ADVERTISEMENT

ಕವಿಗೆ, ಕುಪ್ಪಳಿಗೆ ನಮಸ್ಕಾರ

ಪ್ರಬಂಧ

ಕಲೀಮ್ ಉಲ್ಲಾ
Published 28 ಡಿಸೆಂಬರ್ 2013, 19:30 IST
Last Updated 28 ಡಿಸೆಂಬರ್ 2013, 19:30 IST

ಅವತ್ತು ತೀರ್ಥಹಳ್ಳಿಯ ತುಂಗಾ ನದಿ ತೀರದಲ್ಲಿ ಎಳ್ಳಮವಾಸೆ ಜಾತ್ರೆ ನಡೆಯುತ್ತಿತ್ತು. ನನ್ನ ಬಿಡದೆ ಅಂಟಿಕೊಂಡಿದ್ದ ನನ್ನ ಮಗ–ಮಗಳು ಹಾಗೂ ನನ್ನ ಗೆಳೆಯರ ಮಕ್ಕಳ ಗುಂಪು ಮನೆಯಲ್ಲಿ  ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿತ್ತು. ಜಾತ್ರೆಗೆ ಸೇರಿದ್ದ ಹಿರಿ ತಲೆಗಳೆಲ್ಲಾ ತಮ್ಮ ಸುಡುಗಾಡು ಮಾತುಕತೆಗಳಲ್ಲಿ ಮುಳುಗಿಹೋಗಿದ್ದರು. ಆಗಾಗ ಈ ಮಕ್ಕಳನ್ನು ಎಲ್ಲರೂ ಹೆದರಿಸುವುದು, ಗುರಾಯಿಸುವುದು, ಎಚ್ಚರಿಕೆ ಕೊಡುವುದು, ಸಾಧ್ಯವಾದರೆ, ನಾಲ್ಕು ಬಿಗಿಯುವುದು ಕೂಡ ನಡೆದೇ ಇತ್ತು.

ಅವರ ಆಟ, ಹಟ, ಕಾಳಜಿಗಳನ್ನು ಯಾರೂ ಗಮನಿಸುತ್ತಲೇ ಇರಲಿಲ್ಲ. ಹೀಗಾಗಿ ಅವೂ ತಮ್ಮ ಕೈಲಿ ಸಾಧ್ಯವಾದಷ್ಟು ತೊಂದರೆ ಕೊಡುತ್ತಲೇ ಇದ್ದರು. ಅವರ ಸಂಕಟ ನೋಡಿ ನಾನೇ ಅವರನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿಕೊಂಡು ‘ತುಂಗಾ ನದಿ ತೋರಿಸ್ತೀನಿ ಬನ್ನಿ ಮಕ್ಕಳೇ’ ಎಂದೆ. ಎಲ್ಲರೂ ಚಿಗರೆಗಳಂತೆ ನುಗ್ಗಿಬಂದರು. ಅವರನ್ನು ತುಂಗಾ ನದಿ ತೀರಕ್ಕೆ  ಕರೆದುಕೊಂಡು ಹೋದೆ. ಆ  ನದೀ ತೀರದ ಹೆಸರೇ, ‘ಕಲ್ಲುಸಾರ’. 

ಆಗ ನಾನು ‘ನೋಡಿ ಮಕ್ಕಳೇ, ಕುವೆಂಪು ಆಗಿನ ಕಾಲದಲ್ಲಿ ತಮ್ಮ ಊರು ಕುಪ್ಪಳಿ ತಲುಪಲು ಈ ತುಂಗಾ ನದಿಯನ್ನು ದಾಟಿ ಹೋಗಬೇಕಾಗಿತ್ತು. ನದಿ ದಾಟಲು ಆಗ ಈಗಿನಂತೆ  ಕಟ್ಟಿದ ಸೇತುವೆಗಳು ಇರಲಿಲ್ಲ. ಹೀಗಾಗಿ ಕುವೆಂಪು ಈ ನಿಸರ್ಗವೇ ನಿರ್ಮಿಸಿದ ಕಲ್ಲಿನ ಬಂಡೆಗಳ ಮೇಲೆ ನಡೆದುಹೋಗುತ್ತಿದ್ದರು. ಈ ದಾರಿಯನ್ನೇ ಕಲ್ಲುಸಾರ ಎನ್ನುತ್ತಾರೆ’ ಎಂದು ವಿವರಿಸಿದೆ.

‘ಕುವೆಂಪು ಅವರ ಮೊದಲ ಕಾದಂಬರಿ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯ ಕಥೆ ಶುರುವಾಗುವುದೇ ಈ ಕಲ್ಲುಸಾರದಿಂದ. ಬಾಲ್ಯದಲ್ಲಿ ಕುವೆಂಪು ಗೆಳೆಯರ ಜೊತೆ ಕಲ್ಲಾಟವಾಡಿ, ಈಜು ಕಲಿತು ನಲಿದಾಡಿದ ಜಾಗವಿದು. ಹೇಗಿದೆ ಹೇಳಿ’ ಎಂದೆ.  ಅವರ ಉತ್ಸಾಹ ಹೇಳತೀರದಾಗಿತ್ತು. ‘ತುಂಬಾ ಚೆನ್ನಾಗಿದೆ’ ಎಂದವರೇ ಎಲ್ಲರೂ ಹೇಳದೆ ಕೇಳದೆ ತಿಳಿ ನೀರಿಗೆ ಜಿಗಿದು ಬಿಟ್ಟರು. ನೀರ ಬಡಿದು, ನೀರ ಹಾರಿಸಿ, ಪರಸ್ಪರ ಮುಖಗಳ ಮೇಲೆ ಎರಚಾಡಿದರು. ಕೂಗಿದರು, ಕಿರುಚಾಡಿದರು, ಕುಣಿದರು. ಕೊನೆಗೆ  ಸಾಕಾದಾಗ ಬಂಗಾರ ಬಣ್ಣದ ಮರಳಿನ ಮೇಲೆ ವಿಲವಿಲ ಉರುಳಾಡತೊಡಗಿದರು.

ನನಗಾಗ ಒಂದು ಮಧುರವಾದ ಧ್ವನಿ ಕೇಳುತಲಿತ್ತು. ಅರಳಿಯ ಮರದಲ್ಲಿ ಸುಳಿದಾಡುತ್ತಿದ್ದ ತಂಗಾಳಿಯಲಿ ಒಂದು ಕಾಜಾಣ ಹಕ್ಕಿ ಹಾಡುತ್ತಿತ್ತು. ನನಗೆ ಅದು ಹಾಡಲ್ಲ– ಸಾಕ್ಷಾತ್ ಕುವೆಂಪು ಅವರೇ ಬಂದು ನಿಂತು ನಮ್ಮ ಮಕ್ಕಳಿಗೆ ಕೇಳುವಂತೆ ಆ ಕಲ್ಲುಸಾರದ ಮೇಲೆ ತಾವು ಬರೆದ ‘ರಾಮತೀರ್ಥ’ ಎಂಬ ಕವನವನ್ನು  ಹಾಡುತ್ತಿದ್ದರು.

