ADVERTISEMENT

ಪಾರ್ತಿಸುಬ್ಬ ಮಲತಾಯಿ ಮಗನೇ?

ಕೋಡಿಬೆಟ್ಟು ರಾಜಲಕ್ಷ್ಮಿ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಕರ್ನಾಟಕದ ಶ್ರೀಮಂತ ಕಲೆಗಳಲ್ಲಿ ಒಂದಾದ ಯಕ್ಷಗಾನಕ್ಕೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೂಕ್ತ ನ್ಯಾಯ ದೊರೆತಿದೆಯೇ? ಈ ಅನನ್ಯ ಕಲೆಗೆ ಸಲ್ಲಬೇಕಾದ ಮನ್ನಣೆ ದೊರೆತಿದೆಯೇ? ಈ ಪ್ರಶ್ನೆಗಳು ಅನುರಣಿಸಿದ್ದು ಪುತ್ತಿಗೆ ರಘುರಾಮ ಹೊಳ್ಳರ ಅಭಿನಂದನೆ ಸಂದರ್ಭದಲ್ಲಿ. ಈಚೆಗೆ ಮಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದ ಭಾಗವಾಗಿ ಯಕ್ಷಗಾನ ಕ್ಷೇತ್ರದ ವಿದ್ವಾಂಸರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಒಮ್ಮತದಿಂದ ವ್ಯಕ್ತವಾದ ಅನಿಸಿಕೆ- ಯಕ್ಷಗಾನಕ್ಕೆ ಸಲ್ಲಬೇಕಾದ ಮರ್ಯಾದೆ ಸಂದಿಲ್ಲ ಎನ್ನುವುದು.

ಯಕ್ಷಗಾನ ರಾತ್ರಿಯಿಡೀ ಪ್ರೇಕ್ಷಕನನ್ನು ತನ್ನಲ್ಲಿ ತೊಡಗಿಸಿಕೊಳ್ಳುವ ಅಪೂರ್ವ ಕಲೆ. ರಾಮಾಯಣ - ಮಹಾಭಾರತಗಳ ಬೃಹತ್ ಪೌರಾಣಿಕ ಕಥನಗಳನ್ನು `ಪ್ರದರ್ಶನ' ರೂಪದಲ್ಲಿ ಆಸ್ವಾದಿಸಬಹುದಾದ ಕಲೆ ಇದು. ಆದರೆ, ಇಂಥ ವಿಶೇಷ ಕಲೆ ಸಾಕಾರಗೊಳ್ಳುವುದಕ್ಕೆ ಕಾರಣಕರ್ತರಾದ ವ್ಯಕ್ತಿಗಳಿಗಾಗಲೀ ಅಥವಾ ಈ `ರಂಗ'ಕಲೆಗೆ ಸಲ್ಲಬೇಕಾದ ಮನ್ನಣೆಯಾಗಲೀ ಸಂದಿಲ್ಲ. ಜಾಗತಿಕ ಮಟ್ಟದಲ್ಲಿ ಯಕ್ಷಗಾನಕ್ಕೆ ಸಲ್ಲುತ್ತಿರುವ ಮನ್ನಣೆ ಏನೇ ಇರಲಿ, ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಇದಕ್ಕೆ ಸೂಕ್ತ ಸ್ಥಾನಮಾನ ಸಂದಿಲ್ಲ ಎನ್ನುವುದು ಯಕ್ಷಗಾನ ಕ್ಷೇತ್ರದ ವಿದ್ವಾಂಸರ ಅಳಲು. ಈ ಅಳಲಿನ ಜೊತೆಗೆ ತಂತ್ರಜ್ಞಾನದ ಪ್ರಭಾವಳಿ ಮತ್ತು ಸುಲಭ ಸೌಕರ್ಯಗಳು ಯಕ್ಷಗಾನದ ಶಾಸ್ತ್ರೀಯತೆಯನ್ನು ಮಂಕಾಗಿಸುತ್ತಿವೆಯೇ ಎನ್ನುವ ಆತಂಕವೂ ಇದೆ.

`ಯಕ್ಷಗಾನದ ಬಗ್ಗೆ ಜಗತ್ತಿಗೆ ಹೇಳುವುದು ಹಾಗಿರಲಿ, ಕರ್ನಾಟಕಕ್ಕೇ ಹೇಳುವುದು ಸಾಧ್ಯವಾಗಿಲ್ಲ' ಎಂದು ಅಭಿಪ್ರಾಯಪಟ್ಟ ಡಾ. ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲೆಯ ಅನನ್ಯತೆಯನ್ನು ಹಿಡಿದಿಡುವುದು ಹೀಗೆ:

