ADVERTISEMENT

ಗುಬ್ಬಚ್ಚಿ ಗೂಡಿನಲ್ಲಿ...

ಕೆ.ಎಚ್.ಓಬಳೇಶ್
Published 28 ನವೆಂಬರ್ 2015, 19:36 IST
Last Updated 28 ನವೆಂಬರ್ 2015, 19:36 IST

ಅದು 20ನೇ ಶತಮಾನದ ಮಧ್ಯಭಾಗ. ಕೈಗಾರಿಕೆ ಮತ್ತು ಕೃಷಿ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದ ಕಾಲ. ಆಗ ಮಾವೊ ಝೇಯಂಗ್‌ ಚೀನಾದ ನಾಯಕ. ಆತ ಎಲ್ಲ ಕ್ಷೇತ್ರದಲ್ಲೂ ಉತ್ಪಾದನೆ ಹೆಚ್ಚಿಸುವ ಉತ್ಸಾಹ ಹೊಂದಿದ್ದ. ಜೀವಜಾಲದ ಮೇಲೆ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳು ಬೀರುವ ದುಷ್ಪರಿಣಾಮದ ಬಗ್ಗೆ ಝೇಯಂಗ್‌ಗೆ ಎಳ್ಳಷ್ಟೂ ಅರಿವು ಇರಲಿಲ್ಲ.

ವಿಜ್ಞಾನಿಗಳು ಆಹಾರದ ಉತ್ಪಾದನೆ ಹೆಚ್ಚಿಸಲು ವಿಭಿನ್ನ ಕ್ರಮ ಕೈಗೊಂಡರು. ಹೊಲಗಳಲ್ಲಿ ಸಾಕಷ್ಟು ರಸಗೊಬ್ಬರ, ಕ್ರಿಮಿನಾಶಕ ಬಳಸಲು ರೈತರಿಗೆ ಸಲಹೆಯಿತ್ತರು. ಆಹಾರದ ಮಿತವ್ಯಯಕ್ಕಾಗಿ ಹೊಸ ನೀತಿಯೂ ರೂಪುಗೊಂಡಿತು. ಅವರ ಕಣ್ಣು ಗುಬ್ಬಿಗಳ ಮೇಲೂ ಬಿತ್ತು. ಮನುಷ್ಯರು ತಿನ್ನುವ ಅನ್ನದ ತಕ್ಕಡಿಯಲ್ಲಿ ಅವುಗಳನ್ನು ತೂಗಿದರು. ಅವು ಭಕ್ಷಿಸುವ ಆಹಾರದ ಲೆಕ್ಕಾಚಾರ ಹಾಕಿದರು.

ಒಂದು ಗುಬ್ಬಿ ವರ್ಷವೊಂದಕ್ಕೆ 4.5 ಕಿಲೋ ಆಹಾರ ಧಾನ್ಯ ತಿನ್ನುತ್ತದೆ. ಒಂದು ದಶಲಕ್ಷ ಗುಬ್ಬಚ್ಚಿಗಳು 60 ಸಾವಿರ ಜನರಿಗೆ ಬೇಕಾಗುವಷ್ಟು ಧಾನ್ಯ ಭಕ್ಷಿಸುತ್ತವೆ ಎಂದು ತಜ್ಞರು ಅಂದಾಜಿಸಿದರು. ಈ ವರದಿ ಝೇಯಂಗ್‌ ಮೇಜು ತಲುಪಿತು. ಗುಬ್ಬಿಗಳ ಆಹಾರ ಭಕ್ಷಣೆ ಕಂಡು ಆತನ ಕಣ್ಣು ಕೆಂಪಗಾಯಿತು. ಮಾನವರಿಗೆ ಗುಬ್ಬಚ್ಚಿ, ಸೊಳ್ಳೆ, ನೊಣ, ಇಲಿಗಳಿಂದ ಅಪಾಯವೇ ಹೆಚ್ಚು ಎಂದು ಆತ ನಿರ್ಣಯಿಸಿದ. ಈ ನಾಲ್ಕೂ ಜೀವಿಗಳ ಸಾಮೂಹಿಕ ಹತ್ಯೆಗೆ ರಾಜ ಆದೇಶ ಹೊರಡಿಸಿಯೇ ಬಿಟ್ಟ.