ಹೊಳೆಯ ನೀರೊಳು ತೇಲಿ ನಲಿದಾಡುವ ಎಳೆಯರಿರ,
ಈ ಹೊಳೆಯ ತಡಿಯಲಿ, ಈ ಮಳಲ ದಿಣ್ಣೆಯಲಿ,
ಈ ತುಂಗೆಯಂಕದಲಿ, ಈ ರಾಮತೀರ್ಥದಲಿ,
ಇದೋ ಇಲ್ಲಿ, ಇಲ್ಲಿಯೇ ನಿಮ್ಮಂತೆ ತೇಲಿದೆನು;
ನಿಮ್ಮಂತೆ ಆಡಿದೆನು; ನಿಮ್ಮಂತೆ ಚೀರಿದೆನು;
ನಿಮ್ಮಂತೆ ಮೊರೆವ ನೀರಿನ ಕೂಡೆ ಹಾಡಿದೆನು;
ಸೌಂದರ್ಯ ಸ್ವರ್ಗವಿದು; ಎದೆ ತುಂಬಿ ಭಕ್ತಿಯಲಿ ದಿಟ್ಟಿಸೈ!
ವಿಶ್ವದಾ ವರ್ಣಶಿಲ್ಪಿಯ ಚಿತ್ರಶಾಲೆಯಿದು.

ಹಾಡು ಉಸಿರಾಯಿತೋ? ಅದು ಅವರ ಎಳೆಯ ಹೃದಯಕ್ಕೆ ಹೇಗೆ ಇಳಿಯಿತೋ? ತಿಳಿಯಲಿಲ್ಲ. ಮಕ್ಕಳ ನಗು, ಉಲ್ಲಾಸದಲ್ಲಿ ಕುವೆಂಪು ಮೂಡಿಬಂದಂತೆ ಕಾಣಿಸಿತು. ‘ಮಕ್ಕಳೇ ಕುವೆಂಪು ಹುಟ್ಟಿದ, ಆಡಿ ಬೆಳೆದ ಊರನ್ನು ಒಮ್ಮೆ ಹೋಗಿ ನೋಡಿ ಬರೋಣ ಏನಂತೀರಾ?’ ಎಂದೆ. ಒಟ್ಟಾಗಿ ತಿಳಿನೀರಿನಿಂದ ಓಡೋಡಿ ಬಂದ ಅವರೆಲ್ಲಾ ‘ನಡೀರಿ ಅಂಕಲ್ ಹೋಗಿ ಬರೋಣ, ‘ಉಳುವ ಯೋಗಿ’, ‘ಭಾರತ ಜನನಿಯ ತನುಜಾತೆ’ ಪದ್ಯ ಬರೆದ ಅವರನ್ನ ಮಾತಾಡಿಸಿಕೊಂಡು ಬರೋಣ’ ಎಂದು ಕಾಡಿಸಲಾರಂಭಿಸಿದರು.

ನನಗೂ ಅದೇ ಬೇಕಾಗಿತ್ತು. ನಾನು ತುಟಿಕ್ ಪಿಟಿಕ್ ಎನ್ನದೆ ನೀರಿನಲಿ ನೆನೆದು ತೊಪ್ಪೆಯಾಗಿ, ಥೇಟ್ ಗುಬ್ಬಚ್ಚಿ ಮರಿಗಳಂತಿದ್ದ ಅವರನ್ನೆಲ್ಲಾ ಮಕ್ಕಳ ಕಳ್ಳನಂತೆ ಕಾರಿಗೆ ತುಂಬಿಕೊಂಡು ಕುಪ್ಪಳಿಯ ದಾರಿ ಹಿಡಿದೆ. ಎರಡು ದಿನದ ಜಾತ್ರೆಯ ಜನ ಜಂಗುಳಿ, ದೂಳು, ಕಿರಿಚಾಟ ಕೂಗಾಟಗಳಿಂದ ರೋಸಿ ಹೋಗಿದ್ದ ಅವರಿಗೂ ನನ್ನಂತೆಯೇ ಒಂದಿಷ್ಟು ಶಾಂತಿ ನೆಮ್ಮದಿ ಬೇಕಾಗಿತ್ತು.

ಬರುವಾಗ ದಾರಿಯಲಿ– ‘ಮಕ್ಕಳೇ, ಕುವೆಂಪು ಅವರಿಗೆ ಯಾರಾದರೂ ಅವರ ಊರಿನ ಪರಿಚಯವನ್ನು ಕೇಳಿದರೆ ಏನು ಹೇಳುತ್ತಿದ್ದರು ಗೊತ್ತೇ?’ ಎಂದೆ. ‘ಗೊತ್ತಿಲ್ಲ’ ಎಂದು ಎಲ್ಲರೂ ಒಟ್ಟಿಗೆ ಕಿವಿ ಕಿತ್ತುಬರುವಂತೆ ಕಿರುಚಿದರು. ‘ಹಾಗಾದರೆ ಕೇಳಿ; ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ, ಒಂಬತ್ತು ಮೈಲಿಗಳ ದೂರದಲ್ಲಿ ನಮ್ಮೂರು ಕುಪ್ಪಳಿ.

ಊರಲ್ಲ ಅದು ನಮ್ಮ ಮನೆ. ನಮ್ಮ ಕಡೆ ಊರೆಂದರೆ ಒಂದೇ ಮನೆ. ದಟ್ಟವಾದ ಅಡವಿಗಳು, ಕಿಕ್ಕಿರಿದ ಮಲೆನಾಡು ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು ಎತ್ತ ನೋಡಿದರತ್ತ ಸಿರಿಹಸುರು. ಕಣ್ಣುಗಳಿಗೆ ಆನಂದ’ ಎಂದಿದ್ದಾರೆ, ಗೊತ್ತಾಯಿತೇ?’ ಎಂದೆ. ‘ಅಲ್ಪ ಸ್ವಲ್ಪ ಗೊತ್ತಾಯಿತು’ ಎಂದಳು ಶಕೀಲ. ‘ಹೋದ ಮೇಲೆ ಎಲ್ಲಾ ಗೊತ್ತಾಗಬಹುದು’ ಎಂದು ಸಣ್ಣಗೆ ಗೊಣಗಿದವನು ತರಲೆ ಪ್ರವೀಣ್.

