ADVERTISEMENT

ಟಿ.ಆರ್‌.ಪಿ. ಎಂಬ ಚಾಲೂ ಚೆಲುವೆ!

ಎನ್.ಎಸ್.ಶಂಕರ್
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST

ಏಳು ವರ್ಷದ ಆ ಪುಟ್ಟ ಬಾಲೆ ಇನ್ನೂ ಬದುಕಿಗೆ ಕಣ್ಣು ತೆರೆದೆ ಇರಲಿಲ್ಲ. ಅಷ್ಟರಲ್ಲೇ ಟಿ.ವಿ. ಧಾರಾವಾಹಿಯೊಂದು ಅವಳ ಆಹುತಿ ತೆಗೆದುಕೊಂಡುಬಿಟ್ಟಿತು.

‘ನಂದಿನಿ’ ಎಂಬ ಧಾರಾವಾಹಿಯಲ್ಲಿ ಚಿಕ್ಕ ಹುಡುಗಿ ಬೆಂಕಿಯ ನಡುವೆ ನರ್ತಿಸುವುದನ್ನು ಕಂಡ ಪ್ರಾರ್ಥನಾಗೆ, ಅದೇ ರೀತಿ ತಾನೂ ಬೆಂಕಿಯ ನಡುವೆ ಕುಣಿಯುವ ಉಮೇದು ಬಂದಿದೆ. ತಂದೆ, ತಾಯಿ ಮನೆಯಲ್ಲಿಲ್ಲದಾಗ, ತನ್ನ ಸುತ್ತ ಕಾಗದದ ಚೂರುಗಳನ್ನು ಹರಡಿಕೊಂಡು ಪುಟ್ಟ ತಂಗಿಯ ಮುಂದೆಯೇ, ಆ ಕಾಗದಗಳಿಗೆ ಬೆಂಕಿ ಕೊಟ್ಟು ಕುಣಿಯಲು ಯತ್ನಿಸಿದಾಗ, ಬೆಂಕಿ ಅವಳ ಕೈ ಮೀರಿ ಜ್ವಲಿಸಿ ಅವಳನ್ನೇ ಬಲಿ ತೆಗೆದುಕೊಂಡಿದೆ. ಈ ಮಕ್ಕಳ ಚೀರಾಟ ಕೇಳಿ ಧಾವಿಸಿ ಬಂದ ಅಕ್ಕಪಕ್ಕದವರು ತರಾತುರಿಯಿಂದ ಬಾಲಕಿಯನ್ನು ಆಸ್ಪತ್ರೆಗೆ ಒಯ್ದರೂ ಪ್ರಾರ್ಥನಾ ಉಳಿಯಲಿಲ್ಲ.

ಇದು ನಡೆದಿದ್ದು ನವೆಂಬರ್ 12ರಂದು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ. ಇಂಥ ದಾರುಣ ಘಟನೆ ಬಗ್ಗೆ ಕೇಳಿದಾಗ ಅಥವಾ ಓದಿದಾಗ ಎದೆಯೊಡೆದುಹೋಗುವುದು ಸಹಜ. ತಕ್ಕಂತೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಯಿತು. ಧಾರಾವಾಹಿಗಳು/ ಟಿ.ವಿ. ಕಾರ್ಯಕ್ರಮಗಳು ಏನು ತೋರಿಸಬೇಕು, ಎಷ್ಟು ತೋರಿಸಬೇಕು ಎಂಬ ಬಗ್ಗೆ ಎಂದಿನಂತೆ ಮತ್ತೂ ಒಮ್ಮೆ ಅಲ್ಲಲ್ಲಿ ಸಣ್ಣದಾಗಿ ತಜ್ಞ ಅಭಿಪ್ರಾಯಗಳು ವ್ಯಕ್ತವಾಗಿವೆ! ಪ್ರಶ್ನೆಯೆಂದರೆ ಇಲ್ಲಿ ಎಳೆ ಜೀವ ನಂದಿಹೋದದ್ದಕ್ಕೆ ಯಾರು ಹೊಣೆ?

