ADVERTISEMENT

ಗೋಲ್ಡ್ ಕೋಸ್ಟ್ ಬೀಚಿನಾಚೆಗಿನ ರೋಚಕಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಗೋಲ್ಡ್ ಕೋಸ್ಟ್  ಬೀಚಿನಾಚೆಗಿನ ರೋಚಕಗಳು
ಗೋಲ್ಡ್ ಕೋಸ್ಟ್ ಬೀಚಿನಾಚೆಗಿನ ರೋಚಕಗಳು   

ಇನ್ನೇನು, ಕೆಲವೇ ತಾಸುಗಳಲ್ಲಿ ಸೂರ್ಯ ಸಮುದ್ರ ಸ್ನಾನಕ್ಕೆ ಇಳಿಯಲಿದ್ದಾನೆ. ಸಾಗರದ ನೃತ್ಯ ಪ್ರದರ್ಶನಕ್ಕೆ ಯಾವ ಹೆಸರಿಡೋಣ? ನಮ್ಮ ಅರಬ್ಬಿ ಸಮುದ್ರದ ಭೋರ್ಗರೆಯುವ ಯಕ್ಷಗಾನ ಕುಣಿತ ಇದಲ್ಲ. ಅಲೆಗಳಲ್ಲಿ ಲಯ. ಹಸಿರು–ನೀಲಿ ಬಣ್ಣದ ಮಿಲನದ ಸಾಗರ ರಾಣಿಯನ್ನು ನೋಡುವುದೇ ಹಿತ. ಓಹ್! ರಾಣಿ ಅಂದಾಗ ನೆನಪಾಯಿತು. ಇದು ಕ್ವೀನ್ಸ್ ಲ್ಯಾಂಡ್ - ರಾಣಿಯ ಭೂಮಿ! ಆಸ್ಟ್ರೇಲಿಯಾದ ಒಂದು ರಾಜ್ಯ. ಈ ರಾಜ್ಯದ ಗೋಲ್ಡ್ ಕೋಸ್ಟ್ ಎಂಬ ಕರಾವಳಿ ಪ್ರದೇಶದಲ್ಲಿ ನಿಂತು ಸೂರ್ಯಾಸ್ತಮ ನೋಡಿದಾಗಲೇ ಗೊತ್ತಾಗಿದ್ದು, ‘ಗೋಲ್ಡ್ ಕೋಸ್ಟ್ ’ ಎಂಬ ಹೆಸರೇಕಿದೆಯೆಂದು? ಐದು ಗಂಟೆಗೇ ಸೂರ್ಯಾಸ್ತಮವಾಗಿ ಸಾಗರವಿಡೀ ಹೊಂಬಣ್ಣಕ್ಕೆ ತಿರುಗಿರುತ್ತದೆ.

‘ರಾಣಿಯ ಭೂಮಿ’ಗೆ ಕಾಲಿಡಬೇಕಿದ್ದರೆ ಬೆಂಗಳೂರಿನಿಂದ ಸುಮಾರು 12 ಗಂಟೆಗಳ ಪ್ರಯಾಣವಿದೆ. ‘ಟೈಗರ್ ಏರ್’ ವಿಮಾನ ಸಿಂಗಪುರದಲ್ಲಿ ಇಳಿಸಿ, ಗೋಲ್ಡ್ ಕೋಸ್ಟ್ ಹೋಗುವ ‘ಸ್ಕೂಟ್’ ಎಂಬ ಬೋಯಿಂಗ್ ವಿಮಾನಕ್ಕಾಗಿ ಹದಿನೈದು ಗಂಟೆಗಳು ಕಾಯದೆ ಬೇರೆ ದಾರಿ ಇಲ್ಲ. ಜಗತ್ತಿನ ಅತ್ಯಂತ ಸುಂದರ ಮತ್ತು ವ್ಯವಸ್ಥಿತ ‘ಚಾಂಗಿ ಏರ್ ಪೋರ್ಟ್’ನಲ್ಲಿ ಸುತ್ತಿ, ಅಲ್ಲಿನ ಕಾವೇರಿ ರೆಸ್ಟೋರೆಂಟ್ (ಅದೂ ನಮ್ಮದೇ!)ನಲ್ಲಿ ಹೊಟ್ಟೆ ತುಂಬಿಸಿ, ಪುಟ್ಟ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿ, ಜಿಮ್‌ನಲ್ಲಿ ಒಂದಷ್ಟು ದೇಹ ದಂಡಿಸಿದರೆ ಸಮಯ ಜಾರುತ್ತದೆ. ಇದೆಲ್ಲ ಬೇಡವೆನಿಸಿ, ಸಿಂಗಪುರ ನಗರಕ್ಕೆ ಲಗ್ಗೆ ಇಟ್ಟರೆ ಹೇಗೆ ಎಂದೆನಿಸಿದರೆ ಚಕ್ಕನೆ ಏರ್‌ಪೋರ್ಟ್‌ನಲ್ಲೇ ಇರುವ ಮೆಟ್ರೋ ಹತ್ತಿದರಾಯಿತು. ರಾತ್ರಿ ಹತ್ತೂವರೆಗೆ ಜಂಬೋ ವಿಮಾನ ‘ಸ್ಕೂಟ್ ’ ನಮಗಾಗಿ ಕಾಯುತ್ತಿರುತ್ತದೆ.