1958ರ ಡಿಸೆಂಬರ್ ತಿಂಗಳ 13ರ ದಿನ. ಮುಂಜಾನೆ ಕ್ಸಿನ್‌ಚೆಂಗ್‌ ನಗರದ ವಾತಾವರಣ ಪ್ರಶಾಂತವಾಗಿತ್ತು. ಸೂರ್ಯ ಕೆಂಬಣ್ಣ ಮೆತ್ತಿಕೊಂಡು ಮೆಲ್ಲನೆ ಮೇಲೇರುತ್ತಿದ್ದ. ಗುಬ್ಬಿಗಳು ನಗರದಲ್ಲಿನ ಕಟ್ಟಡಗಳ ಗೋಡೆಯಿಂದ ಗೋಡೆಗೆ ಹಾರುತ್ತಾ ಜನರ ದೈನಂದಿನ ಜೀವನಕ್ಕೆ ಚೈತನ್ಯ ತುಂಬಲು ಸಜ್ಜಾಗಿದ್ದವು. 

ಒಮ್ಮೆಲೆ ಅಲ್ಲಿನ ಸಣ್ಣ–ದೊಡ್ಡ ಬೀದಿಗಳಲ್ಲಿ ಕೆಂಬಾವುಟ ಹಿಡಿದವರ ಹೆಜ್ಜೆ ಸಪ್ಪಳ ಜೋರಾಯಿತು. ಈ ಬಾವುಟಗಳ ಪ್ರದರ್ಶನ ಗುಬ್ಬಿಗಳಿಗೆ ಹೊಸತಾಗಿರಲಿಲ್ಲ. ಆದರೆ, ಬಾವುಟಗಳ ವಕ್ರನೋಟ ತಮ್ಮತ್ತಲೇ ತಿರುಗಿರುವುದನ್ನು ಕಂಡು ಅವುಗಳಿಗೆ ದಿಗಿಲು ಹುಟ್ಟಿತು. ರಸ್ತೆಗಳು, ಬಯಲು ಪ್ರದೇಶದಿಂದ ಗುಂಪು ಗುಂಪಾಗಿ ಮೆರವಣಿಗೆ ಸಾಗಿ ಬರುತ್ತಿತ್ತು. ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಕಾರ್ಖಾನೆಯ ನೌಕರರು, ರೈತರು, ನಾಗರಿಕರು ಡ್ರಮ್‌ಗಳನ್ನು ಬಾರಿಸುತ್ತ ಹೆಜ್ಜೆ ಹಾಕುತ್ತಿದ್ದರು. ನೋಡುತ್ತಿದ್ದಂತೆಯೇ ಸಣ್ಣ ಗುಂಪುಗಳು ಬೃಹದಾಕಾರ ತಳೆದವು. 

ಗುಬ್ಬಿಗಳಿಗೆ ಜನರ ಮನದ ಮಾತು ಅರ್ಥವಾಗಲಿಲ್ಲ. ಅವುಗಳು ನಮ್ಮ ಆಹಾರ ಕಸಿಯುತ್ತಿವೆ ಎಂದು ಜನ ಭಾವಿಸಿದ್ದರು. ಅವು ನಿರ್ನಾಮ ಆಗದಿದ್ದರೆ ನಮ್ಮ ಅನ್ನದ ಬಟ್ಟಲಿಗೆ ಅಪಾಯ ತಪ್ಪಿದ್ದಲ್ಲ ಎಂದು ಮನಗಂಡರು. ಮೆರವಣಿಗೆಯು ತಮ್ಮತ್ತ ಬಂದಾಗ ಗುಬ್ಬಚ್ಚಿಗಳು ಕಂಗಾಲಾದವು. ಜನರ ಆಕ್ರೋಶಕ್ಕೆ ಅವುಗಳ ಗೂಡು ನೆಲಕಚ್ಚಿದವು. ಮೊಟ್ಟೆಗಳು ಅಪ್ಪಚ್ಚಿಯಾದವು. ಮರಿಗಳ ಆರ್ತನಾದ ಜನರ ಹುಚ್ಚಾಟದ ನಡುವೆ ಕ್ಷೀಣಿಸಿತು. ಆಕಾಶದಲ್ಲಿ ಹಾರಿ ತಪ್ಪಿಸಿಕೊಳ್ಳಲು ಮುಂದಾದ ಗುಬ್ಬಿಗಳ ಎದೆಗೆ ಗುಂಡೇಟು ಬಿತ್ತು.