ADVERTISEMENT

ಕೊನೆಗೂ ತಪ್ಪು ಯಾರದು?

ಈ ಪ್ರಶ್ನೆಗೆ ಸುಲಭ ಉತ್ತರಗಳಿಲ್ಲ. ಧಾರಾವಾಹಿಯವರು ಖಂಡಿತವಾಗಿ ಇದು ನಮ್ಮ ತಪ್ಪಲ್ಲ ಅನ್ನಬಹುದು. ಇವನ್ನೆಲ್ಲ ಅನುಕರಿಸಬೇಡಿ ಅಂತ ಆರಂಭದಲ್ಲೇ ನಾವು ಎಚ್ಚರಿಕೆ ಹಾಕಿರುತ್ತೇವೆ ಅನ್ನಬಹುದು. ಘಟನೆ ಬಗ್ಗೆ ಮರುಕ ವ್ಯಕ್ತಪಡಿಸಿರುವ ಟಿ.ವಿ. ಅಸೋಸಿಯೇಷನ್‌ ಅಧ್ಯಕ್ಷರು ವೀಕ್ಷಕರನ್ನು ಸಂಪಾದಿಸುವ ಉದ್ದೇಶದಿಂದ ಧಾರಾವಾಹಿಗಳು ರೋಚಕ ಸಂಗತಿಗಳನ್ನು ಒಳಗೊಳ್ಳುತ್ತವೆ ಎಂಬ ಸಹಜ ಪ್ರವೃತ್ತಿಯ ಕಡೆಯೂ ನಮ್ಮ ಗಮನ ಸೆಳೆದಿದ್ದಾರೆ.

ವೀಕ್ಷಕರನ್ನು ಸೆಳೆಯುವ ಈ ವಿದ್ಯಮಾನ ಅಸಲಿಗೆ ನಮ್ಮನ್ನು ಮತ್ತೊಂದು ಚರ್ಚೆಯ ಕಡೆ ಒಯ್ಯುತ್ತದೆ. ಪತ್ರಿಕೆಗಳ ಹಾಗೆಯೇ ಟಿ.ವಿ.ಗಳು ನಡೆಯುವುದು ಕೂಡ ಜಾಹೀರಾತು ಬಲದ ಮೇಲೆಯೇ. ಟಿ.ವಿ. ಚಾನೆಲ್‌ಗಳಿಗೆ ವೀಕ್ಷಕರು ನೇರವಾಗಿ ಹಣ ತೆರುವುದಿಲ್ಲ. ಆದರೆ, ಯಾವ ಚಾನೆಲ್‌ಗಳು ಜನಪ್ರಿಯವಾಗಿವೆಯೋ, ಅಂದರೆ ಯಾವ ವಾಹಿನಿ ಅತಿಹೆಚ್ಚು ವೀಕ್ಷಕರನ್ನು ಸಂಪಾದಿಸಿದೆಯೋ, ಹೆಚ್ಚು ಟಿ.ಆರ್‌.ಪಿ. ಹೊಂದಿದೆಯೋ- ಜಾಹೀರಾತುದಾರರು ಒಲಿಯುವುದು ಆ ಚಾನಲ್‌ಗೇ. ಜಾಹೀರಾತು ಅಂದರೆ ಹಣ. ಆ ಹಣವಿಲ್ಲದೆ, ಕೋಟ್ಯಂತರ ಬಂಡವಾಳ ಬೇಡುವ ವಾಹಿನಿಯನ್ನು ನಡೆಸಲು ಸಾಧ್ಯವಿಲ್ಲ. ಇಲ್ಲಿ ಅನ್ವಯವಾಗುವುದು ಅದೇ ಡಿಮಾಂಡ್ ಅಂಡ್ ಸಪ್ಲೈ ತತ್ವ.

