ADVERTISEMENT

ಬಾಯಾರಿದವರು

ಡಾ.ನಾ.ಡಿಸೋಜ
Published 25 ಮಾರ್ಚ್ 2017, 19:30 IST
Last Updated 25 ಮಾರ್ಚ್ 2017, 19:30 IST
ಎಸ್.ವಿ. ಹೂಗಾರ
ಎಸ್.ವಿ. ಹೂಗಾರ   

ಸಾಲು ಸಾಲು ನೀರಿನ ಟ್ಯಾಂಕರುಗಳು ರೈಲು ಹಳಿಗಳ ಮೇಲೆ ಸಾಗುವುದು ಈಗ ಸಾಮಾನ್ಯವಾದ ದೃಶ್ಯ. ಹಿಂದೆ ದಿನದಲ್ಲಿ ಎರಡು ಬಾರಿ ಹಳ್ಳಿಯ ಹೊರಭಾಗದಲ್ಲಿ ಹಾಸಿದ ಪಟ್ಟಿಗಳ ಮೇಲೆ ಪ್ಯಾಸೆಂಜರ್ ಬಂಡಿ ಹೋಗುತ್ತಿದ್ದುದು ಹಳೆಯ ವಿಷಯವಾಗಿತ್ತು. ಆದರೆ ಈಗ ಆ ಪ್ಯಾಸೆಂಜರ್ ಗಾಡಿಯ ಜೊತೆಯಲ್ಲಿ ಈ ನೀರಿನ ಟ್ಯಾಂಕರುಗಳೂ ಹೋಗುತ್ತಿವೆ. ಪ್ಯಾಸೆಂಜರ್ ಗಾಡಿ ಹೋಗುವಾಗ ಹಳ್ಳಿಯಲ್ಲಿ ಯಾವುದೇ ಸಂಭ್ರಮ ಇರುತ್ತಿರಲಿಲ್ಲ. ಮೊದಮೊದಲು ಅಲ್ಲಿ ಸಂಭ್ರಮ ಸಡಗರ, ನೋಡಬೇಕೆಂಬ ಕುತೂಹಲ, ಆಸಕ್ತಿ ಇತ್ತು. ಆದರೆ ಕ್ರಮೇಣ ಅದೊಂದು ಸಾಮಾನ್ಯ ವಿಷಯ ಆದಮೇಲೆ ಅದರ ಪಾಡಿಗೆ ಅದು ಹೋಗಿಬಿಡುತ್ತಿತ್ತು. ಈಗ ಈ ನೀರಿನ ಟ್ಯಾಂಕರ್ ಹೋಗುವಾಗ ಜನ ಮನೆ ಮನೆಗಳಿಂದ ಹೊರಬಂದು ನಿಲ್ಲುತ್ತಾರೆ. ಆಳಕ್ಕೆ ಇಳಿದ ಕಣ್ಣಾಲಿಗಳಲ್ಲಿ ಏನೋ ಬೇಡಿಕೆ, ಏನೋ ಕೋರಿಕೆ ಮೂಡಿನಿಲ್ಲುತ್ತದೆ. ಊರಿನ ಮುದಿ ಅಜ್ಜಿ ಚಿಮಿಲಾ ಬಾಯಿ ಇಂಜಿನ್ನಿನಲ್ಲಿ ಕಂಡು ಬರುವ ಒಂದಿಬ್ಬರನ್ನ ಕುರಿತಂತೆ ಕೈ ಮುಗಿದು ನನಗೂ ಕೊಂಚ ನೀರು ಕೊಡಿ ಅನ್ನುವಂತೆ ಬೊಗಸೆಯೊಡ್ಡಿ ಕೇಳುತ್ತಾಳೆ. ತನಗೆ ಗೊತ್ತಿರುವ ಸನ್ನೆ ಮಾಡಿ ಬೇಡುತ್ತಾಳೆ. ಉಳಿದವರದ್ದೂ ಇದೇ ಕತೆ. ರೈಲು ನಿಲ್ಲಬಹುದೇನೋ ಎಂದು ಅವರೆಲ್ಲ ಕಾಯುತ್ತಾರೆ. ಆದರೆ ರೈಲು ಇವರ ಮುಖಕ್ಕೇನೆ ಹೊಗೆ ಉಗುಳಿದ ಹಾಗೆ ಸದ್ದು ಮಾಡಿ ಕೇಕೆ ಹಾಕಿ ಹೋಗಿ ಬಿಡುತ್ತದೆ. 