ನಾನು ಇಷ್ಟು ಹೇಳುವಾಗಲೇ, ಕಾರಿಗೆ ಕುಪ್ಪಳಿಯ ಹೊರಳು ದಾರಿ ಸಿಕ್ಕಿತು. ಆ ದಾರಿಯ ಬದಿಯಲ್ಲಿನ ಕಾಡು ನೋಡಿ ನಲಿಯುತ್ತಿದ್ದ ಮಕ್ಕಳು ತಕ್ಷಣ, ‘ಅಂಕಲ್ ಕಾರು ನಿಲ್ಲಿಸಿ’ ಎಂದರು.  ನೋಡಿದರೆ, ಆ ಕಾಡಿನ ನಡುವೆ ನಾಲ್ಕು ಮೂಲೆಗಳಲ್ಲಿ ಎತ್ತರಕ್ಕೆ ನಿಲ್ಲಿಸಿದ್ದ ಕಲ್ಲು ಕಂಬಗಳು ಅವರ ಕಣ್ಣಿಗೆ ಬಿದ್ದು ಆಶ್ಚರ್ಯ ಉಂಟು ಮಾಡಿದ್ದವು. ಅದನ್ನು ನೋಡಿದ ಸೀಮಾ ‘ಅದೇನದು’ ಎಂದು ಚಕಿತಳಾಗಿ ಕೇಳಿದಳು.

‘ಅದು ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿ ಮಕ್ಕಳೇ, ಅವರೂ ಅಪ್ಪನಂತೆಯೇ ತುಂಬಾ ಚೆನ್ನಾಗಿ ಕಥೆ ಕಾದಂಬರಿ ಬರೆದವರು. ಕಾಡಿನಲ್ಲೇ ಬಾಳಿ ಬದುಕಿದವರು. ಕಾಡಿನ ಪರಿಸರದ ಜೀವನವನ್ನು ಅನುಭವಿಸಿ ಅದೇ ಅನುಭವಗಳಿಂದ ಕಥೆ ಕಟ್ಟಿಕೊಟ್ಟವರು’ ಎಂದು ನಮ್ರವಾಗಿ ಹೇಳಿದೆ. ತಕ್ಷಣ ‘ಓಹೋ ನನಗೆ ಗೊತ್ತು. ನಾನವರ ಸುಸ್ಮಿತ ಮತ್ತು ಹಕ್ಕಿ ಮರಿ ಕಥೆ ಓದಿದ್ದೇನೆ’ ಎಂದನು ಹೆಮ್ಮೆಯಿಂದ ಕಬೀರ.

‘ತೇಜಸ್ವಿ ಬಾಳಿ ಬದುಕಿದ್ದು ಮಾತ್ರ ಮೂಡಿಗೆರೆಯ ಕಾಡಿನಲ್ಲಿ. ಅವರ ತಂದೆ ತಾಯಿ ಸ್ವಂತ ಊರು ಕುಪ್ಪಳಿಯಾದ ಕಾರಣ ಅವರನ್ನು ಇಲ್ಲಿಯೇ ತಂದು ದಫನ್ ಮಾಡಿದ್ದಾರೆ’ ಎಂದು ಹೇಳಿದೆ. ಅದನ್ನು ಕೇಳಿದ ಸೂಫಿ, ‘ಸತ್ತ ಮೇಲೆ ಯಾಕೆ ಎಲ್ಲರನ್ನೂ ಅವರ ಹುಟ್ಟಿದೂರಿಗೆ ತಂದು ಹೂಳುತ್ತಾರೆ ಅಂಕಲ್’ ಎಂದು ಮುಗ್ಧವಾಗಿ ಪ್ರಶ್ನಿಸಿದಳು. ಅಬ್ಬಾ! ಎಂಥ ಪ್ರಶ್ನೆ. ಆಕೆಯ ಮಾತಿಗೆ ನಾನು ಅಕ್ಷರಶಃ ನಡುಗಿಹೋದೆ. ಹೌದು ಯಾಕಿರಬೇಕು? ಕಾರಂತರು ಹೇಳಿದ ‘ಮರಳಿ ಮಣ್ಣಿಗೆ’ ಎಂದರೆ ಇದೇನಾ? ಮಕ್ಕಳು ಎಷ್ಟು ಗಂಭೀರವಾದ ಪ್ರಶ್ನೆಗಳನ್ನು ಅದೆಷ್ಟು ಸರಳವಾಗಿ ಕೇಳಿಬಿಡುತ್ತಾರಲ್ಲ. ಚಡಪಡಿಸಿದ ನಾನು ‘ನೀನು ಕೇಳಿದ್ದು ಬಹಳ ದೊಡ್ಡ ಪ್ರಶ್ನೆ ಕಣಮ್ಮ. ಉತ್ತರ ಹೇಳುವಷು ಶಕ್ತಿ ನನಗೂ ಇನ್ನು ಬಂದಿಲ್ಲ’ ಎಂದುಬಿಟ್ಟೆ. ಸುಮ್ಮನಾದ ಆಕೆ ಹಾಗೇ ಮೌನವಾದಳು.

ಒಂದು ಕ್ಷಣ ನಾನೂ ಸುಮ್ಮನಾಗಿ ಹೋದೆ. ಅವಳ ಪ್ರಶ್ನೆ ತಲೆಕೊರೆಯತೊಡಗಿತು. ಮತ್ತೆ ಮೈ ಕೊಡವಿಕೊಂಡು ‘ಸರಿ ಮುಂದೆ ಹೋಗೋಣ’ ಎಂದು ಕಾರನ್ನು ಚಲಾಯಿಸಿದೆ. ಅಲ್ಲಿಂದ ಮುಂದೆ ಸಾಗಿದಾಗ, ಗೋಡೆಯಂತೆ ಎತ್ತರವಾಗಿ ಬೆಳೆದು ನಿಂತ ಹಸಿರು ವರ್ಣದ ಕಾಡು ಎದ್ದು ಕಾಣುತ್ತಿತ್ತು. ದಾರಿಯ ಅಕ್ಕಪಕ್ಕದಲ್ಲಿ ಚಿಗುರಿದ ಎಲೆ ಬಳ್ಳಿಗಳ ಮೈಮೇಲೆ ಅರಳಿ ನಿಂತ ನೀಲಿ, ಅರಿಶಿನ ಹಾಗೂ ಕೆಂಪು ಬಣ್ಣದ ಹೂವುಗಳು ಮಕ್ಕಳಿಗೆ ಮುದ ನೀಡುತ್ತಿದ್ದವು.