ಈ ಬೇಡಿಕೆ ಪೂರೈಕೆ ತತ್ವದಿಂದಾಗಿಯೇ- ಟಿ.ಆರ್‌.ಪಿ. ಗಳಿಕೆಗಾಗಿಯೇ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಇಲ್ಲಿ ಪ್ರತಿಯೊಂದೂ ಮಾರುಕಟ್ಟೆ ಸರಕಾಗುತ್ತದೆ. ನೀವು ಪ್ರತಿಯೊಂದನ್ನೂ ಮಾರಬೇಕು. ಸುದ್ದಿಯನ್ನೂ ಅಷ್ಟೇ, ಧಾರಾವಾಹಿಯನ್ನೂ ಅಷ್ಟೇ. ಈ ಸರಕು ಸಂಸ್ಕೃತಿ ನಮ್ಮ ನೋಟವನ್ನು ಆಳುತ್ತದೆ. ನಮ್ಮ ಮೌಲ್ಯಗಳನ್ನು ಪಲ್ಲಟಗೊಳಿಸುತ್ತದೆ. ನಮ್ಮ ಅತಿ ಖಾಸಗಿ ನಂಟುಗಳನ್ನೂ ಅಲ್ಲಾಡಿಸುತ್ತದೆ.

ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ‘ಬಿಗ್‌ಬಾಸ್’ ಎಂಬ ರಿಯಾಲಿಟಿ ಷೋವನ್ನೇ ಪರಿಶೀಲಿಸಬಹುದು. ಕನ್ನಡ ಆವೃತ್ತಿ ಮಟ್ಟಿಗೆ ಹೇಳುವುದಾದರೆ ಇದುವರೆಗೆ ಅಲ್ಲಿ ಭಾಗವಹಿಸುತ್ತಿದ್ದವರು ಸಾಕಷ್ಟು ಖ್ಯಾತರಾದವರೇ.ಹೆಚ್ಚಾಗಿ ಸಿನಿಮಾ, ಟಿ.ವಿ. ಕಲಾವಿದರು. (ಈ ಬಾರಿ ಮಾತ್ರ ಜನಸಾಮಾನ್ಯರೂ ಹೋಗಿದ್ದಾರೆ.) ಆ ಮನೆಯಲ್ಲಿ ಇವರೆಲ್ಲ ಸಾಕಷ್ಟು ಕಷ್ಟ ನಷ್ಟ ಅನುಭವಿಸುತ್ತಾರೆ. ಕೆಲವೊಮ್ಮೆ ಅರೆಹೊಟ್ಟೆಯಲ್ಲೂ ದಿನ ದೂಡಬೇಕಾಗುತ್ತೆ. ಎಲ್ಲಕ್ಕೂ ಮಿಗಿಲಾಗಿ ಇವರು ತಮ್ಮ ಸ್ವಾತಂತ್ರ್ಯವನ್ನು ಬಲಿಗೊಟ್ಟು ಅಲ್ಲಿ ಹೋಗುತ್ತಾರೆ. ಯಾಕೆ? ತಂತಾವೇ ಆ ಸಂಕಷ್ಟಕ್ಕೆಲ್ಲ ಗೋಣೊಡ್ಡಿ ಅವರು ಅಲ್ಲಿಗೆ ಯಾಕೆ ಹೋಗಬೇಕು? ಯಾಕೆಂದರೆ ಅವರೆಲ್ಲರಿಗೂ ಅವರ ಮಾರುಕಟ್ಟೆ ಮೌಲ್ಯ ಆಧರಿಸಿ ವಾರದ ಸಂಭಾವನೆ ನಿಗದಿಯಾಗಿರುತ್ತದೆ.