ಪಿಂಜರಾ ಅನ್ನುವುದು ಆ ಹಳ್ಳಿಯ ಹೆಸರು. ಪಿಂಜರಾ ಅಂದರೆ ಪಂಜರ. ಬಹಳ ಹಿಂದೆ ಓರ್ವ ಶ್ರೀಮಂತ ಈ ಹಳ್ಳಿಯಲ್ಲಿ ತನ್ನ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡುವ ಕೂಲಿಕಾರರನ್ನ ಸೆರೆಮನೆಯಲ್ಲಿ ಇಟ್ಟಹಾಗೆ ಇರಿಸಿದ್ದನಂತೆ. ಹಳ್ಳಿಯ ಸುತ್ತ ಒಂದು ಕಾವಲು ಪಡೆ. ಹಳ್ಳಿಯ ಯಾರೂ ಊರು ಬಿಟ್ಟು ಹೋಗುವಂತಿಲ್ಲ. ಹೀಗೆ ಹೋಗುವವರನ್ನ ಹಿಡಿದು ನಿಲ್ಲಿಸಿ ಸಾಹುಕಾರನ ಮುಂದೆ ತಂದು ನಿಲ್ಲಿಸುತ್ತಿದ್ದರು ಈ ಕಾವಲಿನವರು. ನಂತರ ಅವರ ಕಾಲಿಗೆ ಕಬ್ಬಣದ ಸರಪಳಿ ಹಾಕಿ ದುಡಿಸಿಕೊಳ್ಳುತ್ತಿದ್ದರು. ಸಾಹುಕಾರ ಈ ಜನಕ್ಕೆ ನೀಡುತ್ತಿದ್ದುದು ಒಂದು ಏಟು, ಎರಡನೆಯದು ತಿಳಿ ಗಂಜಿ, ಅಷ್ಟೆ. ಈ ಜನ ಇದಕ್ಕೆ ಹೊಂದಿಕೊಂಡಿದ್ದರು. ಈ ಕಾರಣದಿಂದಾಗಿ ಈ ಹಳ್ಳಿಗೆ ಪಿಂಜರಾ ಅನ್ನುವ ಹೆಸರು ಬಿದ್ದಿತು. ಅದೇ ಹೆಸರು ಈಗಲೂ ಉಳಿದಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಅನ್ನುವುದು ಬಂದ ಮೇಲೆ ಇವರ ಸ್ಥಿತಿ ಬದಲಾಯಿತು. ಜನ ಅಲ್ಲಿ ಇಲ್ಲಿ ಕೆಲಸ ಹುಡುಕಿಕೊಂಡರು. ಕೆಲವರು ನೆಲ–ಜಮೀನು ಮಾಡಿದರು. ಪಟ್ಟಣಕ್ಕೆ ಹೋಗಿ ದುಡಿಯತೊಡಗಿದರು. ಕೆಲವರು ಹಳ್ಳಿಯಲ್ಲಿ ಬಾವಿ ತೋಡಿಸಿಕೊಂಡರು. ಹತ್ತಿರದಲ್ಲಿ ಹರಿಯುತ್ತಿದ್ದ ಪಿಂಜರಾ ಹಳ್ಳಕ್ಕೆ ಸಣ್ಣ ಬಾಂದ್ ಕಟ್ಟಿ ನೀರಿನ ವ್ಯವಸ್ಥೆ ಮಾಡಿಕೊಂಡರು. ಹೆಚ್ಚು ತಾಪತ್ರಯಗಳಿಲ್ಲದೆ ಜನ ತುಸು ನೆಮ್ಮದಿಯಿಂದ ಕಾಲಕಳೆದರು ಕೆಲ ವರುಷ.

ಇತ್ತೀಚೆಗೆ ಜನರಿಗೆ ಕೆಟ್ಟ ದಿನಗಳು ಮತ್ತೆ ಬಂದವು. ಮಳೆ ಕಡಿಮೆ ಆಗಿ ಬಾವಿಗಳು ಬತ್ತಿದವು, ಓರ್ವ ಪುಢಾರಿ ಮೇಲ್ ಭಾಗದಲ್ಲಿ ಒಂದು ಕಾರ್ಖಾನೆ ಕಟ್ಟಿಸಿ ಪಿಂಜರಾ ಹಳ್ಳದ ನೀರನ್ನ ತನ್ನ ಕಾರ್ಖಾನೆಗೆ ತಿರುಗಿಸಿಕೊಂಡ. ನೀರಿಗೆ ಮತ್ತೊಂದಕ್ಕೆ ಅನನುಕೂಲ ಪ್ರಾರಂಭವಾಯಿತು. ಜನ ಬಳಲಿದರು. ಆಗಲೇ ಈ ನೀರಿನ ರೈಲು ತಿರುಗಾಡತೊಡಗಿತು.