ಗುಬ್ಬಚ್ಚಿಗಳ ಹತ್ಯಾಕಾಂಡಕ್ಕಾಗಿ ಕ್ಸಿನ್‌ಚೆಂಗ್‌ನಲ್ಲಿ ಒಂದೇ ರಾತ್ರಿಗೆ 80 ಸಾವಿರ ಬೆದರುಗೊಂಬೆಗಳು ಹಾಗೂ 1 ಲಕ್ಷ ವರ್ಣಮಯ ಬಾವುಟಗಳನ್ನು ತಯಾರಿಸಲಾಗಿತ್ತು. ಈ ಒಂದು ದಿನದ ಕಾರ್ಯಾಚರಣೆಯಲ್ಲಿ ರಾತ್ರಿ 8 ಗಂಟೆ ವೇಳೆಗೆ ಕ್ಸಿನ್‌ಚೆಂಗ್‌ನಲ್ಲಿ ಒಟ್ಟು 1 ಲಕ್ಷ 94 ಸಾವಿರ 432 ಗುಬ್ಬಿಗಳು ಗೋಣು ಮುರಿದುಕೊಂಡು ಬಿದ್ದಿದ್ದವು. ಗುಬ್ಬಿಗಳ ಸಾಮೂಹಿಕ ಸಾವು ಯಾರ ಮುಖದಲ್ಲೂ ಅಪರಾಧಿ ಪ್ರಜ್ಞೆ ಹುಟ್ಟಿಸಲಿಲ್ಲ. ಈ ಹತ್ಯಾಕಾಂಡ ಅಭಿಯಾನದ ಸ್ವರೂಪ ಪಡೆಯಿತು. 10 ಕೋಟಿಗೂ ಹೆಚ್ಚು ಗುಬ್ಬಿಗಳು ಜೀವತೆತ್ತವು. ಚೀನಾದಲ್ಲಿ ಗುಬ್ಬಿ (ಯುರೋಷಿಯನ್‌ ಟ್ರೀ ಸ್ಲ್ಯಾರೋ) ಸಂತತಿ ಅಪರೂಪ ಎನ್ನುವಂತಾಯಿತು.

1960ರ ಏಪ್ರಿಲ್‌ ವೇಳೆಗೆ ಚೀನಾದ ಕೃಷಿ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾಯಿತು. ಹೊಲಗಳಲ್ಲಿ ಊಹೆಗೂ ನಿಲುಕದಷ್ಟು ಕೀಟಗಳ ಹಾವಳಿ ಕಾಣಿಸಿಕೊಂಡಿತು. ಕೀಟಗಳನ್ನು ಭಕ್ಷಿಸುತ್ತಿದ್ದ ಗುಬ್ಬಿಗಳು ಕಣ್ಮರೆಯಾದುದು ಈ ಸಮಸ್ಯೆಗೆ ಕಾರಣವಾಗಿತ್ತು. ಒಂದೆಡೆ ಕೃಷಿ ಕ್ಷೇತ್ರದಲ್ಲಿ ಇಳುವರಿ ಕಡಿಮೆಯಾಯಿತು. ಭತ್ತದ ಇಳುವರಿ ನಿರೀಕ್ಷೆಗೂ ಮೀರಿ ಕುಗ್ಗಿತು. ಗುಬ್ಬಿಗಳ ನಾಶ, ಮಿತಿಮೀರಿದ ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ, ಅರಣ್ಯ ನಾಶ– ಇದೆಲ್ಲದರ ಪರಿಣಾಮವಾಗಿ ಆಹಾರದ ಉತ್ಪಾದನೆ ಗಣನೀಯವಾಗಿ ಕುಸಿಯಿತು. ಆಗ ಕಾಣಿಸಿಕೊಂಡ ಕ್ಷಾಮಕ್ಕೆ ಚೀನಾ ತತ್ತರಿಸಿತು(1958–1961). ಈ ಅವಧಿಯಲ್ಲಿ ಸುಮಾರು 3 ಕೋಟಿ ಚೀನಿಯರು ಹಸಿವಿನಿಂದ ಕಂಗೆಟ್ಟರು.