ಬೆಂಗಳೂರಿನ ಕೆ.ಎಸ್.ಆರ್ ಟಿ.ಸಿ ನಿಲ್ದಾಣದಲ್ಲಿನ ಜನಜಂಗುಳಿ ನೆನಪಾದರೂ, ಗೋಲ್ಡ್‌ಕೋಸ್ಟ್‌ಗೆ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಹೋಗುವ ಮುನ್ಸೂಚನೆ ಸಿಕ್ಕಿತು. ಈಗ ವಿಲೀನವಾಗಿರುವ ವಿಮಾನ ಸಂಸ್ಥೆಯಾಗಿರುವ ತೈವಾನಿನ ‘ಟೈಗರ್ ಏರ್’ ಮತ್ತು ಸಿಂಗಪುರದ ‘ಸ್ಕೂಟ್’ ಅತಿ ಕಡಿಮೆ ಪ್ರಯಾಣ ದರ ಇಟ್ಟುಕೊಂಡಿರುವುದೂ ಇದಕ್ಕೆ ಕಾರಣವಿರಬಹುದು.

ADVERTISEMENT

ಗೋಲ್ಡ್ ಕೋಸ್ಟ್ ಗೆ ’ದಾಳಿ’ ಇಡುವವರು ಇಲ್ಲಿನ ಅದ್ಭುತ ವರ್ಚಸ್ಸಿನ ಬೀಚ್‌ಗೆ ಮಾತ್ರ ಆಕರ್ಷಿತರಾಗಿದ್ದಾರೋ? ಇಲ್ಲ. ಇಲ್ಲಿ ಪ್ರವಾಸಿಗರನ್ನು ಸೆಳೆಯುವುದಕ್ಕೆ ಅನೇಕ ಆಕರ್ಷಣೆಗಳಿವೆ. ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆ ಖಾಸಗಿಯವರಿಗೆ ವಿವಿಧ ರೀತಿಯ ಸಾಹಸ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಜತೆಗೆ ಬೇಕಾದಷ್ಟು ಮನರಂಜನಾ ಕೇಂದ್ರಗಳು, ಕಲಾ ಚಟುವಟಿಕೆಗಳ ಮಳಿಗೆಗಳೂ ಇಲ್ಲಿವೆ. ಅವರ ಒಂದೇ ಉದ್ದೇಶ- ಪ್ರವಾಸಿಗರಿಗೆ ರೋಚಕ ಅನುಭವ ಕೊಡುವುದು.

ನಾವು ನಮ್ಮ ನೆಲದಲ್ಲಿ ಮಾಡಲಾಗದ್ದನ್ನು ಇಲ್ಲಿ ಖಂಡಿತವಾಗಿಯೂ ಮಾಡಿ ತೋರಿಸುತ್ತೇವೆ. ಇಲ್ಲದಿದ್ದರೆ ನೂರು ಅಡಿ ಆಳದ ಪ್ರಪಾತ ನೋಡಿ ತಲೆ ತಿರುಗುವವರು 890 ಅಡಿ ಎತ್ತರಕ್ಕೆ ಹೋಗಿ ‘ಜೈ ಹೋ !’ ಅನ್ನಲಾದೀತೆ? ಗೋಲ್ಡ್ ಕೋಸ್ಟ್‌ನ ಅತಿ ಎತ್ತರದ (750 ಅಡಿ) ಕಟ್ಟಡಕ್ಕೆ ಎರಡು ಮೂರು ಸೆಕೆಂಡುಗಳಲ್ಲಿ ಲಿಫ್ಟ್ ನಮ್ಮನ್ನು ಕೊಂಡೊಯ್ಯುತ್ತದೆ. ಅಲ್ಲಿಂದ ಸಾಧಾರಣ ಏಣಿ.

