ADVERTISEMENT

ಪ್ರಕೃತಿ ವಿಸ್ಮಯದ ಮೂರು ಪ್ರಶ್ನೆಗಳು

ವಿಜ್ಞಾನ ವಿಶೇಷ

ಎನ್.ವಾಸುದೇವ್
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಪ್ರಕೃತಿ ವಿಸ್ಮಯದ ಮೂರು ಪ್ರಶ್ನೆಗಳು
ಪ್ರಕೃತಿ ವಿಸ್ಮಯದ ಮೂರು ಪ್ರಶ್ನೆಗಳು   

1. ‘ಆನೆ ದಂತ’–ಏನು ಅರ್ಥ? ಏಕೆ ಅನರ್ಥ?
‘ಆನೆ’ ಈ ಹೆಸರೇ ಬೃಹದ್ಗಾತ್ರಕ್ಕೆ ಸಮಾನಾರ್ಥಕ ಹೌದಲ್ಲ? ಅತ್ಯಂತ ದೈತ್ಯ ನೆಲಪ್ರಾಣಿ ಎಂಬ ದಾಖಲೆ ಹೊಂದಿ, ಅನನ್ಯ ಅಂಗವಾದ ಸೊಂಡಿಲನ್ನು ಪಡೆದಿರುವ ಆನೆ ಜೋಡಿ‘ದಂತ’ಗಳಿಂದಲೂ ತುಂಬ ಪ್ರಸಿದ್ಧ ತಾನೇ? ‘ಏಷಿಯನ್‌ ಆನೆ’ (ಎಲಿಫಾಸ್‌–ಚಿತ್ರ 1) ಮತ್ತು ‘ಆಫ್ರಿಕನ್‌ ಆನೆ’ (ಲೋಕ್ಸೋಡಾಂಟಾ–ಚಿತ್ರ 2) ಎಂಬ ಎರಡು ಕುಟುಂಬಗಳಾಗಿ, ಪ್ರಸ್ತುತ ಒಟ್ಟು ಐದು ಪ್ರಭೇದಗಳಾಗಿರುವ ಆನೆಗಳಲ್ಲಿ ಏಷಿಯನ್‌ ಆನೆಗಳ ಗಂಡುಗಳು ಮಾತ್ರ ದಂತಧಾರಿಗಳಾಗಿದ್ದರೆ ಆಫ್ರಿಕನ್‌ ಆನೆಗಳಲ್ಲಿ ಗಂಡು ಹೆಣ್ಣುಗಳೆರಡೂ ದಂತಾಲಂಕಾರ ಹೊಂದಿವೆ. ಈಗಿನ ಆನೆಗಳ ಪೂರ್ವಜ ಪ್ರಭೇದಗಳೂ ಕೂಡ ಭವ್ಯವಾದ ಬೃಹದಾಕಾರದ ದಂತ ಜೋಡಿಯನ್ನು ಪಡೆದಿದ್ದುವು ಎಂಬುದು (ಚಿತ್ರ 3,5) ಪಳೆಯುಳಿಕೆಗಳಿಂದ ನಿಚ್ಚಳ.

ಆನೆ ದಂತ ಆ ಹೆಸರೇ ಸೂಚಿಸುವಂತೆ ಆನೆಯ ‘ಹಲ್ಲು’ ಅಷ್ಟೆ.  ವಾಸ್ತವ ಏನೆಂದರೆ ಆನೆಯ ದಂತಪಂಕ್ತಿಯಲ್ಲಿ ಬಾಯಿಂದ ಹೊರಕ್ಕೆ ಚಾಚಿ ಬೆಳೆವ ಒಂದು ಜೊತೆ ಕೋರೆ ಹಲ್ಲುಗಳೇ ‘ಆನೆ ದಂತ.’ ಆನೆ ಮರಿಗೆ ಆರು ತಿಂಗಳು ತುಂಬಿದ ನಂತರ ಹನ್ನೆರಡು ತಿಂಗಳು ಮುಟ್ಟುವ ಮೊದಲು ಅದರ ‘ಹಾಲು ಹಲ್ಲುಗಳು’ ಬಿದ್ದು ಶಾಶ್ವತ ಹಲ್ಲುಗಳು ಹುಟ್ಟುತ್ತವೆ; ನಿಧಾನವಾಗಿ ನಿರಂತರವಾಗಿ ಬಹಳ ವರ್ಷ ಬೆಳೆಯುತ್ತಲೇ ಹೋಗುತ್ತವೆ. ಅವೇ ಆನೆ ದಂತ.