ಕೊನೆಗೆ, ‘ಚೀನಾ ವಿಜ್ಞಾನ ಅಕಾಡೆಮಿ’ಯ ಸಲಹೆ ಮೇರೆಗೆ ಗುಬ್ಬಚ್ಚಿಗಳ ಸಾಮೂಹಿಕ ಹತ್ಯೆಗೆ ತೆರೆಬಿದ್ದಿತು. ರಷ್ಯಾದಿಂದ ಗುಬ್ಬಿಗಳನ್ನು ತರಿಸಿಕೊಂಡು ಪೋಷಿಸುವ ಕೆಲಸಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಮನುಷ್ಯ ತಾನು ಬದುಕುವ ಪರಿಸರದ ಸಂಕೀರ್ಣತೆಗಳ ಬಗ್ಗೆ ಅರ್ಥ ಮಾಡಿಕೊಳ್ಳದಿದ್ದರೆ ಪಕ್ಷಿ ಸಂಕುಲ ಹೇಗೆ ದುರಂತಕ್ಕೀಡಾಗುತ್ತದೆ ಎನ್ನುವುದಕ್ಕೆ ಚೀನಿಯರು ನಡೆಸಿದ ಗುಬ್ಬಿಗಳ ಮಾರಣಹೋಮ ಒಂದು ಜ್ವಲಂತ ಉದಾಹರಣೆ.

ಚಿಂವ್‌ ಚಿಂವ್‌ ಕಲರವ
ಗುಬ್ಬಿ (House sparrow) ಮನೆ ಅಂಗಳದಲ್ಲಿ ಎಲ್ಲರ ಕಣ್ಣಿಗೆ ಬೀಳುವ ಹಕ್ಕಿ. ಇವು ಹುಳುಹುಪ್ಪಟೆ, ಕಾಳು, ಹಣ್ಣುಗಳನ್ನೂ ತಿನ್ನುತ್ತವೆ. ಮೆಂತ್ಯ ಸೊಪ್ಪು ಅವುಗಳಿಗೆ ಬಹುಪ್ರಿಯ. ಮನುಷ್ಯನೊಂದಿಗೆ ಅವುಗಳ ಬದುಕು ಮಿಳಿತಗೊಂಡಿದೆ. ಮನೆಯ ಛಾವಣಿ, ಗೋಡೆಯ ಬಿರುಕುಗಳಲ್ಲಿ ಗುಂಡನೆ ಆಕಾರದ ಗೂಡು ಕಟ್ಟುತ್ತವೆ. ಹುಲ್ಲು, ಹತ್ತಿ ಬಳಸಿ ಮರಿಗಳಿಗೆ ಮೆತ್ತನೆ ಗೂಡು ನೇಯುತ್ತವೆ.

ಗಂಡು ಹಕ್ಕಿಯ ರೆಕ್ಕೆ, ಕೆನ್ನೆ, ತಲೆಯು ಕಂದುಗೆಂಪು ಬಣ್ಣ ಇರುತ್ತದೆ. ಹೊಟ್ಟೆಯ ಭಾಗ ಬೂದು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿ ಬೂದು ಬಣ್ಣ ಹೊಂದಿದ್ದು, ರೆಕ್ಕೆಯ ಮೇಲೆ ಕಪ್ಪುಪಟ್ಟೆಗಳಿರುತ್ತವೆ. ತಾಯಿ ಹಕ್ಕಿ ಒಂದು ಬಾರಿಗೆ 4ರಿಂದ 7 ಮೊಟ್ಟೆಯಿಟ್ಟು, ಕಾವು ಕೊಡುತ್ತದೆ. ಯೂರೋಪ್‌, ಏಷ್ಯಾ, ಮೆಡಿಟರೇನಿಯನ್‌ ಪ್ರದೇಶ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗುಬ್ಬಚ್ಚಿ ಕಂಡುಬರುತ್ತವೆ. ಭಾರತದ ಪಶ್ಚಿಮ ಮತ್ತು ಪೂರ್ವ ಹಿಮಾಲಯ ಪ್ರದೇಶದಲ್ಲೂ ಇವು ನೆಲೆ ಕಂಡುಕೊಂಡಿವೆ.