ಸುತ್ತಲೂ ಆಕಾಶ, ಆಕಾಶ ಮತ್ತು ಆಕಾಶ! ‘ಫುಲ್ ಟೈಮ್’ ನಗು ಚೆಲ್ಲುತಿದ್ದ ಥೇಟ್ ಗೊಂಬೆಯಂತಿದ್ದ ಹುಡುಗಿ ಮೋನಿಕ್ಯೂ ಮುಂದಾಳತ್ವದಲ್ಲಿ ನಾವು ನಿರಾಯಾಸವಾಗಿ 890 ಅಡಿ ಎತ್ತರ ಮುಟ್ಟಿದಾಗಲೇ ನಮಗೆ ಗೊತ್ತಾಗಿದ್ದು ಆಕಾಶಕ್ಕಿನ್ನು ಮೂರೇ ಗೇಣು ಎಂದು! ಹತ್ತಡಿ ಏಣಿ ಏರಲು ಬಾರದ ನಾನಂತೂ 270 ಮೆಟ್ಟಿಲುಗಳಿರುವ ಏಣಿಯೇರಿ ‘ಸ್ಕೈ ಪಾಯಿಂಟ್ ಆಬ್ಸರ್ವೇಶನ್ ಡೆಕ್’ ನಲ್ಲಿ ನಿಂತುಕೊಂಡಿದ್ದು ಶತಮಾನದ ಸೋಜಿಗವೇ ಸೈ!

ಸಮುದ್ರದ ನಡುವೆ ರಭಸದಿಂದ ವೇಗದನುಭವ ಕೊಡುವ ‘ಜೆಟ್ ಬೋಟ್’ಗಳಿವೆ. ಈ ಬೋಟ್ ಒಮ್ಮೆಗೇ ಹದಿನೈದು ಮಂದಿಯನ್ನು ಬಹಳ ವೇಗವಾಗಿ ಮಾತ್ರವಲ್ಲ  ಎರ್‌ರಾಬಿರ್‌ರಿ ಕೊಂಡೊಯ್ಯುವುದನ್ನು ನೋಡಿ, ಬೆಂಗಳೂರಿನಲ್ಲಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸುವುದು ಎಂದರೆ ಅದು ಹೀಗೆಯೇ ಇರಬೇಕು ಎಂದೆನಿಸಿತು.

ಆದರೆ ಈ ಜೆಟ್ ಬೋಟ್ ಇದ್ದಕ್ಕಿದ್ದಂತೆ ಒಂದು ಕಡೆ ಬ್ರೇಕ್ ಹಾಕುವಾಗ ಆಗುವ ಸಂಚಲನ ಮಾತ್ರ ಅನಿರೀಕ್ಷಿತ! ಬೋಟು ನಿಂತಲ್ಲೇ ಒಂದು ಸುತ್ತು ತಿರುಗಿದಾಗ ತೆರೆಗಳಡಿಯಲ್ಲಿ ನಾವಿರುತ್ತೇವೆ! ಹಿಂದಿನ ದಿವಸ ನಿಧಾನಗತಿಯ ಕ್ರೂಸ್‌ನಲ್ಲಿ ಪ್ರಯಾಣಿಸಿದವರಿಗೆ ಇದು ಹೊಸ ಥ್ರಿಲ್!
ಮತ್ತೆ ಆಕಾಶ ಯಾನ.