ADVERTISEMENT

ಒಟ್ಟು 24 ಟ್ಯಾಂಕರುಗಳು, ಎರಡು ಇಂಜಿನುಗಳು, ಒಂದು ದಿನದಲ್ಲಿ ಬೆಳಿಗ್ಗೆ ಸಂಜೆ ಅನ್ನುವ ಹಾಗೆ, ಎಂಟು ಬಾರಿ ರೈಲು ಕೂ ಎಂದು ಕೂ ಹಾಕುತ್ತ ಲಾತೂರಿನತ್ತ ಹೋಗತೊಡಗಿತು. ಲಾತೂರಿನ ಸುತ್ತ ಇರುವ ಪಟ್ಟಣಗಳಿಗೆ ಈ ನೀರು. ಓಸ್ಮಾನಾಬಾದಿನಿಂದ ಹೊರಟ ನೀರಿನ ರೈಲು ಭಾಡಾ, ಅಸ್ಸಿ, ನೀಲಗಂಗಾ, ಮದನ ಗುಡಿ, ಲಾತೂರಿನಲ್ಲಿ ಟ್ಯಾಂಕರುಗಳನ್ನ ಖಾಲಿ ಮಾಡಿಕೊಂಡು ಹಿಂತಿರುಗುತ್ತಿತ್ತು. ಅದು ನೀರನ್ನು ತುಂಬಿಕೊಂಡು ಹೋಗುವುದನ್ನು, ಖಾಲಿ ಮಾಡಿಕೊಂಡು ಹಿಂತಿರುಗುವುದನ್ನ ನೋಡುತ್ತಲಿದ್ದರು ಪಿಂಜರಾದ ಜನ. ನೋಡುವುದಷ್ಟೇ ಏನೂ ಮಾಡುವಂತೆ ಇರಲಿಲ್ಲ. ಪಿಂಜರಾದ ಹಾಗೆಯೇ ದಾರಿಯಲ್ಲಿ ಇನ್ನೂ ಕೆಲವು ಹಳ್ಳಿ–ಊರುಗಳು ಇದ್ದವು. ಇವುಗಳಿಗೂ ನೀರಿನ ಅವಶ್ಯಕತೆ ಇತ್ತು. ಆದರೆ ಏನೂ ಮಾಡುವಂತೆ ಇರಲಿಲ್ಲ. ರೈಲು ಇಲ್ಲಿ ಎಲ್ಲೂ ನಿಲ್ಲುತ್ತಿರಲಿಲ್ಲ. ಅದರ ಸದ್ದನ್ನು ಕೇಳುವುದು, ಅದರ ಆಕಾರವನ್ನ ನೋಡುವುದು – ಇದಿಷ್ಟೇ ಈ ಜನರ ಭಾಗ್ಯವಾಗಿತ್ತು.

