ADVERTISEMENT

ಬ್ರೆಡ್ಡಪ್ಪನ ಕುಯುಕ್ತಿ!

ಮಕ್ಕಳ ಪದ್ಯ

ಪ್ರಕಾಶ ಎಸ್.ಮನ್ನಂಗಿ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಚಿತ್ರಗಳು: ಶ್ರೀಕಂಠಮೂರ್ತಿ
ಚಿತ್ರಗಳು: ಶ್ರೀಕಂಠಮೂರ್ತಿ   
ಕಾರನು ಏರಿ ಬ್ರೆಡ್ಡಪ್ಪ 
ಹೊರಟನು ಹಳ್ಳಿಯ ಕಡೆಗೆ.
ಹತ್ತಾರು ವರುಷ ಸಿಟಿಯಲಿ
ಬೇಕರಿ ಮಾಡಿದ ದೌಲತ್ತು 
ತೋರಲು ಅವರೆಡೆಗೆ!
 
ಹಳ್ಳಿಯ ಓಣಿಲಿ
ಕಾರಿನ ಹಾರನು
ಕುಣಿದವು ಚಿಳ್ಳೆ ಪಿಳ್ಳೆ!
ಕಾರಿನ ತುಂಬ
ಬ್ರೆಡ್ಡಿನ ಘಮಲು
 
ಚಿಣ್ಣರ ಬಾಯಲಿ ಜೊಲ್ಲು!
ಕರೆಯುತ ಚಿಣ್ಣರ
ಹಂಚಿದ ಬ್ರೆಡ್ಡು
ಊರಿನ ತುಂಬ ಗುಲ್ಲು!
 
ಮುದುಕರು ಬಂದರು
ಹುಡುಗರು ತಿಂದರು
ಹುಡುಗಿಯರೆಲ್ಲ ಕೇಳಿದರು!
 
ಚಡ್ಡಿ ದೋಸ್ತ ಬೆಣ್ಣೆಪ್ಪ
ಬಂದನು ಹುಡುಕುತ
ಬ್ರೆಡ್ಡಪ್ಪನ ಕಾರನ್ನು.
ಸಡಗರದಿಂದ ಒತ್ತಾಯ ಮಾಡಿ
ಮನೆಗೇ ಕರೆದನು ದೋಸ್ತನನು.
 
ಆಹಾ! ಓಹೋ!! ಎನ್ನುತ
ಸವಿದರು ಬ್ರೆಡ್ಡಿನ ರುಚಿಯನ್ನು!
ಬೆಣ್ಣೆಪ್ಪನ ಮನೆಯ 
ಆಕಳು, ಎಮ್ಮೆಯ ಹಯನವ
ಕಂಡು ಬಂದಿತು 
ಐಡಿಯಾ ಬ್ರೆಡ್ಡಪ್ಪನಿಗೆ.
ಕರಾರು ಮಾಡಿದ:
 
ದಿನವೂ ಬಸ್ಸಿಗೆ
ಸಿಟಿಯಿಂದ ಕಳಿಸುವೆ ಕೆಜಿ ಬ್ರೆಡ್ಡನ್ನು
ಅದರ ಬದಲಿಗೆ
ನೀನೂ ಕಳಿಸು ಕೆಜಿ ಬೆಣ್ಣೆಯನು.
ಇಬ್ಬರೂ ಒಪ್ಪಿ ಬೆಣ್ಣೆ  ಬ್ರೆಡ್ಡನು
ಅದಲು ಬದಲು ಮಾಡಿದರು.
 
ತಿಂಗಳು ಉರುಳಲು ಬ್ರೆಡ್ಡಪ್ಪನಿಗೆ
ಬಂದಿತು ಸಂಶಯ ತೂಕವು ಸರಿಯಿಲ್ಲ!
ಹಳ್ಳಿಗೆ ಹೋಗಿ ಪಂಚರ ಕೂಡಿಸಿ
ಹೇಳಿದ ತನ್ನ ಅಹವಾಲು.
ನನಗೇನೂ ತಿಳಿಯದು
ಕೆಜಿಯ ತೂಕದ ಕಲ್ಲೇ
ಇಲ್ಲ ನನ್ನಯ ಮನೆಯಲ್ಲಿ.
ದಿನವೂ ಬ್ರೆಡ್ಡಿನಷ್ಟೇ
ತೂಕದ ಬೆಣ್ಣೆಯ 
ಕಳಿಸುತಲಿದ್ದೆ ನಾನಿಲ್ಲಿ!
 
ವಿಷಯವ ಅರಿತು
ಪಂಚರು ಹಳಿದರು
ಬ್ರೆಡ್ಡಪ್ಪನ ಕುಯುಕ್ತಿಯನು!
ಮಾಡಿದ ತಪ್ಪಿನ ಅರಿವಾಗುತಲಿ
ಕ್ಷಮೆಯನು ಯಾಚಿಸಿ
ಬ್ರೆಡ್ಡಪ್ಪ ಅಪ್ಪಿದ ಗೆಳೆಯನನು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.