ಗುಬ್ಬಚ್ಚಿಗಳು ಹಿಂಡು ಹಿಂಡಾಗಿ ಧಾನ್ಯಗಳ ಮೇಲೆ ಎರಗಿ ಭಕ್ಷಿಸುತ್ತವೆ. ರೈಸ್‌ಮಿಲ್‌, ಧಾನ್ಯ ಸಂಗ್ರಹ ಮಳಿಗೆಗಳ ಮುಂಭಾಗ, ಮನೆಯ ಹೊರಾಂಗಣ, ಹಿತ್ತಲು, ಕಟ್ಟಡಗಳು, ಕಾಂಪೌಂಡುಗಳ ಮೇಲೆ ಕಾಣುತ್ತಿದ್ದ ಇವುಗಳು ಈಗ ಅಪರೂಪದ ಅತಿಥಿಗಳಾಗುತ್ತಿರುವುದು ವಿಪರ್ಯಾಸ.

ಭಾರತದಲ್ಲಿ ಗುಬ್ಬಿಗಳ ಕಥೆ
ಮಾನವನ ನಾಗರಿಕತೆಯೊಂದಿಗೆ ಗುಬ್ಬಚ್ಚಿಗಳ ಬದುಕು ಬೆಸೆದಿದೆ. ಜನಪದ ಕಾವ್ಯಗಳಲ್ಲಿ ಇವುಗಳ ವರ್ಣನೆ ಕಾಣಬಹುದು. ಗುಬ್ಬಿಗೆ ದೆಹಲಿಯ ರಾಜ್ಯ ಪಕ್ಷಿಯ ಸ್ಥಾನ ಸಿಕ್ಕಿದೆ. ಅಂದಹಾಗೆ, ಮಾರ್ಚ್ 20 ‘ವಿಶ್ವ ಗುಬ್ಬಿಗಳ ದಿನ’. ಇವುಗಳ ಇರುವಿಕೆಯು ಆರೋಗ್ಯಪೂರ್ಣ ಸಮಾಜದ ಸಂಕೇತ. 2010ರಲ್ಲಿ ‘ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್‌’ ದೇಶದಲ್ಲಿ ಗುಬ್ಬಿಗಳ ಬಗ್ಗೆ ಅಧ್ಯಯನ ಕೈಗೊಂಡಿತು. ನೆರೆಯ ಆಂಧ್ರಪ್ರದೇಶದಲ್ಲಿ ಇವುಗಳ ಸಂಖ್ಯೆ ಶೇ 80ರಷ್ಟು ಕ್ಷೀಣಿಸಿರುವ ಸಂಗತಿ ಬಯಲಾಯಿತು.

ಕೇರಳ, ಗುಜರಾತ್‌, ರಾಜಸ್ತಾನದಲ್ಲಿ ಗುಬ್ಬಿ ಸಂಕುಲ ಹೆಚ್ಚು ಅಪಾಯಕ್ಕೆ ಸಿಲುಕಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರಿನಂತಹ ಬೃಹತ್‌ ಮಹಾನಗರಗಳ ಜನರ ಗಜಿಬಿಜಿ ಬದುಕಿನ ನಡುವೆ ಗುಬ್ಬಿಗಳ ಸ್ವರ ಕ್ಷೀಣಿಸಿದೆ. ಅರೆ ಪಟ್ಟಣ, ನಗರ ಪ್ರದೇಶಗಳ ಸ್ಥಿತಿಯೂ ಭಿನ್ನವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಇವುಗಳ ವಾಸದ ನೆಲೆ ಕಿರಿದಾಗುತ್ತಿದೆ.

ಆಹಾರದ ಮೂಲಕ್ಕೆ ಕುತ್ತು
ಗುಬ್ಬಿಗಳು ಸಂತಾನೋತ್ಪತ್ತಿ ವೇಳೆ ಸಣ್ಣಪುಟ್ಟ ಕಂಬಳಿಹುಳು ಸೇರಿದಂತೆ ಮೃದು ಚರ್ಮದ ಹುಳುಗಳನ್ನು ಭಕ್ಷಿಸುತ್ತವೆ. ಮೊಟ್ಟೆ ಒಡೆದು ಹೊರಬರುವ ಮರಿಗಳು ಧಾನ್ಯ ತಿನ್ನುವುದಿಲ್ಲ. ಮರಿಗಳು ಸದೃಢವಾಗಿ ಬೆಳೆಯಲು ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುತ್ತವೆ. ನಮ್ಮದು ಆಧುನಿಕತೆಯ ನಾಗಾಲೋಟದ ಬದುಕು. ಖರೀದಿಸುವ ಎಲ್ಲ ವಸ್ತುಗಳ ಶುಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತೇವೆ. ಹೊಲ, ಮಾರುಕಟ್ಟೆಗಳಿಂದ ತರಕಾರಿ ತಂದಾಗ ಮನೆಯಲ್ಲಿ ಶುಚಿಗೊಳಿಸುತ್ತಿದ್ದ ಕಾಲವಿತ್ತು.