ಹೂವುಗಳ ಕಂಡು ಅವರೆಲ್ಲಾ ಹಿಗ್ಗಿದರು. ಹಿಂಡು ಹಿಂಡು ಬಣ್ಣದ ಚಿಟ್ಟೆಗಳು ರಾಶಿಯಾಗಿ ಹಾರಾಡುತ್ತಾ ಇರುವುದನ್ನು ನೋಡಿ  ಮಕ್ಕಳು ಚಿಟ್ಟೆಗಣತಿ ಆರಂಭಿಸಿದರು. ಎಲ್ಲರ ಲೆಕ್ಕಗಳೂ ತಾಳ ತಪ್ಪುತ್ತಿದ್ದವು. ಅವರ ಜಗಳ ಸಣ್ಣಗೆ ನಡೆಯುವಾಗಲೇ  ಕುಪ್ಪಳಿಯ ಮನೆ ಸಿಕ್ಕೇ ಬಿಟ್ಟಿತ್ತು. ಎಲ್ಲರೂ ಇಳಿದು ಸುತ್ತಲ ಕಾಡು ನೋಡಿ, ತಿಳಿ ಗಾಳಿ ಕುಡಿದು ಉಲ್ಲಾಸಗೊಂಡರು.

ಅವರನ್ನು ಮತ್ತೆ ಗುಡ್ಡೆ ಹಾಕಿಕೊಂಡ ನಾನು ನನ್ನ ಪುರಾಣ ಶುರು ಮಾಡಿಕೊಂಡೆ. ಅದೊಂದು ಥರ ಶೈಕ್ಷಣಿಕ ಪ್ರವಾಸವೇ ಆಗಿಬಿಟ್ಟಿತ್ತು. ಮಕ್ಕಳು ಚಿಕ್ಕವಾದರೂ ಅವು ನಮಗಿಂತ ಮುಂದುವರೆದ  ಬುದ್ಧಿವಂತ ತಳಿಗಳು ಎಂದು ನಂಬಿದವನು ನಾನು. ಮಕ್ಕಳು, ಏನೂ ಗೊತ್ತಾಗಲ್ಲ ಅನ್ನೋ ಕಾಲ ಈಗಿಲ್ಲ ಅನ್ನೋದು ನನಗೆ ಗೊತ್ತು. ಹೀಗಾಗಿ, ಅವರಿಗೆ ಅರ್ಥವಾಗಲೀ, ಬಿಡಲಿ ನಾನು ನನ್ನ ಕೊರೆತ ಮುಂದುವರೆಸಿದೆ. ‘ಮಕ್ಕಳೇ, ಕುವೆಂಪು ಅವರು ಹುಟ್ಟಿದ್ದು ತಮ್ಮ ತಾಯಿಯ ಮನೆ ಹಿರೇಕೊಡಿಗೆಯಲ್ಲಿ. ಅದು ಇಲ್ಲೇ ಸಮೀಪದಲ್ಲಿದೆ.

ಅಲ್ಲಿ ಈಗ ಅಂಥದ್ದೇನೂ ಇಲ್ಲ. ಕುವೆಂಪು ಅವರ ಒಂದು ಪ್ರತಿಮೆಯನ್ನು ಕೆತ್ತಿ ನಿಲ್ಲಿಸಿದ್ದಾರೆ ಅಷ್ಟೆ. ಕುವೆಂಪು ಹುಟ್ಟಿದ್ದು ಹಿರೇಕೊಡಿಗೆಯಲ್ಲಾದರೂ, ಅವರು ಬಾಲ್ಯದಲ್ಲಿ ಆಡಿ ಬೆಳೆದದ್ದು, ಕಲಿತದ್ದು, ಬಾಳಿ ಬದುಕಿದ್ದು ಎಲ್ಲಾ ಕುಪ್ಪಳಿಯ ಈ ಮನೆಯಲ್ಲೇ. ಅವರ ತಂದೆ ತಾಯಿ ಬಂಧು ಬಳಗದವರೆಲ್ಲಾ ಇದ್ದದ್ದು ಇದೇ ಮನೆಯಲ್ಲಿ. ಈ ಕಾರಣಕ್ಕೆ ಕುಪ್ಪಳಿಯ ಈ ಮನೆಯ ಬಗ್ಗೆ ಕುವೆಂಪು ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಕುಪ್ಪಳಿಯ ಈ ಮನೆಯಲ್ಲಿ ಕುವೆಂಪು ಅವರನ್ನು ಎಲ್ಲರೂ ಪ್ರೀತಿಯಿಂದ ‘ಪುಟ್ಟು’ ಎಂದು ಕರೆಯುತ್ತಿದ್ದರಂತೆ.

ತಮ್ಮನ್ನು ಸಾಕಿ ಸಲಹಿದ ಮನೆಯ ಬಗ್ಗೆ ಅವರು ತಮ್ಮ ಆತ್ಮಕಥನ ‘ನೆನಪಿನ ದೋಣಿಯಲ್ಲಿ’ ಎಂಬ ಪುಸ್ತಕದಲ್ಲಿ– ‘ನನ್ನ ಮನೆ ಪ್ರಕೃತಿ ಸೌಂದರ್ಯದ ನೆಲೆ ಬೀಡಾದ ಸಹ್ಯಾದ್ರಿಯ ಶ್ರೇಣಿಯಲ್ಲಿದೆ. ಇದು ಮಲೆ ಕಾಡು ಗುಡ್ಡ ಬೆಟ್ಟಗಳ ನಡುವೆ ಇರುವ ಒಂಟಿ ಮನೆಯಾದರೂ ಇತರ ಮನೆಗಳಿಗಿಲ್ಲದ ಒಂದು ವಿಶೇಷ ಅನುಕೂಲ ಸನ್ನಿವೇಶ ನನ್ನ ಮನೆಗಿದೆ. ಮನೆಯ ಮುಂದೆಯೇ ತೋಟ. ಅದರ ಪಕ್ಕದಲ್ಲಿ ಹರಿಯುವ ಹೊಳೆ. ಅದರಾಚೆ ನಡು ಆಕಾಶದವರೆಗೆ ವಿಜೃಂಭಿಸಿ ನಿಂತು ದಟ್ಟ ಅರಣ್ಯವನ್ನೇ ಹಾಸಿ ಮಲಗಿದ ಬೆಟ್ಟ.

ಇನ್ನು, ಮನೆಯ ಹಿಂದಿನಿಂದ ಪ್ರಾರಂಭವಾಗಿ, ವಿರಳ ಮರಪೊದೆಗಳಿಂದ ಹಕ್ಕಲುಹಕ್ಕಲಾದ ಮೇಲೇರಿ ಏರಿ ಹೋದರೆ ಬಂಡೆ. ಆ ಬಂಡೆಯ ಮಂಡೆಯಲಿ ಕೊನೆಯಾಗಿರುವ ಹಿರಿಯ ಹಾಸುಗಲ್ಲು. ಅದೇ ಕವಿಶೈಲ. ಈ ಬೆಟ್ಟವೂ, ಆ ಕವಿಶೈಲವೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ. ನನ್ನ ಬಾಲ್ಯದ ರಸ ಜೀವನದ ಬದುಕಿಗೆ ಉಸಿರನ್ನೆತ್ತಿ ಪೊರೆದಿವೆ’ ಎಂದು  ಹೇಳುತ್ತಾರೆ. ಹಾಗೆಯೇ, ತಮ್ಮ ಕುಪ್ಪಳಿ ಮನೆ ಕುರಿತು ‘ನನ್ನ ಮನೆ’ ಎನ್ನುವ ಕವನವನ್ನೂ ಅವರು ಬರೆದರು.

