ADVERTISEMENT

ಕೂಡಿ ಬಾಳಿದರೆ ಸ್ವರ್ಗ ಸುಖ

ಸತ್ಯಬೋಧ, ಬೆಂಗಳೂರು
Published 23 ಡಿಸೆಂಬರ್ 2017, 19:30 IST
Last Updated 23 ಡಿಸೆಂಬರ್ 2017, 19:30 IST
ಚಿತ್ರ: ಶಶಿಧರ ಹಳೇಮನಿ
ಚಿತ್ರ: ಶಶಿಧರ ಹಳೇಮನಿ   

ಬೇವು, ತೇಗ, ಆಲ, ಅರಳಿ, ಮಾವು, ಹಲಸು, ಬಸಿರಿ ಮರಗಳಿಂದ ದಟ್ಟವಾದ ಒಂದು ದೊಡ್ದ ಕಾಡು. ಅದರಲ್ಲಿ ಹುಲಿ, ಚಿರತೆ, ತೋಳ, ನರಿ, ಮೊಲ, ಜಿಂಕೆ, ಅಳಿಲು, ಹಾವು, ಹೆಬ್ಬಾವು, ಹಸಿರಾವು, ನಾಗರ ಹಾವು, ಇಲಿ, ಮುಂಗುಸಿ, ಕಾಡೆಮ್ಮೆ... ಹೀಗೆ ಎಲ್ಲ ಪ್ರಾಣಿ ವಾಸವಾಗಿದ್ದವು.

ಕಾಡಿನಿಂದ ಸ್ವಲ್ಪದೂರದಲ್ಲಿ ಒಂದು ಪಟ್ಟಣ. ಅಲ್ಲಿ ಜನ ವಾಸಿಸಿದ್ದರು. ಆದರೆ ಅಪ್ಪಿ ತಪ್ಪಿ ಕೂಡ ಯಾರೊಬ್ಬರೂ ಕಾಡಿನೊಳಗೆ ಕಾಲಿಡುತ್ತಿರಲಿಲ್ಲ.

‘ಹೀಗೇಕೆ? ಮಕ್ಕಳ ಸಹಿತ ಜನ ಬಂದರೆ ಎಷ್ಟು ಚಂದ! ನಮ್ಮ ನೆರಳಲ್ಲಿ ಕುಳಿತು ತಿಂಡಿ ತಿಂದು ಕೊಳದಲ್ಲಿ ನೀರು ಕುಡಿದು ಆಡಿದರೆ, ಹಾಡಿದರೆ ಇಡೀ ವನ ನಂದನವನವಾಗುತ್ತದೆ’ ಎಂದು ಗಿಡಮರಗಳು ಯೋಚಿಸಿದವು.

ADVERTISEMENT

‘ಆದರೆ ಇಲ್ಲಿ ಹುಲಿ, ಚಿರತೆ, ನರಿ, ಹಾವು, ಮುಂಗುಸಿ ಇವೆಯಲ್ಲಾ! ಪಾಪ ಜನಕ್ಕೆ ಭಯ. ಹೇಗೆ ಬರುತ್ತಾರೆ? ಇಲ್ಲಿರುವ ಪ್ರಾಣಿಗಳನ್ನು ಓಡಿಸಿದರೆ ಜನರು ಬರುತ್ತಾರೇನೋ! ಅವುಗಳನ್ನು ಓಡಿಸೋಣ’ ಎನ್ನುವ ತೀರ್ಮಾನಕ್ಕೆ ಮರಗಿಡಗಳು ಬಂದವು.

ಆದರೆ ದೊಡ್ಡ ಆಲದ ಮರ ಮಾತ್ರ ಇದಕ್ಕೆ ಒಪ್ಪಲಿಲ್ಲ. ‘ಈ ಪ್ರಾಣಿಗಳಿಗೆ ನಾವೇ ಮನೆ ಮಠ ಅಲ್ಲವೆ? ಓಡಿಸಿದರೆ ಪಾಪ ಅವು ಎಲ್ಲಿಗೆ ಹೋಗಬೇಕು, ಎಲ್ಲಿರಬೇಕು? ಅದೂ ಅಲ್ಲದೆ ಅವು ಇರುವುದರಿಂದ...’ ಎಂದು ಇನ್ನೂ ಏನೋ ಹೇಳಬೇಕೆಂದಿರುವಾಗ ಉಳಿದ ಮರಗಳು ಅದಕ್ಕೆ ಮಾತನಾಡಲಿಕ್ಕೆ ಬಿಡಲಿಲ್ಲ.

