ADVERTISEMENT

‘‘ನನ್ನ ಲೆಕ್ಕದಾಗೆ ಹಣ್ಣು ತಿನ್ರೀ...

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 19:30 IST
Last Updated 8 ಏಪ್ರಿಲ್ 2017, 19:30 IST
‘‘ನನ್ನ ಲೆಕ್ಕದಾಗೆ ಹಣ್ಣು ತಿನ್ರೀ...
‘‘ನನ್ನ ಲೆಕ್ಕದಾಗೆ ಹಣ್ಣು ತಿನ್ರೀ...   
‘ನನ್ ಜತಿ ಕೂಡಿಕಿ ಮಾಡ್ಕತೀಯೇನೇ ಯಬ್ಬೇ?’ ಎಂದು ಆ ಹುಡುಗನೆಡೆಗೆ ತೀಕ್ಷ್ಣವಾಗಿ ನೋಡಿದ ಅವಳು ನಗುನಗುತ್ತಲೇ ಉತ್ತರಿಸಿದಳು.
‘ಆಗ್ಲಿ ಮೊಮ್ಮಗನೇ, ಏಟು ಉರೀತೀಯಾ, ಮಾಡ್ಕತೀನಿ, ನನ್ ಜೊತಿನೇ ಇರ್ಬೇಕು, ಬ್ಯಾರೆ ಹುಡುಗೀನ್ನ ಮದಿವಿ ಆಗಂಗಿಲ್ಲ. ಬ್ಯಾರೆ ಹುಡುಗಿ ಕಡೀ ನೋಡಿದ್ರೆ ಅಂಡಿಗೆ ಹೊಡೀತೀನಿ, ಆಕ್ಕಾತಾ ಹೇಳು...’
 
ಅವನು 25ರ ಹುಡುಗ. ಇವಳು 75ರ ಹುಡುಗಿ. ಇಬ್ಬರೂ ನಮ್ಮ ಮನೆಯ ಕೆಲಸಗಾರರು. ಇವರೀರ್ವರ ಈ ನಟನೆ ನಿತ್ಯದ ಪರಿಪಾಠ. ನಮಗೆಲ್ಲ ಪುಷ್ಕಳ ಮನರಂಜನೆ. ಈ 75ರ ಹುಡುಗಿ ಲಕ್ಷ್ಮಜ್ಜಿ ನಮ್ಮ ಮನೆಗೆ ಬಂದು ಸೇರಿದ್ದು ಯಾವಾಗ ಎಂಬುದು ಅವಳಿಗೂ ತಿಳಿಯದು, ನಮಗೂ ನೆನಪಿಲ್ಲ.
 
ಉಬ್ಬು ಹಲ್ಲು, ತೊಳೆದ ಕೆಂಡದ ಮೈಬಣ್ಣದ ಅಜ್ಜಿಗೆ, ‘ವಯಸ್ಸೆಷ್ಟಜ್ಜಿ?’ ಎಂದರೆ ಬಾಯಿ ಬ್ರಹ್ಮಾಂಡ ಮಾಡಿ ಉದುರಿದ ಮುಂದಿನ ಸಾಲಿನ ನಾಲ್ಕು ಹಲ್ಲುಗಳ ಮಧ್ಯೆ ಅಲ್ಲಲ್ಲಿ ಕಡುಕಪ್ಪು ಬಳಿದ ಉಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾ ಆಕಾಶ ತೋರಿಸುತ್ತಾಳೆ– ದೇವರಿಗೇ ಗೊತ್ತು ಎಂಬಂತೆ!
 
ನೀರಿಗಿಂತ ಹೆಚ್ಚು ಶೆರೆಯನ್ನೇ ಕುಡಿದು ಸತ್ತು, ಪತ್ನಿ ಮೂರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಪತಿಯನ್ನು ಒಂದು ದಿನವೂ ಬಯ್ಯದೇ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ್ದಾಳೆ. ಮಕ್ಕಳೆಲ್ಲ ಪ್ರತ್ಯೇಕವಿದ್ದು ಉದರಂಭರಣಕ್ಕೆ ನಮ್ಮ ಮನೆಯೇ ಆಸರೆ.
 
ತನಗೆ ಕೊಟ್ಟ ತಿಂಡಿಯಲ್ಲಿಯೇ ಕದ್ದು ಮುಚ್ಚಿ ಮೊಮ್ಮಕ್ಕಳಿಗೆ ಒಯ್ಯುತ್ತಾಳೆ. ನಮ್ಮ ಮನೆಯಲ್ಲಿ ಏನೇ ಹಬ್ಬ, ಸಮಾರಂಭಗಳಾದರೂ ಉಳಿದ ಪೂರ್ತಿ ಅಡುಗೆಯನ್ನು ಕಷ್ಟಪಟ್ಟು ಹೊತ್ತೊಯ್ದು ತನ್ನ ಕೇರಿಯ ಮಕ್ಕಳಿಗೆ, ಹಸಿದವರಿಗೆ ಹಂಚುವ ಅಪ್ರತಿಮ ಸಮಾಜಮುಖಿಯಿವಳು.
 
ನನ್ನ ಮಗಳು ಬೆಂಗಳೂರಿನಿಂದ ಬಂದಾಗ ಅವಳ ಹಾಗೂ ಅವಳ ಮಕ್ಕಳ ಬಟ್ಟೆಗಳನ್ನು ಕೊಟ್ಟರೆ ಕೂಡಲೇ ಓಡಿ ಹೋಗಿ ತನ್ನ ಮೊಮ್ಮಕ್ಕಳಿಗೆ ತೊಡಿಸಿ ಆನಂದಿಸುತ್ತಾಳೆ. ಅಜ್ಜಿಯದು ಹೆಂಗರಳು.
 
ಕೆಲವಾರಗಳ ಹಿಂದೆ ನನ್ನ ಕಣ್ಣಿಗೆ ಅಲರ್ಜಿಯಾಗಿ ಬಾವು ಬಂದಿದ್ದಾಗ ಅತೀವ ಕಕ್ಕುಲತೆಯಿಂದ ಕಣ್ಣಂಚಿನ ನೀರನ್ನು ಒತ್ತರಿಸಿಕೊಂಡು ಉಡಿಯ ಬಾಳೆಕಾಯಿಯಿಂದ 100 ರೂಪಾಯಿ ತೆಗೆದು ಮುಂದಿಟ್ಟು ಹೀಗೆ ಹೇಳಿದ್ದಳು: ‘ಸಾವ್ಕಾರ್ರೇ, ನನ್ನ ಲೆಕ್ಕದಾಗೆ ಹಣ್ಣು ತಂದು ತಿನ್ರೀ ಯಪ್ಪಾ, ಬೇಗ ಉಸಾರಾಗ್ರೀ. ದೇವರು ನಿಮ್ಮ ಸಂದಾಕಿಟ್ಟಿರ್ಬೇಕು’.
ಆಕೆ ಯಾವ ಜನ್ಮದ ತಾಯಿಯೋ? ನನ್ನ ಕಣ್ಣುಗಳು ತುಂಬಿ ಬಂದಿದ್ದವು.
–ಕೆ. ಶ್ರೀನಿವಾಸರಾವ್, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.