ಪಿಂಜರಾದ ಕೆಲವು ಕುಟುಂಬಗಳು ಗುಳೆ ಹೊರಟವು. ಕೆಲವು ದೂರದ ನೆಂಟರ ಮನೆಗೆ ಹೋದವು. ಕೆಲವರು ನಿತ್ಯ ಮೂರು ನಾಲ್ಕು ಕಿ.ಮೀ. ದೂರದ ಹೊಂಡಗಳಿಂದ ಹಳ್ಳಗಳಿಂದ ನೀರು ತಂದುಕೊಂಡರು. ಕೆಲವೇ ಕೆಲವರು ಮೂರು ರೂಪಾಯಿಗೆ, ನಾಲ್ಕು ರೂಪಾಯಿಗೆ ಒಂದು ಕೊಡಪಾನದ ಲೆಕ್ಕದಲ್ಲಿ ನೀರು ಕೊಳ್ಳತೊಡಗಿದರು. ಸೈಕಲ್ ಇರುವವರು ಅದರ ಮೇಲೆ, ಟುಕು ಟುಕು ಗಾಡಿ ಇರುವವರು ಅದರ ಮೇಲೆ, ಕುದುರೆ ಟಾಂಗ ಇರಿಸಿಕೊಂಡ ಮಹಮ್ಮದ ಅದರ ಮೇಲೆ, ನೀರಿನ ಬಾವಿ ಇರುವ ಆರು ಕಿ.ಮೀ. ದೂರದಿಂದ ಕೊಡಪಾನಗಳಲ್ಲಿ ನೀರು ತಂದರು. ಕೊಂಚ ಅನುಕೂಲವೆಂದು ಕರೆಸಿಕೊಳ್ಳುವ ಸಿಂಗಾಲಾಲ್, ಬೋರ್ ಕೊರೆಯುವ ಯಂತ್ರ ತರಿಸಿ ನಾಲ್ಕು ದಿನ ಸದ್ದು ಮಾಡಿದ ನಂತರ ಅವನ ಬೋರು ಸ್ತಬ್ಧವಾಯಿತು. ಬೋರಿನಲ್ಲಿ ನೀರು ಬರಲಿಲ್ಲ ಅನ್ನುವುದು ಮಾತ್ರ ಸತ್ಯವಾಯಿತು. ಪಿಂಜರಾದ ಕೆಲ ಹೆಂಗಸರು ನಾಲ್ಕು ಮೂರು ಗಾಲಿಗಳ ಒಂದೊಂದು ಗಾಡಿ ಮಾಡಿಕೊಂಡರು. ಅದರಲ್ಲಿ ಖಾಲಿ ಕೊಡಪಾನ ಇರಿಸಿ ಗಾಡಿಯನ್ನ ಐದಾರು ಕಿ.ಮೀ.ವರೆಗೆ ತಳ್ಳಿಕೊಂಡು ಹೋಗಿ ನೀರನ್ನ ತರತೊಡಗಿದರು. ಆಗಲೇ ರೈಲಿನಲ್ಲಿ ನೀರಿನ ಟ್ಯಾಂಕರುಗಳು ಪಿಂಜರಾದ ಮೂಲಕ ಹೋಗತೊಡಗಿದವು.
ರೈಲು ಗಾಡಿಯಲ್ಲಿ ತಮ್ಮ ಊರ ಮೂಲಕ ನಿತ್ಯ ನೀರು ಹೋಗುವುದು ಅಚ್ಚರಿಯ ವಿಷಯ ಆದರೂ ಆ ರೈಲು ತಮ್ಮ ಎದೆಯ ಮೇಲೆಯೇ ಹೋಗುತ್ತಿದೆ ಅನಿಸಿತು ಪಿಂಜರಾದ ಜನರಿಗೆ. ತಾವು ನೀರಿಲ್ಲದೆ ಬವಣೆ ಪಡುತ್ತಿದ್ದರೂ ತಮ್ಮನ್ನು ಹಿಯಾಳಿಸುವ ಹಾಗೆ ಟ್ಯಾಂಕರುಗಳಲ್ಲಿ ತುಂಬಿದ ನೀರು ತಮ್ಮ ಮನೆಗಳ ಮುಂದಿನಿಂದಲೇ ಹೋಗುತ್ತದೆ ಅಂದರೆ ಏನು ಅರ್ಥ? ಅವರು ತಮ್ಮ ಮೈಯನ್ನು ತಾವೇ ಪರಚಿಕೊಂಡರು. ಲಾತೂರು ಮುಂತಾದ ಶಹರುಗಳ ಜನರಿಗೆ ನೀರು ಬೇಕು ಅನ್ನುವುದಾದರೆ ಪಿಂಜರಾದಂತಹ ಸಣ್ಣ ಹಳ್ಳಿಯ ಜನರಿಗೆ ನೀರು ಬೇಡವೇ? ಆ ಜನ ಮಾಡಿದ ಪುಣ್ಯವೇನು? ತಾವು ಮಾಡಿದ ಪಾಪವೇನು?