ADVERTISEMENT

ಮನೇ ಮನೇ ಮುದ್ದು ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಎತ್ತಿಕೊಂಡ ಮನೆ
ನಾನು ನುಡಿಯ ಕಲಿತ ಮನೆ
ಮೊದಲು ಬೆಳಕ ಕಂಡ ಮನೆ

‘ಹೌದಲ್ಲ! ಕುವೆಂಪು ತಮ್ಮ ಮನೆ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ’ ಎಂದಳು ಸೂಫಿ. ‘ಮನೆ ಕೂಡ ಕವಿಗಳು ಹೇಳಿದಂತೆ ಸೊಗಸಾಗಿದೆ. ಮೇಲಾಗಿ ಎಷ್ಟು ದೊಡ್ಡದಾಗಿದೆ. ಬನ್ರಲೇ.. ಎಲ್ಲಾ ಒಳಗೋಗಿ ಬೇಗ ನೋಡೋಣ’ ಎಂದು ಎಲ್ಲರನ್ನು ಕರೆದುಕೊಂಡು ಕುಣಿಯುತ್ತಾ ಹೊರಟಳು ಅನನ್ಯ.

ಹಾಗೆ ಹೊರಟವರ ಕಣ್ಣಿಗೆ ಮೊದಲು ಬಿದ್ದಿದ್ದು ಚೆಂದವಾದ ಅಚ್ಚುಕಟ್ಟಾದ ಹುಲ್ಲಿನ ಉದ್ಯಾನವನ. ಹೀಗಾಗಿ, ಮೊದಲು  ಎಲ್ಲಾ ಮಕ್ಕಳು ಆ ಹಸಿರು ಉದ್ಯಾನವನದಲ್ಲಿ ಕುಣಿದಾಡಿದರು. ನಾನು ಎಲ್ಲರನ್ನು ಮತ್ತೆ ಒಂದು ಮಾಡಿ ಕುಪ್ಪಳಿಯ ತೊಟ್ಟಿ ಮನೆಯ ಒಳಗೆ ನುಗ್ಗಿಸಿದೆ. ಅಲ್ಲಿ ಜೋಡಿಸಿಟ್ಟಿರುವ ಭತ್ತ ತುಂಬುವ ಬಾನಿ, ಬೃಹತ್ ಮರದ ಬಾಗಿಲುಗಳು, ಕೆತ್ತನೆಯ ಕಂಬಗಳು, ಕುವೆಂಪು ಮದುವೆಯಾದ ಮಂಟಪ, ಮಜ್ಜಿಗೆ ಕಡೆಯುವ ಕಡೆಗೋಲು ಕಂಬ, ರೊಟ್ಟಿ ಮಾಡುವ ದೊಡ್ಡ ಮರದ ಹಲಗೆ, ಮಲೆನಾಡಿನ ಕತ್ತಿ, ಕೋವಿಗಳನ್ನು ನೋಡಿದರು.

ಕುವೆಂಪು ಅವರು ಬರೆದ ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ಫಲಕ, ರಾಷ್ಟ್ರಕವಿಗಿತ್ತ ಮನ್ನಣೆ ಪತ್ರಗಳ ಜತೆಗೆ ಅವರು ಬಾಲ್ಯದಿಂದ ಮುಪ್ಪಿನವರೆಗಿನ ತೆಗೆಸಿಕೊಂಡ ಎಲ್ಲಾ ಫೋಟೋಗಳನ್ನು ನೋಡಿ ಪುಳಕಗೊಂಡರು. ಜತೆಗೆ, ನೂರಾರು ಪ್ರಶ್ನೆಗಳ ಕೇಳಿ ಉತ್ತರ ಪಡೆದರು. ಮಲೆನಾಡಿನಲ್ಲಿ ಇಷ್ಟೊಂದು ಚೆಂದದ ಮನೆಗಳಿರುತ್ತಾವೆ? ಎಂದು ಪರಸ್ಪರ  ಸೋಜಿಗಪಟ್ಟುಕೊಂಡರು.

ನಾನು ಅವರಿಗೆ ಕುವೆಂಪು ಬಾಲಕರಾಗಿದ್ದಾಗ ಅಲ್ಲಿ ಆಡಿದ ಆಟಗಳು, ನಡೆದ ಎಲ್ಲಾ ತರಲೆಯ ಪ್ರಸಂಗಗಳ ಜೊತೆಗೆ ಬಾಲಕ ಪುಟ್ಟು ಕೋವಿಯ ಈಡಿನ ಮಸಿಗೆ ಬೆಂಕಿ ತಾಗಿಸಲು ಹೋಗಿ ಕೈಸುಟ್ಟುಕೊಂಡ ಪ್ರಕರಣಗಳನ್ನೆಲ್ಲಾ ನೆನಪು ಮಾಡಿಕೊಟ್ಟೆ. ಆಗ ನಮಗೆಲ್ಲಾ ಕೇಳುವಂತೆ ಗೊಣಗಿಕೊಂಡ ತರಲೆ ಪ್ರವೀಣ್ ‘ಓಹೋ! ಹಂಗಾದ್ರೆ ಕುವೆಂಪು ಕೂಡ ನನ್ನ ಥರಾನೆ ತುಂಟರಾಗಿದ್ದರು ಬಿಡಿ’ ಎಂದು ಸಮಾಧಾನ ಪಟ್ಟುಕೊಂಡು, ಅಂಗಿಯ ಕಾಲರ್ ಒಮ್ಮೆ ಝಾಡಿಸಿಕೊಂಡನು.