ವಿಸ್ಮಯ ಏನೆಂದರೆ ಆನೆಯ ದಂತ ಜೋಡಿಯಲ್ಲಿ ಪ್ರತಿ ದಂತವೂ ಮೂರರಲ್ಲಿ ಎರಡು ಭಾಗ ಮಾತ್ರ ಹೊರಕ್ಕೆ ಚಾಚಿರುತ್ತದೆ; ಉಳಿದ ಭಾಗ ವಸಡಿನಲ್ಲೇ ಹುದುಗಿರುತ್ತದೆ. ಆಫ್ರಿಕನ್‌ ಆನೆಗಳ ದಂತ ಏಷಿಯನ್‌ ಆನೆಗಳ ದಂತಕ್ಕಿಂತ ಹೆಚ್ಚು ದಪ್ಪ, ಹೆಚ್ಚು ಭಾರ. ಅದೇನೇ ಇದ್ದರೂ ಇತರ  ಎಲ್ಲ ಹಲ್ಲುಗಳಂತೆಯೇ ಈ ಕೋರೆ ಹಲ್ಲುಗಳಲ್ಲೂ ಮೂರರ ಒಂದಂಶ ಉದ್ದಕ್ಕೆ ಮಿದು ಅಂಗಾಂಶಗಳು ತುಂಬಿದ್ದು ಅಲ್ಲಿ ನರ ಜೀವಕೋಶಗಳು ಕಿಕ್ಕಿರಿದಿವೆ. ಆದ್ದರಿಂದಲೇ ಬದುಕಿರುವ ಆನೆಯ ದಂತ ಬುಡದಲ್ಲಿ ಮುರಿದರೆ ನೋಯುತ್ತದೆ; ರಕ್ತ ಸೋರುತ್ತದೆ.

ಲಾಭ ಬಡುಕ ದುರುಳ ಜನರಿಂದಾಗಿ ಆನೆಗಳಿಗೆ ಅವುಗಳ ದಂತ ಅನರ್ಥಕಾರಿಯಾಗಿದೆ. ಏಕೆಂದರೆ ಸಾಬೂನಿನಂತೆ ಮೆದುವಲ್ಲದ, ಕಲ್ಲಿನಂತೆ ಗಟ್ಟಿಯೂ ಅಲ್ಲದ, ಸುಂದರ ಬಣ್ಣದ, ಶಾಶ್ವತವೂ ಆದ ಆನೆ ದಂತ ಕುಶಲ ಕೆತ್ತನೆಗಳಿಗೆ ತುಂಬ ಸೂಕ್ತ, ಪ್ರಶಸ್ತ (ಚಿತ್ರ 4,6) ಅದಕ್ಕಾಗಿ ಆನೆ ದಂತಕ್ಕೆ ವಿಪರೀತ ಬೇಡಿಕೆ. ಎಷ್ಟೆಂದರೆ 1980ರ ದಶಕದಲ್ಲಿ ಪ್ರತಿ ಕಿಲೋ ದಂತದ ಬೆಲೆ ರೂ. 35000 ಮುಟ್ಟಿತ್ತು! (ಆಫ್ರಿಕನ್‌ ಆನೆಯ ಒಂದು ಜೊತೆ ದಂತ 80 ರಿಂದ 100 ಕಿಲೋ ತೂಗುತ್ತದೆ; ಏಷಿಯನ್‌ ಆನೆಯದು 30 ರಿಂದ 40 ಕಿಲೋ). ಹಾಗಾಗಿ ಲಕ್ಷಾಂತರ ಆನೆಗಳು ಕಳ್ಳ ಬೇಟೆಗೆ ಬಲಿಯಾಗುತ್ತ ಆನೆ ಸಂತತಿಯೇ ಅಳಿವ ಹಾದಿ ತಲುಪಿತ್ತು! ಪ್ರಸ್ತುತ ಜಗದಾದ್ಯಂತ ಆನೆ ದಂತ ನಿಷೇದ ಜಾರಿಯಲ್ಲಿದ್ದು ಕಳ್ಳದಂತದ ಬೆಲೆ ಕುಸಿದು ಸ್ವಲ್ಪ ಮಟ್ಟಿಗೆ ಆನೆಗಳು ಕ್ಷೇಮವಾಗಿವೆ.

