೇ ಅಕ್ಕಿ ಮಾಡಿದರೆ ಅದೇ ಬೆಳ್ತಿಗೆ ಅಕ್ಕಿ.

ತುಳು ಭಾಷಿಗರು ಉರ್ಪೆಲ್ ಅರಿ ಎಂದು ಕರೆಯುವ ಈ ಅಕ್ಕಿ ಅತ್ಯಧಿಕ ಸತ್ವದ ಆಗರ. ಪೌಷ್ಟಿಕಾಂಶಗಳ ಖಜಾನೆ. ಒಂದಲ್ಲೊಂದು ಕಾಯಿಲೆಯಿಂದ ಬಳಲುವ ಮಂದಿಗೆ ವೈದ್ಯರು ಕರಾವಳಿಯ ಕುಸುಬಲಕ್ಕಿಯ ಗಂಜಿ ಉಣ್ಣಲು ಸಲಹೆ ಮಾಡುತ್ತಾರೆ.ಅಕ್ಕಿ ಬೇಯುವಾಗ ಹಾಕುವ ನೀರು ಅದು ಅನ್ನವಾಗುವಾಗ ಅಕ್ಕಿಯ ಸತ್ವವನ್ನು ತುಂಬಿಕೊಳ್ಳುತ್ತದೆ. ನಸುಗೆಂಪಾದ ಈ ನೀರಿಗೆ ಗಂಜಿ ತಿಳಿ ಅಂತ ಕರೆಯುವ ಹೆಸರು.

ಬೆಚ್ಚಗಿನ ಗಂಜಿಯ ಸವಿ ಉಂಡವನೇ ಬಲ್ಲ. ಕರಾವಳಿಯಲ್ಲಿನ ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆದ್ದು ಶಾಲೆ, ಕಾಲೇಜು, ಉದ್ಯೋಗ ಅಂತ ಹೊರಗೆ ಕಾಲಿಡುವವರಿಗೆ ಹೆಚ್ಚಾಗಿ ಗಂಜಿಯೂಟ. ತಿಂಡಿಯಾದರೆ ಒಬ್ಬರಿಗೆ ಒಪ್ಪಿದ್ದು ಮತ್ತೊಬ್ಬರಿಗೆ ಆಗದು. ಗಂಜಿಗೆ ಆಕ್ಷೇಪವಿಲ್ಲ. ಸಣ್ಣಗಿನ ಅಕ್ಕಿಕಾಳು ಬೆಂದಾಗ ಉದ್ದವಾಗಿ ಮೆದುವಾಗುತ್ತದೆ. ಇದಕ್ಕೆ ನೆಂಚಿಕೊಳ್ಳಲು ಗೊಜ್ಜು, ಬೋಳು ಕೊದ್ದೆಲ್, ಚಟ್ನಿ ಚೆನ್ನಾಗಿರುತ್ತದೆ. ಅದು ಬಿಟ್ಟು ಬೇರೇನೂ ಮಾಡುವ ಪದ್ಧತಿಯಿಲ್ಲ. ಬಿಸಿ ಗಂಜಿಯ ಜೊತೆಗೆ ಕಾಡುಮಾವಿನ ಮಿಡಿ ಉಪ್ಪಿನಕಾಯಿಯನ್ನು ಕಟುಮ್ಮನೆ ಕಡಿದು ಸೊನೆ ಬಾಯಿಗೆ ಸೇರಿದಾಗ ಮಳೆಗಾಲದ ಚಳಿ ನಾಪತ್ತೆ. ಇಷ್ಟು ಮೊಸರೋ, ಮಜ್ಜಿಗೆಯೋ ಸಿಕ್ಕಿದರೆ ತೃಪ್ತಿಯಾಗಿ ಬಾಳೆ ಎಲೆ ಖಾಲಿಯಾಗುತ್ತದೆ.

ಒಡಲಿಗೆ ಬಲು ಹಿತ. ಇವತ್ತಿಗೂ ಕರಾವಳಿಗರು ವಿದ್ಯೆ, ಉದ್ಯೋಗ ಅಂತ ನಾನಾ ಊರುಗಳಲ್ಲಿ ಹಂಚಿಹೋಗಿದ್ದವರು ಊರಿಗೆ ಬರುವಾಗ ಮುನ್ನಾದಿನವೇ ಅಪ್ಪಣೆಯಾಗುತ್ತದೆ- ‘ಅಮ್ಮಾ, ನಾಳೆ ಬೆಳಗ್ಗೆ ಬರುತ್ತೇನೆ ಮನೆಗೆ. ಗಂಜಿ, ತುಪ್ಪ, ಉಪ್ಪಡ್ (ಉಪ್ಪಿನಕಾಯಿ) ಉಣ್ಣದೆ ನಾಲಿಗೆ ಜಡ್ಡುಗಟ್ಟಿದೆ. ಅದೇ ಮಾಡಿಬಿಡು ನನಗೆ’.

ಇದು ದಕ್ಷಿಣ ಕನ್ನಡದ ಕರಾವಳಿಗರು ಮತ್ತು ಉತ್ತರ ಕೇರಳಿಗರ ಅಚ್ಚುಮೆಚ್ಚಿನ ಮಾರ್ನಿಂಗ್ ಬ್ರೆಕ್‌ಫಾಸ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.