‘ಅಂಕಲ್, ನಾವು ಅಜ್ಜಂಯ್ಯನ ಅಭ್ಯಂಜನ ಪಾಠ ಓದಿದ್ದೇವೆ. ಅವರ ಅಜ್ಜ ದಿನವಿಡೀ ಸ್ನಾನ ಮಾಡುತ್ತಿದ್ದರಂತೆ? ನಿಜವೇ? ದಯವಿಟ್ಟು ಆ ಬಚ್ಚಲು ಮನೆಯ ತೋರಿಸಿ’ ಎಂದು ಕಾಡಿದನು ನೂರ್ ಅಹಮದ್. ‘ಆಯಿತು ಬಾ’ ಎಂದು ಅವರನ್ನು ಕರೆದುಕೊಂಡು ಹೋಗಿ ಆ ಬಚ್ಚಲು ಮನೆಯನ್ನು ತೋರಿಸಿದೆ. ಅದನ್ನು ನೋಡಿ ಮಕ್ಕಳು ಬೆಚ್ಚಿಬಿದ್ದರು! ‘ಇದೆಂಥಹ ಬಚ್ಚಲು ಮನೆಯಪ್ಪ! ನಮ್ಮ ಊರಿನ ಮನೆಗಿಂತ ದೊಡ್ಡದಾಗಿದೆ. ಎರಡೆರಡು ಬಿಸಿನೀರಿನ ತಾಮ್ರದ ಹಂಡೆಗಳು! ಅಬ್ಬಾ! ನಮ್ಮೂರಿನ ಸಿಮ್ಮಿಂಗ್ ಪೂಲ್ ಥರ ಇದ್ದಾವೆ’ ಎಂದು ಕೀಚಲು ರಾಗ ತೆಗೆದಳು ಸೌಜನ್ಯ.

‘ಮನೆ ನೋಡಿ ಆಯಿತಲ್ಲ ಮಕ್ಕಳೇ, ಇನ್ನು ಕವಿಶೈಲದ ಕಲ್ಲಿನ ಬೆಟ್ಟ ಹತ್ತೋಣ ಬನ್ನಿ. ಗಲಾಟೆ ಮಾಡದೆ ಬಂದರೆ ಇಲ್ಲಿನ ಅಮೂಲ್ಯ ಪ್ರಾಣಿ ಪಕ್ಷಿಗಳನ್ನು ನೀವು ಸನಿಹದಿಂದ ನೋಡಬಹುದು. ನವಿಲುಗಳೋ ಇಲ್ಲಿ ಸಾಕಷ್ಟಿವೆ. ಕವಿಶೈಲಕ್ಕೆ ಬಂದವರು ಹೇಗಿದ್ದರೆ ಚೆನ್ನ ಎಂಬುದನ್ನು  ಕುವೆಂಪು ತಮ್ಮ ಕವಿಶೈಲ ಪದ್ಯದಲ್ಲಿ ಹೀಗೆ ಹೇಳುತ್ತಾರೆ ಕೇಳಿ...

ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ
ಇದ್ದೇ ಇದೆ ನಿಮ್ಮ ಹರಟೆ ಗುಲ್ಲು! ಆ ಸಂತೆ ಇಲ್ಲೇಕೆ?
ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ!

ಎಂದಿದ್ದಾರೆ. ಅದನ್ನು ನಾವೆಲ್ಲಾ ಇವತ್ತು ಪಾಲಿಸೋಣ ಅಲ್ಲವೇ?’ ಎಂದೆ. ‘ಹಾಗೇ ಆಗಲಿ’ ಎಂದು ಎಲ್ಲರೂ ಮೌನದಿಂದ ನಡೆದು ಬಂದರು. ಬೆಟ್ಟದ ಅರ್ಧಕ್ಕೆ ಬಂದಾಗ ನಾನೇ ಮೌನ ಮುರಿದು  ‘ಅದೋ ನೋಡಿ ಮಕ್ಕಳೇ, ಆ ಮರಗಳ ಗುಂಪಿದೆಯಲ್ಲ. ಇದಕ್ಕೆ ದೇವರಬನ ಎಂದು ಕರೀತಾರೆ. ಕುವೆಂಪು ಅವರ ಮನೆಯವರು ಶಿಕಾರಿಗೆ ಹೋಗುವ ಮೊದಲು ಇಲ್ಲಿ ಬಂದು ವನ ದೇವರಿಗೆ ನಮಸ್ಕರಿಸಿ ‘ಶಿಕಾರಿಯಾಗುವಂತೆ ಹರಸು ತಂದೆ’ ಎಂದು ಬೇಡಿಕೊಂಡು ಹೋಗುತ್ತಿದ್ದರಂತೆ.

ಹಾಗೆಯೇ, ಇಲ್ಲಿರುವ ಕೆಲ ಗಿಡ ಮರಗಳ ಚಿಗುರನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ನೋಡಲು ಹೂವಿನಂತೇ ಕಾಣುವ ಇವು  ನಿಜಕ್ಕೂ ಮರದ ಎಲೆಗಳೇ ಹೊರತು ಹೂವುಗಳಲ್ಲ. ಬಣ್ಣದಲ್ಲಿ ಹೂವಿನ ಚೆಲುವನ್ನು ಪಡೆದಿರುವ ಇಂಥ ಎಲೆಗಳನ್ನು ನಾವು ಈ ಪಶ್ಚಿಮಘಟ್ಟದಲ್ಲಿ ಮಾತ್ರ ನೋಡಲು ಸಾಧ್ಯ. ಇವು ತುಂಬಾ ಅಮೂಲ್ಯ. ಇವುಗಳಲ್ಲಿ ಬಹಳಷ್ಟು ಗಿಡಮೂಲಿಕೆ ಬಳ್ಳಿಗಳೂ ಇರಬಹುದು. ಹೀಗಾಗಿಯೇ ಇದನ್ನು ರಕ್ಷಿತ ಅರಣ್ಯ ಎಂದು ಸರ್ಕಾರ ಘೋಷಿಸಿದೆ.

ಹ್ಞಾ, ಅಂದಹಾಗೆ ನಾವು ನಡೀತಾ ನಡೀತಾ ಈಗ ಬೆಟ್ಟದ ತುದಿಗೆ ಬಂದಿದ್ದೇವೆ. ಇದೇ ಕವಿಶೈಲ. ಅದೋ, ಈ  ಎತ್ತರದ ಬಂಡೆಯ ಮೇಲೆ ಕೂತು ಕುವೆಂಪು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಅನೇಕ ಪದ್ಯಗಳನ್ನು ಇಲ್ಲಿ ಕುಳಿತು ಬರೆದಿದ್ದಾರೆ. ಇಲ್ಲೇ ಧ್ಯಾನಿಸಿದ್ದಾರೆ. ಈ ಸ್ಥಳ ಕವಿಗೆ ಆತ್ಮ ಇದ್ದಂತೆ. ಇಲ್ಲಿ ನೋಡಿ. ಕುವೆಂಪು ಗುರುಗಳಾದ ವೆಂಕಣ್ಣಯ್ಯನವರು, ಕನ್ನಡದ ಕಣ್ವ ಬಿ.ಎಂ.ಶ್ರೀಯವರು ತಾವು ಇಲ್ಲಿಗೆ ಬಂದ ನೆನಪಿನಲ್ಲಿ ತಮ್ಮ ಹಸ್ತಾಕ್ಷರಗಳನ್ನು ಕೆತ್ತಿದ್ದಾರೆ. ಕುವೆಂಪು ಅವರ ಕೈ ಬರಹವೂ ಇಲ್ಲಿದೆ. ಇದು ಕವಿಗೆ ತುಂಬಾ ಇಷ್ಟವಾದ ಜಾಗ. ಹೀಗಾಗಿ ಅವರು ಅದನ್ನು ಹೀಗೆ ವರ್ಣಿಸುತ್ತಾರೆ...