2. ‘ಜೇನು’–ವಿಶೇಷ ಏನು?
ಅದೇನೇ ಇರಲಿ, ಮೊದಲು ಒಂದಂಶ ಸೃಷ್ಟವಾಗಿರಲಿ: ‘ಜೇನು ಕೇವಲ ಹೂಗಳ ಮಕರಂದ ಅಲ್ಲ. ಹೂಗಳಲ್ಲಿನ ಮಕರಂದವನ್ನು ಜೇನನ್ನಾಗಿ ಜೇನ್ನೊಣಗಳು ಪರಿವರ್ತಿಸುತ್ತವೆ. ಜೇನ್ನೊಣಗಳು ಮತ್ತು ಜೇನು ಕಣಜಗಳಂತಹ ಕೆಲವೇ ಇತರ ಕೀಟಗಳನ್ನು ಬಿಟ್ಟರೆ ಸಿಹಿ ಮಕರಂದವನ್ನು ಜೇನನ್ನಾಗಿ ಪರಿವರ್ತಿಸುವ ಕೆಲಸ ಬೇರಾವ ಜೀವಿಗೂ– ಮನುಷ್ಯರಿಗೂ ಕೂಡ– ಸಾಧ್ಯವಿಲ್ಲ.’ ಇದೇ ಜೇನಿನ ಮೊದಲ ವಿಶೇಷ.

ವಾಸ್ತವವಾಗಿ ಜೇನ್ನೊಣಗಳು ತಮಗೆ ಆಹಾರವನ್ನಾಗಿ ಜೇನನ್ನು ತಯಾರಿಸಿಕೊಳ್ಳುತ್ತವೆ. ಹೂಗಳು ಅರಳದ ಮಕರಂದ ಲಭಿಸದ ಋತುಮಾನಗಳಲ್ಲಿ ಇಡೀ ಕುಟುಂಬಕ್ಕೆ ಆಹಾರವಾಗಲೆಂದು ಜೇನನ್ನು ತಯಾರಿಸಿ, ತಾವೇ ನಿರ್ಮಿಸಿದ ಜೇನುಗೂಡಿನ ಕೊಠಡಿಗಳಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಇಟ್ಟುಕೊಳ್ಳುತ್ತವೆ (ಚಿತ್ರ 7). ಜೇನ್ನೊಣಗಳಿಗೆ ಜೇನು ಒಂದು ಪರಿಪೂರ್ಣ ಆಹಾರ; ಅವುಗಳ  ತೀವ್ರ ಚಟುವಟಿಕೆಯ ಬದುಕಿಗೆ ಸರ್ವಚೈತನ್ಯ ಒದಗಿಸುವ ಭಂಡಾರ.

ಜೇನ್ನೊಣಗಳು ಜೇನನ್ನು ತಯಾರಿಸುವ ವಿಧಾನ ತುಂಬ ಸೋಜಿಗಮಯ. ಪ್ರತಿ ಜೇನ್ನೊಣವೂ ತಾನು ಹೂಗಳಿಂದ ಹೀರುವ ಮಕರಂದವನ್ನು (ಚಿತ್ರ 8) ತನ್ನ ಶರೀರದಲ್ಲಿನ ವಿಶೇಷ ‘ಮಕರಂದದ ಚೀಲ’ದಲ್ಲಿ ತುಂಬಿಕೊಂಡು ಗೂಡಿಗೆ ಹಿಂದಿರುಗುತ್ತದೆ; ಅಲ್ಲಿ ಕಾದು ಕುಳಿತ ಕೆಲಸಗಾರ್ತಿಯ ವಶಕ್ಕೆ ಕಕ್ಕಿ ಒಪ್ಪಿಸುತ್ತದೆ; ಮತ್ತೆ ಮಕರಂದ ಸಂಗ್ರಹಿಸಲು ಹೋಗುತ್ತದೆ. ಆ ಕೆಲಸಗಾರ್ತಿ ಜೇನ್ನೊಣ ತಾನು ಸ್ವೀಕರಿಸಿದ ಮಕರಂದವನ್ನು ನುಂಗಿ ಕಕ್ಕಿ, ನುಂಗಿ ಕಕ್ಕಿ... ಹಾಗೆಯೇ ಮಾಡಿ ಮಾಡಿ ಮೂಲತಃ ಮಕರಂದದಲ್ಲಿ ಶೇಕಡ 80 ರಷ್ಟಿರುವ ನೀರಿನ ಅಂಶವನ್ನು ಶೇಕಡ 20 ರಷ್ಟಕ್ಕೆ ಇಳಿಸುತ್ತದೆ. ಜೊತೆಗೆ ಎರಡು ವಿಧ ವಿಶೇಷ ಕಿಣ್ವಗಳನ್ನು ತನ್ನ ಶರೀರದಲ್ಲೇ ಉತ್ಪಾದಿಸಿ ಬೆರೆಸುತ್ತದೆ. 