25 ಮಂದಿಗಳಿದ್ದ ಹಾಟ್ ಏರ್ ಬಲೂನ್ (ನೈಸರ್ಗಿಕ ಗಾಳಿ ಮತ್ತು ಬಲೂನಿನ ಒಳಗೆ ಉತ್ಪಾದಿಸುವ ಬಿಸಿ ಗಾಳಿಯಿಂದ ಹಾರುವ ಬೃಹತ್ ಬಲೂನು) ಮುಂಜಾನೆ ಐದೂವರೆ ಗಂಟೆಗೆ ಟೇಕ್ ಆಫ್ ಆಗಿತ್ತು. ಸೀಟ್ ಬೆಲ್ಟ್ ಕಟ್ಟಲು ಯಾರೂ ಹೇಳುವವರಿಲ್ಲ. ಅದು ಬಿಡಿ, ಮೇಲೆ ಹಾರುತ್ತಿದ್ದೇವೆ ಎಂಬ ಭ್ರಮೆಯಲ್ಲೂ ನಾವು ಇರುವುದಿಲ್ಲ. ಅಷ್ಟೊಂದು ನಾಜೂಕಾಗಿ ಮೇಲೆ, ಮೇಲೆ, ಮೇ..........ಲೆ ಅಂದರೆ ಸುಮಾರು 7000 ಅಡಿ ಎತ್ತರದಲ್ಲಿ ನಿಧಾನಗತಿಯಲ್ಲಿ ಹಾರುತ್ತಿದ್ದೆವು. ದೂರದಲ್ಲಿ ಸೂರ್ಯೋದಯ ಸಂಭ್ರಮ. ಕೆಳಗೆ ನೋಡಿದರೆ ಆಗ ತಾನೇ ಹೊರಬಿಟ್ಟಿದ್ದ ಹಸುಗಳು ಗುಂಪು ಗುಂಪಾಗಿ ರಾಕ್ಷಸ ಬಲೂನಿಗೆ ಹೆದರಿ ಓಡುತ್ತಿವೆ.

ಮುಂದಿನ ನಮ್ಮ ನಡೆ ಟ್ಯಾಂಬೊರಿನ್ ಗುಡ್ಡ ಕಾಡಿನ ಕಡೆಗೆ. ಅಲ್ಲಿ ಟ್ರೀ ಟಾಪ್ ಚಾಲೆಂಗ್ ಮಾಡುವುದಿದೆ ಎಂದು ತಿಳಿದಾಗ ಮರ ಹತ್ತುವುದೇನು ಅಂತಹ ದೊಡ್ದ ಸಾಹಸ ಕಾರ್ಯ ಅಲ್ಲವೆಂದು ಅನೇಕರು ಭಾವಿಸಿದ್ದರು. ಆದರೆ ಮರದ ಬುಡಕ್ಕೆ ಬಂದಾಗಲೇ ಮರದ ಮೇಲಿರುವ ರೋಪ್ ವೇ ಸಾಹಸ ಮಾಡಬೇಕು ಎಂದು ತಿಳಿದದ್ದು! ಆ ಮರದಿಂದ ಅರ್ಧ ಕಿ.ಮೀ ದೂರದಲ್ಲಿರುವ ಇನ್ನೊಂದು ಮರದವರೆಗೆ ರೋಪ್ ವೇಗೆ ಕಟ್ಟಿದ ಹ್ಯಾಂಡಲ್ ಹಿಡಿದುಕೊಂಡು ಒಂದೇ ಸವನೆ ಒಬ್ಬೊಬ್ಬರೇ ಹೋಗಬೇಕಿತ್ತು.

ಹಿಂದಿನ ದಿವಸ ಶಾಪಿಂಗ್ ಮಾಡಲು ಹೋದಾಗ, ಡಾಲರ್ ದರಗಳನ್ನು ನೋಡಿ ಏನನ್ನೂ ಕೊಂಡುಕೊಳ್ಳುವ ಸಾಹಸ ಮಾಡದ ನಾನು, ಈಗ ನನ್ನ ಜನ್ಮದಲ್ಲಿ ಮಾಡದ ಅದ್ಭುತ ಸಾಹಸಕ್ಕೆ ಅದೂ ಈ 57ನೇ ವಯಸ್ಸಿನಲ್ಲಿ ಇಳಿಯಲೇಬೇಕಾಗಿತ್ತು. ಯಾಕೆಂದರೆ ನನ್ನ ಮುಂದೆಯೇ ಮೂವರು ಮಹಿಳೆಯರು ಆಗಲೇ ಇನ್ನೊಂದು ಮರವನ್ನು ತಲುಪಿದ್ದರು.