“ಕನ್ನಡ ಸಾಹಿತ್ಯದ ಆದಿಕವಿ ಪಂಪ `ಪಂಪಭಾರತ' ಬರೆದ. ಅದು ವೃತ್ತ ಪದ್ಯಗಳಲ್ಲಿದ್ದು, ಓದುವ ಕಾವ್ಯವಾಗಿತ್ತು. 14ನೇ ಶತಮಾನದಲ್ಲಿ ಕುಮಾರವ್ಯಾಸ ಷಟ್ಪದಿಗಳಲ್ಲಿ ಹಾಡುವ ಕಾವ್ಯವಾಗಿ `ಗದುಗಿನ ಭಾರತ' ಬರೆದ. ಓದುವ ಕಾವ್ಯ ಹಾಡುವ ಕಾವ್ಯವಾಗುತ್ತ, ಅಲ್ಲಿ ಗಮಕದ ಪ್ರವೇಶ ಸಾಧ್ಯವಾಯಿತು. 14ನೇ ಶತಮಾನದ ಉತ್ತರಾರ್ಧದಲ್ಲಿ ಈ ಕಾವ್ಯವೇ ಕರ್ನಾಟಕದ ಶಿಲ್ಪಕಲೆಗಳ ವೈಭವಕ್ಕೆ ಪ್ರೇರಣೆಯಾಯಿತು. ಕತೆಗಳು ದೇವಳದ ಪ್ರಾಕಾರಗಳಲ್ಲಿ ಶಿಲ್ಪಗಳಾಗಿ ಅರಳಿದವು. 1630-40ರಲ್ಲಿ ಪಾರ್ತಿಸುಬ್ಬ ಮಹಾಕಾವ್ಯವನ್ನು ಪ್ರಸಂಗಗಳಾಗಿ ಒಡೆದು ನೋಡುವ ಕಾವ್ಯವನ್ನಾಗಿ ಪರಿವರ್ತಿಸಿದ. ಇದರಿಂದ ಓದುವ, ಕೇಳುವ ಮತ್ತು  ಹಾಡುವ ಪರಂಪರೆ `ನೋಡುವ' ಪರಂಪರೆಯಾಗಿ ವಿಸ್ತಾರಗೊಂಡಿತು. ಕನ್ನಡ ಸಂಸ್ಕೃತಿಯ ಒಟ್ಟು ಪರಿಕಲ್ಪನೆಯೇ ಅಂದಿನ ಸಂದರ್ಭದಲ್ಲಿ ಸಾಮಾನ್ಯ ಕಲ್ಪನೆಗೂ ಮೀರಿ ವಿಸ್ತಾರವಾಗುವುದು ಸಾಧ್ಯವಾಯಿತು. ಇಂತಹ ಬೃಹತ್ ಪರಿವರ್ತನೆ ಭಾರತದ ಇತರ ಯಾವುದೇ ಕಲೆಗಳಲ್ಲಿಯೂ ಆಗಿಲ್ಲ. ಕಥಕ್ಕಳಿ, ಛಾವು, ಪ್ರಹ್ಲಾದ ನಾಟಂ, ಮೋಹಿನಿ ಅಟ್ಟಂ ಯಾವುದೇ ಕಲಾ ಪ್ರಕಾರ ಹೀಗೆ ಒಮ್ಮಿಂದೊಮ್ಮೆಗೆ ಹಿಗ್ಗಿದ ಸಾಂಸ್ಕೃತಿಕ ವಿಸ್ತಾರವನ್ನು ಪಡೆದ ಉದಾಹರಣೆ ಇಲ್ಲ...”

ಯಕ್ಷಗಾನದ ಅನನ್ಯತೆಯನ್ನು ಚಿತ್ರಿಸುವ ಬಿಳಿಮಲೆ ಅವರು ಕೇಳುವ ಪ್ರಶ್ನೆ- “ಪಂಪ ಮತ್ತು ಕುಮಾರವ್ಯಾಸನಿಗೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸಂದ ಮನ್ನಣೆ ಪಾರ್ತಿಸುಬ್ಬನಿಗೆ ದೊರೆತಿದೆಯೇ?”

ಕಲಾ ವಿಮರ್ಶಕ ಈಶ್ವರಯ್ಯ ಅವರು ಮಾತನಾಡಿದ್ದು ಯಕ್ಷಗಾನದಲ್ಲಿನ ರಾಗಗಳ ಬಗ್ಗೆ ಮತ್ತು ಭಾಗವತಿಕೆಯ ಕುರಿತು. ಭಾಗವತರನ್ನು ನಿರ್ದೇಶಕರು ಎನ್ನಬಹುದೇ ಎನ್ನುವ ಜಿಜ್ಞಾಸೆ ಅವರದು.

ಇತರ ರಂಗಕಲೆಗಳಲ್ಲಿ ಪ್ರದರ್ಶನ ಆರಂಭವಾದ ಬಳಿಕ ನಿರ್ದೇಶಕ ತೆರೆಮರೆಗೆ ಸರಿಯುತ್ತಾನೆ. ಯಕ್ಷಗಾನದಲ್ಲಿ ಇಡೀ ಪ್ರಸಂಗದ ಸೂತ್ರಧಾರಿಯಾಗಿ ಭಾಗವತರು ಇರುತ್ತಾರೆ; ಆ ಸ್ಥಾನಕ್ಕೆ ನಿರ್ದೇಶಕ ಎಂಬ ಪದ ಕೀಳಂದಾಜು ಆಗುವುದಿಲ್ಲವೇ ಎನ್ನುವ ಉತ್ತರ ಡಾ. ಪ್ರಭಾಕರ ಜೋಶಿ ಅವರದು. ಸಾಹಿತ್ಯ ಪ್ರಧಾನವಾಗಿ, ಸಂಗೀತ ಅತಿಥಿಯಾಗಿ ಹೊರಹೊಮ್ಮುವ ಭಾಗವತಿಕೆ ಒಟ್ಟು ಯಕ್ಷಗಾನ ಪ್ರಸ್ತುತಿಯ ಉನ್ನತಿಗೆ ನೆರವಾಗುತ್ತದೆ ಎನ್ನುವ ಮಾತಿನೊಂದಿಗೆ ಚರ್ಚೆ ಕೊನೆಗೊಂಡಿತು, ಪ್ರಶ್ನೆಗಳು ಮಾತ್ರ ವೇದಿಕೆಯ ಆಚೆಗೂ ಉಳಿದವು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.