‘ನಿನಗೆ ವಯಸ್ಸಾಗಿದೆ. ಅರಳು ಮರುಳು. ನೀನು ಸುಮ್ಮನಿರು’ ಎಂದು ಹೇಳಿ ಅವುಗಳೆಲ್ಲ ಸೇರಿ ಈ ಮೃಗಗಳನ್ನು ಓಡಿಸಲು ನಿರ್ಧರಿಸಿದವು.

ಮಾರನೆ ದಿನ ಭಯಂಕರ ಗಾಳಿ ಬೀಸತೊಡಗಿದಾಗ ಇದೇ ಸುಸಮಯ ಎಂದು ಮರಗಳು ತಮ್ಮ ಟೊಂಗೆಗಳನ್ನು ಅಲುಗಾಡಿಸಿ ಕೆಳಗೆ ಮಲಗಿದ್ದ ಮೃಗಗಳನ್ನು ಬಡಿಯತೊಡಗಿದವು. ಕೊಂಬೆಗಳಿಂದ ಏಟು ಬೀಳುತ್ತಲೇ ಎಲ್ಲ ಪ್ರಾಣಿಗಳು ಭಯಭೀತಗೊಂಡು ದಿಕ್ಕಾಪಾಲಾಗಿ ಪಲಾಯನ ಮಾಡಿದವು.

ಹಾವು ಮುಂಗುಸಿಗಳೂ ಈ ಕಾಡಿನ ಸಹವಾಸವೇ ಬೇಡವೆಂದು ಅಲ್ಲಿಂದ ಕಾಲುಕಿತ್ತವು. ಈಗ ಕಾಡಿನಲ್ಲಿ ಮೃಗಗಳ ಆರ್ಭಟ, ಪ್ರಾಣಿಗಳ ಭಯ ಇಲ್ಲವಾಯಿತು. ಕುಳಿತುಕೊಳ್ಳಲು ಬಹಳಷ್ಟು ನೆರಳು, ಮೀಯಲು ಕೊಳ ಅಲ್ಲಿತ್ತು. ಇದನ್ನು ನೋಡಿ ಸಂಭ್ರಮಗೊಂಡು ಊರಿಗೆ ಊರೇ ಸಾಯಂಕಾಲ ಹಾಗೂ ರಜಾದಿನಗಳಲ್ಲಿ ಬರತೊಡಗಿತು.

ಆದರೆ ಜನ ಸುಮ್ಮನಿರುತ್ತಾರೆಯೆ? ಟೊಂಗೆಗಳು ತಲೆಗೆ ತಗಲುತ್ತವೆ ಎಂದು ಅವುಗಳನ್ನು ಕತ್ತರಿಸಿದರು. ತಮ್ಮ ಮನೆ ಕಟ್ಟಲು ಮೋಪು ಬೇಕೆಂದು ಮರಗಳನ್ನೇ ಕಡಿಯತೊಡಗಿದರು. ಹೂವುಗಳನ್ನು ಕಿತ್ತರು. ಬಳ್ಳಿಗಳು ಕಾಲಿಗೆ ತೊಡರುತ್ತವೆ ಎಂದು ಅವುಗಳನ್ನೂ ಕಡಿದರು. ಕೊಳದಲ್ಲಿ ಬಟ್ಟೆ ಒಗೆದು ನೀರನ್ನು ಗಲೀಜು ಮಾಡಿದರು.

ಹೀಗೆ ಕಾಡು ನಿಧಾನವಾಗಿ ನಾಶವಾಗತೊಡಗಿತು. ಪರಿಸರ ಮಲಿನವಾಯಿತು. ಆಗ ಮರಗಳು ಜೀವ ಭಯದಿಂದ ತತ್ತರಿಸಿದವು, ‘ಇದೇನು ಈ ಮನುಷ್ಯರು ಎಷ್ಟು ಕ್ರೂರಿಗಳು! ನಮ್ಮನ್ನೇ ನಾಶ ಮಾಡುತ್ತಿದ್ದಾರೆ!’ ಎಂದು ಹೆದರಿದವು.