ರೋಪ್ ವೇಯಿಂದ ಕೆಳಗೆ ದೊಡ್ದ ಪ್ರಪಾತ ಇರುವುದನ್ನು ನೋಡಿ, ಬೆಂಗಳೂರಿನಿಂದ ಹೊರಟಾಗ ಬರೆದ ವ್ಯಂಗ್ಯಚಿತ್ರವೇ ಕೊನೆಯಾಗಬಹುದೇ ಎಂದು ಒಂದು ಗಳಿಗೆ ಅನಿಸಿದ್ದು ಸುಳ್ಳಲ್ಲ. ಆದರೆ ಇನ್ನೊಂದು ಮರವನ್ನು ಮುಟ್ಟಿದ್ದು ನಾನೇ ಬಹಳ ಹೊತ್ತು ನಂಬಲಾಗಿರಲಿಲ್ಲ! ಅಬ್ಬಾ, ಮುಗಿಯಿತಲ್ಲ ಎಂದು ಖುಷಿಪಟ್ಟರೆ ನಮ್ಮ ಟ್ರೈನರ್ ಇನ್ನೂ ಮೂರು ಮರಗಳನ್ನು ಮುಟ್ಟಬೇಕು ಎಂದು ಹೇಳಿ ಹೃದಯ ಬಡಿತ ಹೆಚ್ಚಿಸಿದ. ಅಚ್ಚರಿಯೆಂದರೆ ಮೊದಲ ಬಾರಿಯ ಭಯ ನಂತರ ಇರಲಿಲ್ಲ. ಏನೇ ಹೇಳಿ, ಕೆಲವು ಹೊತ್ತು ಯಾರು ಬೇಕಾದರೂ ಇಲ್ಲಿ ‘ಟಾರ್ಜನ್’ ಆಗುವ ಸದವಕಾಶ. 

ಗೋಲ್ಡ್ ಕೋಸ್ಟ್‌ನ ಮುಖ್ಯ ಆಕರ್ಷಣೆಗಳಲ್ಲೊಂದಾದ ‘ಸೀ ವರ್ಲ್ಡ್’ ನಲ್ಲಿ ಡಾಲ್ಫಿನ್ ಮತ್ತು ಸೀಲ್‌ಗಳದ್ದೇ ಕಾರುಬಾರು. ಸಮುದ್ರದಲ್ಲಿ ಆಗಾಗ ಛಂಗನೆ ಹಾರುವ ಡಾಲ್ಫಿನ್‌ಗಳನ್ನು ಇಲ್ಲಿ ಹತ್ತಿರದಿಂದ ವೀಕ್ಷಿಸಬಹುದು. ಲಲನಾಮಣಿಗಳು ಕಲಿಸಿಕೊಟ್ಟ ನಾನಾ ಕಸರತ್ತುಗಳನ್ನು, ಸಂಗೀತಕ್ಕೆ ತಕ್ಕ ನೃತ್ಯವನ್ನೂ ಮಾಡುವ ಡಾಲ್ಫಿನ್‌ಗಳನ್ನು ನೋಡುವುದೇ ಒಂದು ಮಜಾ.

ಇನ್ನೊಂದು ಕಡೆ ನೆಲದಲ್ಲಿ ತನ್ನ ಅರ್ಧ ದೇಹವನ್ನು ಎಳೆದುಕೊಂಡು ಪೆದ್ದು ಪೆದ್ದಾಗಿ ಬರುವ ಸೀಲ್, ಅಲ್ಲಿ ನಡೆಯುವ ನಾಟಕ ಪ್ರದರ್ಶನವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣುವುದಕ್ಕೆ ಪುಟಾಣಿಗಳಿಗಂತೂ ಖುಷಿಯೋ ಖುಷಿ. ‘ಸೀ ವರ್ಲ್ಡ್’ ನಲ್ಲಿ ಸಾಗರದಲ್ಲಿರುವ ಮೀನುಗಳನ್ನೆಲ್ಲಾ ಒಮ್ಮೆ ನೋಡಿ ಬೈ ಬೈ.. ಎಂದು ಹೇಳಿ ಹೊರ ಬಂದರೆ, ಹಿಮದ ವಾತಾವರಣ ಸೃಷ್ಟಿಸಿ ಎರಡು ಹಿಮಕರಡಿಗಳನ್ನು ಸಾಕಿರುವುದನ್ನು ಕಾಣುತ್ತೇವೆ. ಅವುಗಳನ್ನು ನೋಡಿದರೆ ವಿಶ್ವದಲ್ಲಿ ಭುಗಿಲೆದ್ದಿರುವ ಹವಾಮಾನ ವೈಫಲ್ಯಕ್ಕೆ ಇದು ಪರಿಹಾರವಾಗಿರಬಹುದೇ ಎಂದೆನಿಸದೆ ಇರಲಿಕ್ಕಿಲ್ಲ!