ಜನ ಮಾಡಬಾರದ ಯತ್ನ ಮಾಡಿದರು. ಹಳ್ಳಿ ರಸ್ತೆಯ ಮೇಲೆ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಜಿಲ್ಲಾ ಮಟ್ಟದಲ್ಲಿ ಸಭೆಗಳಾದವು. ಗ್ರಾಮ ಪಂಚಾಯತಿಯಲ್ಲಿ ಠರಾವುಗಳ ಮಂಡನೆ ಆಯಿತು. ಕೆಲ ಪಕ್ಷಗಳ ಪುಢಾರಿಗಳು ಪಿಂಜರಾಕ್ಕೆ ಬಂದು ಹೋದರು. ಊರವರಿಗೆ ನೀರು ಕೊಡುವ ಭರವಸೆ ನೀಡಿದರು. ತಾವು ಮಂತ್ರಿ–ಪ್ರಧಾನಿಗಳನ್ನ ಕಂಡು ರೈಲನ್ನ ಪಿಂಜರಾದಲ್ಲಿ ನಿಲ್ಲಿಸುವುದಾಗಿ ಜನರಿಗೆ ಹೇಳಿದರು. ಆದರೂ ರೈಲು ನಿಲ್ಲಲಿಲ್ಲ. ಇವರಿಗೆ ನೀರು ಸಿಗಲಿಲ್ಲ. ಜನರಲ್ಲಿ ನೀರಿನ ಹಾಹಾಕಾರ ಹೆಚ್ಚಾಗಲು ಸರಕಾರಕ್ಕೆ ಏನೋ ಅನುಮಾನ ಬಂದಿತು. ನೀರಿನ ರೈಲಿಗೆ ಹೆಚ್ಚು ಭದ್ರತೆ ಒದಗಿಸಲಾಯಿತು. ಜೊತೆಗೆ ನೀರಿನ ಟ್ಯಾಂಕರುಗಳಿಗೆ ಮತ್ತೂ ಭದ್ರವಾಗಿ ಮುಚ್ಚಳ ಜಡಿದು ಎರಡೆರಡು ಬೀಗ ಹಾಕಲಾಯಿತು. ರೈಲು ಗಾಡಿಯ ಕೊನೆಯಲ್ಲಿ ಸೈನಿಕರದೊಂದು ತುಕಡಿ ಇರಿಸಿ ಜನ ರೈಲಿನ ಮೇಲೆ ದಾಳಿ ಮಾಡದ ಹಾಗೆ ಮಾಡಲಾಯಿತು.

ನಿತ್ಯ ನಿಶ್ಚಿತ ಸಮಯಕ್ಕೆ ರೈಲು ಲಾತೂರಿನತ್ತ ಹೋಗುವುದು ಮಾತ್ರ ನಿಲ್ಲಲಿಲ್ಲ.

ಕೆಂಡದ ಮಳೆ ಸುರಿದ ಹಾಗೆ ಬಿಸಿಲು. ದೂರದ ಗುಡ್ಡಗಳ ಮೇಲೆ, ಹತ್ತಿರದ ಬಯಲಲ್ಲಿ ಬಿಸಿಲ ಕುದುರೆಗಳು, ನೀರಿಲ್ಲದೆ ಹಸು, ದನ, ಎಮ್ಮೆ, ಕುರಿ, ಕತ್ತೆ, ಕುದುರೆ, ನಾಯಿಗಳೆಲ್ಲ ನಾಲಿಗೆ ಹೊರಹಾಕಿ ತೇಕತೊಡಗಿದವು. ಜನ ಒಂದು ಬಿಂದಿಗೆ ನೀರಿಗೆ ಏನೂ ಕೊಡಲು ಸಿದ್ದರಾದರು. ಅಲ್ಲಿ ಇಲ್ಲಿ ನೀರನ್ನ ಹುಡುಕಿಕೊಂಡು ಹೋಗುವುದು ಜನರ ದಿನ ನಿತ್ಯದ ಕೆಲಸವಾಯಿತು.

***
ಇಂತಹಾ ಒಂದು ದಿನ ಪಿಂಜರಾದಿಂದ ಹಾದುಹೋಗುತ್ತಿದ್ದ ನೀರಿನ ರೈಲು ಪಿಂಜರಾ ರೈಲು ನಿಲ್ದಾಣದಲ್ಲಿ ತಟ್ಟನೆ ನಿಂತಿತು. ರೈಲಿನ ಸದ್ದು ಊರ ಬಳಿಯೇ ತುಂಡಾಗಿ ಬಿದ್ದುದನ್ನ ಗಮನಿಸಿದ ಜನ ಮನೆ ಮನೆಗಳಿಂದ ಹೊರ ಓಡಿಬಂದರು. ಟ್ಯಾಂಕರುಗಳನ್ನ ಹಿಂದೆ ಇರಿಸಿಕೊಂಡ ಇಂಜನ್ನು ಬಿಳಿ ಹೊಗೆ ಬಿಡುತ್ತ ಸುಂಯ್ಗುಡುತ್ತ ನಿಂತಿದೆ. ಇಂಜನ್ನಿನ ಒಳಗಿನಿಂದ, ಕೊನೆಯ ಮಿಲಟರಿ ಬೋಗಿಯಿಂದ ಇಂಜಿನ್ ಚಾಲಕರು, ಮಿಲಿಟರಿ ಜನ ಕೆಳಗೆ ಇಳಿಯುತ್ತಿದ್ದಾರೆ. ಎಲ್ಲರ ಬಟ್ಟೆ ಹರಿದಿದೆ. ಎಲ್ಲರ ದೇಹ ದಣಿದಿದೆ, ಕೆಲವರಿಗೆ ಗಾಯಗಳಾಗಿವೆ. ಕೆಲವರು ನಿಲ್ಲಲಾರದೆ ಕಂಪಿಸುತ್ತಿದ್ದಾರೆ. ಯಾವುದೋ ಯುದ್ಧದಿಂದ ಹಿಂತಿರುಗಿ ಬಂದ ಹಾಗೆ ಮಿಲಿಟರಿ ಜನ, ರೈಲಿನ ಸಿಬ್ಬಂದಿ ಕಾಣಿಸುತ್ತಿದೆ.