ಅವುಗಳಲ್ಲೊಂದು ಕಿಣ್ವ ಮಕರಂದದಲ್ಲಿನ ‘ಸುಕ್ರೋಸ್‌’ ಸಕ್ಕರೆಯನ್ನು ‘ಡೆಕ್‌್ಸಟ್ರೋಸ್‌ ಮತ್ತು ಲೆವ್ಯುಲೋಸ್‌’ಗಳನ್ನಾಗಿ ಪರಿವರ್ತಿಸುತ್ತದೆ. ‘ಗ್ಲೂಕೋಸ್‌ ಆಕ್ಸಿಡೇಸ್‌’ ಎಂಬ ಮತ್ತೊಂದು ಕಿಣ್ವ ಮಕರಂದದಲ್ಲಿನ ‘ಗ್ಲೂಕೋಸ್‌’ ಸಕ್ಕರೆಯೊಡನೆ ವರ್ತಿಸಿ ಪ್ರಬಲ ಬ್ಯಾಕ್ಟೀರಿಯಾ ನಾಶಕ ‘ಹೈಡ್ರೋಜನ್‌ ಪೆರಾಕ್ಸೈಡ್‌’ ಅನ್ನು ಬಿಡುಗಡೆ ಮಾಡುತ್ತದೆ. ಲೆವ್ಯು ಲೋಸ್‌ನಿಂದಾಗಿ ಜೇನು ‘ಸಕ್ಕರೆಗಿಂತ ಸಿಹಿ’ ಆಗುತ್ತದೆ’ ಹೈಡ್ರೋಜನ್‌ ಪೆರಾಕ್ಸೆಡ್‌ನಿಂದಾಗಿ ಜೇನಿನಲ್ಲಿ ಯಾವ ರೋಗಾಣುವೂ ಬಾಳುವುದಿಲ್ಲ. ಜೇನ್ನೊಣಗಳು ಸೇವಿಸುವ ಪರಾಗ ಮೂಲದಿಂದ ಜೇನಿಗೆ ಹಲವಾರು ಪೋಷಕಾಂಶಗಳು ಬೆರೆಯುತ್ತವೆ. ಹೀಗೆ ತಯಾರಾಗಿ ಜೇನು ಹುಟ್ಟಿನಲ್ಲಿ ನೀರು ಹೋಗದ, ಗಾಳಿ ತೂರದ ಮೇಣದ ಕೋಣೆಗಳಲ್ಲಿ ಸಂಗ್ರಹವಾಗುವ ಪರಿಶುದ್ಧ ಮಧುರ ಮಂದ ದ್ರವವೇ ಜೇನು.

ಇನ್ನೊಂದು ವಿಶೇಷ ಏನೆಂದರೆ ಹೂಗಳು ಅಲಭ್ಯವಾದಾಗ ಜೇನ್ನೊಣಗಳು ತಾವು ಪತ್ತೆಹಚ್ಚುವ ಯಾವುದೇ ಸಿಹಿ ದ್ರವವನ್ನೂ ಸಂಗ್ರಹಿಸತೊಡಗುತ್ತವೆ: ಬಿಸಾಕಿದ ಹಣ್ಣುಗಳಿಂದ, ತಿಪ್ಪೆಗೆ ಎಸೆದ ಕೃತಕ ಸಿಹಿ ಪಾನೀಯಗಳ ಡಬ್ಬಿ–ಬಾಟಲಿಗಳಿಂದ ಇತ್ಯಾದಿ. ಮಕರಂದವಲ್ಲದ ಇಂತಹ ಸಿಹಿ ದ್ರವಗಳು ಜೇನಿಗೆ ಬೆರೆತಾಗ ಜೇನಿನ ಬಣ್ಣ–ವಾಸನೆಗಳು ವ್ಯತ್ಯಾಸಗೊಳ್ಳುತ್ತವೆ.

