ADVERTISEMENT

ನನ್ನವ್ವನ ಹೆಸರು ಗೌರಮ್ಮ!

ಭಾವಸೇತು

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ನನ್ನವ್ವನ ಹೆಸರು ಗೌರಮ್ಮ!
ನನ್ನವ್ವನ ಹೆಸರು ಗೌರಮ್ಮ!   
ಗಂಡುಬೀರಿ ಮನೆತನ (ಹಿರಿಯರಿಲ್ಲದ ಮನೆ) ಎಂದು ಹೆಣ್ಣು ಕೊಡದೇ ಇರುವ ಕಾಲದಲ್ಲಿ ಹುಟ್ಟು ಕಿವುಡು ಅವ್ವನನ್ನು ಅಪ್ಪ ಮದುವೆಯಾಗಿದ್ದರು. ಮಾಸಿದ ಬಟ್ಟೆಯಲ್ಲಿಯೇ ಹೊಳೆಯುತ್ತಿರುವ ಕೆನೆಬಣ್ಣದ ಹುಡುಗಿಯನ್ನು ಸಂತೆಯಲ್ಲಿ ನೋಡಿ ಮೆಚ್ಚಿ, ಬಡವರ ಹುಡುಗಿಯನ್ನು ಮಡದಿಯನ್ನಾಗಿ ಕರೆತಂದರು. ಮೂರು ಜನ ತಮ್ಮಂದಿರು, ಚಿಕ್ಕ ಪ್ರಾಯದ ತಂಗಿ – ಅವ್ವನೇ ಹಿರೀಸೊಸೆ. ಸನ್ನೆ ಮಾತುಗಳಲ್ಲೇ ಜೀವನ. 
 
ಅತ್ತೆಯ ಆರೈಕೆಯಲ್ಲಿ ನಮ್ಮಗಳ ಪಾಲನೆ, ಅವ್ವನದು ಸದಾ ದುಡಿತ ದುಡಿತ. ಕೈಚೆಲ್ಲಿ ಕುಳಿತಿದ್ದನ್ನು ಕಾಣಲೇ ಇಲ್ಲ. ಹೊಲಗದ್ದೆ, ದನ, ಕರು, ಆಳುಕಾಳುಗಳು ಸಮೃದ್ಧ ಬದುಕು. ರೋಗಗಳು, ಆಸ್ಪತ್ರೆಗಳೂ ವಿರಳವಾಗಿದ್ದ ಕಾಲ. ಎಲ್ಲದಕ್ಕೂ ಮನೆಮದ್ದೇ ಆಧಾರ. ಮುಟ್ಟುನಿಲ್ಲುವ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ನಿತ್ರಾಣವಾಗಿದ್ದರೂ ಅವ್ವನ ಮುಖದಲ್ಲಿ ನಿರ್ಭಾವ. ಅಪ್ಪನೇ ಔಷಧಿ ತಯಾರಿಸಿದರು. ಅತ್ತೆ ಅವ್ವನನ್ನು ಆರೈಕೆ ಮಾಡಿದರು. ವಾಸಿಯಾದ ನಂತರ ಮತ್ತೆ ದುಡಿತ, ದುಡಿತ. 
 
ಹಿರೀಮಗಳ ಮದುವೆ ಮಾಡಿ ಅಳಿಯನ ಮುಂದೆ ಓಡಾಡಲು ನಾಚಿಕೊಳ್ಳುವ ಅವ್ವ. ಒಲೆಯ ಮುಂದೆ ಬೇಯುತ್ತಿರುವ ಅವ್ವ, ಹಿತ್ತಲಲ್ಲಿ ರಾಶಿ ಪಾತ್ರೆ ಬಟ್ಟೆಗಳ ನಡುವೆ ಕಳೆದುಹೋಗುವ ಅವ್ವ. ಅಂಗಳದಲ್ಲಿ ಒಣಹಾಕಿದ ಹೆಸರುಕಾಯಿಗಳನ್ನು ಬಡಿದು ಸ್ವಚ್ಛ ಮಾಡುವ ಅವ್ವ. ಮಕ್ಕಳು ಊಟಕ್ಕೆ ಬೇಗ ಬಾರದಿದ್ದರೆ ಚಡಪಡಿಸುವ ಅವ್ವ. ತಲೆಗೆ ಬಟ್ಟೆ ಬಿಗಿದು ಮಲಗಿದ ಅವ್ವ. ಒಂದೇ ಎರಡೇ... ಅಪ್ಪ ಹಾಸಿಗೆ ಹಿಡಿದಾಗ ತನ್ನ ಕೊನೆಗಾಲದಲ್ಲಿ ಅವ್ವನ ಸೇವೆಯನ್ನು ಸ್ಮರಿಸಿ ಮರುಗುತ್ತಿದ್ದರು. 
 
ಅಪ್ಪ ಸತ್ತ ಹತ್ತು ತಿಂಗಳೊಳಗೆ ಮರೆಯಾದ ಅವ್ವ. ಅಪ್ಪನನ್ನು ನೆನೆಸದ ಗಳಿಗೆಯೇ ಇಲ್ಲದಂತೆ ಹಂಬಲಿಸಿದ ಅವ್ವ. ಎದೆ ಹಿಡಿದುಕೊಂಡು ಆಗಾಗ್ಗೆ ವೇದನೆ ಪಡುತ್ತಾ ಕೆಲಸ ಮಾಡುತ್ತಿದ್ದಳು. ಇದೇ ಉಲ್ಬಣವಾಗಿ ಹೃದಯ ರೋಗವೇನೆಂದು ಗೊತ್ತಿಲ್ಲದ ಕಾಲದಲ್ಲಿ ಇದಕ್ಕಿದ್ದಂತೆ ಮರೆಯಾದಳು. ಎಲ್ಲರಂತೆ ನನ್ನವ್ವನಿಲ್ಲ ಎಂಬ ಅಸಹನೆಯೋ ತಿರಸ್ಕಾರವೋ ಗೊತ್ತಿಲ್ಲದ ವಯಸ್ಸಲ್ಲಿ ಅವ್ವನೊಂದಿಗೆ ಸುಮ್ಮನೇ ಸಿಟ್ಟು ಮಾಡಿ ನೋಯಿಸುತ್ತಿದ್ದೆ. ನನ್ನ ಈ ಕೆಟ್ಟ ಬುದ್ಧಿಗೆ ಹಿಡಿಶಾಪ ಹಾಕುವಂತಾಗಿದೆ. 
 
ಅವ್ವನನ್ನು ನನ್ನ ಮನೆಗೆ ಕರೆತಂದು ಆರೈಕೆ ಮಾಡಬೇಕು ಎಂಬ ನನ್ನ ಆಸೆ ಕೈಗೂಡಲೇ ಇಲ್ಲ. ತೆಗೆದಿಟ್ಟ ಹೊಸ ಸೀರೆ ಉಡಲು ನನ್ನ ಮನೆಗೆ ಬರಲೇ ಇಲ್ಲ. ನನ್ನವ್ವನ ಹೆಸರು ಗೌರಮ್ಮ. 
–ರುದ್ರಾಣಿ, ರುದ್ರಯ್ಯ. ಗೊ.ಮ., ಹೊನ್ನಾಳಿ, ದಾವಣಗೆರೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.