ಇದರ ನಡುವೆಯೂ ಪಿಂಜರಾದ ಜನರಲ್ಲಿ ತುಸು ರೋಮಾಂಚನವಾಯಿತು. ಬಹಳ ದಿನಗಳ ತಮ್ಮ ಹೋರಾಟಕ್ಕೆ ಜಯ ಸಿಕ್ಕಿಯೇ ಬಿಟ್ಟಿತು ಅನ್ನುವ ಹಾಗೆ ಅವರು ಮನೆಗೆ ನುಗ್ಗಿ ಕೊಡಪಾನ, ಬಿಂದಿಗೆ, ತಂಬಿಗೆ, ಗಿಂಡಿ, ಕೈ ಗಿಂಡಿ, ಅನ್ನದ ಮಡಿಕೆ, ಬಕೇಟು, ಕಳಸಿಗೆ, ಕ್ಯಾನು, ಪಾತ್ರೆ ಹೊತ್ತುಕೊಂಡು ಕೂಗುತ್ತ ರೈಲಿನತ್ತ ಓಡತೊಡಗಿದರು. ಇಡೀ ಪಿಂಜರಾ ಅಲ್ಲಿ ನೆರೆಯಿತು. ಆದರೆ ಈ ಜನ ರೈಲು ನಿಲ್ದಾಣದ ಬಳಿ ತಲುಪಿದಾಗ ರೈಲಿನಿಂದ ಇಳಿದವರು ಕೈ ಬೊಗಸೆಯೊಡ್ಡಿ ನಿಂತಿದ್ದರು. ಎಲ್ಲರ ಮುಖದ ಮೇಲೆ ಏನೋ ನೋವು ವೇದನೆ ಕಾಣಿಸಿಕೊಂಡಿತ್ತು.