ತರಕಾರಿ ಶುಚಿಗೊಳಿಸುವ ವೇಳೆ ಹುಳುಗಳು ಸಿಕ್ಕರೆ ಮನೆ ಅಂಗಳದ ಮೂಲೆ ಅಥವಾ ಕಸ ಹಾಕುವ ಸ್ಥಳಕ್ಕೆ ಎಸೆಯಲಾಗುತ್ತಿತ್ತು. ಕಾಂಪೌಂಡು ಮೇಲೆ, ಸೂರಿನ ಸಂದಿಯಲ್ಲಿ ಇಣುಕಿ ನೋಡುತ್ತಿದ್ದ ಗುಬ್ಬಚ್ಚಿ ಚಂಗನೆ ಹಾರಿ ಕೊಕ್ಕಿನಲ್ಲಿ ಹುಳು ಹಿಡಿದುಕೊಂಡು ಗೂಡಿಗೆ ಹಾರುತ್ತಿತ್ತು. ಈಗ ಮಾರುಕಟ್ಟೆಯಿಂದಲೇ ನೇರವಾಗಿ ಶುದ್ಧ ತರಕಾರಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಮನೆಗಳಿಗೆ ಪೂರೈಕೆಯಾಗುತ್ತಿದೆ.

ಹಳ್ಳಿಗಳಲ್ಲಿ ರೈಸ್‌ಮಿಲ್‌ಗಳಿಗೆ ಭತ್ತ  ತೆಗೆದುಕೊಂಡು ಹೋಗುವ ಮೊದಲು ಮನೆಯ ಹೊರಾಂಗಣದಲ್ಲಿ ಒಣಗಿಸಲಾಗುತ್ತಿತ್ತು. ಮಹಿಳೆಯರು ಭತ್ತ ಶುಚಿಗೊಳಿಸುತ್ತಿದ್ದರು. ಮಣ್ಣು ಮೆತ್ತಿಕೊಂಡ ಭತ್ತವನ್ನು ಒಂದೆಡೆ ಸುರಿಯುತ್ತಿದ್ದರು. ಗುಬ್ಬಿಗಳು ಕೊಕ್ಕಿನಿಂದ ಅಕ್ಕಿ ಬೇರ್ಪಡಿಸಿ ತಿನ್ನುತ್ತಿದ್ದವು. ಪ್ರಸ್ತುತ ಅಂತಹ ಸಾಂಸ್ಕೃತಿಕ ಬದುಕು ಗ್ರಾಮೀಣ ಸೊಗಡಿನಿಂದ ಮರೆಯಾಗಿ ಹಲವು ದಶಕಗಳೇ ಉರುಳಿವೆ. ಎಲ್ಲೆಡೆ ಈಗ ಮನೆಯ ವಾಸ್ತುಶಿಲ್ಪದ್ದೇ ಮಾತು. ಹಾಗಾಗಿ, ನಗರ ಪ್ರದೇಶದಲ್ಲಿ ಪಕ್ಷಿಸ್ನೇಹಿ ಮನೆಗಳು ಕಣ್ಮರೆಯಾಗಿವೆ. ಬೆಂಕಿಪೊಟ್ಟಣ ಮಾದರಿ ಹೋಲುವ ಮನೆಗಳು ನಿರ್ಮಾಣವಾಗುತ್ತಿವೆ. ಇಂತಹ ಮನೆಯ ಗೋಡೆಗಳ ವಿನ್ಯಾಸ ಅವುಗಳಿಗೆ ಗೂಡು ಕಟ್ಟಲು ಪೂರಕವಾಗಿಲ್ಲ.