ಪ್ರವಾಸಿಗರನ್ನು ಸೆಳೆಯುವ ‘ಫೆಸಿಫಿಕ್ ಫೇರ್’ನಲ್ಲಿ ಬೇಕಾದದ್ದನ್ನೆಲ್ಲಾ ಕೊಳ್ಳಬಹುದು. ಡಾಲರ್ ಗಳಿಗೆ ಹೆದರಬಾರದಷ್ಟೇ! ತಮಾಷೆಯೆಂದರೆ ಕೆಲವು ಅಂಗಡಿಗಳ ಎದುರು ಶೇ 75 ಕಡಿತದ ಮಾರಾಟವೂ ಇದೆ! ಯಾವುದೋ ವಸ್ತು ಅಥವಾ ಬಟ್ಟೆ ಬರೆ ನಿಮಗೆ ಕೈಗೆಟುಕುತ್ತದೆ ಎಂದರೆ ಅದು ‘ಮೇಡ್ ಇನ್ ಚೈನಾ’ ಅಥವಾ ‘ಮೇಡ್ ಇನ್ ಬಾಂಗ್ಲಾದೇಶ್’ ಎಂದೇ ತಿಳಿದುಕೊಳ್ಳಬಹುದು. ಆಸ್ಟ್ರೇಲಿಯಾಕ್ಕೆ ಸಂಬಂಧಿಸಿದ ವಿವಿಧ ನೆನಪಿನ ಉಡುಗೊರೆಗಳನ್ನು ತಯಾರಿಸಿ ಮಾರುವವರು ಕೂಡಾ ಚೀನಿಯರೇ! ಸದ್ಯ, ಈ ಚೀನಿಯರು ಇಂಗ್ಲಿಷ್ ಮಾತನಾಡಬಲ್ಲರು! 

ಭಾರತೀಯರಿಗೆ ಯಾವುದೇ ದೇಶಗಳ ರೆಸ್ಟಾರೆಂಟ್‌ಗಳಿಗೆ ಹೋದರೂ ಅಲ್ಲಿನ ತಿನಿಸುಗಳು ಇಷ್ಟವಾಗುವುದಿಲ್ಲ. ಸಸ್ಯಾಹಾರಿಗಳಿಗೆ ಸಂಕಷ್ಟ. ನಾವು ಹೋಗುತ್ತಿದ್ದ ರೆಸ್ಟಾರೆಂಟ್‌ಗಳಲ್ಲಿ ಸಸ್ಯಹಾರಿಗಳು ಸೊಪ್ಪು, ಎಲೆ, ಗಿಡಗಳನ್ನು ತಿನ್ನಬೇಕಾಗಿರುವಾಗ, ಒಂದು ಕ್ಷಣ ಆಡು ಆಗಿ ರೂಪಾಂತರವಾದ (ಕಾಫ್ಕ ಕತೆಗಳಲ್ಲಿ ಬರುವಂತೆ) ಭ್ರಮೆ ಉಂಟಾಗಬಹುದು! ಹಾಗೆಂದು ನಾನು-ನಾನ್ ವೆಜ್ ಎಂಬ ಸಮಾಧಾನದಲ್ಲಿ ಗ್ರಿಲ್ಡ್ ಚಿಕನ್ ಆರ್ಡರ್ ಮಾಡಿ ನೋಡಿ. ಸರ್ವರ್ ಸುಂದರಿ (ಬಹುಪಾಲು ಹೋಟೆಲುಗಳಲ್ಲಿ ಹುಡುಗಿಯರೇ ಸರ್ವರ್ ಗಳು) ತರುವ ಗ್ರಿಲ್ಡ್ ಚಿಕನ್ ನೋಡಿ ಕುಳಿತ ಕುರ್ಚಿಯಿಂದ ಜಾರಿ ಬೀಳಬಹುದು.