ಮುಖ್ಯ ಪ್ರಶ್ನೆಯೆಂದರೆ ಇಷ್ಟೆಲ್ಲ ಖರ್ಚು ಮಾಡಿ, ಸ್ಪರ್ಧಿಗಳಿಗೂ ದುಡ್ಡು ಕೊಟ್ಟು, ಚಾನೆಲ್ ಕೊಂಡುಕೊಳ್ಳುತ್ತಿರುವುದೇನನ್ನು? ಅಷ್ಟೂ ಜನರ ಖಾಸಗಿ ಬದುಕನ್ನು ಅಲ್ಲವೇ? ಆ ಸ್ಪರ್ಧಿಗಳ ಒಳಬದುಕು, ಅವರ ಮನೋಲಹರಿಗಳು, ಸ್ವಭಾವಗಳು- ಇವೆಲ್ಲವೂ ಸೀಮಿತ ಅರ್ಥದಲ್ಲಾದರೂ ಅಲ್ಲಿ ಬಿಕರಿಯಾಗುತ್ತಿಲ್ಲವೇ?

ಸಂಸಾರ ಗುಟ್ಟು, ವ್ಯಾಧಿ ರಟ್ಟು ಎಂಬುದು ನಮ್ಮ ಸಂಸ್ಕೃತಿಯ ಪರಂಪರಾಗತ ವಿವೇಕ. ಆದರೆ, ಈಗ ಉಲ್ಟಾ. ನಿಮ್ಮ ಖಾಸಗಿ ಬದುಕು ಈಗ ಮಾರಾಟದ ಸರಕು. ನಾನು ಕಣ್ಣಾರೆ ಕಂಡ ಒಂದು ಉದಾಹರಣೆ ನೀಡುತ್ತೇನೆ (ಈ ಉದಾಹರಣೆಯನ್ನು ಮಾಧ್ಯಮ ವಿದ್ಯಾರ್ಥಿಗಳ ಮುಂದೆ ಹಲವು ಬಾರಿ ಉಲ್ಲೇಖಿಸಿದ್ದೇನೆ). ನನ್ನ ಮಿತ್ರರೊಬ್ಬರ ವಿವಾಹಬಾಹಿರ ಸಂಬಂಧದ ಬಗ್ಗೆ ಅವರ ಹೆಂಡತಿಗೆ ಗೊತ್ತಾಯಿತು. ಆ ಮಿತ್ರರು ವಿಶ್ವವಿದ್ಯಾಲಯದ ಪ್ರೊಫೆಸರ್.

ಮುಂಚೆಯಾಗಿದ್ದಿದ್ದರೆ ಒಂದಷ್ಟು ಅತ್ತು ಕರೆದು ರಂಪ ಮಾಡಿದ ಮೇಲೆ, ಆ ಕುಟುಂಬಕ್ಕೆ ಆಪ್ತರಾದ ಹಿರಿಯರು ಕೂತು ಬುದ್ಧಿ ಹೇಳಬೇಕಾದವರಿಗೆ ಹೇಳಿ, ಸಂತೈಸಬೇಕಾದವರನ್ನು ಸಂತೈಸಿ, ಸಂಧಾನ ಮಾಡುತ್ತಿದ್ದರು. ಈಗೇನಾಯಿತೆಂದರೆ ಆ ಹೆಂಗಸು ಎಲ್ಲ ಚಾನೆಲ್‌ಗಳ ಪ್ರತಿನಿಧಿಗಳನ್ನು ಕರೆಸಿದರು. ಎಲ್ಲರೆದುರು ಗಂಡನಿಗೆ ಚಪ್ಪಲಿ ತೆಗೆದು ಬಾರಿಸಿದರು...! ಆ ದೃಶ್ಯಾವಳಿ ಇಡೀ ದಿನ ಮಾತ್ರವಲ್ಲ, ಮರುದಿನವೂ ಚಾನೆಲ್‌ಗಳಿಗೆ ಊಟವಾಯಿತು! ಇದು ನಡೆದ ಘಟನೆ.