ಹಿಂದಿನ ನಿಲ್ದಾಣದಲ್ಲಿ ಏನೋ ತಾಂತ್ರಿಕ ದೋಷದಿಂದ ರೈಲು ನಿಂತಿತ್ತಂತೆ. ರೈಲಿನ ಚಾಲಕ ಮತ್ತು ಮಿಲಿಟರಿ ಸಿಬ್ಬಂದಿ ಕೆಳಗೆ ಇಳಿದು ತಾಂತ್ರಿಕ ದೋಷವನ್ನ ಸರಿಪಡಿಸುತ್ತಿರಲು ಸುತ್ತಲಿನ ಹಳ್ಳಿ ಜನ ಈ ರೈಲಿನ ಮೇಲೆ ದಾಳಿ ಮಾಡಿದರು. ನೀರಿನ ಟ್ಯಾಂಕರುಗಳ ಮುಚ್ಚಳ ತೆಗೆಯಲು ಯತ್ನಿಸಿದರು. ಎಷ್ಟೇ ಪ್ರಯತ್ನ ಪಟ್ಟರೂ ಟ್ಯಾಂಕರುಗಳು ತೆರೆದುಕೊಳ್ಳಲಿಲ್ಲ. ಟ್ಯಾಂಕರಿನಲ್ಲಿ ತುಂಬಿಕೊಂಡ ನೀರು ಇವರಿಗೆ ದಕ್ಕಲಿಲ್ಲ. ಇವರು ಕೊಸರಾಡಿ ಮೈ ನೋಯಿಸಿಕೊಂಡು ನೊಂದರು. ಸಿಟ್ಟಿಗೆದ್ದ ಜನ ರೈಲಿನ ಚಾಲಕರು, ಮಿಲಿಟರಿಯವರು ತಮಗೆಂದು ಇರಿಸಿಕೊಂಡ ನೀರನ್ನೇ ಕಸಿದುಕೊಂಡು ಓಡಿಹೋದರು. ಇವರು ಇರಿಸಿಕೊಂಡ ಬಾಟಲಿ, ಕ್ಯಾನುಗಳು ಸುಲಭವಾಗಿ ಹಳ್ಳಿ ಜನರಿಗೆ ಸಿಕ್ಕವು. ಇದರ ಜೊತೆಗೆ ರೈಲಿನ ಸಿಬ್ಬಂದಿ ಹಾಗು ಮಿಲಿಟರಿಯ ಜೊತೆಗೆ ಆ ಜನ ಘರ್ಷಣೆಗೆ ಇಳಿದರು. ತಮಗೆ ನೀರು ನೀಡದೆ ನೀರು ಕೊಂಡೊಯ್ಯುವ ಬಗ್ಗೆ ಈ ಜನರ ಮೇಲೆ ಕೈ ಮಾಡಿದರು. ಹೊಡೆದು ಬಡಿದರು. ಮಿಲಟರಿಯವರ ಕೈಯಲ್ಲಿ ಆಯುಧಗಳು ಇದ್ದರೂ ಇವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ ಅವರು ಅಷ್ಟು ಬಾಯಾರಿದ್ದರು. ಆ ಜನ ತಮ್ಮನ್ನ ಜೀವಂತ ಬಿಟ್ಟದ್ದು ದೊಡ್ಡದು ಎಂದು ತಮ್ಮ ಗೋಳನ್ನ ತೋಡಿಕೊಂಡರು ಈ ಜನ.

ಈ ರೈಲು ಲಾತೂರ್ ತಲುಪಿದ ನಂತರ ಜಿಲ್ಲಾಧಿಕಾರಿಗಳೇ ಟ್ಯಾಂಕರುಗಳ ಬೀಗ ತೆಗೆಯಬೇಕು. ಯಾರು ಯಾರಿಗೆ ನೀರು ಹಂಚಿಕೆ ಆಗಬೇಕು ಅನ್ನುವುದನ್ನ ಅವರೇ ಹೇಳಬೇಕು. ಹೀಗಾಗಿ ರೈಲಿನ ಮೇಲೆ ದಾಳಿ ಮಾಡಿದವರಿಗೆ ನೀರು ಸಿಗಲಿಲ್ಲ. ಅವರು ಇವರಲ್ಲಿದ್ದ ನೀರನ್ನೇ ಕಿತ್ತುಕೊಂಡರು. ಇವರಿಗೆ ಬಾಯಾರಿಕೆಯೇ ಗತಿಯಾಯಿತು.

ಆ ಜನ ಮತ್ತೂ ಒಂದು ಮಾತನ್ನ ಹೇಳಿದರು. ಸರಕಾರ ಈ ನೀರಿನ ವ್ಯವಸ್ಥೆ ಮಾಡಿರುವುದು ಶ್ರೀಮಂತರಿಗೆ, ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ. ಈ ನೀರು ಬಡವರಿಗೆ ದೊರೆಯವುದಿಲ್ಲ. ಇದನ್ನ ಇಲ್ಲಿಂದ ಲಾತೂರಿಗೆ ಒಯ್ದು ಮುಟ್ಟಿಸುವುದಷ್ಟೇ ನಮ್ಮ ಕೆಲಸ ಎಂದರವರು. ಇಷ್ಟನ್ನ ಹೇಳಿ ಅವರು ತಮ್ಮ ಕೈ ಚಾಚಿದರು...

‘ಅಲ್ಲಿಂದ ನಾವು ಬಾಯಾರಿಕೊಂಡೇ ಬಂದಿದ್ದೇವೆ... ಮುಂದೆ ನಾವು ಹೋಗಲಾರೆವು. ನಾವಿನ್ನು ಬಹಳ ದೂರ ಸಾಗಬೇಕು, ಅಲ್ಲಿಯವರೆಗೆ ನಮಗೆ ನೀರುಬೇಕು. ಈ ಧಗೆಯಲ್ಲಿ ಹನಿ ನೀರಿಲ್ಲದೆ ನಾವು ಇರಲಾರೆವು... ನಮಗೆ ನೀರು ಕೊಡಿ... ಒಂದು ತಂಬಿಗೆ ನೀರು, ಒಂದು ಲೋಟ ನೀರು... ಕುಡಿಯಲಿಕ್ಕೆ ಒಂದು ಗುಟುಕು ನೀರು... ಕೊಡಿ... ಕೊಡಿ...’