ಓ ನನ್ನ ಪ್ರಿಯತಮ ಶಿಖರ ಸುಂದರನೆ,
ಓ ಕವಿಶೈಲ ನಿನ್ನ ಸಂಪದವನೆನಿತು ಬಣ್ಣಿಸಲು ಅಸದಳವು
ನೀಂ ಭುವನದಲಿ ಸ್ವರ್ಗವಾಗಿಯೆ ನನಗೆ

ಮತ್ತೆ ಅದೋ, ಅಲ್ಲಿ  ಎದುರಿಗೆ ಕಾಣುತ್ತಿರುವುದು ಕುವೆಂಪು ಅವರ ಸಮಾಧಿ ಸ್ಥಳ. ಇಲ್ಲಿಂದ ನಿಂತು ನೋಡಿ ಅದೆಷ್ಟು ಪರ್ವತಗಳು  ಕಾಣುತ್ತವೆ. ಇಲ್ಲಿಂದ ಸೂರ್ಯ ಮುಳುಗುವ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ’ ಎಂದೆ. ಮುಂದಿನ ಹಸಿರು ಪರ್ವತಗಳ ರಾಶಿ ನೋಡಿದ ನೋಡಿದ ರಾಬರ್ಟ್ ‘ಆನೆ ಸೊಂಡಿಲುಗಳು ರಾಶಿ ಬಿದ್ದಂತೆ ಕಾಣುತ್ತಿವೆ’ ಎಂದ. ಅದಕ್ಕೆ ಕಬೀರ ‘ದೊಡ್ಡ ಹಸಿರು ಹೂವಿನ ಮಾಲೆಗಳನ್ನು ಯಾರೋ ಪೋಣಿಸಿಟ್ಟು ಮರೆತು ಬಿಟ್ಟು ಹೋಗಿರಬೇಕು’ ಎಂದು ಹಾಸ್ಯ ಮಾಡಿದ. ಮಕ್ಕಳ ಕವಿತಾ ಶಕ್ತಿಗೆ ನಾನೂ ಮಾರುಹೋದೆ.

‘ಆಯಿತು ಮಕ್ಕಳೇ ಇಲ್ಲಿಂದ ಇಳಿದು ಮುಂದೆ ಹೋಗೋಣ. ಅಲ್ಲಿ ತೇಜಸ್ವಿ ಅವರ ಸಮಾಧಿ ನೋಡಿದಿರಲ್ಲ. ಅದರ ಪಕ್ಕದಲ್ಲೇ ದೊಡ್ಡ ಭವನವೊಂದಿದೆ. ಅದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ. ಇಲ್ಲಿ ಕುವೆಂಪು ಹಾಗೂ ತೇಜಸ್ವಿ ಅವರ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡಲಾಗುತ್ತದೆ. ಇಲ್ಲಿ ದೊಡ್ಡ ಗ್ರಂಥಾಲಯವಿದೆ. ಇಲ್ಲಿನ ಸಭಾಂಗಣದಲ್ಲಿ ಕುವೆಂಪು ಅವರ ಅನೇಕ ನಾಟಕಗಳು ಪ್ರದರ್ಶನಗೊಂಡಿವೆ.

ಕುಪ್ಪಳಿಯ ನೋಡಲು ಬರುವವರು ಇಲ್ಲಿ ಉಳಿದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇಲ್ಲಿಗೆ ಬರುವವರಿಗೆ ಎಲ್ಲಾ ರೀತಿಯಿಂದ ಸಹಾಯ ಮಾಡುವ ಸಂಸ್ಥೆ ಇದೇನೆ’ ಎಂದೆ. ಆ ಭವನವನ್ನು ಒಮ್ಮೆ ಎಲ್ಲರೂ ಸುತ್ತು ಹಾಕಿದರು. ಅತಿಥಿಗಳಿಗಾಗಿ ಅಲ್ಲಿ ಕಟ್ಟಿಸಿರುವ ಪುಟ್ಟ ಮನೆಗಳ ಸೊಬಗನ್ನು ಅಲ್ಲಿನ ಪ್ರಶಾಂತ ವಾತಾವರಣವನ್ನು ಅವರು ಆಸ್ವಾದಿಸಿದರು. ನಂತರ ಅವರನ್ನು ಕುವೆಂಪು ಮೀನು ಹಿಡಿಯುತ್ತಿದ್ದ ಕೆರೆಗೆ ಕರೆದುಕೊಂಡು ಹೋದೆ. ಅಲ್ಲಿ ಕುವೆಂಪು ಅವರು ಪಡೆದ ರಸಾನುಭಗಳನ್ನು ವಿವರಿಸಿದೆ.

ಹಾಗೇ ದಾರಿಯಲ್ಲಿ ಸಿಗುವ ಕುವೆಂಪು ಅವರು ಇಷ್ಟ ಪಡುವ ನಿರ್ಮಲ ನೀರಿನ ಹಳ್ಳವನ್ನು ತೋರಿಸಿದೆ. ಅಲ್ಲಿಯೂ ನಾನು ಎಷ್ಟೇ  ಬೇಡವೆಂದರೂ ಅವರೆಲ್ಲಾ ಇಳಿದು ಜಲಕ್ರೀಡೆಯಾಡಿದರು. ಏಡಿಗಳ ಹಿಡಿದರು. ಮೀನು ಹಿಡಿಯಲು ಹರ ಸಾಹಸಪಟ್ಟು ಸುಸ್ತಾದರು. ಆಡಿ, ಹಾಡಿ ಕುಣಿದಂತೆ ಅವರ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಪ್ರಕೃತಿಯ ನಡುವೆ ಅವರೆಲ್ಲಾ ಹಕ್ಕಿಗಳಾಗಿ ಹಾಡಿದರು. ಚಿಟ್ಟೆಗಳಂತೆ ಹಾರಾಡಿದರು. ಅವರ ನಗು, ಉತ್ಸಾಹಕ್ಕೆ ಎಲ್ಲೆಗಳೇ ಇರಲಿಲ್ಲ.

