ADVERTISEMENT

ದೊಡ್ಡವರು ಬರುವವರೆಗೆ...

ಮಕ್ಕಳ ಕಥೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ದೊಡ್ಡವರು  ಬರುವವರೆಗೆ...
ದೊಡ್ಡವರು ಬರುವವರೆಗೆ...   
ತಮ್ಮಣ್ಣ ಬೀಗಾರ
ಅವನು ದೊಡ್ಡಮನೆಯ ಬಾಗಿಲು ತೆರೆದು ಬಂಗಾರದ ಬಣ್ಣ ಬಳಿದ ಕಬ್ಬಿಣದ ಗೇಟನ್ನು ತಳ್ಳಿ ಹೊರಗೆ ಬಂದ. ಮನೆಯ ಮುಂದೆ ರಸ್ತೆ. ರಸ್ತೆಯಲ್ಲಿ ಕೆಲವೇ ವಾಹನಗಳು ಓಡಾಡುತ್ತಿವೆ. ರಸ್ತೆಯ ಬದಿಯಲ್ಲಿ ಮೂರು ನಾಲ್ಕು ನಾಯಿಗಳು ಮಲಗಿವೆ. 
 
ಎಲ್ಲವೂ ಚಂದ. ರಸ್ತೆ ದಾಟಿದರೆ ಅದೇ ಯಾರದೋ ಸೈಟು. ಇನ್ನೂ ಮನೆ ಕಟ್ಟಿಲ್ಲ. ಖಾಲಿ ಜಾಗ ಎಂದರೆ ಅಲ್ಲಿ ಕಸ ತಂದು ತುಂಬುವವರು, ಹೊಲಸು ತಂದು ಎರಚುವವರು ಇದ್ದೇ ಇದ್ದಾರೆ. ಆದರೆ ಆ ಪುಟ್ಟ ಮೈದಾನದ ಮೂಲೆಯಲ್ಲಿ ದೊಡ್ಡ ನೇರಲ ಮರವೊಂದಿದೆ. ಮರ ಇಡೀ ಮೈದಾನಕ್ಕೆ ಹರಡಿದ ಹಾಗೆ ವಿಸ್ತಾರವಾಗಿದೆ. ಎಲ್ಲ ಕಡೆ ಬಿಸಿಲಿದ್ದರೂ ಅಲ್ಲಿ ಬಿಸಿಲಿಲ್ಲ. 
 
ಮರದಲ್ಲಿ ಈಗ ನೇರಳೆ ಹಣ್ಣು ತುಂಬಾ ಆಗಿದೆ. ಆ ಒಂಟಿ ಮರದಲ್ಲಿ ಹಣ್ಣು ತುಂಬಿರುವಾಗ ಎಲ್ಲಿಂದಲೋ ಬಂದ ಒಂದೆರಡು ಮಂಗಗಳು ಹಣ್ಣನ್ನು ಕೊಯ್ದು ಕೊಯ್ದು ತಿನ್ನುತ್ತಿವೆ. ಮರದಡಿಯಲ್ಲಿ ನೇರಳೆ ಹಣ್ಣಿನಷ್ಟೇ ಹೊಳಪಿನ ಕಣ್ಣನ್ನು ಹೊಂದಿರುವ, ಅದರದೇ ಬಣ್ಣವನ್ನು ಹೊಂದಿರುವ ಮೂರು ನಾಲ್ಕು ಮಕ್ಕಳು ಮರಿಗಳು ಬೀಳಿಸಿದ ನೇರಳೆ ಹಣ್ಣನ್ನು ಆಯ್ದು ತಿನ್ನುವುದರಲ್ಲಿ ನಿರತರಾಗಿದ್ದಾರೆ. ಇವನ್ನೆಲ್ಲ ಒಂದು ಸುಂದರ ಚಿತ್ರ ನೋಡಿದ ಹಾಗೆ ನೋಡಿದ ಅವನು (ಆ ದೊಡ್ಡ ಮನೆಯ ಹುಡುಗ) ಮೆಲ್ಲನೇ ರಸ್ತೆ ದಾಟಿ ನೇರಲ ಮರದ ಕಡೆಗೆ ನಡೆದ. 
 
