ADVERTISEMENT

ದೇಸಿ ಜಿಮ್ನಾಸ್ಟಿಕ್ ಮಲ್ಲಕಂಬ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ದೇಸಿ ಜಿಮ್ನಾಸ್ಟಿಕ್ ಮಲ್ಲಕಂಬ
ದೇಸಿ ಜಿಮ್ನಾಸ್ಟಿಕ್ ಮಲ್ಲಕಂಬ   

ಜಿಮ್ನ್ಯಾಸ್ಟಿಕ್ಸ್‌ನ ಭಾರತೀಯ ಪ್ರಕಾರವನ್ನು ಮಲ್ಲಕಂಬ ಎನ್ನಬಹುದೇನೋ? ‘ಮಲ್ಲ’ ಎಂದರೆ ಶಕ್ತಿಶಾಲಿ ಮನುಷ್ಯ. ಕಂಬ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಕಂಬವನ್ನು ಬಳಸಿಕೊಂಡು ವಿವಿಧ ಯೋಗಾಸನಗಳನ್ನು ಹಾಕುತ್ತಾರೆ. ಹಲವು ಕರಾಮತ್ತುಗಳನ್ನು ಮಾಡುತ್ತಾ ದೇಹದ ಸಮತೋಲನ ಕಾಪಾಡಿಕೊಳ್ಳುತ್ತಾರೆ. ಎಣ್ಣೆ ಬಳಿದ ಅಥವಾ ಪಾಲಿಷ್ ಹಾಕಿದ ಕಂಬವನ್ನು ಕರಾಮತ್ತು ತೋರಲು ಉಪಯೋಗಿಸುವುದು ರೂಢಿ. ಕಂಬವು ಎರಡೂವರೆ, ಮೂರು ಅಡಿ ಎತ್ತರವಿರುತ್ತದೆ. ತುದಿಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಗೋಳಾಕಾaರವಿರುತ್ತದೆ.

ಹಿಂದೆ ಕುಸ್ತಿಪಟುಗಳಷ್ಟೆ ಮಲ್ಲಕಂಬದಲ್ಲೂ ವರಸೆಗಳನ್ನು ತೋರುತ್ತಿದ್ದರು. ಅದರಿಂದ ದೇಹದ ಸಾಮರ್ಥ್ಯ ಹಾಗೂ ಕ್ಷಮತೆ ಹೆಚ್ಚಾಗುತ್ತಿತ್ತು. ಕ್ರೀಡೆ ಹಾಗೂ ಕುಸ್ತಿ ಪಂದ್ಯಗಳಲ್ಲಿ ಹೆಚ್ಚು ಉತ್ತಮ ಪ್ರದರ್ಶನ ತೋರಲು ಮಲ್ಲಕಂಬ ಪೂರಕವಾಗಿ ಒದಗಿಬಂದಿತ್ತು.

ಕುಸ್ತಿಪಟುಗಳಿಗೆ ತರಬೇತಿ ನೀಡಲು ಬೇರೆ ಕ್ರಮಗಳು ಜಾರಿಗೆ ಬಂದವು. ಆಗ ಮಲ್ಲಕಂಬ ನನೆಗುದಿಗೆ ಬಿತ್ತು. ಮರಾಠಾ ದೊರೆ ಎರಡನೇ ಬಾಜಿರಾವ್ ಪೇಶ್ವೆಯ ದೈಹಿಕ ತರಬೇತುದಾರ ಬಾಲಂಭಟ್ಟ ದಾದಾ ದೇವಧರ್ ಮನಸ್ಸು ಮಾಡದೇ ಹೋಗಿದ್ದಿದ್ದರೆ ಮಲ್ಲಕಂಬದ ಪುನರುತ್ಥಾನವಾಗುತ್ತಿರಲಿಲ್ಲ. ಕ್ರಮೇಣ ಅದೂ ಸ್ವತಂತ್ರ ಸ್ಪರ್ಧೆಯಾಗಿ ಪರಿಗಣಿತವಾಯಿತು. ಬಿದಿರಿನ ಮಲ್ಲಕಂಬವನ್ನೂ ಕಸರತ್ತಿಗೆ ಬಳಸಲಾರಂಭಿಸಿದರು. ಹಗ್ಗ ಉಪಯೋಗಿಸಿ ಕರಾಮತ್ತು ತೋರಿದವರೂ ಇದ್ದಾರೆ. ಆಮೇಲೆ ಮಲ್ಲಕಂಬಕ್ಕೆ ನಿರ್ದಿಷ್ಟ ರೂಪು ಸಿಕ್ಕಿತು.

ADVERTISEMENT

ಹಗ್ಗ ಬಳಸಿ ಮಲ್ಲಕಂಬದಂತೆಯೇ ಕರಾಮತ್ತು ತೋರುವ ಅವಕಾಶ ಸಿಕ್ಕಾಗ ಮಹಿಳೆಯರೂ ಈ ಸ್ಪರ್ಧೆಗೆ ಇಳಿದರು. ಹತ್ತಿಯ ಇಳಿಬಿಟ್ಟ 5.5 ಮೀಟರ್ ಉದ್ದದ ಹಾಗೂ 15 ಮಿಲಿಮೀಟರ್ ದಪ್ಪದ ಹಗ್ಗವನ್ನು ಉಪಯೋಗಿಸಿಕೊಂಡು ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ.

ಸತತವಾಗಿ ಮಲ್ಲಕಂಬದ ಕಸರತ್ತು ಮಾಡುವುದರಿಂದ ದೇಹವಷ್ಟೇ ಅಲ್ಲದೆ ಮನಸ್ಸೂ ಸಶಕ್ತವಾಗುತ್ತದೆ. ಮಾಡುವ ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಇದು ಪ್ರೇರಣೆ ನೀಡುತ್ತದೆ.

ದೇಶದ ವಿವಿಧ ರಾಜ್ಯಗಳಲ್ಲಿ ಮಲ್ಲಕಂಬ ಅಭಿವೃದ್ಧಿ ಪಡಿಸಲು ಸಂಸ್ಥೆಗಳು ಹುಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.