ಆನಂತರ ನಾನು ‘ಸರಿ ಮಕ್ಕಳೇ, ಈಗ ಸಿಬ್ಬಲಗುಡ್ಡೆಗೆ ಹೋಗೋಣ. ನಾವು ವಾಪಸ್ಸು ಹೋಗುವ ದಾರಿಯಲ್ಲೇ ಈ ಸ್ಥಳ ಸಿಗುತ್ತದೆ. ತುಂಗಾ ನದಿಯ ತೀರವಿದು. ಇಲ್ಲಿ ರಾಶಿರಾಶಿ ಮೀನುಗಳು ನಾವು ಹಾಕುವ ಮಂಡಕ್ಕಿ ತಿನ್ನಲು ಧಾವಿಸಿ ಬರುತ್ತವೆ. ಇದರಲ್ಲಿ ಮಹಶೀರ್ ಎಂಬ ವಿಶೇಷ ಜಾತಿಯ ಅವನತಿಯ ಸಂತತಿಗೆ ಸೇರಿದ ಮೀನು ಇದೆ. ಸ್ವಚ್ಛವಾದ ಸಿಹಿ ನೀರಿನಲ್ಲಿ ಮಾತ್ರ ಇವು ವಾಸಮಾಡುತ್ತವೆ. ಈ ಮೀನುಗಳು ಒಂದೊಮ್ಮೆ ಸತ್ತರೆ ಆ ನದಿಯ ನೀರು ಸಂಪೂರ್ಣ ಹಾಳಾಗಿದೆ ಎಂದು ಇಲ್ಲಿನ ಹಳ್ಳಿಯ ಜನ ನಂಬುತ್ತಾರೆ. ನೀವು ಕುವೆಂಪು ಕಾದಂಬರಿ ಓದಿದರೆ ಈ ಸಿಬ್ಬಲುಗುಡ್ಡೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಇದೋ ಸಿಬ್ಬಲು ಗುಡ್ಡ ಬಂದಿತು. ಈ ಗಣೇಶನ ಗುಡಿಯ ಪಕ್ಕದಲ್ಲೇ ಇಳಿಯುವ ದಾರಿ ಇದೆ. ಮಕ್ಕಳೇ, ನಿಧಾನವಾಗಿ ಮೆಟ್ಟಿಲು ಇಳಿದು ಬನ್ನಿ. ಮುಂದಿನ ತುಂಗಾ ನದಿಯಲ್ಲಿ ಇಳಿಬೇಡಿ. ತುಂಬಾ ಆಳವಿದೆ’ ಎಂದು ಕೂಗಿ ಎಚ್ಚರಿಸಿದೆ.

ಅಷ್ಟರಲ್ಲಿ ಮಕ್ಕಳು ಚೆಲ್ಲಿದ ಮಂಡಕ್ಕಿ ಆಸೆಗೆ ಎಲ್ಲೆಲ್ಲೋ ಅವಿತು ಆಟವಾಡಿಕೊಂಡಿದ್ದ ಭಾರೀ ಗಾತ್ರದ ಮೀನುಗಳೆಲ್ಲಾ ಸುನಾಮಿಯಂತೆ ನುಗ್ಗಿಬಂದವು. ಅವುಗಳ ಗಾತ್ರ ನೋಡಿ ಒಮ್ಮೆಗೇ ಹುಡುಗರು ಹೌಹಾರಿ ಹೆದರಿ ನಿಂತರು. ಆಗ ನಾನು ‘ಹೆದರಬೇಡಿ. ಅವು ಏನೂ ಮಾಡಲ್ಲ’ ಎಂದೆ. ‘ನಾವು ಮೀನಾಗಬೇಕಿತ್ತು ಕಣೆ ಸೂಫಿ’ ಎಂದಳು ಅನನ್ಯ. 

‘ನನಗೆ ಮೀನು ಫ್ರೈ ಎಂದರೆ ತುಂಬಾ ಇಷ್ಟ’ ಎಂದ ತರಲೆ ಪ್ರವೀಣ. ‘ನಾನು ದೊಡ್ಡವನಾಗಿ ಕುವೆಂಪು ಥರ ಈ ಮೀನುಗಳ ಮೇಲೆ ಪದ್ಯ–ಕತೆ ಬರೀತೀನಿ’ ಎಂದು ಸಂಭ್ರಮಿಸಿದ ನೂರ್ ಅಹಮದ್. ನಮ್ಮ ಹುಡುಗಾಟ, ಹಾರಾಟ, ಮಕ್ಕಳ ಚಿಲಿಪಿಲಿ ನಾದ ಕೇಳಿ ಎಚ್ಚರಗೊಂಡು ಅಲ್ಲಿನ ಗಿಡಮರಗಳಲ್ಲಿ ಪ್ರಾಣವಾಗಿದ್ದ ಕುವೆಂಪು ನನ್ನ ಮಕ್ಕಳಿಗಾಗಿ ತಾವು ಸಿಬ್ಬಲಗುಡ್ಡೆಯ ಕುರಿತು ರಚಿಸಿದ ಪದ್ಯ ಓದತೊಡಗಿದರು. ಧ್ಯಾನದ ಮೌನಕ್ಕೆ ಶರಣಾದ ನಾವೆಲ್ಲಾ ಆ ಹಾಡಿಗೆ ಕಿವಿಗೊಟ್ಟು ಕೂತೆವು. ದಣಿದ ಮಕ್ಕಳ ಉಸಿರಾಟದಲ್ಲಿ ಆ ಗೀತೆ ಮೊಳಗತೊಡಗಿತು...

ಮೇಲೆ ಬಾನುಕ್ಕು ನೀಲಿಯಲಿ ತೇಲುತಿಹನು ರವಿ
ಸುತ್ತ ದಿಗಂತ ವನಪಂಕ್ತಿ ರಾಜಿಸಿದೆ,
ಹೊಳೆಗೆ ಹಸಿರು ಅಂಚಾಗಿ ಸುಖ ಶಾಂತಿ
ಅದೋ ಹಾರಿ ಬರುತಲಿವೆ ನೀರ್‌ ಕಾಗೆ ಬೆಳ್ಳಕ್ಕಿ,
ವನಪಟದ ಭಿತ್ತಿಯಲಿ ನೂರು ಕರಿಬಿಳಿ ಚುಕ್ಕಿ
ದರ್ಶನಕೆ ಕಬ್ಬಿಗನ ಮೈ ಹೊಳೆಯಂತೆ.. ನೀರಂತೆ.. ಬಾನಂತೆ... ಬನದಂತೆ ಪುಳಕಿತಂ
ಕುಪ್ಪಳಿಯಿಂದ ವಾಪಸ್ಸಾಗುವ ದಾರಿಯುದ್ದಕ್ಕೂ ಹಾಡು ನಮ್ಮನ್ನೆಲ್ಲ ಆವರಿಸಿಕೊಂಡಿತ್ತು. ಕುವೆಂಪು ಅವರನ್ನೇ ನೋಡಿದಂತೆ, ಮಾತನಾಡಿದಂತೆ ಮಕ್ಕಳೆಲ್ಲ ಮೂಕವಿಸ್ಮಿತರಾಗಿದ್ದರು.

(ಚಿತ್ರಗಳು ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.