ಬಿಳಿ ಬಣ್ಣದ ಮೃದುವಾದ ಟೀಶರ್ಟ್, ಅಂತಹದೇ ಮುದ್ದಾದ ನಿಕ್ಕರ್ ಧರಿಸಿದ್ದ ಅವನಿಗೆ ಕಾಲಿನಲ್ಲಿ ಮೆತ್ತನೆಯ ಶೂ ಇತ್ತು. ಅವನು ಪುಟು ಪುಟು ಹೆಜ್ಜೆ ಹಾಕುತ್ತ ಮರದಡಿ ಬಂದಿದ್ದ. ಅಲ್ಲಿ ಹಣ್ಣು ತಿನ್ನಲು ಓಡಾಡುತ್ತಿದ್ದ ಮಕ್ಕಳನ್ನು ನೋಡುತ್ತ ನಿಂತ. ಅವರು ಮೇಲಿದ್ದ ಮಂಗಗಳನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದರು. ಕಲ್ಲು ಎತ್ತಿ ಮಂಗಗಳಿಗೆ ಹೊಡೆಯುವಂತೆ ಮಾಡಿ ಹೆದರಿಸುತ್ತಿದ್ದರು.
 
ಆಗ ಮಂಗಗಳು ಇವರನ್ನು ನೋಡಿ ಕೊಂಬೆ ಅಲುಗಿಸಿದರೆ ಒಂದಿಷ್ಟು ಹಣ್ಣು ಕೆಳಕ್ಕೆ ಉದುರುತ್ತಿತ್ತು. ಆಗ ಒಬ್ಬರ ಮೇಲೆ ಒಬ್ಬರು ಬಿದ್ದು ನುಗ್ಗಿ ಹಣ್ಣನ್ನು ಹೆಕ್ಕುತ್ತಿದ್ದರು. ಹಾಗೇ ಬಾಯಿಗೆ ಒತ್ತಿ ತಿನ್ನುತ್ತಿದ್ದರು. ಅವರ ಬಾಯಿ, ಅವರ ಹಲ್ಲು, ಕೈ ಎಲ್ಲವೂ ನೇರಲೆ ಹಣ್ಣಿನ ಬಣ್ಣ ಮೆತ್ತಿಕೊಂಡು ಬಹಳ ಅಂದವಾಗಿ ಕಾಣುತ್ತಿತ್ತು. ಮಕ್ಕಳೆಲ್ಲ ಹಣ್ಣು ತಿನ್ನುತ್ತಿರುವಾಗ ಅಲ್ಲಿ ನಿಂತಿದ್ದ ದೊಡ್ಡ ಮನೆಯ ಬಿಳಿ ವಸ್ತ್ರದ ಬಾಲಕನನ್ನು ನೋಡಿದರು. ಅವರೆಲ್ಲ ನೇರಳೆ ಹಣ್ಣಿನ ಬಣ್ಣ ಮೆತ್ತಿಕೊಂಡಿದ್ದ ಹಲ್ಲನ್ನು ಪ್ರದರ್ಶಿಸಿ ನಕ್ಕರು. ಇವನು ಅವರನ್ನು ನೋಡುತ್ತಲೇ ಇದ್ದ. 
 
ಅವನಿಗೂ ಹಣ್ಣು ತಿನ್ನುವ ಆಸೆ ಆಗಿತ್ತು. ಅವರಿಗೆ ಇವನ ಮುಖ ನೋಡಿದಾಗಲೇ ಇವನ ಆಸೆ ಗೊತ್ತಾಗಿರಬೇಕು. ಒಬ್ಬ ಬಾಲಕ ಎರಡು ಹಣ್ಣನ್ನು ಎತ್ತಿ ಅವನಿಗೆ ತಂದು ಕೊಟ್ಟ. ಹಣ್ಣು ತುಂಬಾ ರುಚಿಯಾಗಿತ್ತು. ಬಿಳಿ ಬಣ್ಣದ ಬಟ್ಟೆಯ ಮೇಲೆ ನೀಲಿ ಬಣ್ಣ ಮೂಡುತ್ತಿದ್ದಾಗ ಅವನು ಖುಷಿಯನ್ನು ಅನುಭವಿಸುತ್ತಿದ್ದ. ಆ ಮಕ್ಕಳು ತಾನು ಮುಂದೆ ತಾನು ಮುಂದೆ ಎಂದು ಅವನಿಗೆ ಹಣ್ಣು ಕೊಡತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲ ಗೆಳೆಯರಾದರು. ಅವನ ಅಂಗಿಯೂ ನೀಲಿಯಾಗಿ, ಮುಖ ರಂಗಾಗಿ ಅವನ ಕಣ್ಣೂ ಹೊಳೆಯಿತು. ಅಲ್ಲಿ ದೊಡ್ಡವರು ಬರುವವರೆಗೂ ಅವರು ಹಾಗೇ ಇದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.