ರೈಲಿನಲ್ಲಿ ಬಂದವರು ಅಂಗಲಾಚಿದರು. ಭಿಕ್ಷೆ ಬೇಡಿದರು. ಬೊಗಸೆಯೊಡ್ಡಿ ಮತ್ತೆ ಮತ್ತೆ ಕೇಳಿದರು.

ನಿಲ್ದಾಣದಲ್ಲಿ ನಿಂತ ಪಿಂಜರಾದ ಜನ ಮುಖ ಮುಖ ನೋಡಿಕೊಂಡರು. ಅವರ ಮನೆಗಳಲ್ಲಿ ಎಲ್ಲೆಲ್ಲಿಂದಲೋ ಸಂಗ್ರಹಿಸಿ ತಂದು ಇರಿಸಿದ ನೀರಿತ್ತು. ಅದನ್ನು ಜೋಪಾನವಾಗಿ ಕಾದಿ ಇರಿಸಿಕೊಂಡಿದ್ದರು. ಇದನ್ನೂ ಕೊಟ್ಟರೆ ತಮ್ಮ ಗತಿ? ಯೋಚಿಸತೊಡಗಿದರು ಪಿಂಜರಾದ ಜನ.

ಎಲ್ಲ ಜನ ಪಿಂಜರಾದ ಹಿರಿಯ ಜೀವ ಚಿಮಿಲಾ ಬಾಯಿಯ ಮುಖ ನೋಡಿದರು. ಚಿಮಿಲಾ ಬಾಯಿ ಇಂತಹ ಹಲವು ಸಂದರ್ಭಗಳಲ್ಲಿ ಪಿಂಜರಾದ ಜನರಿಗೆ ಮಾರ್ಗದರ್ಶನ ಮಾಡಿದ್ದಳು. ಈ ವಿಷಯದಲ್ಲಿ ಏನು ಮಾಡುವುದು ಎಂಬಂತೆ ಅವರು ಆಕೆಯ ಮುಖ ದಿಟ್ಟಿಸಿದರು.

ಚಿಮಿಲಾ ಬಾಯಿ ರೈಲು ಇಂಜಿನ್ನಿನ ಚಾಲಕನ ಕೈ ಹಿಡಿದು – ‘ಬಾ... ನಾನು ನಿನಗೆ ನೀರು ಕೊಡತೇನೆ... ಬಾ... ಬಡವರಿಗೆ ಬಡವರೇ ನೆರವಾಗಬೇಕು... ಬಾ...’ ಎಂದು ಆತನನ್ನ ತನ್ನ ಮನೆಯತ್ತ ಕರೆದೊಯ್ದಳು. ಉಳಿದವರೂ ಕೂಡ ಚಿಮಿಲಾ ಬಾಯಿಯನ್ನ ಅನುಕರಿಸಿದರು. ರೈಲ್ವೆ ಇಂಜಿನ್ನಿನ ಸಿಬ್ಬಂದಿ ಹಾಗು ಕಾವಲು ಪಡೆ ಪಿಂಜರಾದ ಮನೆ ಮನೆಗಳ ಮುಂದೆ ನಿಂತು ಹಳ್ಳಿ ಹೆಂಗಸರು ಬೊಗಸೆಗೆ ಸುರಿದ ನೀರನ್ನ ಮನಸಾ ಇಚ್ಛೆ ಕುಡಿದರು.

ಮುಂದಿನ ಕ್ಷಣದಲ್ಲಿ ನೀರಿನ ಟ್ಯಾಂಕರುಗಳನ್ನ ಎಳೆದುಕೊಂಡು ಇಂಜಿನ್ನು ಸದ್ದು ಮಾಡುತ್ತ ಹೋಯಿತು. ಈ ಸದ್ದಿನಲ್ಲಿ ಏನೋ ಮಾಧುರ್ಯ, ಇಂಪು, ಕೇಳಿ ಜನ ಸಂತಸಪಟ್ಟರು. ರೈಲಿನ ಸಿಬ್ಬಂದಿ ಬಾಗಿಲಲ್ಲಿ ನಿಂತು ಕೈ ಬೀಸಿದ್ದು ಕೂಡ ಈ ಜನರಿಗೆ ವಿಶೇಷ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.