ಜೇನು ಮನುಷ್ಯರ ಸೇವನೆಗೂ ತುಂಬ ಪ್ರಶಸ್ತ ಎಂಬ ಭಾವನೆ– ನಂಬಿಕೆ ಜಗದಾದ್ಯಾಂತ ವ್ಯಾಪಕ. ಆದರೆ ಮನುಷ್ಯರಿಗೆ ಉಪಯುಕ್ತವಾದ ಯಾವುದೇ ವಿಶೇಷ ಆಹಾರ ಮೌಲ್ಯವಾಗಲೀ, ಔಷಧೀಯ ಗುಣವಾಗಲೀ ಜೇನಿನಲ್ಲಿರುವುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಒಂದು ವಿಶಿಷ್ಟ, ಸ್ವಾದಿಷ್ಟ, ಮಧುರ, ನೈಸರ್ಗಿಕ ಉತ್ಪನ್ನವಾಗಿಯಷ್ಟೇ ಅದು ನಮಗೆ ಉಪಯುಕ್ತ.

3. ‘ಸೌರಕಲೆ’–ಏಕೆ? ಹೇಗೆ?
ಹೆಸರೇ ಸೂಚಿಸುವಂತೆ ಅದೊಂದು ಸೂರ್ಯ ಸಂಬಂಧೀ ವಿದ್ಯಮಾನ–ಲಕ್ಷಣ. ಸೂರ್ಯನ (ಚಿತ್ರ 9) ಉಜ್ವಲ ಮೇಲ್ಮೈನಲ್ಲಿ ಆಗಾಗ ಒಂಟೊಂಟಿಯಾಗಿ ಅಥವಾ ಭಾರೀ ಗುಂಪು ಗುಂಪಾಗಿ (ಚಿತ್ರ 10,11) ಚಿತ್ರ ವಿಚಿತ್ರ ಆಕಾರಗಳಲ್ಲಿ ಮೈದಳೆವ ‘ಕಪ್ಪು ಮಚ್ಚೆ’ಗಳೇ ಸೌರಕಲೆಗಳು.

ಸೌರಕಲೆಗಳದು ಕಲ್ಪನಾತೀತ ವಿಸ್ತಾರ. ಹದಿನೈದು ಕಿ.ಮೀ.ನಿಂದ ಒಂದೂವರೆ ಲಕ್ಷ ಕಿ.ಮೀ.ವರೆಗೆ ಅವುಗಳ ವ್ಯಾಸ. ಸೌರಕಲೆಗಳ ಎರಡು ಗುಂಪುಗಳ ವೈಶಾಲ್ಯಕ್ಕೆ ಇಡೀ ಭೂಮಿಯ ಹೋಲಿಕೆ ಚಿತ್ರ 10 ಮತ್ತು 11 ರಲ್ಲಿದೆ. ಸೌರಕಲೆಗಳು ಸ್ಥಿರವೂ ಅಲ್ಲ, ಶಾಶ್ವತವೂ ಅಲ್ಲ. ಉದ್ಭವಿಸಿದ ನೆಲೆಗಳಿಂದ ಸೂರ್ಯನ ಮೇಲ್ಮೈಯಲ್ಲಿ ಪ್ರತಿ ಸಕೆಂಡ್‌ಗೆ ಕೆಲ ನೂರು ಮೀಟರ್‌ ವೇಗದಲ್ಲಿ ಅವು ಚಲಿಸುತ್ತ ಸಾಗುತ್ತವೆ. ಕೆಲವು ದಿನಗಳಿಂದ ಒಂದೆರಡು ತಿಂಗಳ ಕಾಲ ಉಳಿದಿರುತ್ತವೆ. ಸೌರ ಕಲೆಗಳ ಗುಂಪುಗಳು ಒಂದು ತುದಿಯಿಂದ ಮತ್ತೊಂದು ತುದಿಗೆ ಮೂರು ಲಕ್ಷ ಕಿ.ಮೀ.ಗೂ ಅಧಿಕ ಅಗಲ ಹರಡಿ ಮೂಡಿರುವ ದಾಖಲೆಗಳಿವೆ.