ಬೆಳೆ ಸಂಸ್ಕೃತಿಗೆ ಪೆಟ್ಟು
ಎರಡು ದಶಕಗಳ ಹಿಂದೆ ನಗರ, ಪಟ್ಟಣ ಪ್ರದೇಶದಲ್ಲೂ ಹಳ್ಳಿಯ ವಾತಾವರಣ ಕಾಣಬಹುದಿತ್ತು. ಅಕ್ಕಪಕ್ಕದ ಜಮೀನುಗಳಿಂದ ಜನರು ಬುಟ್ಟಿಯಲ್ಲಿ ಅವರೆಕಾಯಿ ತರುತ್ತಿದ್ದರು. ಕಂಬಳಿಹುಳುಗಳು ಅವರೆಕಾಯಿ ಸಮೇತ ಮನೆಗೆ ಬರುತ್ತಿದ್ದವು. ಮನೆಯ ಸಂದಿಯಲ್ಲಿದ್ದ ಗುಬ್ಬಿಗಳಿಗೆ ಹುಳುಗಳು ಆಹಾರವಾಗುತ್ತಿದ್ದವು. ನಗರೀಕರಣದ ಪರಿಣಾಮ ನಗರದ ಆಸುಪಾಸಿನಲ್ಲಿ ತರಕಾರಿ, ಅವರೆಕಾಯಿ ಬೆಳೆಯುವ ರೈತರ ಸಂಖ್ಯೆಯೇ ಕಡಿಮೆಯಾಗಿದೆ.

ಬೆಳೆ ಸಂಸ್ಕೃತಿಯು ಗುಬ್ಬಿಗಳ ಆಹಾರಕ್ಕೆ ಭಾರೀ ಪೆಟ್ಟು ನೀಡಿದೆ. ದಶಕಗಳ ಹಿಂದೆ ಜಲಾಶಯಗಳ ಅಚ್ಚುಕಟ್ಟು ವ್ಯಾಪ್ತಿ ಅತಿಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಇಂತಹ ಪ್ರದೇಶಗಳಲ್ಲಿ ಗುಬ್ಬಿಗಳು ಹೆಚ್ಚಾಗಿ ಕಂಡುಬರುತ್ತಿದ್ದವು. ಭತ್ತ ಬೆಳೆಗಾರರ ಜೇಬು ತುಂಬಿಸಲಿಲ್ಲ. ಭತ್ತ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಈಗ ವಾಣಿಜ್ಯ ಬೆಳೆ ಕಬ್ಬು ತಳವೂರಿದೆ. ಇದರಿಂದ ಗುಬ್ಬಿಗಳ ಆಹಾರದ ಮೂಲ ಕಿರಿದಾಗಿದೆ.

ಮೊಬೈಲ್‌ ಗೋಪುರ ಕಂಟಕ
ಮನೆ ಅಂಗಳದಲ್ಲಿ ಇಣುಕಿ ನೋಡಿದರೆ ಕಾಣಸಿಗುತ್ತಿದ್ದ ಗುಬ್ಬಿಗಳು ಅಳಿವಿನಂಚಿಗೆ ತಲುಪುತ್ತಿರುವುದು ಮನುಕುಲ ತಲೆತಗ್ಗಿಸುವಂತೆ ಮಾಡಿದೆ. ಅವುಗಳ ಸಂಖ್ಯೆ ಕ್ಷೀಣಿಸಲು ನೆಲೆ ನಾಶವೇ ಮೂಲ ಕಾರಣ. ಗೋಪುರ ಹೊರಸೂಸುವ ವಿದ್ಯುತ್‌ ಕಾಂತೀಯ ಕಿರಣಗಳು ಅವುಗಳ ಬದುಕಿನಲ್ಲಿ ತಲ್ಲಣ ಸೃಷ್ಟಿಸಿದೆ. ಮೊಬೈಲ್‌ ಗೋಪುರಗಳಿಂದ ಆಗುವ ದುಷ್ಪರಿಣಾಮ ಕುರಿತ ಅಧ್ಯಯನಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು 2010ರ ಆ. 30ರಂದು ತಜ್ಞರ ಸಮಿತಿ ರಚಿಸಿತ್ತು. ವಿದ್ಯುತ್‌ಕಾಂತೀಯ ಕಿರಣಗಳಿಂದ ಗುಬ್ಬಚ್ಚಿಗಳ ಸಂತಾನೋತ್ಪತ್ತಿ ಶಕ್ತಿ ಕುಗ್ಗುತ್ತಿರುವ ಬಗ್ಗೆ ಸಮಿತಿಯ ವರದಿ ಬೆಳಕು ಚೆಲ್ಲಿದೆ.