ಆಗ ಆಲದ ಮರ ಹೇಳಿತು. ‘ಈಗ ನನ್ನ ಮಾತು ಅರ್ಥವಾಯಿತೆ? ನಾವೇನೋ ಕಾಡು ಪ್ರಾಣಿಗಳಿಗೆ ಮಹಾ ಉಪಕಾರ ಮಾಡುತ್ತಿದ್ದೇವೆ ಎಂದೇ ಉಬ್ಬಿದ್ದೆವು. ಆದರೆ ಅವುಗಳು ನಮ್ಮ ರಕ್ಷಣೆ ಮಾಡುತ್ತಿದ್ದವು. ಮನುಷ್ಯರು ಹೆದರಿ ಕಾಡೊಳಗೆ ಬರುತ್ತಿರಲಿಲ್ಲ. ಈಗ ನೋಡಿ ಪ್ರಾಣಿಗಳು ಇಲ್ಲದ್ದರಿಂದ ಮನುಷ್ಯ ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಕಾಡನ್ನೇ ನಾಶ ಮಾಡಲು ಹೊರಟಿದ್ದಾನೆ. ನಿಮಗೆ ಉಳಿಗಾಲವಿಲ್ಲ. ಈಗಲೇ ಪ್ರಾಣಿಗಳನ್ನು ಕರೆಯಿರಿ. ಅವು ನಮ್ಮನ್ನು ರಕ್ಷಿಸುತ್ತವೆ’ ಎಂದಿತು.

ಈಗ ಮರಗಿಡಗಳಿಗೆ ಬುದ್ಧಿ ಬಂದಿತ್ತು. ‘ಇನ್ನೇಕೆ ತಡ’ ಎಂದು ತಮ್ಮ ರೆಂಬೆ ಕೈಗಳನ್ನು ಬೀಸಿ, ಬನ್ನಿ ಬನ್ನಿ ಎಂದು ಪ್ರಾಣಿಗಳನ್ನು ಕರೆದವು. ಪ್ರಾಣಿಗಳಿಗೂ ಕಾಡು ಎಂದರೆ ಮನೆಯೇ ಆಗಿತ್ತು. ಗಿಡಮರಗಳು ಕರೆಯುತ್ತಲೇ ಅದಕ್ಕಾಗಿಯೇ ಕಾದಿದ್ದಂತೆ ಅವು ಓಡೋಡಿ ಬಂದವು. ಮತ್ತೆ ಗಿಡ ಮರಗಳು ಪ್ರಾಣಿಗಳು ಒಂದು ಕುಟುಂಬದಂತೆ ಬಾಳತೊಡಗಿದವು.

‘ಅರೆ! ಹುಲಿ ಚಿರತೆಗಳು ಬಂದಿವೆ. ಬಹಳ ಅಪಾಯ. ಈ ಕಾಡಿನ ಸಹವಾಸವೇ ಬೇಡ’ ಎಂದು ಹೆದರಿದ ಊರ ಜನ ಮತ್ತೆ ಅಲ್ಲಿಗೆ ಕಾಲಿಡಲಿಲ್ಲ.

ಜನರ ಕಾಟ ತಪ್ಪಿತು. ಈಗ ಗಿಡ ಮರಗಳು ಮತ್ತೆ ಚಿಗಿತವು. ಬಳ್ಳಿಗಳಲ್ಲಿ ಹೂವುಗಳು ಅರಳಿದವು. ಕಾಡು ಸಸ್ಯಗಳಿಂದ ಸಮೃದ್ದವಾಗಿ ಮತ್ತೆ ಕಂಗೊಳಿಸಿತು.

ಈಗಲೂ ಮೃಗಗಳು ಮತ್ತು ಕಾಡಿನ ಮರಗಳು ಅನ್ಯೋನ್ಯವಾಗಿ, ಒಬ್ಬರನ್ನು ಇನ್ನೊಬ್ಬರು ರಕ್ಷಣೆ ಮಾಡಿಕೊಂಡು, ಸೌಹಾರ್ದದಿಂದ ಬಾಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.