ಯಾಕೆಂದರೆ ಅಷ್ಟೊಂದು ದೊಡ್ದ ದೊಡ್ಡ ತುಂಡುಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳು ತಿನ್ನುವುದನ್ನು ಮಾತ್ರ ಕಂಡಿರುತ್ತೇವೆ. ಕೆಲವು ರೆಸ್ಟಾರೆಂಟ್‌ಗಳಿಗೆ ಹೊಕ್ಕ ತಕ್ಷಣ ನಿಮ್ಮನ್ನು ಸ್ವಾಗತಿಸುವುದು- ನೇತಾಡಿಸಿಟ್ಟ ಹಸಿ ಗೋಮಾಂಸ!

ನಮ್ಮ ಚಳಿ ಬಿಡಿಸುವುದಕ್ಕೆ ಇಲ್ಲೊಂದು ಅಪೂರ್ವ ರೆಸ್ಟಾರೆಂಟ್ ಕೂಡಾ ಇದೆ. ನಮ್ಮಲ್ಲಿರುವಂತೆ ಬರೀ ಬಾರ್ ಅಂಡ್ ರೆಸ್ಟಾರೆಂಟ್ ಅಲ್ಲ. ಇದು ಡ್ರಾಕುಲಾ ಥೀಮ್ ರೆಸ್ಟಾರೆಂಟ್. ಹೌದು, ನಮ್ಮನ್ನು ಹೆದರಿಸುವ ಅಥವಾ ಹೆದರಿಸಲು ಪ್ರಯತ್ನಿಸುವ ಭೂತಗಳು, ಪಿಶಾಚಿಗಳು ಇಲ್ಲಿದ್ದಾರೆ. ವಾ... ಡೂ... ಯೂ ವಾಂ..... ಟ್? ಎಂದು ಯಾವುದೇ ಸೌಜನ್ಯವಿಲ್ಲದೆ ಕೇಳುವ ಲೇಡಿ ಸರ್ವರ್ ಡ್ರಾಕುಲಾ! ಅಷ್ಟೇ ಅಲ್ಲ, ಇಲ್ಲಿ ಸೈತಾನರ ಸಂಗೀತ ರಾತ್ರಿಗಳು ನಡೆಯುತ್ತಿರುತ್ತವೆ. ತಮಾಷೆ ಮಾತುಗಳಿರುತ್ತವೆ. ಹೆಸರಿಗೆ ಮಾತ್ರ ಬಟ್ಟೆ ಧರಿಸಿರುವ ಚೆಲ್ಲು ಚೆಲ್ಲು ಹುಡುಗಿಯರು ಹಾಡಿ, ವೇದಿಕೆಯನ್ನು (ವೀಕ್ಷಕರನ್ನೂ) ಮೂರು ಗಂಟೆ ಅಲುಗಾಡಿಸಿ ಹೋಗುತ್ತಾರೆ.

ಗೋಲ್ಡ್ ಕೋಸ್ಟ್ ಕೊಡುವ ಮನರಂಜನೆಗಳು, ರೋಚಕತೆಗಳು ಇಷ್ಟೇ ಅಲ್ಲ. ಕುದುರೆಗಳಿಂದ ಕಸರತ್ತುಗಳು, ವಾರ್ನರ್ ಬ್ರದರ್ಸ್ ಅವರ ಹಾಲಿವುಡ್ ಯಾತ್ರೆ, ಇಲ್ಲ್ಯೂಶನ್ ಷೋ, ಸ್ಕೈ ಡೈವ್, ಇಂಡೋರ್ ಸ್ಕೈ ಡೈವ್, ಹೆಲಿಕಾಪ್ಟರ್ ಸುತ್ತಾಟ ಮಾಡಬಹುದು. ವಿಶೇಷವೆಂದರೆ ಗೋಲ್ಡ್ ಕೋಸ್ಟ್ 364ದಿವಸಗಳೂ ಪ್ರವಾಸಿಗರ ತಾಣವಾಗಿ ನಿರಂತರ ಚಟುವಟಿಕೆಯಲ್ಲಿರುತ್ತದೆ. ನಿಜ, ಒಂದು ಪ್ರವಾಸಿ ಜಾಹೀರಾತಿನ ಪ್ರಕಾರ ‘ವಿ ಆರ್ ಓಪನ್ 364 ಡೇಸ್ ಎ ಇಯರ್’! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.