ಗೋಪುರದ ಅಕ್ಕಪಕ್ಕದ ಗುಬ್ಬಿಗಳ ಗೂಡಿನಲ್ಲಿರುವ ಮೊಟ್ಟೆಗಳು ವಿದ್ಯುತ್ ಕಾಂತೀಯ ಕಿರಣಗಳ ಪ್ರಭಾವದಿಂದ ಜೀವ ತುಂಬಿಕೊಳ್ಳುತ್ತಿಲ್ಲ. ಇದರಿಂದ ಗುಬ್ಬಿ ಸಂಕುಲ ವಿಹ್ವಲಗೊಂಡಿದೆ. ತಾಯ್ತನದ ಸುಖ ಅನುಭವಿಸುವ ಭಾಗ್ಯ ಅವುಗಳಿಗಿಲ್ಲ. ಚೀನೀಯರಂತೆ ಗುಬ್ಬಚ್ಚಿಗಳನ್ನು ಉದ್ದೇಶಪೂರ್ವಕವಾಗಿ ನಾವು ಕೊಲ್ಲುತ್ತಿಲ್ಲ. ಆದರೆ, ನಮ್ಮ ಜೀವನಶೈಲಿಯೇ ಪುಟ್ಟ ಹಕ್ಕಿಗಳ ಬದುಕನ್ನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ಈ ಉಸಿರುಗಟ್ಟುವ ಪಾಳಿಯಲ್ಲಿ ಮನುಷ್ಯರೂ ಸೇರ್ಪಡೆಯಾಗುವ ದಿನ ದೂರವಿಲ್ಲ ಎನ್ನುವ ಅರಿವು – ಆತಂಕದೊಂದಿಗೆ ಗುಬ್ಬಚ್ಚಿಗಳ ಬದುಕನ್ನು ಸಹನೀಯಗೊಳಿಸುವ ನಿಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾದ ತುರ್ತು ಇಂದಿನದು. 

ಹೊಸ ಮನೆ!
ನಗರ ಪ್ರದೇಶದಲ್ಲಿ ಗುಬ್ಬಿಗಳಿಗೆ ನೆಲೆ ಕಲ್ಪಿಸಲು ಹಲವು ಸಂಶೋಧನೆಗಳು ನಡೆದಿವೆ. ಇತ್ತೀಚೆಗೆ ಮರದ ಪೆಟ್ಟಿಗೆಗಳಲ್ಲಿ ಅವುಗಳ ಬದುಕು ಅರಳಿಸುವ ಪ್ರಯತ್ನ ಸಾಗಿದೆ. ಮರದ ಪೆಟ್ಟಿಗೆಯ ನಿರ್ದಿಷ್ಟ ಸ್ಥಳದಲ್ಲಿ ರಂಧ್ರ ಕೊರೆಯಬೇಕು. ಮನೆ ಮುಂಭಾಗದ ಮರಗಳ ಮೇಲೆ ಸೂಕ್ತ ಜಾಗದಲ್ಲಿ ಅದನ್ನು ಇಡಬೇಕು. ಬೆಕ್ಕುಗಳು ಅಲ್ಲಿಗೆ ತೆರಳದಂತೆ ಎಚ್ಚರವಹಿಸಬೇಕು.

ಧಾನ್ಯಗಳು, ನೀರು ಇಡಬೇಕು. ಈ ನಿಟ್ಟಿನಲ್ಲಿ ಪಕ್ಷಿ ಸಂರಕ್ಷಣಾ ಸಂಸ್ಥೆಗಳು ನಗರ ಪ್ರದೇಶದಲ್ಲಿ ಅರಿವು ಮೂಡಿಸಲು ಮುಂದಾಗಿವೆ. ನಗರವಾಸಿಗಳ ಜೀವನಶೈಲಿಯಿಂದ ಅವುಗಳ ನೆಲೆ ಪಲ್ಲಟಗೊಂಡಿದೆ. ಒಂದೆಡೆ ಆಹಾರದ ಅಭಾವ ಏರ್ಪಟ್ಟಿದೆ. ಬದುಕಲು ಸೂಕ್ತ ವಾತಾವರಣವೇ ಇಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೃತಕ ಗೂಡುಗಳಲ್ಲಿ ಗುಬ್ಬಿಗಳ ಬದುಕು ಅರಳುತ್ತದೆಯೇ ಎಂಬುದು ಯಕ್ಷಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.