ಈ ಪ್ರಸಾರಕ್ಕೆ ಪೂರ್ವಭಾವಿಯಾಗಿ ಏನಾಗಿರಬಹುದೆಂದು ಊಹಿಸುವುದು ಕಷ್ಟವಲ್ಲ. ಆ ಹೆಂಗಸು ಚಾನೆಲ್‌ಗಳಿಗೆ ಫೋನ್ ಮಾಡಿ ನಾಳೆ ಬೆಳಿಗ್ಗೆ ಹನ್ನೊಂದೂವರೆಗೆ ನಾನು ನನ್ನ ಗಂಡನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ತಾವು ದಯವಿಟ್ಟು ಬರಬೇಕು ಎಂದು ಯಾವುದೋ ಔತಣಕ್ಕೆ ಕರೆದಂತೆ ಆಹ್ವಾನ ಕೊಟ್ಟಿರಬೇಕು. ಆ ಕಡೆ ಚಾನೆಲ್‌ನ ಸುದ್ದಿಮನೆಯಲ್ಲಿ ಸಮಾಲೋಚನೆ ನಡೆದು ಮೇಡಂ, ಹನ್ನೊಂದೂವರೆಗೆ ಬೇರೆ ಏನೋ ಕಾರ್ಯಕ್ರಮವಿದೆ. ತಾವು ದಯವಿಟ್ಟು ಹನ್ನೆರಡಕ್ಕೆ ಫಿಕ್ಸ್ ಮಾಡಿಕೊಳ್ಳಿ ಎಂದು ಅವರು ಸೂಚಿಸಿರಲೂ ಸಾಧ್ಯ. ಅಂತೂ ಎಲ್ಲರೂ ಮಾತಾಡಿಕೊಂಡು ನಿಗದಿತ ಸಮಯಕ್ಕೆ, ನಿಗದಿತ ಜಾಗದಲ್ಲಿ ಒಗ್ಗೂಡಿ ಕ್ಯಾಮೆರಾಗಳನ್ನೇ ಬಂದೂಕುಗಳಂತೆ ಹಿಡಿದು ಮುನ್ನುಗ್ಗಿರುತ್ತಾರೆ...

ಇದೇನೂ ಅಪರೂಪದ ಪ್ರಸಂಗವಲ್ಲ. ಸುದ್ದಿವಾಹಿನಿಗಳು ಹುಟ್ಟಿಕೊಂಡಾಗಿನಿಂದಲೂ ಸರ್ವೇಸಾಮಾನ್ಯವಾಗಿ ಹೋಗಿರುವ ವಿದ್ಯಮಾನವಿದು. ಹೀಗೆ ಖಾಸಗಿ ಕೊಳೆಯನ್ನು ಬಹಿರಂಗದಲ್ಲಿ ತೊಳೆಯುವುದನ್ನೇ ದ್ರವ್ಯ ಮಾಡಿಕೊಂಡು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಲಾಗಿದೆ ಕೂಡ (ಬದುಕು ಜಟಕಾ ಬಂಡಿ, ಇದು ಕಥೆಯಲ್ಲ ಜೀವನ...). ಮುಂಚೆಯೆಲ್ಲ ಇದು ಮಾನ ಮರ್ಯಾದೆಯ ಪ್ರಶ್ನೆಯಾಗಿರುತ್ತಿತ್ತು. ಸರೀಕರೆದುರು ತಲೆ ತಗ್ಗಿಸುವ ಅಥವಾ ತಲೆ ಎತ್ತಿ ನಡೆಯುವ ಇಕ್ಕಟ್ಟಿನ ಆಯ್ಕೆಯಾಗಿರುತ್ತಿತ್ತು. ಆದರೀಗ ಮಾನ ಮರ್ಯಾದೆಗೂ ದರಪಟ್ಟಿ ಹಚ್ಚಿರುವುದೇ ಈ ಟಿ.ಆರ್‌.ಪಿ. ಮಹಿಮೆ.