ಸೌರಕಲೆಗಳು ವಾಸ್ತವವಾಗಿ ಕಪ್ಪುಬಣ್ಣದವೇನಲ್ಲ. ಸೌರಕಲೆಗಳು ಸೂರ್ಯನ ಮೇಲ್ಮೈಯಲ್ಲಿ ತಾಪ ಕುಸಿದ ಪ್ರದೇಶಗಳು ಅಷ್ಟೆ. ಸೂರ್ಯನ ಮೇಲ್ಮೈನ ಸರಾಸಾರಿ ಉಷ್ಣತೆ 5500 ಡಿಗ್ರಿ ಸೆಲ್ಷಿಯಸ್‌. ಆದರೆ ಕಲೆಗಳು ಮೂಡಿದ ಪ್ರದೇಶದ ಉಷ್ಣತೆ 2500 ರಿಂದ 4000 ಡಿಗ್ರಿ. ಈ ತಾಪಾಂತರದಿಂದಾಗಿ ಸೌರಕಲೆಗಳು ಕಪ್ಪಾಗಿರುವಂತೆ ಕಾಣಿಸುತ್ತವೆ ಅಷ್ಟೆ (ಚಿತ್ರ 12 ರಲ್ಲಿ ಗಮನಿಸಿ).

ಸೌರಕಲೆಗಳು ಮೈದಳೆಯಲು ಕಾರಣ ಸೂರ್ಯನ ಕೌಂತಕ್ಷೇತ್ರದಲ್ಲಿ ಉಂಟಾಗುವ ಏಳುಬೀಳು. ಸೂರ್ಯನಲ್ಲಿ ನಿರಂತರ ಕ್ರಿಯಾಶೀಲವಾಗಿರುವ ಬಲಿಷ್ಠ ಕಾಂತೀಯ ಬಲ ರೇಖೆಗಳು ಕೆಲಬಾರಿ ಕೆಲವೆಡೆಗಳಲ್ಲಿ ಇದ್ದಕ್ಕಿದ್ದಂತೆ ಸೂರ್ಯನ ಮೇಲ್ಮೈಯಲ್ಲಿ ಕುದಿ ಕುದಿವ ಅನಿಲಗಳ ಚಲನೆಗೆ ಅಡ್ಡ ನಿಲ್ಲುತ್ತವೆ. ಹಾಗಾದಾಗ ಅಂತಹ ಪ್ರದೇಶಗಳಲ್ಲಿ ಉಷ್ಣತೆ ಕುಸಿಯುತ್ತದೆ; ಆ ಪ್ರದೇಶಗಳು ಕಪ್ಪಾದಂತೆ ಗೋಚರಿಸುತ್ತವೆ.

ಆದರೆ ಹಾಗೆ ಉಕ್ಕುವ ಶಕ್ತಿಯ ಅಲೆಗಳನ್ನು ಒತ್ತಿ ಹಿಡಿದಿದ್ದ ಕಾಂತ ಕ್ಷೋಭೆ ಕೈ ಬಿಟ್ಟೊಡನೆ ಆ ವರೆಗೆ ಒತ್ತಡದಲ್ಲಿ ಉಳಿದಿದ್ದ ಶಕ್ತಿಯೆಲ್ಲ ಒಮ್ಮೆಗೇ ಸ್ಫೋಟಿಸಿ ಸೌರದ್ರವ್ಯವನ್ನು ಲಕ್ಷಾಂತರ ಕಿ.ಮಿ. ದೂರಕ್ಕೆ ಚಿಮ್ಮುತ್ತದೆ (ಚಿತ್ರ 13); ಅತ್ಯಂತ ಉಗ್ರವಾದ ಸೌರಜ್ವಾಲೆ, ಕರೋನಲ್‌ ಮಾಸ್‌ ಇಜೆಕ್ಷನ್‌ ಗಳಂತಹ ವಿದ್ಯಮಾನಗಳನ್ನು ಸೃಜಿಸುತ್ತದೆ. ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಗರಿಷ್ಠ ಸಂಖ್ಯೆಯಲ್ಲಿ ಒಡಮೂಡುವ ಸೌರ ಕಲೆಗಳಿಂದ ಅಂತಹ ಕಾಲಗಳಲ್ಲಿ ಭೂ ವಾಯುಮಂಡಲದಲ್ಲಿ, ಭೂ ಹವಾಮಾನದಲ್ಲಿ ಭಾರೀ ಏರುಪೇರುಗಳು ಸಂಭವಿಸುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.