ADVERTISEMENT

ಬೆಟ್ಟದವ್ವನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 19:30 IST
Last Updated 28 ಜನವರಿ 2017, 19:30 IST
ಚಿತ್ರ: ಆರ್. ವಿಜಯಕುಮಾರಿ
ಚಿತ್ರ: ಆರ್. ವಿಜಯಕುಮಾರಿ   

ಬೆಟ್ಟದೂರಲಿ ನಡೆಯುತ್ತಿತ್ತು
ಬೆಟ್ಟದವ್ವನ ಜಾತ್ರೆಯು
ಕಾಡಿನ ಪ್ರಾಣಿಗಳೆಲ್ಲವು ಸೇರಿ
ಹೊರಟವು ಜಾತ್ರೆಯ ನೋಡಲು

ಜೇನನು ಮಾರಿ ಕೂಡಿದ ಹಣವನು
ಹೊತ್ತು ಕರಡಿಯು ಹೊರಟಿತ್ತು
ನೇರಳೆ ಹಣ್ಣಲಿ ಗಳಿಸಿದ ರೊಕ್ಕವ
ಎಣಿಸುತ ಮಂಗವು ನಡೆದಿತ್ತು

ತಾತನ ಗಂಟನು ಪಡೆದಾ ಒಂಟೆ
ಮೆಲ್ಲನೆ ಹೆಜ್ಜೆಯು ಹಾಕಿತ್ತು
ಕಳ್ಳ ಬುದ್ಧಿಯ ಗುಳ್ಳೆ ನರಿಯದು
ಸಂಚನು ಹೆಣೆಯುತ ಸಾಗಿತ್ತು

ADVERTISEMENT

ಕಬ್ಬನು ಕೊಟ್ಟು ಕಾಸನು ಹೊಂದಿದ
ಆನೆಯು ಎಲ್ಲಕು ಮುಂದಿತ್ತು
ಹುಲ್ಲನು ಸಾಗಿಸಿ ನೋಟನು ಎಣಿಸಿದ
ಜಿಂಕೆಯು ಟಣ್ಣನೆ ಜಿಗಿದಿತ್ತು

ಗರ್ಜನೆಗೈದು ಚಂದಾ ಎತ್ತಿ
ಸಿಂಹವು ಗುಂಪಲಿ ಸೇರಿತ್ತು
ಗುಹೆಯಲಿ ದೊರೆತ ನಿಧಿಯನು ಹಿಡಿದು
ಹುಲಿಯದು ಗತ್ತಲಿ ಕೂಡಿತ್ತು
ಚಿರತೆ ಜಿರಾಫೆ ಘೇಂಡಾ ಜೀಬ್ರಾ
ಓಡುತ ಬಂದು ಸೇರಿದವು
ಮೊಲ ಸಾರಂಗ ಹಾವು ಮುಂಗುಸಿ
ದಾರಿಯ ಮಧ್ಯೆ ಕೂಡಿದವು

ಬೆಟ್ಟದೂರನು ಕಾಡಿನ ಬಳಗವು
ತಲುಪಲು ಸಂತಸ ಪಟ್ಟವು
ಬೆಟ್ಟದವ್ವನ ದರುಶನ ಪಡೆದು
ಜಾತ್ರೆಯ ನೋಡಲು ತೆರಳಿದವು

ಸಂಜೆಯ ಹೊತ್ತಲಿ ಬೆಟ್ಟದವ್ವನ
ತೇರಿನ ಸಡಗರ ಕಂಡವು
ಇರುಳಲಿ ಸರ್ಕಸ್ ನಾಟಕ ನೋಡಿ
ಭರ್ಜರಿ ರಂಜನೆ ಪಡೆದವು

ಬಗೆಬಗೆ ತಿಂಡಿ ವಸ್ತುವಿಗಾಗಿ
ಹಣವನು ಖರ್ಚು ಮಾಡಿದವು
ತಂದಿಹ ಕಾಸು ಆಗಲು ಖಾಲಿ
ಕಾಡಿನ ದಾರಿಯ ಹಿಡಿದವು

ಬೆಟ್ಟದವ್ವನ ದೊಡ್ಡ ಜಾತ್ರೆಯು
ಮೃಗಗಳ ಮನವನು ತಣಿಸಿತ್ತು
ಸಮರಸ ಭಾವವು ಪ್ರಾಣಿಗಳಲ್ಲಿ
ಉಕ್ಕುವ ಹಾಗೆ ಮಾಡಿತ್ತು.

–ಸೋಮಲಿಂಗ ಬೇಡರ ಆಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.