ಈ ಪಲ್ಲಟದ (ಅಥವಾ ವಿಕೃತಿ ಅನ್ನುವುದೇ ವಾಸಿಯೇನೋ) ಮತ್ತೂ ಒಂದು ಅಡ್ಡ ಪರಿಣಾಮವೆಂದರೆ ಕಳಂಕವೇ ಈಗ ಬಿಕರಿಯೋಗ್ಯ ಮಾಲು ಅನಿಸಿಕೊಂಡಿರುವುದು. ಇದಕ್ಕೂ ಹತ್ತಾರು ಉದಾಹರಣೆ ಕೊಡಬಹುದು. ಬಿಡದಿಯ ನಿತ್ಯಾನಂದರ ವಿರುದ್ಧ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಋಷಿಕುಮಾರ ಅಲಿಯಾಸ್ ಕಾಳಿಸ್ವಾಮಿ ಸ್ಟಿಂಗ್ ಆಪರೇಷನ್‌ನಲ್ಲಿ ಮಾನ ಕಳೆದುಕೊಂಡು ಸಾರ್ವಜನಿಕ ಜೀವನದಿಂದ ಮರೆಯಾಗಿ ಹೋಗಿದ್ದ ಮೇಲೆ, ಮತ್ತೆ ಆತನನ್ನು ಬಿಗ್‌ಬಾಸ್ ರಿಯಾಲಿಟಿ ಷೋಗೆ ಆಹ್ವಾನಿಸಿ ಸ್ಟಾರ್ ಪಟ್ಟ ದೊರಕಿಸಿದ್ದಾಯಿತು.

ಮಾಜಿ ಸಚಿವ ರೇಣುಕಾಚಾರ್ಯರಿಗೆ ಮುತ್ತು ಕೊಡುವ ಫೋಟೊಗಳ ಮೂಲಕ ಪ್ರಸಿದ್ಧಿಗೆ ಬಂದ ನರ್ಸ್ ಜಯಲಕ್ಷ್ಮಿ ಅವರಿಗೂ ಇದೇ ರೀತಿ ಸೆಲೆಬ್ರಿಟಿ ಪಟ್ಟ ಸಿಕ್ಕಿದ್ದು, ಬ್ರಹ್ಮಾಂಡ ಗುರೂಜಿ ಬೇರೆ ಬಗೆಯಲ್ಲಿ ಸ್ಟಾರ್ ಆದದ್ದು ಇದೇ ರಿಯಾಲಿಟಿ ಷೋ ಮುಖಾಂತರ. ಇನ್ನು ಮ್ಯಾಚ್ ಫಿಕ್ಸಿಂಗ್, ಪಾಟ್ ಫಿಕ್ಸಿಂಗ್‌ಗಳಿಂದಾಗಿ ಮರೆಗೆ ಸರಿದಿದ್ದ ಕ್ರಿಕೆಟ್ ಆಟಗಾರ ಶ್ರೀಶಾಂತ್ ಮತ್ತೆ ಜನರ ಮುಂದೆ ಕಾಣಿಸಿಕೊಂಡಿದ್ದೂ ರಿಯಾಲಿಟಿ ಷೋ ಮೂಲಕವೇ.

ಅಂತೂ ಪ್ರತಿ ಚಾನೆಲನ್ನೂ (ಅಂದರೆ ಪ್ರತಿ ವೀಕ್ಷಕನನ್ನೂ ಎಂದರ್ಥ) ಅನುಗಾಲವೂ ತನ್ನಿಷ್ಟಕ್ಕೆ ಕುಣಿಸುವ ಚಾಲೂ ಚೆಲುವೆ ಆಕೆ.

ಪರಿಣಾಮ ಕಣ್ಣೆದುರೇ ಕಾಣುತ್ತಿದೆ- ಆಗಲೇ ಹೇಳಿದಂತೆ ನಮ್ಮ ಅನುಭವ, ನೋಟ, ಮೌಲ್ಯಗಳೆಲ್ಲವೂ ಅಲ್ಲೋಲಕಲ್ಲೋಲವಾಗಿಹೋಗಿವೆ. ಧಾರಾವಾಹಿ ನೋಡಿ ನಿಷ್ಪಾಪ ಮಗುವೊಂದು ಜೀವ ತೆತ್ತಿದ್ದಷ್ಟಕ್ಕೆ ನಿಲ್ಲುವ ಬೆಳವಣಿಗೆಯಲ್ಲ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.