ADVERTISEMENT

ನಮ್ಮ ಬದುಕಿಗಾಗಿ ಅವರ ಸಾವಿನ ನಿರೀಕ್ಷೆ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST

ಪರಿಚಿತರೊಬ್ಬರ ಹೆಂಡತಿ ಕಾಯಿಲೆಯ ಸಂದರ್ಭ ಸೇವಿಸಿದ ನೋವು ನಿವಾರಕ ಮಾತ್ರೆಗಳು ಅಡ್ಡ ಪರಿಣಾಮ ಬೀರಿದವು. ಆಕೆಗೆ ಮೈಯಲ್ಲಿ ನೀರು ತುಂಬಿಕೊಳ್ಳತೊಡಗಿತು. ಎರಡೂ ಮೂತ್ರಪಿಂಡಗಳು ನಿಷ್ಕ್ರಿಯವಾಗಿವೆ ಎಂದು ಹೇಳಿದರು. ‘ಬದಲಿ ಮೂತ್ರಪಿಂಡದ ಕಸಿ ಮಾಡಬೇಕು. ಆ ತನಕ ಡಯಾಲಿಸಿಸ್ ಬಿಟ್ಟರೆ ಬೇರೆ ದಾರಿಯಿಲ್ಲ’ ಎಂದರು.

ಅವರದು ಕೈ ತುಂಬ ಸಂಬಳ ಬರುವ ನೌಕರಿಯಲ್ಲ. ದುಡಿದರೆ ಮಾತ್ರ ಹೊಟ್ಟೆ ತುಂಬೀತು. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ವಿದ್ಯಾಭ್ಯಾಸವಾಗಬೇಕು. ಪ್ರತೀ ವಾರ ಎರಡು ಸಲ ಮಣಿಪಾಲಕ್ಕೆ ಹೋಗಿ ಡಯಾಲಿಸಿಸ್ ಮಾಡಿ ಬರುವ ವೆಚ್ಚದಲ್ಲಿ ಅರ್ಧವನ್ನು ಉಡುಪಿಯ ಒಂದು ಖಾಸಗಿ ಟ್ರಸ್ಟ್ ಕೊಡುತ್ತಿತ್ತು. ಉಳಿದ ಅರ್ಧವನ್ನು ಇವರೇ ನಿಭಾಯಿಸಬೇಕು. ಒಂದು ಸಲ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ.

“ಸಮಾಜದಲ್ಲಿ ತುಂಬ ಮಂದಿ ಸಹೃದಯಿಗಳು ಇದ್ದಾರೆ. ನೀವು ಅವರನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಯಾರಾದರೂ ವರದಿಗಾರರ ಮೂಲಕ ನಿಮ್ಮ ಕಷ್ಟದ ಕಥೆಯನ್ನು ಒಂದು ಪತ್ರಿಕೆಯಲ್ಲಿ ವರದಿ ಮಾಡಲು ಹೇಳಿ. ಓದುಗರು ಕೈ ತುಂಬ ಕೊಡುತ್ತಾರೆ” ಎಂದು ಸಲಹೆ ನೀಡಿದೆ.

“ಇಲ್ಲ ಸಾರ್, ಹಣಕ್ಕೆ ದೊಡ್ಡ ಸಮಸ್ಯೆ ಇಲ್ಲ, ಹೇಗೋ ಆಗುತ್ತದೆ. ಈಗ ಕೊರತೆಯಿರುವುದು ಅವಳ ದೇಹಕ್ಕೆ ಹೊಂದಾಣಿಕೆಯಾಗುವ ಕಿಡ್ನಿಗೆ. ಮೂರು ಕಿಡ್ನಿಗಳ ಪರೀಕ್ಷೆ ನಡೆಯಿತು. ಯಾವುದೂ ಸರಿ ಹೊಂದಿಲ್ಲ. ಒಬ್ಬ ವೈದ್ಯರಿಗೆ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟು ರಿಜಿಸ್ಟ್ರೇಷನ್ ಮಾಡಿಸಿ ಕಿಡ್ನಿಗಾಗಿ ಕ್ಯೂ ನಿಂತಿದ್ದೇವೆ. ನಮ್ಮದು ಹತ್ತನೆಯ ನಂಬರು. ನಮ್ಮ ಅನಂತರ ಐವತ್ತು ಜನರಿದ್ದಾರಂತೆ” ಎಂದು ಹೇಳಿದರು.

ADVERTISEMENT

ನನಗೆ ಅರ್ಥವಾಗಲಿಲ್ಲ. “ರಿಜಿಸ್ಟರ್ ಮಾಡಿಸಿ ಕಾಯುವುದು ಅಂದರೇನು? ಹಾಗೆಲ್ಲ ಯಾರೋ ಅದನ್ನು ತಂದುಕೊಡಲು ಆಗುವುದಿಲ್ಲವಲ್ಲ? ಅದಕ್ಕೂ ನಿರ್ಬಂಧಗಳಿವೆ ತಾನೆ?” ಎಂದು ಕೇಳಿದೆ.

“ಹಾಗೆಲ್ಲ ಸಿಗುವುದಿಲ್ಲ. ಯಾರಿಗಾದರೂ ವಾಹನ ಅಪಘಾತ ಆಗಿ ಮೆದುಳು ಸತ್ತು ಕೋಮಾಗೆ ತಲುಪಿ, ಅವರಿನ್ನು ಬದುಕುವುದಿಲ್ಲ ಎಂದಾದಾಗ, ಬಂಧುಗಳು ಅವರ ಹೃದಯ, ಕಿಡ್ನಿಯನ್ನೆಲ್ಲ ದಾನವಾಗಿ ಕೊಡುತ್ತಾರೆ. ಇಂತಹ ಕಿಡ್ನಿಗಾಗಿ ಹಣ ಕೊಟ್ಟು ಕಾದು ನಿಂತಿದ್ದೇವೆ. ನಮಗೆ ಹೊಂದುವ ಕಿಡ್ನಿ ಸಿಕ್ಕಿದ ಕೂಡಲೇ ಕರೆ ಮಾಡುತ್ತಾರೆ” ಎಂದರು.

ಇದು ಎಂಥ ವಿಡಂಬನೆ? ಯಾರಿಗೋ ಅಪಘಾತವಾಗಿ ಅವರ ಕಿಡ್ನಿ ಸಿಗುವುದನ್ನೇ ಕಾಯುವುದು ಎಂದರೇನು? ಬದುಕಿನ ವೈಚಿತ್ರ್ಯಗಳು ನಮ್ಮ ಎಣಿಕೆಗೆ ಸಿಗುವಷ್ಟು ಸರಳವಲ್ಲ ಅನ್ನಿಸಿತು.
–ಪ. ರಾಮಕೃಷ್ಣ ಶಾಸ್ತ್ರಿ, ಬೆಳ್ತಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.